
ಬೆಂಗಳೂರು (ನ. 26): ಕೈಗಾರಿಕಾ ಸ್ನೇಹಿಯಾಗಿರುವ ಕರ್ನಾಟಕಕ್ಕೆ ಬಂಡವಾಳ ಹೂಡಿಕೆದಾರರನ್ನು ಸೆಳೆಯಲು ನೂತನ ಕೈಗಾರಿಕೆ ನೀತಿ 2020-25ರಲ್ಲಿ ಹಲವು ಉತ್ತೇಜನ, ಸೌಲಭ್ಯಗಳನ್ನು ಒದಗಿಸಲಾಗಿದೆ. ಉದ್ಯಮಸ್ನೇಹಿ ವಿಭಾಗದಲ್ಲಿ ರಾಜ್ಯವನ್ನು ಮುಂಚೂಣಿಗೆ ತರಲು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸತತವಾಗಿ ಶ್ರಮಿಸುತ್ತಿದ್ದಾರೆ.
ಮುಂದಿನ ಐದು ವರ್ಷಗಳಲ್ಲಿ 5 ಲಕ್ಷ ಕೋಟಿ ರು. ಬಂಡವಾಳ ಹೂಡಿಕೆಯ ಗುರಿಯನ್ನು ಹೊಂದಿರುವ ಅವರು ವಾರ್ಷಿಕ ಶೇ.10ರಷ್ಟುಕೈಗಾರಿಕಾ ಬೆಳವಣಿಗೆ ದರವನ್ನು ಕಾಯ್ದುಕೊಳ್ಳುವ ಪ್ರಮುಖ ಧ್ಯೇಯವನ್ನು ಹೊಂದಿದ್ದಾರೆ. ಕೈಗಾರಿಕೆ ಬೆಳವಣಿಗೆಗೆ ನೂತನ ಕೈಗಾರಿಕೆ ನೀತಿಯಲ್ಲಿ ನೀಡಿರುವ ಸವಲತ್ತುಗಳು, ಪ್ರೋತ್ಸಾಹಗಳ ವಿಚಾರಗಳನ್ನು ಅವರು ‘ಕನ್ನಡಪ್ರಭ’ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
ಹಿಂದಿನ ನೀತಿಗಿಂತ ಈಗಿನ ಕೈಗಾರಿಕಾ ನೀತಿ ಹೇಗೆ ವಿಭಿನ್ನ?
ನೂತನ ಕೈಗಾರಿಕಾ ನೀತಿಯಲ್ಲಿ ಬೆಂಗಳೂರು ಹೊರತುಪಡಿಸಿ ಇನ್ನುಳಿದ ಜಿಲ್ಲೆಗಳಿಗೆ ಆದ್ಯತೆ ನೀಡಿ ಕರ್ನಾಟಕ ರಾಜ್ಯವನ್ನು ಸರ್ವಾಂಗೀಣ ಅಭಿವೃದ್ಧಿ ಮಾಡುವ ಉದ್ದೇಶ ಹೊಂದಲಾಗಿದೆ. ಎರಡನೇ ಮತ್ತು ಮೂರನೇ ಹಂತದ ನಗರಗಳಿಗೂ ಕೈಗಾರಿಕೆಗಳನ್ನು ವಿಸ್ತರಿಸುವುದು ಪ್ರಮುಖ ಧ್ಯೇಯವಾಗಿದೆ. ಮುಂದಿನ ಐದು ವರ್ಷದಲ್ಲಿ 5 ಲಕ್ಷ ಕೋಟಿ ರು. ಮೌಲ್ಯದ ಬಂಡವಾಳ ಹೂಡಿಕೆಯ ಗುರಿಯನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ. 20 ಲಕ್ಷ ಉದ್ಯೋಗಾವಕಾಶ ಸೃಷ್ಟಿಸುವ ಉದ್ದೇಶ ಇದೆ. ಪ್ರಾದೇಶಿಕ ಅಭಿವೃದ್ಧಿ ಜತೆಗೆ ರಾಜ್ಯದಲ್ಲಿ ಸಮತೋಲನ ಹೊಂದಿದ ಹೂಡಿಕೆ ಖಾತರಿಪಡಿಸುವುದು ಸರ್ಕಾರದ ಪ್ರಮುಖ ಜವಾಬ್ದಾರಿಯಾಗಿದೆ. ಕಡಿಮೆ ಕೈಗಾರಿಕೆಗಳು ಇರುವ ಕಲ್ಯಾಣ ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕ, ಕರಾವಳಿ ಭಾಗ, ಮೈಸೂರು ಭಾಗದ ಕಡೆಗಳಲ್ಲಿಯೂ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ.
ಹೂಡಿಕೆದಾರರನ್ನು ಸೆಳೆಯಲು ಸರ್ಕಾರ ಮಾಡುತ್ತಿರುವ ಕಾರ್ಯತಂತ್ರಗಳೇನು?
ಸ್ಪರ್ಧಾತ್ಮಕವಾಗಿರುವ ಜಾಗತಿಕ ಮಟ್ಟದಲ್ಲಿ ಕರ್ನಾಟಕದ ಪ್ರಸ್ತುತ ಸಾಮರ್ಥ್ಯವು ಅದರ ಕೈಗಾರಿಕಾ ಸಾಮರ್ಥ್ಯವನ್ನು ಅವಲಂಬಿಸಿದೆ. ಕೈಗಾರಿಕಾ ಕ್ಷೇತ್ರದ ಪ್ರಗತಿಯಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕವು ನಾವೀನ್ಯತೆಯ ಬೆಳವಣಿಗೆಯ ಬದ್ಧತೆಯೊಂದಿಗೆ ಮಧ್ಯಮ ಮತ್ತು ದೀರ್ಘಾವಧಿ ಬೆಳವಣಿಗೆ ಸಾಧಿಸುವುದನ್ನು ಗುರಿಯಾಗಿಸಿಕೊಂಡಿದೆ. ಇದು ಮೂಲಸೌಕರ್ಯ, ನವೋನ್ವೇಷಣೆ, ನೂತನ ಕೈಗಾರಿಕಾ ಕ್ರಾಂತಿ ಮತ್ತು ಡಿಜಿಟಲ್ ಆರ್ಥಿಕತೆಯನ್ನು ಬೆಂಬಲಿಸುವ ಕಾರ್ಯತಂತ್ರಗಳನ್ನು ಒಳಗೊಂಡಿದೆ. ವಲಯ ನಿರ್ದಿಷ್ಟಕೌಶಲ್ಯಾಭಿವೃದ್ಧಿ ಅಭಿವೃದ್ಧಿಪಡಿಸಲು ವಿವಿಧ ಪಾಲುದಾರರೊಂದಿಗೆ ತೊಡಗಿಸಿಕೊಳ್ಳುವುದು ಮತ್ತು ರಾಜ್ಯದಲ್ಲಿ ಸುಲಲಿತ ವ್ಯಾಪಾರ ವಹಿವಾಟು ಹೆಚ್ಚಿಸಲು ವಾತಾವರಣ ನಿರ್ಮಾಣ ಮಾಡುವುದು ಉದ್ದೇಶವನ್ನು ಹೊಂದಲಾಗಿದೆ.
‘ಈಸ್ ಆಫ್ ಡೂಯಿಂಗ್’ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದರಿಂದ ಕೈಗಾರಿಕೋದ್ಯಮಿಗಳಿಗೆ ಯಾವ ರೀತಿಯಲ್ಲಿ ಉಪಯೋಗ?
ದೇಶದಲ್ಲಿಯೇ ಇಂತಹದೊಂದು ವ್ಯವಸ್ಥೆ ಜಾರಿಗೊಳಿಸಿರುವುದು ಕರ್ನಾಟಕ ಸರ್ಕಾರವೇ ಮೊದಲು. ಈಸ್ ಆಫ್ ಡೂಯಿಂಗ್ ವ್ಯವಸ್ಥೆಯಿಂದ ಕೈಗಾರಿಕೋದ್ಯಮಿಗಳ ಸಾಕಷ್ಟು ಸಮಯ ಉಳಿತಾಯವಾಗಲಿದ್ದು, ಅನುಮತಿಗಾಗಿ ಅಲೆದಾಡುವ ಪ್ರಮೇಯವೇ ಇರುವುದಿಲ್ಲ. ಅಫಿಡವಿಡ್ ಬೇಸ್ಡ್ ಕ್ಲಿಯರೆನ್ಸ್ (ಎಬಿಸಿ) ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ. ಸ್ವಯಂ ಘೋಷಣೆ ಪತ್ರದ ಮೂಲಕ ಕೈಗಾರಿಕೆಗಳ ಸ್ಥಾಪನೆ ಪ್ರಕ್ರಿಯೆಯನ್ನು ಸರಳೀಕೃತಗೊಳಿಸುವ ಯೋಜನೆ ಇದಾಗಿದೆ.
ಕೈಗಾರಿಕೆ ಆರಂಭಿಸುವುದಕ್ಕೆ ಅನುಮತಿ ದೊರಕಿದ ಕೂಡಲೇ ಎನ್‌ಓಸಿ ಇಲ್ಲದೆ, ಕಟ್ಟಡ ನಿರ್ಮಾಣಕ್ಕೆ ಅನುಮತಿ ಇಲ್ಲದೆ ಕೈಗಾರಿಕೆ ಸ್ಥಾಪನೆ ಪ್ರಕ್ರಿಯೆ ಆರಂಭಿಸಬಹುದು. ಮೂರು ವರ್ಷಗಳ ಅವಧಿಯಲ್ಲಿ ಎಲ್ಲಾ ರೀತಿಯ ಅನುಮತಿ ಪ್ರಮಾಣ ಪತ್ರ ಪಡೆದುಕೊಳ್ಳಬಹುದು. ಇದರಿಂದ ಕೈಗಾರಿಕಾ ಆರಂಭದ ಜತೆಜತೆಗೆ ಇತರೆ ಕಾರ್ಯಗಳನ್ನು ಮಾಡಿಕೊಳ್ಳಲು ಅನುಕೂಲವಾಗಲಿದೆ. ರಾಜ್ಯದಲ್ಲಿ ಜಾರಿಗೊಳಿಸಿರುವ ಈಸ್ ಆಫ್ ಡೂಯಿಂಗ್ ವ್ಯವಸ್ಥೆಯನ್ನು ಬೇರೆ ರಾಜ್ಯಗಳು ಅನುಸರಿಸಲು ಮುಂದಾಗಿವೆ.
ಹೊಸ ಕೈಗಾರಿಕೆ ನೀತಿಯಲ್ಲಿನ ಆದ್ಯತಾ ಕ್ಷೇತ್ರಗಳಾವುವು?
ನೂತನ ಕೈಗಾರಿಕಾ ನೀತಿಯಡಿ ಎಲ್ಲಾ ಉದ್ಯಮಗಳಿಗೆ ವಹಿವಾಟು ಆಧಾರಿತ ಪ್ರೋತ್ಸಾಹ ನೀಡಲಿರುವ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ಉತ್ಪಾದನೆ ನವೀಕರಣ, ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ತಂತ್ರಜ್ಞಾನ ನಾವೀನ್ಯತೆಯನ್ನು ಆದ್ಯತೆಯ ಕ್ಷೇತ್ರಗಳಾಗಿ ಗುರುತಿಸಲಾಗಿದೆ. ಅಲ್ಲದೇ, ವಾಹನ ಮತ್ತು ವಾಹನಗಳ ಬಿಡಿಭಾಗಗಳು, ಔಷಧಿ ಮತ್ತು ಲಾಜಿಸ್ಟಿಕ್ಸ್, ನವೀಕರಿಸಬಹುದಾದ ಇಂಧನ, ಏರೋಸ್ಪೇಸ್ ಮತ್ತು ರಕ್ಷಣೆ, ವಿದ್ಯುತ್ ಚಾಲಿತ ವಾಹನಗಳು, ವೈದ್ಯಕೀಯ ಉಪಕರಣ, ಎಂಜಿನಿಯರಿಂಗ್ ಮತ್ತು ಯಂತ್ರೋಪಕರಣ ಬಿಡಿಭಾಗಗಳು, ಜ್ಞಾನ ಆಧಾರಿತ ಕೈಗಾರಿಕೆಗಳು ಸೇರಿದಂತೆ ಪ್ರಮುಖ ವಲಯಗಳ ಮೇಲೆ ನೀತಿಯು ಗಮನ ಕೇಂದ್ರಿಕರಿಸಿದೆ. ಹೊಸ ನೀತಿಯಡಿ ಸಾಂಪ್ರದಾಯಿಕ ಉತ್ಪಾದನೆ ಮತ್ತು ನವೀನ ತಂತ್ರಜ್ಞಾನಗಳ ನಡುವಿನ ಕಂದಕವನ್ನು ಬೆಸೆಯಲು ತರಬೇತಿ ಮತ್ತು ಕೌಶಲ್ಯ ನಿರ್ಮಾಣ ಕಾರ್ಯಕ್ರಮಗಳನ್ನು ಸರ್ಕಾರ ಬೆಂಬಲಿಸುತ್ತದೆ.
ಕೈಗಾರಿಕೆಗಳು ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ?
ಭೂಮಿಯನ್ನು ನೀಡುವಾಗ ಹಲವು ಷರತ್ತುಗಳನ್ನು ವಿಧಿಸಲಾಗುತ್ತದೆ. ಒಂದು ವೇಳೆ ಕೈಗಾರಿಕೆಗಳು ಸರ್ಕಾರದ ಷರತ್ತುಗಳನ್ನು ಉಲ್ಲಂಘನೆ ಮಾಡಿದರೆ ಅವಕ್ಕೆ ನೀಡಿರುವ ಜಮೀನು ಹಾಗೂ ಸವಲತ್ತುಗಳನ್ನು ವಾಪಸ್ ತೆಗೆದುಕೊಳ್ಳಲು ಸರ್ಕಾರಕ್ಕೆ ಹಕ್ಕು ಇರುತ್ತದೆ.
ರಾಜ್ಯದ ಅಭಿವೃದ್ಧಿಯಲ್ಲಿ ಎಂಎಸ್‌ಎಂಇ ಪ್ರಮುಖ ಪಾತ್ರವಹಿಸುತ್ತದೆ. ಇವುಗಳ ಅಭಿವೃದ್ಧಿಗೆ ಉತ್ತೇಜನ ನೀಡಲು ಕೈಗೊಂಡಿರುವ ಕ್ರಮಗಳೇನು?
ಎಂಎಸ್‌ಎಂಇ ಎದುರಿಸುತ್ತಿರುವ ಸವಾಲುಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲಾಗಿದೆ. ಎಂಎಸ್‌ಎಂಇಗಳ ಸಮಸ್ಯೆಗಳಿಗೆ ಪರಿಹಾರ ಕ್ರಮಗಳು ಇದ್ದರೂ ಮಾಹಿತಿ ಲಭ್ಯತೆಯೇ ದೊಡ್ಡ ಸಮಸ್ಯೆಯಾಗಿದೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನೂತನವಾಗಿ ‘ಎಂಎಸ್‌ಎಂಇ ಸಾರ್ಥಕ್’ ಎಂಬ ಯೋಜನೆಯನ್ನು ಆರಂಭಿಸಲಾಗುತ್ತಿದೆ. ಇದು ಸಮಸ್ಯೆ ಮತ್ತು ಸವಾಲುಗಳಿಗೆ ಪರಿಹಾರ ನೀಡಲಿದೆ. ಎಂಎಸ್‌ಎಂಇ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಗೆ ಕ್ರಮ ವಹಿಸಲಾಗಿದೆ ಮತ್ತು ಪ್ರೋತ್ಸಾಹ ಸಹ ನೀಡಲಾಗುತ್ತಿದೆ. ಕೆಐಎಡಿಬಿ ಅಭಿವೃದ್ಧಿಪಡಿಸುವ ಜಮೀನಿನಲ್ಲಿ ಶೇ.30ರಷ್ಟುಭೂಮಿ ಎಂಎಸ್‌ಎಂಇಗೆ ನೀಡಲಾಗುತ್ತದೆ.
ಕೋವಿಡ್‌ನಿಂದಾಗಿ ವಿಶ್ವ ಬಂಡವಾಳ ಹೂಡಿಕೆ ಸಮಾವೇಶ ಮುಂದೂಡಿಕೆ ಮಾಡಲಾಗಿದೆ. ಯಾವಾಗ ಸಮಾವೇಶ ಮಾಡಲು ಉದ್ದೇಶಿಸಲಾಗಿದೆ?
ಕಳೆದ ವರ್ಷ ನವೆಂಬರ್‌ನಲ್ಲಿ ವಿಶ್ವ ಬಂಡವಾಳ ಹೂಡಿಕೆ ಸಮಾವೇಶ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಕೊರೋನಾ ವರದಿಯನ್ನಾಧರಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ. ಕೊರೋನಾ ಸಂಖ್ಯೆ ಶೂನ್ಯಕ್ಕೆ ಬರುವವರೆಗೆ ದಿನಾಂಕ ನಿಗದಿ ಮಾಡುವುದು ಕಷ್ಟವಾಗಲಿದೆ. ಹೂಡಿಕೆದಾರರನ್ನು ಆಹ್ವಾನಿಸಲು ವಿದೇಶಿಗಳಿಗೆ ಹೋಗಬೇಕಾಗಿದೆ. ಹೀಗಾಗಿ ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆದಾರರನ್ನು ಆಹ್ವಾನಿಸುತ್ತೇವೆ.
ಕೈಗಾರಿಕೆಗಳಿಗೆ ವಿಧಿಸುತ್ತಿರುವ ವಾಣಿಜ್ಯ ತೆರಿಗೆ ಅಧಿಕವಾಗಿದೆ ಎಂಬ ಆರೋಪಗಳಿವೆ?
ಇದಕ್ಕಾಗಿಯೇ ಕೈಗಾರಿಕೆಗಳಿಗೆ ಪ್ರತ್ಯೇಕ ತೆರಿಗೆ ವ್ಯವಸ್ಥೆ ಜಾರಿಗೊಳಿಸುವ ಚಿಂತನೆ ಇದೆ. ಸಂಬಂಧಪಟ್ಟಇಲಾಖೆಗೆ ಈ ಬಗ್ಗೆ ಅಧ್ಯಯನ ನಡೆಸುವಂತೆ ಮಾಹಿತಿ ನೀಡಲಾಗಿದ್ದು, ಪ್ರಕ್ರಿಯೆ ಸಹ ನಡೆಯುತ್ತಿದೆ.
ಕನ್ನಡಿಗರಿಗೆ ಯಾವ ರೀತಿಯಲ್ಲಿ ಆದ್ಯತೆ ನೀಡಲಾಗಿದೆ?
ನೂತನ ಕೈಗಾರಿಕಾ ನೀತಿಯಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಲಾಗಿದೆ. ಕೈಗಾರಿಕಾ ಬಂಡವಾಳ ಹೂಡಿಕೆ ಯೋಜನೆಗಳ ಒಟ್ಟಾರೆ ಆಧಾರದ ಮೇಲೆ ‘ಸಿ’ ಗ್ರೂಪ್‌ನಲ್ಲಿ ಶೇ.70ರಷ್ಟುಮತ್ತು ಗ್ರೂಪ್‘ಡಿ’ ನಲ್ಲಿ ಶೇ.100ರಷ್ಟುಕನ್ನಡಿಗರಿಗೆ ಉದ್ಯೋಗ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ.
- ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸಂದರ್ಶನ
ಪ್ರಭುಸ್ವಾಮಿ ನಟೇಕರ್, ಬೆಂಗಳೂರು
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.