
ಬೆಂಗಳೂರು (ಏ.9): ಭಾರತದ ಪ್ರಮುಖ ಸ್ಥಳೀಯ ಭಾಷಾ ತಂತ್ರಜ್ಞಾನ ಸಂಸ್ಥೆಯಾದ ವರ್ಸ್ ಇನ್ನೋವೇಶನ್ (VerSe Innovation), ತನ್ನ ಮುಖ್ಯ ಉತ್ಪನ್ನ ಮತ್ತು ತಂತ್ರಜ್ಞಾನ ಅಧಿಕಾರಿಯಾಗಿ (CPTO) ಪ್ರಸನ್ನ ಪ್ರಸಾದ್ ಅವರನ್ನು ನೇಮಕ ಮಾಡಿದೆ. ಇವರು ಸಂಸ್ಥೆಯ ಎಂಜಿನಿಯರಿಂಗ್, ಉತ್ಪನ್ನ ಮತ್ತು ದತ್ತಾಂಶ ವಿಜ್ಞಾನ (Data Science) ವಿಭಾಗಗಳ ನೇತೃತ್ವ ವಹಿಸಲಿದ್ದಾರೆ.
ತಮ್ಮ ಹೊಸ ಪಾತ್ರದಲ್ಲಿ ಪ್ರಸನ್ನ ಪ್ರಸಾದ್ ಅವರು ವರ್ಸ್ ಇನ್ನೋವೇಶನ್ ಅಡಿಯ ಪ್ರಸಿದ್ಧ ವೇದಿಕೆಗಳಾದ ಡೈಲಿಹಂಟ್ (Dailyhunt) ಮತ್ತು ಜೋಶ್ (Josh) ಸೇರಿದಂತೆ ಸಂಸ್ಥೆಯ ಇತರೆ ಉತ್ಪನ್ನಗಳಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಸಾಮರ್ಥ್ಯಗಳನ್ನು ಹೆಚ್ಚಿಸುವತ್ತ ಗಮನ ಹರಿಸಲಿದ್ದಾರೆ.
ಪ್ರಮುಖವಾಗಿ ಇವರು ಕಂಟೆಂಟ್ ಪರ್ಸನಲೈಸೇಶನ್ (ಬಳಕೆದಾರರ ಆಸಕ್ತಿಗೆ ಅನುಗುಣವಾಗಿ ಮಾಹಿತಿ ನೀಡುವುದು), ಕ್ರಿಯೇಟರ್ ಇಕೋಸಿಸ್ಟಮ್ ಬಲಪಡಿಸುವುದು, ಜಾಹೀರಾತು ತಂತ್ರಜ್ಞಾನದ ಸುಧಾರಣೆ ಮತ್ತು ಮೊನೆಟೈಸೇಶನ್ (ಆದಾಯ ಗಳಿಕೆ) ಪ್ರಕ್ರಿಯೆಯನ್ನು ಉತ್ತಮಪಡಿಸುವುದು ಮುಖ್ಯ ಗುರಿಯಾಗಿದೆ.
ಪ್ರಸನ್ನ ಪ್ರಸಾದ್ ಅವರು ಈ ಹಿಂದೆ ವರ್ವ್ ಗ್ರೂಪ್ ಇಂಕ್ (Verve Group Inc.) ಸಂಸ್ಥೆಯಲ್ಲಿ ಸಿಟಿಒ ಮತ್ತು ಎಐ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಉತ್ಪನ್ನ ಎಂಜಿನಿಯರಿಂಗ್ ಮತ್ತು ದತ್ತಾಂಶ ವಿಜ್ಞಾನ ಕ್ಷೇತ್ರದಲ್ಲಿ ಸುಮಾರು ಎರಡು ದಶಕಗಳಿಗೂ ಹೆಚ್ಚಿನ ಅನುಭವ ಹೊಂದಿರುವ ಇವರು, ಕ್ಲೌಡ್-ನೇಟಿವ್ ಸಿಸ್ಟಮ್ ಮತ್ತು ಎಐ ಚಾಲಿತ ಉತ್ಪನ್ನಗಳನ್ನು ನಿರ್ಮಿಸುವಲ್ಲಿ ಪರಿಣತಿ ಹೊಂದಿದ್ದಾರೆ.
ಬೆಂಗಳೂರು ಮೂಲದ ವರ್ಸ್ ಇನ್ನೋವೇಶನ್ ಪ್ರಸ್ತುತ ಗಮನಾರ್ಹ ಪ್ರಗತಿ ಸಾಧಿಸುತ್ತಿದೆ. ಇಂಟ್ರಾಕರ್ (Entrackr) ವರದಿಯ ಪ್ರಕಾರ, ಸಂಸ್ಥೆಯ ಕಾರ್ಯಾಚರಣೆಯ ಆದಾಯವು 2024ನೇ ಹಣಕಾಸು ವರ್ಷದಲ್ಲಿ ₹1,029 ಕೋಟಿ ಇದ್ದಿದ್ದು, 2025ನೇ ಹಣಕಾಸು ವರ್ಷದಲ್ಲಿ ₹1,930 ಕೋಟಿಗೆ ಏರಿಕೆಯಾಗಿದೆ. 2025ರ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಸಂಸ್ಥೆಯು ಲಾಭದಾಯಕ ಹಂತವನ್ನು ತಲುಪುವ ನಿರೀಕ್ಷೆಯಿದೆ. ಸಂಸ್ಥೆಯು ಈವರೆಗೆ ಒಟ್ಟು ₹12,500 ಕೋಟಿಗೂ ಅಧಿಕ ($1.5 Billion) ಬಂಡವಾಳ ಸಂಗ್ರಹಿಸಿದ್ದು, ಕಳೆದ ಸುತ್ತಿನ ಹೂಡಿಕೆಯ ವೇಳೆಗೆ ಸಂಸ್ಥೆಯ ಮೌಲ್ಯವು ಸುಮಾರು ₹41,000 ಕೋಟಿ ($5 Billion) ಎಂದು ಅಂದಾಜಿಸಲಾಗಿದೆ.
ವರ್ಸ್ ಇನ್ನೋವೇಶನ್ ಸಂಸ್ಥೆಗೆ ಸಿಪಿಪಿ ಇನ್ವೆಸ್ಟ್‌ಮೆಂಟ್ಸ್, ಒಂಟಾರಿಯೊ ಟೀಚರ್ಸ್ ಪೆನ್ಶನ್ ಪ್ಲಾನ್, ಕತಾರ್ ಇನ್ವೆಸ್ಟ್‌ಮೆಂಟ್ ಅಥಾರಿಟಿ, ಕಾರ್ಲೈಲ್ ಗ್ರೂಪ್ ಮತ್ತು ಗೋಲ್ಡ್‌ಮನ್ ಸ್ಯಾಕ್ಸ್‌ನಂತಹ ಜಾಗತಿಕ ಹೂಡಿಕೆದಾರರ ಬೆಂಬಲವಿದೆ. ಸದ್ಯ ಡೈಲಿಹಂಟ್ ಮೂಲಕ 350 ಮಿಲಿಯನ್ ಬಳಕೆದಾರರಿಗೆ ವೈಯಕ್ತಿಕಗೊಳಿಸಿದ ಮಾಹಿತಿ ತಲುಪಿಸುತ್ತಿರುವ ಸಂಸ್ಥೆಯು, ನೆಕ್ಸ್ಟ್‌ವರ್ಸ್ (NexVerse.ai) ಮತ್ತು ವರ್ಸ್ ಕೊಲ್ಯಾಬ್‌ನಂತಹ ಎಐ ಪರಿಕರಗಳನ್ನೂ ಹೊಂದಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.