ಭಾರತದತ್ತ ತನ್ನ ವಕ್ರದೃಷ್ಟಿ ಹೊರಳಿಸಿದ ಡೋನಾಲ್ಡ್ ಟ್ರಂಪ್| ಭಾರತದ ತೆರಿಗೆಗೆ ಪ್ರತಿಯಾಗಿ ಬದಲಿ ತೆರಿಗೆ ವಿಧಿಸುವ ಎಚ್ಚರಿಕೆ| ಅಮೆರಿಕದ ವಸ್ತುಗಳಿಗೆ ಭಾರತದ ಹೆಚ್ಚಿನ ತೆರಿಗೆ| RECIPROCAL TAX ವಿಧಿಸುವ ಚಿಂತನೆಯಲ್ಲಿ ಅಮೆರಿಕ ಅಧ್ಯಕ್ಷ|
ವಾಷಿಂಗ್ಟನ್(ಮಾ.03): ಅಮೆರಿಕ ಅಧ್ಯಕ್ಷ ಡೋನಲ್ಡ್ ಟ್ರಂಪ್ ಅವರಿಗೆ ಸುಮ್ಮನೆ ಕೂರಲಾಗಲ್ಲ. ತಮ್ಮ ಬಾಯಿಗೆ ಆಹಾರವಾಗುವ ದೇಶವನ್ನು ಅವರು ಹುಡುಕುತ್ತಲೇ ಇರುತ್ತಾರೆ.
ಮೆಕ್ಸಿಕೋ ಗಡಿಗುಂಟ ಬೃಹತ್ ಗೋಡೆ ನಿರ್ಮಾಣ ಮಾಡೋದಾಗಿ ಹೇಳಿ ಹವಾ ಸೃಷ್ಟಿಸಿದ್ದ ಟ್ರಂಪ್, ಅದರ ವ್ಯಾಲಿಡಿಟಿ ಮುಗಿಯುತ್ತ ಬಂದಾಗ ಮತ್ತೊಂದು ಪಾಪ್ಯುಲರ್ ಹೇಳಿಕೆ ನೀಡೋ ಮೂಲಕ ಅಮೆರಿಕನ್ನರ ಮನಗೆಲ್ಲಲು ಪ್ರಯತ್ನಿಸುತ್ತಾರೆ.
ಹನೋಯಿಯಲ್ಲಿ ಉ.ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಊನ್ ಭೇಟಿ ಮಾಡಿ ಅಮೆರಿಕಕ್ಕೆ ಮರಳಿರುವ ಟ್ರಂಪ್, ಅಮೆರಿಕನ್ನರ ಕಿವಿಗೆ ಹೂವಿಡಲು ಸಿದ್ಧರಾಗಿದ್ದಾರೆ. ಈ ಬಾರಿ ಅವರ ಟಾರ್ಗೆಟ್ ಭಾರತ.
ಅಮೆರಿಕದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಅಧಿಕ ತೆರಿಗೆ ವಿಧಿಸುತ್ತಿರುವ ಭಾರತಕ್ಕೆ ಪ್ರತಿಯಾಗಿ, ತಾವೂ ಕೂಡ ಭಾರತದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಅಧಿಕ ಪ್ರತಿ ತೆರಿಗೆ ವಿಧಿಸುವುದಾಗಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.
ಮೇರಿಲ್ಯಾಂಡ್ ನಲ್ಲಿ ನಡೆದ 4 ದಿನಗಳ ಸಂರಕ್ಷಣಾ ರಾಜಕೀಯ ಕಾರ್ಯ ಸಮ್ಮೇಳನ(ಸಿಪಿಎಸಿ)ದ ಕೊನೆಯ ದಿನ ಮಾತನಾಡಿದ ಟ್ರಂಪ್, ಭಾರತ ಅತ್ಯಂತ ದುಬಾರಿ ತೆರಿಗೆ ದೇಶವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಮುಂದೆ ಭಾರತದ ಅಧಿಕ ತೆರಿಗೆಗೆ ಪ್ರತಿಯಾಗಿ ನಾವು ಕೂಡ ಬದಲಿ ತೆರಿಗೆ ವಿಧಿಸಬೇಕು ಎಂದು ಹೇಳಿದರು.
ಬದಲಿ ತೆರಿಗೆ(RECIPROCAL TAX) ತೆರಿಗೆಯ ಒಂದು ರೂಪವಾಗಿದ್ದು, ಅಮೆರಿಕದಿಂದ ರಫ್ತು ಆಗುವ ವಸ್ತುಗಳಿಗೆ ವಿಧಿಸುವ ತೆರಿಗೆಗೆ ಪ್ರತಿಯಾಗಿ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ವಿಧಿಸುವ ತೆರಿಗೆ ದರವಾಗಿದೆ.