ಮೋದಿಯನ್ನು ನಡುನೀರಲ್ಲಿ ಬಿಟ್ಟ ಊರ್ಜಿತ್: ಆರ್‌ಬಿಐ ಸ್ಥಾನಕ್ಕೆ ರಾಜೀನಾಮೆ!

Published : Dec 10, 2018, 05:29 PM ISTUpdated : Dec 10, 2018, 05:58 PM IST
ಮೋದಿಯನ್ನು ನಡುನೀರಲ್ಲಿ ಬಿಟ್ಟ ಊರ್ಜಿತ್: ಆರ್‌ಬಿಐ ಸ್ಥಾನಕ್ಕೆ ರಾಜೀನಾಮೆ!

ಸಾರಾಂಶ

ಆರ್‌ಬಿಐ ಗರ್ವನರ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಊರ್ಜಿತ್ ಪಟೇಲ್| ದಿಢೀರ್ ಬೆಳವಣಿಗೆಯಲ್ಲಿ ಏಕಾಏಕಿ ರಾಜೀನಾಮೆ ಸಲ್ಲಿಸಿದ ಊರ್ಜಿತ್| ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ನಡುವಿನ ತಿಕ್ಕಾಟಕ್ಕೆ ಬೇಸತ್ತು ರಾಜೀನಾಮೆ?| ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡುತ್ತಿರುವುದಾಗಿ ಸ್ಪಷ್ಟನೆ

ನವದೆಹಲಿ(ಡಿ.10): ಮಹತ್ವದ ಬೆಳವಣಿಗೆಯೊಂದರಲ್ಲಿ ಆರ್‌ಬಿಐ ಗರ್ವನರ್ ಸ್ಥಾನಕ್ಕೆ ಊರ್ಜಿತ್ ಪಟೇಲ್ ರಾಜೀನಾಮೆ ನೀಡಿದ್ದಾರೆ.

ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ನಡುವಿನ ತಿಕ್ಕಾಟದ ಹಿನ್ನೆಲೆಯಲ್ಲಿ ಊರ್ಜಿತ್ ಪಟೇಲ್ ರಾಜೀನಾಮೆ ನೀಡುತ್ತಾರೆ ಎಂಬ ಅನುಮಾನ ಕಳೆದ ಹಲವು ದಿನಗಳಿಂದ ವ್ಯಕ್ತವಾಗುತ್ತಲೇ ಇತ್ತು.

ಕೇಂದ್ರ ಸರ್ಕಾರ ಆರ್‌ಬಿಐ ಸ್ವಾಯತ್ತತೆ ಮೇಲೆ ಸವಾರಿ ಮಾಡುತ್ತಿದೆ ಎಂಬ ಅಸಮಾಧಾನ ಊರ್ಜಿತ್ ಪಟೇಲ್ ಅವರಲ್ಲಿತ್ತು. ಇದೇ ಕಾರಣಕ್ಕೆ ಕಳೆದ ಬಾರಿ ನಡೆದ ಆಡಳಿತ ಮಂಡಳಿ ಸಭೆ ಸಂದರ್ಭದಲ್ಲೇ ಊರ್ಜಿತ್ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.

ಕೇಂದ್ರ ಸರ್ಕಾರ ಆರ್‌ಬಿಐ ಸ್ವಾತಂತ್ರ್ಯ ಕಸಿಯುತ್ತಿದೆ ಎಂದು ಊರ್ಜಿತ್ ಈ ಹಿಂದೆಯೂ ಹಲವು ಬಾರಿ ಪರೋಕ್ಷವಾಗಿ ಮೋದಿ ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದರು. ಆದರೆ ಆಡಳಿತ ಮಂಡಳಿ ಸಭೆ ಬಳಿಕ ರಾಜೀನಾಮೆ ನೀಡುವ ವದಂತಿಯನ್ನು ಸ್ಪಷ್ಟವಾಗಿ ತಳ್ಳಿ ಹಾಕಿದ್ದರು.

ಆದರೆ ಇದೀಗ ದಿಢೀರ್ ರಾಜೀನಾಮೆ ಘೋಷಿಸಿರುವ ಊರ್ಜಿತ್ ಪಟೇಲ್, ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡುತ್ತಿರುವುದಾಗಿ ರಾಜೀನಾಮೆ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

ಊರ್ಜಿತ್ ಮನಸ್ತಾಪಕ್ಕೆ ಕಾರಣಗಳಿವು:

ಅಪನಗದೀಕರಣ ಮತ್ತು ಜಿಎಎಸ್ ಟಿ ಜಾರಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲಕ್ಕೆ ಗಟ್ಟಿಯಾಗಿ ನಿಂತಿದ್ದ ಊರ್ಜಿತ್ ಪಟೇಲ್, ನಂತರದ ದಿನಗಳಲ್ಲಿ ಹಣಕಾಸು ಸಚಿವಾಲಯದ ಮೇಲಿನ ಮನಸ್ತಾಪದಿಂದಾಗಿ ದೂರ ಸರಿಯತೊಡಗಿದರು.

ಅದರಂತೆ ಅನುತ್ಪಾದಕ ಸಾಲ(ಎನ್‌ಪಿಎ) ಕುರಿತು ಹಣಕಾಸು ಸಚಿವಾಲಯ ಮತ್ತು ಆರ್‌ಬಿಐ ನಡುವೆ ಸಣ್ಣದೊಂದು ಭಿನ್ನಾಭಿಪ್ರಾಯ ಮುಂದೆ ಬೃಹದಾಕಾರವಾಗಿ ಬೆಳೆಯಿತು.

ಮುಂದೆ ಹೆಚ್ಚುವರಿ ಮೀಸಲು ಹಣ ಹಂಚಿಕೆ ಕುರಿತೂ ಕೇಂದ್ರ ಮತ್ತು ಆರ್‌ಬಿಐ ನಡುವೆ ತಿಕ್ಕಾಟ ಶುರುವಾಯ್ತು. ಕೇಂದ್ರಕ್ಕೆ ಹೆಚ್ಚುವರಿ ಮೀಸಲು ಹಣವನ್ನು ಕೊಡಲು ಹಿಂದೇಟು ಹಾಕಿದ ಊರ್ಜಿತ್, ಮುಂದೆ ಸಂಧಾನ ಸಭೆ ಬಳಿಕ ಮೀಸಲು ಹಣ ನೀಡಲು ಒಪ್ಪಿದರು.

ಆದರೆ ಈ ಹೆಚ್ಚುವರಿ ಮೀಸಲು ಹಣ ವರ್ಗಾವಣೆ ಕುರಿತು ರಚಿಸಲಾಗುವ ಸಮಿತಿಯಲ್ಲಿ ಯಾರು ಇರಬೇಕು ಎಂಬುದರ ಕುರಿತೂ ಕೇಂದ್ರ ಮತ್ತು ಆರ್‌ಬಿಐ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

2026 ರಲ್ಲಿ ಮೇಷ ರಾಶಿಯವರ ಆರ್ಥಿಕ ಸ್ಥಿತಿ ಹೇಗಿರುತ್ತದೆ? AI ಪ್ರಕಾರ ಲಾಭನಾ ಅಥವಾ ನಷ್ಟನಾ?
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು