ಯುನೈಟೆಡ್ ಬ್ರೂವರೀಸ್ ಲಿಮಿಟೆಡ್ (ಯುಬಿಎಲ್) ತೆಲಂಗಾಣಕ್ಕೆ ಬಿಯರ್ ಸರಬರಾಜನ್ನು ನಿಲ್ಲಿಸಿದೆ. ಬೆಲೆ ನಿಗದಿ ಮತ್ತು ಬಾಕಿ ಮೊತ್ತದ ಕುರಿತು ಯುಬಿಎಲ್ ಮತ್ತು ರಾಜ್ಯ ಸರ್ಕಾರದ ನಡುವಿನ ಭಿನ್ನಾಭಿಪ್ರಾಯ ಇದಕ್ಕೆ ಕಾರಣ.
ಹೈದರಾಬಾದ್ (ಜ.9): ಕಿಂಗ್‌ಫಿಷರ್ ಮತ್ತು ಹೈನೆಕೆನ್‌ನಂತಹ ಬಿಯರ್ ಬ್ರಾಂಡ್‌ಗಳಿಗೆ ಹೆಸರುವಾಸಿಯಾದ ಯುನೈಟೆಡ್ ಬ್ರೂವರೀಸ್ ಲಿಮಿಟೆಡ್ (ಯುಬಿಎಲ್)ರಾಜ್ಯದ ಏಕೈಕ ಮದ್ಯ ವಿತರಕ ತೆಲಂಗಾಣ ಬೆವರೇಜಸ್ ಕಾರ್ಪೊರೇಷನ್ ಲಿಮಿಟೆಡ್ (ಟಿಜಿಬಿಸಿಎಲ್) ಗೆ ಬಿಯರ್ ಸರಬರಾಜು ಮಾಡುವುದನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಲ್ಲಿಸಿದೆ. ಈ ನಿರ್ಧಾರವು ಭಾರತದ ಅತಿದೊಡ್ಡ ಬಿಯರ್ ಮಾರುಕಟ್ಟೆಗಳಲ್ಲಿ ಪ್ರಮುಖ ಬದಲಾವಣೆಯನ್ನು ಸೂಚಿಸುತ್ತದೆ. ಬಿಯರ್ ಬೆಲೆ ನಿಗದಿ ಮತ್ತು ಬಾಕಿ ಉಳಿಸಿಕೊಂಡಿರುವ ಮೊತ್ತದ ಕುರಿತು ಬಿಯರ್ ಕಂಪನಿ ಮತ್ತು ರಾಜ್ಯ ಸರ್ಕಾರದ ನಡುವೆ ಬೆಳೆಯುತ್ತಿರುವ ಸಂಘರ್ಷವನ್ನೂ ಇದು ತೋರಿಸಿದೆ.
ಎರಡು ಪ್ರಮುಖ ಕಾರಣದಿಂದ ಯುಬಿಎಲ್ ಬಿಯರ್ ಪೂರೈಕೆಯನ್ನು ನಿಲ್ಲಿಸಲು ನಿರ್ಧರಿಸಿದೆ. ಹಲವು ವರ್ಷಗಳಿಂದ ತೆಲಂಗಾಣದಲ್ಲಿ ಬಿಯರ್ ಬೆಲೆಗಳಲ್ಲಿ ಏರಿಕೆಯಾಗಿಲ್ಲ. ಅದರೊಂದಿಗೆ ಟಿಜಿಬಿಸಿಎಲ್ ದೊಡ್ಡ ಪ್ರಮಾಣದ ಮೊತ್ತವನ್ನು ಬಾಕಿ ಉಳಿಸಿಕೊಂಡಿದೆ. ಈ ಎರಡು ಕಾರಣಕ್ಕಾಗಿ ಬಿಯರ್ ಪೂರೈಕೆಯನ್ನು ಕಂಪನಿ ನಿಲ್ಲಿಸಿದೆ.ಟಿಜಿಬಿಸಿಎಲ್ ಇಲ್ಲಿಯವರೆಗೂ 658.95 ಕೋಟಿ ರೂಪಾಯಿ ಮೊತ್ತವನ್ನು ಬಾಕಿ ಉಳಿಸಿಕೊಂಡಿದ್ದು, ಈವರೆಗೂ ಪಾವತಿ ಮಾಡಿಲ್ಲ. ಉತ್ಪಾದನಾ ವೆಚ್ಚಗಳು ಗಣನೀಯವಾಗಿ ಏರಿದ್ದರೂ ಸಹ, 2019-2020 ರಿಂದ ರಾಜ್ಯ ಸರ್ಕಾರವು ಬಿಯರ್‌ನ ಮೂಲ ಬೆಲೆಯನ್ನು ನವೀಕರಿಸಿಲ್ಲ ಎಂದು ಯುಬಿಎಲ್ ತಿಳಿಸಿದೆ.
ಈ ಬಗ್ಗೆ ಸ್ಟಾಕ್ ಎಕ್ಸ್‌ಚೇಂಜ್‌ಗೆ ಯುಬಿಎಲ್ ಮಾಹಿತಿ ನೀಡಿದೆ. 2019-20ರಿಂದಲೂ ಟಿಜಿಬಿಸಿಎಲ್ ರಾಜ್ಯದಲ್ಲಿ ಬಿಯರ್ ಮೂಲ ಬೆಲೆಯನ್ನು ಏರಿಕೆ ಮಾಡಿಲ್ಲ. ಇದರಿಂದಾಗಿ ತೆಲಂಗಾಣ ರಾಜ್ಯದಲ್ಲಿ ನಮಗೆ ಭಾರೀ ನಷ್ಟವಾಗುತ್ತಿದೆ' ಎಂದು ತಿಳಿಸಿದೆ. ತೆಲಂಗಾಣದಲ್ಲಿ ನಾವು ಹಣ ಕಳೆದುಕೊಳ್ಳುತ್ತಿದ್ದೇವೆ. ಆ ಕಾರಣಕ್ಕಾಗಿ ಸರಬರಾಜು ನಿಲ್ಲಿಸುತ್ತಿದ್ದೇವೆ. ಕಳೆದ ಎರಡು ವರ್ಷಗಳ ಪ್ರಯತ್ನದ ನಡುವೆಯೂ ನಾವು ನಮ್ಮ ಪ್ರಾಡಕ್ಟ್‌ನ ಬೆಲೆಯನ್ನು ಏರಿಸಿಲ್ಲ. ಇದು ದೊಡ್ಡ ನಷ್ಟಕ್ಕೆ ಕಾರಣವಾಗಿದೆ. ಹಾಗಾಗಿ ತೆಲಂಗಾಣದಲ್ಲಿ ಕಾರ್ಯಾಚರಣೆ ಮಾಡುವುದು ಸುಲಭವಲ್ಲದ ಕಾರಣ ಈ ನಿರ್ಧಾರ ಮಾಡಿದ್ದೇವೆ' ಎಂದಿದ್ದಾರೆ.
ಬಿಯರ್ ತಯಾರಕರ ಬೇಡಿಕೆಗಳ ಹೊರತಾಗಿಯೂ ತೆಲಂಗಾಣ ಸರ್ಕಾರ ಬಿಯರ್ ಬೆಲೆಗಳನ್ನು ಹೆಚ್ಚಿಸಲು ನಿರಾಕರಿಸಿದೆ. ಡಿಸೆಂಬರ್ 2024 ರಲ್ಲಿ, ಮುಖ್ಯಮಂತ್ರಿ ರೇವಂತ್ ರೆಡ್ಡಿ ಪ್ರತಿ ಬಾಟಲಿಗೆ ಕನಿಷ್ಠ 10 ರೂ.ಗಳ ಬೆಲೆ ಏರಿಕೆಯ ಮನವಿಯನ್ನು ತಿರಸ್ಕರಿಸಿದರು. ಗ್ರಾಹಕರನ್ನು ರಕ್ಷಿಸುವುದು ಅವರ ಪ್ರಮುಖ ಆದ್ಯತೆ ಎಂದು ತಿಳಿಸಿದ್ದಲ್ಲದೆ, ಬಿಯರ್ ಕಂಪನಿಗಳು ಸರ್ಕಾರದ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದ್ದರು.
"ನಮ್ಮ ಸರ್ಕಾರವು ಈ ಪ್ರದೇಶದಲ್ಲಿ ಬಿಯರ್ ಬೆಲೆಗಳನ್ನು ಅತ್ಯಂತ ಕಡಿಮೆ ಮಟ್ಟದಲ್ಲಿ ಇರಿಸುತ್ತದೆ. ಯಾವುದೇ ಬಿಯರ್ ಕಂಪನಿಯು ನಮ್ಮ ಮೇಲೆ ಒತ್ತಡ ಹೇರಬಹುದು ಅದು ಅವರ ತಪ್ಪು ಭಾವನೆ ಈ ಬಗ್ಗೆ ಯಾವುದೇ ಮಾತುಕತೆಗೆ ನಾವು ಸಿದ್ದವಿಲ್ಲ' ಎಂದು ರೇವಂತ್ ರೆಡ್ಡಿ ಹೇಳಿದರು. ಹಿಂದಿನ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಸರ್ಕಾರದಂತೆ ತೆಲಂಗಾಣದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವು ಮದ್ಯ ಉದ್ಯಮದ ಬೇಡಿಕೆಗಳಿಗೆ ಮಣಿಯುವುದಿಲ್ಲ ಎಂದು ಅವರು ಒತ್ತಿ ಹೇಳಿದರು.
ಒರಿಜಿನಲ್ ಚಾಯ್ಸ್ ವಿಸ್ಕಿ ಮಾಲೀಕರಿಂದ ಕರ್ನಾಟಕದಲ್ಲಿ 600 ಕೋಟಿ ವೆಚ್ಚದ ಹೊಸ ಪ್ಲ್ಯಾಂಟ್!
ಅಬಕಾರಿ ಸಚಿವ ಜೂಪಲ್ಲಿ ಕೃಷ್ಣ ರಾವ್ ಅವರು ಮುಖ್ಯಮಂತ್ರಿಯವರ ನಿಲುವನ್ನು ಬೆಂಬಲಿಸಿದರು. ಬಿಯರ್ ಬೆಲೆಯಲ್ಲಿ 33% ಹೆಚ್ಚಳವು ಬಾಟಲಿಯ ಬೆಲೆಯನ್ನು 150 ರೂ.ಗಳಿಂದ 250 ರೂ.ಗಳಿಗೆ ಹೆಚ್ಚಿಸುತ್ತದೆ ಮತ್ತು ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಬೀಳುತ್ತದೆ ಎಂದು ಅವರು ವಿವರಿಸಿದರು. "ನಾವು ಅವರ ಒತ್ತಡಕ್ಕೆ ಮಣಿಯುವುದಿಲ್ಲ" ಎಂದು ಕೃಷ್ಣ ರಾವ್ ತಿಳಿಸಿದ್ದರು.
ಹತ್ತಿರದ ರಾಜ್ಯಗಳಿಗೆ ಹೋಲಿಸಿದರೆ ತೆಲಂಗಾಣದಲ್ಲಿ ಬಿಯರ್ ಬೆಲೆಗಳಲ್ಲಿನ ಸಮಸ್ಯೆಯ ಬಗ್ಗೆ ಭಾರತೀಯ ಬ್ರೂವರ್ಸ್ ಸಂಘವು ಗಮನಸೆಳೆದಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕಿಂತ ತೆಲಂಗಾಣದಲ್ಲಿ ಬಿಯರ್ ಬೆಲೆಗಳು ಸುಮಾರು 30-50% ಕಡಿಮೆಯಾಗಿದ್ದು, ಕಂಪನಿಗಳು ತೆಲಂಗಾಣದಲ್ಲಿ ಲಾಭದಾಯಕವಾಗಿ ಕಾರ್ಯನಿರ್ವಹಿಸುವುದು ಕಷ್ಟಕರವಾಗಿದೆ.
ಹೆಸರು ಹೇಳೋಕೆ ಕಷ್ಟಪಡಬೇಕಾದ ಜಗತ್ತಿನ 5 ಅಪರೂಪದ ಸ್ಕಾಚ್ಸ್!
ಈ ಸಮಸ್ಯೆಯನ್ನು ಪರಿಹರಿಸಲು, ಸಂಘವು ತೆಲಂಗಾಣ ಸರ್ಕಾರಕ್ಕೆ ಎರಡು ಪರಿಹಾರಗಳನ್ನು ಸೂಚಿಸಿದೆ: ಕರ್ನಾಟಕ ಮತ್ತು ಮಹಾರಾಷ್ಟ್ರದಂತೆ ಕಂಪನಿಗಳು ತಮ್ಮದೇ ಆದ ಬೆಲೆಗಳನ್ನು ನಿಗದಿಪಡಿಸಲು ಅವಕಾಶ ನೀಡುವುದು, ಅಥವಾ ಸಗಟು ಬೆಲೆ ಸೂಚ್ಯಂಕ (WPI) ನಂತಹ ಹಣದುಬ್ಬರ ಕ್ರಮಗಳ ಆಧಾರದ ಮೇಲೆ ಬೆಲೆಗಳನ್ನು ಸರಿಹೊಂದಿಸುವುದು. ಇದರ ನಡುವೆ ತೆಲಂಗಾಣ ಸರ್ಕಾರ ಹಾಗೂ ಯುಬಿಎಲ್ ನಡುವಿನ ತಿಕ್ಕಾಟ ಮುಂದುವರಿದಿದೆ.