ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಫೆ.1ರಂದು ಮಂಡನೆಯಾಗಲಿದೆ. ಇದರಲ್ಲಿ ಯಾವೆಲ್ಲ ಕ್ಷೇತ್ರಗಳಿಗೆ ಹೆಚ್ಚಿನ ಮಹತ್ವ ನೀಡಲಾಗುವುದು ಎಂಬ ಸುಳಿವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ಹಂಚಿಕೊಂಡಿದ್ದಾರೆ.
ನವದೆಹಲಿ (ಜ.28): ಕೇಂದ್ರ ಸರ್ಕಾರದ 2024ನೇ ಸಾಲಿನ ಮಧ್ಯಂತರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೆ.1ರಂದು ಮಂಡಿಸಲಿದ್ದಾರೆ. ಈ ಬಾರಿಯ ಬಜೆಟ್ ಪೂರ್ಣ ಪ್ರಮಾಣದಲ್ಲಿರದ ಕಾರಣ ಮಹತ್ವದ ಘೋಷಣೆಗಳನ್ನು ಒಳಗೊಂಡಿರೋದಿಲ್ಲ. ಆದರೂ ಬಜೆಟ್ ಗೆ ಸಂಬಂಧಿಸಿ ಜನರಲ್ಲಿ ಒಂದಿಷ್ಟು ನಿರೀಕ್ಷೆಗಳು ಇದ್ದೇಇವೆ. ಈಗಾಗಲೇ ವಿವಿಧ ವಲಯಗಳಿಗೆ ಸಂಬಂಧಿಸಿ ಬಜೆಟ್ ನಲ್ಲಿ ಏನೆಲ್ಲ ಘೋಷಣೆ ಮಾಡಬಹುದು? ಯಾವ ವಲಯಕ್ಕೆ ಹೆಚ್ಚಿನ ಮಹತ್ವ ಸಿಗಲಿದೆ? ಮುಂತಾದ ವಿಚಾರಗಳಿಗೆ ಸಂಬಂಧಿಸಿ ಸಾಷ್ಟು ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ನಲ್ಲಿ ಯಾವೆಲ್ಲ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಲಾಗುವುದು ಎಂಬ ಬಗ್ಗೆ ಸುಳಿವು ನೀಡಿದ್ದಾರೆ. ಹಾಗಾದ್ರೆ ವಿತ್ತ ಸಚಿವರು ನೀಡಿರುವ ಮಾಹಿತಿಗಳೇನು?
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನೀಡಿರುವ ಮಾಹಿತಿ ಅನ್ವಯ ಈ ಬಾರಿಯ ಮಧ್ಯಂತರ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಯುವಜನರು, ಮಹಿಳೆಯರು, ರೈತರು ಹಾಗೂ ಬಡವರ ಕಲ್ಯಾಣಕ್ಕೆ ಹೆಚ್ಚಿನ ಒತ್ತು ನೀಡಿದೆ. ಲೋಕಸಭೆಯ ಚುನಾವಣೆ ಏಪ್ರಿಲ್ ಹಾಗೂ ಮೇನಲ್ಲಿ ನಡೆಯಲಿದೆ. ಹೀಗಾಗಿ ಬಜೆಟ್ ನಲ್ಲಿ ಸರ್ಕಾರ ಕೆಲವೊಂದು ನಿಗದಿತ ಗುಂಪುಗಳನ್ನು ಗುರಿಯಾಗಿಸಿಕೊಂಡು ಯೋಜನೆಗಳನ್ನು ಘೋಷಣೆ ಮಾಡುವ ಸಾಧ್ಯತೆ ಕೂಡ ಇದೆ. ಇದಕ್ಕೆ ಪುಷ್ಟಿ ನೀಡುವಂತೆ ಇತ್ತೀಚೆಗೆ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ನಿರ್ಮಲಾ ಸೀತಾರಾಮನ್, ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಯುವಜನರು, ಮಹಿಳೆಯರು, ರೈತರು ಹಾಗೂ ಬಡವರು ಈ ಗುಂಪುಗಳಿಗೆ ಹೆಚ್ಚಿನ ಮಹತ್ವ ನೀಡಬೇಕೆಂದು ಹೇಳಿದ್ದಾರೆ. ಅಲ್ಲದೆ, ಜಾತಿ, ಸಮುದಾಯ ಅಥವಾ ಧರ್ಮವನ್ನು ಪರಿಗಣಿಸದೆ ಈ ಗುಂಪುಗಳನ್ನು ಮೇಲೆತ್ತಲು ಪ್ರಯತ್ನಿಸಬೇಕು ಎಂದು ತಿಳಿಸಿದ್ದಾರೆ ಎಂಬ ಮಾಹಿತಿ ನೀಡಿದ್ದರು.
undefined
Union Budget 2024:ಈ ಬಾರಿಯ ಬಜೆಟ್ ನಲ್ಲಿಆದಾಯ ತೆರಿಗೆಗೆ ಸಂಬಂಧಿಸಿ ಏನು ನಿರೀಕ್ಷಿಸಬಹುದು?
"ಯುವಜನತೆ, ಮಹಿಳೆಯರು, ನಮಗೆ ಆಹಾರ ಭದ್ರತೆ ನೀಡುವ ಉತ್ತಮ ರೈತರು ಹಾಗೂ ಅಸಹಾಯಕ ಬಡವರು ಈಗಲೂ ಕೂಡ ಹೆಚ್ಚಿನ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಈ ನಾಲ್ಕು ಗುಂಪುಗಳ ಮೇಲೆತ್ತಲು ಅವರಿಗೆ ಹೆಚ್ಚಿನ ನೆರವು ನೀಡಬೇಕಾದ ಅಗತ್ಯವಿದೆ. ಹೀಗಾಗಿ ಈ ನಾಲ್ಕು ಗುಂಪುಗಳ ಮೇಲೆ ಹೆಚ್ಚಿನ ಗಮನ ಕೇಈಕರಿಸಲಾಗುವುದು ಹಾಗೂ ಅವರ ಸ್ಥಿತಿ ಉತ್ತಮಪಡಿಸಲು ಪ್ರತಿ ವಿಚಾರದ ಮೇಲೂ ಗಮನ ಕೇಂದ್ರೀಕರಿಸಲಾಗುವುದು" ಎಂದು ಸೀತಾರಾಮನ್ ತಿಳಿಸಿದ್ದಾರೆ.
2014ರಿಂದಲೂ ಎನ್ ಡಿಎ ಸರ್ಕಾರದ ಮುಖ್ಯ ಉದ್ದೇಶ ಜನರ ಮೂಲಭೂತ ಅಗತ್ಯಗಳಾದ ಮನೆ, ನೀರು, ರಸ್ತೆಗಳು ಹಾಗೂ ವಿದ್ಯುತ್ ಪೂರೈಸೋದೇ ಆಗಿದೆ. ಆದರೆ, ಈ ವಿಚಾರಗಳ ಬಗ್ಗೆ ಈ ಹಿಂದಿನ ಸರ್ಕಾರ 50-60 ವರ್ಷಗಳಲ್ಲಿ ಇದರ ತುರ್ತು ಅಗತ್ಯವನ್ನು ಮನಗಂಡಿರಲಿಲ್ಲ ಎಂಬ ವಿಚಾರವನ್ನು ಕೂಡ ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಈ ನಡುವೆ ಜಾಗತಿಕ ಸವಾಲುಗಳ ನಡುವೆ ತನ್ನ ಇರುವನ್ನು ಗಟ್ಟಿಪಡಿಸಿಕೊಳ್ಳುವ ಸಾಮರ್ಥ್ಯ ಭಾರತಕ್ಕಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಇದಕ್ಕೆ ಕೆಂಪು ಸಮುದ್ರ ಬಿಕ್ಕಟ್ಟಿನ ನಿದರ್ಶನ ನೀಡಿದ್ದರು. ಆಹಾರ ರಫ್ತಿಗೆ ಸಂಬಂಧಿಸಿ ಸುದೀರ್ಘ ಸಂಬಂಧವನ್ನು ಭಾರತದೊಂದಿಗೆ ಹೊಂದಲು ಅನೇಕ ರಾಷ್ಟ್ರಗಳು ಆಸಕ್ತಿ ತೋರುತ್ತಿವೆ ಎಂದು ಸೀತಾರಾಮನ್ ತಿಳಿಸಿದ್ದಾರೆ.
Union Budget 2024: ಏನಿದು ಮಧ್ಯಂತರ ಬಜೆಟ್? ಪೂರ್ಣ ಆಯವ್ಯಯಕ್ಕಿಂತ ಇದು ಹೇಗೆ ಭಿನ್ನ?
ಈ ಬಾರಿಯ ಬಜೆಟ್ ಪೂರ್ಣ ಪ್ರಮಾಣದಲ್ಲಿರದ ಕಾರಣ ಸಾರ್ವಜನಿಕ ವಲಯದಲ್ಲಿ ಈ ಬಗ್ಗೆ ಹೆಚ್ಚಿನ ನಿರೀಕ್ಷೆಗಳಿರದಿದ್ದರೂ ತೆರಿಗೆದಾರರಿಗೆ ಮಾತ್ರ ಒಂದಿಷ್ಟು ಅಪೇಕ್ಷೆಗಳು ಇದ್ದೇಇವೆ. ಈ ಬಾರಿ ಏನಾದರೂ ಆದಾಯ ತೆರಿಗೆ ಪ್ರಯೋಜನಗಳು ಸಿಗಬಹುದೇ ಎಂಬ ನಿರೀಕ್ಷೆಯಲ್ಲಿ ದೇಶಾದ್ಯಂತ ತೆರಿಗೆದಾರರು ಕಾತುರದಿಂದ ಕಾಯುತ್ತಿದ್ದಾರೆ. ಆದರೆ, ಪ್ರಮುಖ ತೆರಿಗೆ ಪ್ರಯೋಜನಗಳ ಘೋಷಣೆಯನ್ನು 2024ನೇ ಸಾಲಿನ ಲೋಕಸಭೆ ಚುನಾವಣೆ ಮುಗಿದು ಹೊಸ ಸರ್ಕಾರ ರಚನೆಯಾದ ಬಳಿಕ ಮಂಡಿಸುವ ಬಜೆಟ್ ನಲ್ಲಿ ಮಾತ್ರ ನಿರೀಕ್ಷಿಸಲು ಸಾಧ್ಯ ಎನ್ನೋದು ತೆರಿಗೆ ತಜ್ಞರ ಅಭಿಪ್ರಾಯವಾಗಿದೆ.