ಬ್ಯಾಂಕ್‌ನಲ್ಲಿನ ನಿಮ್ಮ ಎಫ್‌ಡಿ ಇನ್ನಷ್ಟು ಸುರಕ್ಷಿತ, 1 ಲಕ್ಷದಿಂದ 5 ಲಕ್ಷಕ್ಕೇರಿಕೆ?

By Kannadaprabha News  |  First Published Feb 2, 2020, 7:26 AM IST

ಬ್ಯಾಂಕ್‌ನಲ್ಲಿನ ನಿಮ್ಮ ಎಫ್‌ಡಿ ಇನ್ನಷ್ಟು ಸುರಕ್ಷಿತ| ಠೇವಣಿ ಮೇಲಿನ ವಿಮೆ ಈಗಿನ 1ಲಕ್ಷದಿಂದ 5 ಲಕ್ಷಕ್ಕೇರಿಕೆ?| ವಿಮೆ ಮೊತ್ತ ಏರಿಸಲು ಡಿಐಸಿಜಿಸಿಗೆ ಬಜೆಟ್‌ನಲ್ಲಿ ವಿತ್ತ ಮಂತ್ರಿ ಸಮ್ಮತಿ| ಬ್ಯಾಂಕ್‌ ಮುಚ್ಚಿದರೆ ಗ್ರಾಹಕರಿಗೆ 1 ಲಕ್ಷದ ಬದಲು ಸಿಗಲಿದೆ 5 ಲಕ್ಷ


ನವದೆಹಲಿ[ಫೆ.02]: ಬ್ಯಾಂಕ್‌ ಅಥವಾ ಹಣಕಾಸು ಸಂಸ್ಥೆಗಳು ಬಾಗಿಲು ಮುಚ್ಚಿದರೆ ಠೇವಣಿದಾರರಿಗೆ ಸಿಗುತ್ತಿದ್ದ ವಿಮೆಯ ಮೊತ್ತವನ್ನು ಈಗಿರುವ 1 ಲಕ್ಷ ರು.ನಿಂದ 5 ಲಕ್ಷ ರು.ಗೆ ಏರಿಕೆ ಮಾಡಲು ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ಆರ್‌ಬಿಐನ ಅಧೀನದಲ್ಲಿರುವ ಠೇವಣಿ ವಿಮೆ ಮತ್ತು ಸಾಲ ಖಾತ್ರಿ ನಿಗಮ (ಡಿಐಸಿಜಿಸಿ) ವಿಮೆ ಹಣ ಪಾವತಿಸುತ್ತದೆ. ಹಣಕಾಸು ಸಂಸ್ಥೆಯು ದಿವಾಳಿಯಾಗಿ ವ್ಯವಹಾರ ಸ್ಥಗಿತಗೊಳಿಸಿದ ಪಕ್ಷದಲ್ಲಿ ಠೇವಣಿದಾರರು ಎಷ್ಟೇ ಹಣದ ಠೇವಣಿ ಇರಿಸಿದ್ದರೂ ಗರಿಷ್ಠ 1 ಲಕ್ಷ ರು. ವಿಮೆ ಹಣವನ್ನು ಮಾತ್ರ ಈ ಸಂಸ್ಥೆ ಪಾವತಿಸುತ್ತಿತ್ತು. ಇದೀಗ ಈ ಮೊತ್ತವನ್ನು 5 ಲಕ್ಷ ರು.ಗೇರಿಸಲು ಅನುಮತಿ ನೀಡಲಾಗಿದೆ ಎಂದು ಬಜೆಟ್‌ ಭಾಷಣದಲ್ಲಿ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

Tap to resize

Latest Videos

ಠೇವಣಿದಾರರು ಎಷ್ಟುಹಣಕಾಸು ಸಂಸ್ಥೆಯಲ್ಲಿ ಠೇವಣಿಯಿರಿಸಿದ್ದರೂ ಅಷ್ಟೂಹಣಕಾಸು ಸಂಸ್ಥೆಗಳ ಠೇವಣಿಗೆ ಈ ವಿಮೆ ಪ್ರತ್ಯೇಕವಾಗಿ ಅನ್ವಯಿಸುತ್ತದೆ. ಆದರೆ, ಡಿಐಸಿಜಿಸಿ ಎಂಬುದು ಸ್ವಾಯತ್ತ ಸಂಸ್ಥೆಯಾದ ಆರ್‌ಬಿಐನ ಅಧೀನದಲ್ಲಿರುವ ಸಂಸ್ಥೆಯಾಗಿದೆ. ಹೀಗಾಗಿ ಈ ಸಂಸ್ಥೆಯ ಮೇಲೆ ಸರ್ಕಾರಕ್ಕೆ ನೇರವಾದ ನಿಯಂತ್ರಣ ಇಲ್ಲ. ಆದ್ದರಿಂದ ಸರ್ಕಾರ ಅನುಮತಿ ನೀಡಿದಾಕ್ಷಣ ಈ ಸಂಸ್ಥೆಯು ಠೇವಣಿಗಳ ಮೇಲಿನ ವಿಮೆ ಮೊತ್ತ ಏರಿಕೆ ಮಾಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಠೇವಣಿಯ ವಿಮೆ ಮೊತ್ತ ಏರಿಸಬೇಕು ಅಂದರೆ ಬ್ಯಾಂಕುಗಳು ಈ ಸಂಸ್ಥೆಗೆ ಹೆಚ್ಚಿನ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಅದಕ್ಕೆ ಬ್ಯಾಂಕುಗಳು ಒಪ್ಪುತ್ತವೆಯೇ? ಅಥವಾ ಹೆಚ್ಚುವರಿ ಪ್ರೀಮಿಯಂನ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸುತ್ತವೆಯೇ ಎಂಬ ಪ್ರಶ್ನೆಗಳೂ ಇವೆ.

click me!