
-ವಿಜಯ ರಾಜೇಶ್
ಬೆಂಗಳೂರು[ಜು.06]: ಚುನಾವಣೆ ಹೊಸ್ತಿಲಲ್ಲಿ ಕಳೆದ ಫೆಬ್ರವರಿ ತಿಂಗಳಲ್ಲಿ ಮಂಡಿಸಿದ ಬಜೆಟ್‌ನ ಪೂರಕ ಅಥವಾ ಮುಂದುವರೆದ ಭಾಗವಾಗಿ ಈಗಿನ ವಿತ್ತ ಮಂತ್ರಿ ಬಜೆಟ್ ಅನ್ನು ಮಂಡಿಸಿದ್ದಾರೆ. ಫೆಬ್ರವರಿ ಹಾಗೂ ಈಗಿನ ಎರಡು ಬಜೆಟ್‌ಗಳನ್ನು ಒಳಗೊಂಡಂತೆ ಸರ್ಕಾರ ಆರ್ಥಿಕ ನೀತಿಗಳನ್ನು ಕೈಗೊಳ್ಳುತ್ತಿದೆ. ಕಳೆದ ಬಜೆಟ್‌ನಲ್ಲಿಯೇ ಸರ್ಕಾರ ಅದರ ಆರ್ಥಿಕ ನೀತಿಯನ್ನು ಪ್ರಕಟಗೊಳಿಸಿದ ಹಿನ್ನೆಲೆಯಲ್ಲಿ, ಈಗಿನ ಬಜೆಟ್ ಮೇಲೆ ಹೆಚ್ಚಿನ ನಿರೀಕ್ಷೆಗಳಿರಲಿಲ್ಲ. 2ನೇ ಅವಧಿಗೆ ಬಹುಮತದಿಂದ ಆರಿಸಿ ಬಂದ ಸರ್ಕಾರದಿಂದ ಮುಂದಿನ ದಿನಗಳಿಗೆ ನೀತಿ ರೂಪಕ ಆಧಾರಿತ ಬಜೆಟ್ ಮಂಡನೆಯಾಗಿದೆ.
ಮುಂದಿನ ದಿನಗಳಲ್ಲಿ ಹೆಚ್ಚು ಆದಾಯ ಇರುವವರು, ಆದಾಯ ತೆರಿಗೆ ರಿಟನ್ಸ್ ಸಲ್ಲಿಸುವ ನಿಟ್ಟಿನಲ್ಲಿ ಇನ್ನು ಮುಂದೆ ₹1 ಕೋಟಿ ಹಣ ಬ್ಯಾಂಕ್ ಖಾತೆಗೆ ಜಮಾವಣೆಯಾದಲ್ಲಿ, ₹2 ಲಕ್ಷ ಖರ್ಚು ಮಾಡಿ ವಿದೇಶ ಪ್ರಯಾಣ ಮಾಡಿದಾಗ, ₹1 ಲಕ್ಷ ವಿದ್ಯುತ್ ಬಿಲ್ ಪಾವತಿಸಿದಾಗ ರಿಟರ್ನ್ ಸಲ್ಲಿಕೆ ಕಡ್ಡಾ ಯ. ಪ್ಯಾನ್ ಕಾರ್ಡ್ ಇಲ್ಲದಿದ್ದರೂ ಆಧಾರ್ ಸಂಖ್ಯೆಯ ಆಧಾರದಲ್ಲಿ ತೆರಿಗೆ ರಿಟರ್ನ್ ಸಲ್ಲಿಸಬಹುದು. ಅಧಿಕ ಮೌಲ್ಯದ ವ್ಯವಹಾರಗಳನ್ನು ಮಾಡು ವಾಗ ಇನ್ನು ಮುಂದೆ ಪ್ಯಾನ್ ಅಥವಾ ಆಧಾರ್ ಸಂಖ್ಯೆ ನಮೂದಿಸುವುದು ಕಡ್ಡಾಯ.
ಯಾವುದೇ ಬ್ಯಾಂಕ್ ಖಾತೆಯಿಂದ ₹1 ಕೋಟಿಗಿಂತ ಅಧಿಕ ಹಣ ತೆಗೆದುಕೊಂಡಲ್ಲಿ, ಶೇ.2ರಷ್ಟು ಟಿಡಿಎಸ್ ಮಾಡ ಲಾಗುವುದು. ಇದರಿಂದ ಅಧಿಕ ಮೊತ್ತದ ಹಣವನ್ನು ಬ್ಯಾಂಕಿ ನಿಂದ ಪಡೆಯುವಾಗ ಲೆಕ್ಕ ಪಕ್ಕ ಇಟ್ಟುಕೊಳ್ಳಬೇಕು.
ಅನಿವಾಸಿ ಭಾರತೀಯರಿಗೆ ಹಲವು ಅನುಕೂಲಗಳನ್ನು ಈ ಬಾರಿಯ ಬಜೆಟ್‌ನಲ್ಲಿ ನೀಡಿದ್ದಾರೆ. ವಿದ್ಯುತ್ ಚಾಲಿತ ವಾಹ ನಗಳನ್ನು ಖರೀದಿಸಿದಾಗ ₹1.50 ಲಕ್ಷದಷ್ಟು ಬಡ್ಡಿಗೆ ತೆರಿಗೆ ವಿನಾಯಿತಿ ಇದೆ. ₹5 ಲಕ್ಷ ಮೌಲ್ಯದ ಮನೆ ಖರೀದಿಸಿದಾಗ, ಗೃಹ ಸಾಲದ ಮೇಲಿನ ಬಡ್ಡಿ, ಈಗಿರುವ ₹2 ಲಕ್ಷದ ಮೇಲೆ ₹1.50 ಲಕ್ಷದಷ್ಟು ಮಾತ್ರ ಅಂದರೆ ಒಟ್ಟು ₹3.50 ಲಕ್ಷ ಬಡ್ಡಿ ಪಾವತಿಗೆ ತೆರಿಗೆ ವಿನಾಯಿತಿ ಇದೆ.
ಈ ಬಾರಿ ಅತಿ ಶ್ರೀಮಂತರಿಗೆ ಅಂದರೆ ₹2 ಕೋಟಿಯಿಂದ ₹5 ಕೋಟಿ ಆದಾಯವಿರುವವರು ಶೇ.೩ರಷ್ಟು ಹೆಚ್ಚಿನ ತೆರಿಗೆ ಅಂದರೆ ಸುಮಾರು ಶೇ. 37.5ರಷ್ಟು ತೆರಿಗೆ ನೀಡಬೇಕು. ₹5 ಕೋಟಿ ಮೇಲ್ಪಟ್ಟು ಆದಾಯ ವಿರುವವರು ಶೇ.41.5ರಷ್ಟು ತೆರಿಗೆ ನೀಡಬೇಕು. ಇದರ ಹೊರತಾಗಿ ಹಲವು ಸುಧಾರಣೆಗಳು ಅಂದರೆ ಕರ ನಿರ್ಧಾರಣೆಗೆ ಇನ್ನು ಮುಂದೆ ಅಧಿಕಾರಿಗಳ ಮುಂದೆ ತೆರಿಗೆದಾರರು ಹೋಗುವಂತಿಲ್ಲ. ಎಲ್ಲವೂ ಕಂಪ್ಯೂಟರ್ ಮೂಲಕವೇ ನಿರ್ಧರಿಸಲಾಗುತ್ತದೆ. ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಪ್ರಾಮಾಣಿಕ ತೆರಿಗೆದಾರರಿಗೆ ಯಾವುದೇ ಸಮಸ್ಯೆಗಳಿಲ್ಲದೆ ನೆಮ್ಮದಿಯಾಗಿ ವ್ಯವಹಾರ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣಕ್ಕೆ ಈ ಬಜೆಟ್ ಆರಂಭ ನೀಡಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.