Union Budget 2024: ತೆರಿಗೆಯಿಂದ ಹಿಡಿದು ರಿಯಲ್ ಎಸ್ಟೇಟ್ ತನಕ, ಬಜೆಟ್ ಕುರಿತು ಜನಸಾಮಾನ್ಯರ ನಿರೀಕ್ಷೆಗಳೇನು?

Published : Jan 26, 2024, 11:24 AM ISTUpdated : Jan 27, 2024, 12:42 PM IST
Union Budget 2024: ತೆರಿಗೆಯಿಂದ ಹಿಡಿದು ರಿಯಲ್ ಎಸ್ಟೇಟ್ ತನಕ, ಬಜೆಟ್ ಕುರಿತು ಜನಸಾಮಾನ್ಯರ ನಿರೀಕ್ಷೆಗಳೇನು?

ಸಾರಾಂಶ

ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಫೆ.1ರಂದು ಮಂಡನೆಯಾಗಲಿದೆ. ಈ ಕುರಿತು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ನಿರೀಕ್ಷೆಗಳು ಗರಿಗೆದರಿವೆ. ಸಾಮಾನ್ಯ ನಾಗರಿಕ ಈ ಬಜೆಟ್ ನಿಂದ ಏನೆಲ್ಲ ನಿರೀಕ್ಷಿಸುತ್ತಿದ್ದಾನೆ? ಇಲ್ಲಿದೆ ಮಾಹಿತಿ.   

ನವದೆಹಲಿ (ಜ.26): ಕೇಂದ್ರ ಸರ್ಕಾರದ 2024-25ನೇ ಸಾಲಿನ ಮಧ್ಯಂತರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೆ.1ರಂದು ಮಂಡಿಸಲಿದ್ದಾರೆ. ಬಜೆಟ್ ಕುರಿತು ಜನಸಾಮಾನ್ಯರಿಗೆ ಒಂದಿಷ್ಟು ನಿರೀಕ್ಷೆಗಳಿರೋದು ಸಹಜ. ಈ ಬಾರಿಯ ಬಜೆಟ್ ಪೂರ್ಣ ಪ್ರಮಾಣದಲ್ಲಿರದಿದ್ದರೂ ಆ ಕುರಿತು ಸಾಮಾನ್ಯ ಜನರಿಗೆ ಒಂದಿಷ್ಟು ನಿರೀಕ್ಷೆಗಳು ಇದ್ದೇಇದೆ. ಈ ನಿರೀಕ್ಷೆಗಳು ಕಡಿಮೆ ತೆರಿಗೆಯಿಂದ ಹಿಡಿದು ರಿಯಲ್ ಎಸ್ಟೇಟ್ ಬೆಲೆಗಳಿಗೆ ದರ ನಿಗದಿಪಡಿಸುವ ತನಕ ವಿವಿಧ ವಿಚಾರಗಳಿಗೆ ಸಂಬಂಧಿಸಿವೆ. ಬಜೆಟ್ ಅಂದ ತಕ್ಷಣ ಜನಸಮಾನ್ಯರು ಮೊದಲು ಯೋಚಿಸೋದು ಆದಾಯ ತೆರಿಗೆ ಬಗ್ಗೆ. ಹೀಗಾಗಿ ಈ ಬಾರಿ ಆದಾಯ ತೆರಿಗೆ ವಿಚಾರದಲ್ಲಿ ಸರ್ಕಾರ ಏನೆಲ್ಲ ಪ್ರಯೋಜನಗಳನ್ನು ನೀಡಬಹುದು ಎಂಬ ಕುತೂಹಲ ಸಾರ್ವಜನಿಕ ವಲಯದಲ್ಲಿದೆ. ಲೋಕಸಭೆ ಚುನಾವಣೆ ಏಪ್ರಿಲ್-ಮೇನಲ್ಲಿ ನಡೆಯಲಿರುವ ಕಾರಣ ಈ ಬಾರಿಯ ಮಧ್ಯಂತರ ಬಜೆಟ್ ಮಧ್ಯಮ ವರ್ಗದವರಿಗೆ ಒಂದಿಷ್ಟು ಸಮಾಧಾನ ನೀಡಬಲ್ಲದು ಎಂಬ ನಿರೀಕ್ಷೆಯಂತೂ ತುಸು ಹೆಚ್ಚೇ ಇದೆ. 

MyGov ಪೋರ್ಟಲ್ ನಲ್ಲಿನ 'ಜನ್ ಭಾಗಿದಾರಿ' ವೇದಿಕೆಯಲ್ಲಿ ನಾಗರಿಕರು ಮಧ್ಯಂತರ ಬಜೆಟ್ ಗೆ ಸಂಬಂಧಿಸಿ  1200 ಸಲಹೆಗಳನ್ನು ನೀಡಿದ್ದಾರೆ. ಬಜೆಟ್ ಮಂಡನೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಜನಸಾಮಾನ್ಯರ ಸಲಹೆಗಳು ಕೂಡ ಮಹತ್ವ ಪಡೆದುಕೊಂಡಿವೆ.

Union Budget 2024: ಏನಿದು ಮಧ್ಯಂತರ ಬಜೆಟ್? ಪೂರ್ಣ ಆಯವ್ಯಯಕ್ಕಿಂತ ಇದು ಹೇಗೆ ಭಿನ್ನ?

ಬಜೆಟ್ ಕುರಿತು ಜನಸಾಮಾನ್ಯರ ನಿರೀಕ್ಷೆಗಳು ಹೀಗಿವೆ:
*ವೇತನ ಪಡೆಯುವ ಉದ್ಯೋಗಿಗಳಿಗೆ ಆದಾಯ ತೆರಿಗೆ ಸ್ಲ್ಯಾಬ್ ಮತ್ತೆ ಪರಿಷ್ಕರಣೆ ಮಾಡಬೇಕು ಎಂಬುದು ಸಾಮಾನ್ಯ ಜನರ ಮುಖ್ಯ ಬೇಡಿಕೆಯಾಗಿದೆ. ಹಿರಿಯ ನಾಗರಿಕರಿಗೆ ಆರ್ಥಿಕ ಪ್ರೋತ್ಸಾಹ ನೀಡಬೇಕು ಹಾಗೂ ಆರೋಗ್ಯಸೇವಾ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.
*ರಿಯಲ್ ಎಸ್ಟೇಟ್ ದರಗಳಿಗೆ ಮಿತಿ ನಿಗದಿಪಡಿಸೋದು ಒಂದು ಪ್ರಮುಖ ಪ್ರಸ್ತಾವನೆಯಾಗಿದ್ದು, ಇದು ಮಧ್ಯಮ ವರ್ಗದ ಜನರಿಗೆ ಮನೆಗಳು ಯೋಗ್ಯ ದರದಲ್ಲಿ ಸಿಗುವಂತೆ ಮಾಡುತ್ತದೆ ಎಂಬುದು ಜನಸಾಮಾನ್ಯರ ಬೇಡಿಕೆಯಾಗಿದೆ.
*ಇನ್ನೊಂದು ಪ್ರಮುಖ ಬೇಡಿಕೆಯೆಂದರೆ ಆದಾಯ ತೆರಿಗೆ ಸ್ಲ್ಯಾಬ್ ಗಳನ್ನು ಪರಿಷ್ಕರಿಸೋದು. ವೇತನ ಪಡೆಯುವ ವರ್ಗಕ್ಕೆ ಆದಾಯ ತೆರಿಗೆ ಸ್ಲ್ಯಾಬ್ ಗಳನ್ನು ಬದಲಾಯಿಸಬೇಕೆಂಬ ಬೇಡಿಕೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ. 

Union Budget 2024:ಈ ಬಾರಿಯ ಬಜೆಟ್ ನಲ್ಲಿಆದಾಯ ತೆರಿಗೆಗೆ ಸಂಬಂಧಿಸಿ ಏನು ನಿರೀಕ್ಷಿಸಬಹುದು?

ಹಿರಿಯ ನಾಗರಿಕರಿಗೆ ಆರ್ಥಿಕ ಪ್ರೋತ್ಸಾಹಗಳನ್ನು ಈ ಬಜೆಟ್ ನಲ್ಲಿ ಘೋಷಿಸಬೇಕೆಂಬ ಬೇಡಿಕೆ ಕೇಳಿಬರುತ್ತಿದೆ. ಮನೆ ನವೀಕರಣ ಹಾಗೂ ಪೇಂಟಿಂಗ್ ಮಾಡಲು ಸಾಲ, ಆರೋಗ್ಯ ವಿಮಾ ಯೋಜನೆಗಳ ಹೆಚ್ಚಳ ಹಾಗೂ ರೈಲ್ವೆ ಟಿಕೆಟ್ ಗಳಲ್ಲಿ ಡಿಸ್ಕೌಂಟ್ ನೀಡುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
*ಸರ್ಕಾರಿ ಉದ್ಯೋಗಿಗಳಿಗೆ ಹಳೆಯ ಪಿಂಚಣಿ ಯೋಜನೆಯನ್ನು ನವೀಕರಿಸೋದು ಹಾಗೂ ರೇಷನ್ ಕಾರ್ಡ್ ವ್ಯವಸ್ಥೆಯನ್ನು ಪರಿಷ್ಕರಿಸುವ ಮೂಲಕ ಅದರಲ್ಲಿನ ಸಮಸ್ಯೆಗಳನ್ನು ಹೋಗಲಾಡಿಸಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತ ಆಹಾರ ಧಾನ್ಯಗಳನ್ನು ಒದಗಿಸಬೇಕೆಂಬ  ಬೇಡಿಕೆ ಕೂಡ ಕೇಳಿಬಂದಿದೆ.
*ಇನ್ನು ಪಾನ್ ಮಸಾಲಾ, ಗುಟ್ಖಾ, ಆಲ್ಕೋಹಾಲ್ ಹಾಗೂ ಸಿಗರೇಟ್ ಮೇಲೆ ಅಧಿಕ ತೆರಿಗೆಗಳನ್ನು ವಿಧಿಸಬೇಕು. ಇದರಿಂದ ಕ್ಯಾನ್ಸರ್ ಅಪಾಯ ತಗ್ಗಿಸಬಹುದು ಹಾಗೂ ಸ್ವಚ್ಛ ಭಾರತ ಅಭಿಯಾನಕ್ಕೆ ಈ ಕಾರ್ಯಕ್ರಮವನ್ನು ಜೋಡಿಸುವ ಮೂಲಕ ನಮ್ಮ ಪರಿಸರವನ್ನು ಸ್ವಚ್ಛವಾಗಿಡಬಹುದು.
*ಶೈಕ್ಷಣಿಕ ವಲಯದಲ್ಲಿ ಶಾಲೆಗಳ ಶುಲ್ಕವನ್ನು ತಗ್ಗಿಸಲು ಸರ್ಕಾರ ಮಧ್ಯ ಪ್ರವೇಶಿಸಬೇಕು ಹಾಗೂ ಆರೋಗ್ಯ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಮೀಸಲಿಡಲು ಕ್ರಮ ಕೈಗೊಳ್ಳಬೇಕು.
*ಸುಸ್ಥಿರ ಅಭಿವೃದ್ಧಿ, ಅನ್ವೇಷಣೆ, ತತ್ರಜ್ಞಾನ ಹಾಗೂ ಕೌಶಾಲಾಭಿವೃದ್ಧಿ, ಡಿಜಿಟಲ್ ಶಿಕ್ಷಣ ಹಾಗೂ ನವೀಕರಿಸಬಹುದಾದ ಇಂಧನದಲ್ಲಿ ಹೂಡಿಕೆಗಳನ್ನು ಪ್ರೋತ್ಸಾಹಿಸಲು ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.
*ಎಲ್ಲ ನೇರ ತೆರಿಗೆಗಳನ್ನು ತೆಗೆದು ಒಂದೇ ಸರಕು ಹಾಗೂ ಸೇವಾ ತೆರಿಗೆ ದರವನ್ನು ನಿಗದಿಪಡಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ. ಇನ್ನು ಮನೆಯಿಂದ ಕಾರ್ಯನಿರ್ವಹಿಸಲು ಪ್ರೋತ್ಸಾಹ ನೀಡುತ್ತಿರುವ ಕಂಪನಿಗಳಿಗೆ ತೆರಿಗೆ ಪ್ರಯೋಜನಗಳನ್ನು ಒದಗಿಸುವಂತೆ ಆಗ್ರಹಿಸಲಾಗುತ್ತಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ