₹2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ ಗುಡ್ನೆಸ್’ ಕಟ್ಟಿದ ಟೆಕಿ!

Kannadaprabha News, Ravi Janekal |   | Kannada Prabha
Published : Aug 04, 2025, 11:55 AM ISTUpdated : Aug 05, 2025, 08:37 PM IST
pavana goodness

ಸಾರಾಂಶ

ಬೆಳಗಾವಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಮಹಿಳೆಯೊಬ್ಬರು ಕೆಲಸ ಬಿಟ್ಟು ಆಲೆಮನೆಯಲ್ಲಿ ಬೆಲ್ಲ ತಯಾರಿಸಿ ಯಶಸ್ಸು ಕಂಡಿದ್ದಾರೆ. ಕೇವಲ ಎರಡೇ ವರ್ಷಗಳಲ್ಲಿ ₹2 ಕೋಟಿ ವಹಿವಾಟು ನಡೆಸಿರುವ ಇವರ ಬ್ರ್ಯಾಂಡ್ ಪಾವನಾ ಗುಡ್ನೆಸ್, ಸಗಟು ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಪಡೆದುಕೊಂಡಿದೆ.

ರಾಜ್ಯದಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯುವ ಜಿಲ್ಲೆ ಬೆಳಗಾವಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಮಹಿಳೆ, ಆಲೆಮನೆ ತೆರೆದು ಬೆಲ್ಲದ ಬ್ರ್ಯಾಂಡ್ ಬೆಳೆದ ಕತೆ ಇದು. ಶುರು ಮಾಡಿದ ಎರಡೇ ವರ್ಷದಲ್ಲಿ ₹2 ಕೋಟಿ ವಹಿವಾಟು ನಡೆಸಿರುವ ಪಾವನಾ ಗುಡ್ನೆಸ್ ಬೆಲ್ಲದ ಮಾರಾಟವಿನ್ನೂ ಆನ್ಲೈನ್ ಮಾರುಕಟ್ಟೆಗೆ ಕಾಲಿಟ್ಟಿಲ್ಲ. ರಿಟೇಲ್ ಮಾರುಕಟ್ಟೆಯಲ್ಲೂ ಸಿಗುತ್ತಿಲ್ಲ. ಸಗಟು ವ್ಯಾಪಾರದಲ್ಲೇ ಭಾರೀ ಬೇಡಿಕೆ ಗಿಟ್ಟಿಸಿಕೊಂಡಿರುವ ಈ ಪೌಡರ್ ಬೆಲ್ಲದ ಹಿಂದಿರೋ ಶಕ್ತಿ ಶಾಂಭವಿ ಅಶ್ವತ್ಥಪುರ.

ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಶಾಂಭವಿ ಅಶ್ವತ್ಥಪುರ ಅವರು ಕೆಲಸ ಬಿಟ್ಟು ಬೆಲ್ಲ ತಯಾರಿಕೆಗೆ ಇಳಿಯಲು ಕಾರಣ ಕಲಬೆರಕೆ. ಸಕ್ಕರೆ ಹಾಕಿ ಬೆಲ್ಲ ತಯಾರಿಸೋದನ್ನು ಕಂಡ ಶಾಂಭವಿ, ನಾವು ತಿನ್ನೋ ಬೆಲ್ಲ ಬೆಲ್ಲವಲ್ಲ. ಬೆಲ್ಲದ ಮುಖವಾಡ ಹೊತ್ತ ಸಕ್ಕರೆ. ಹೀಗಾಗಿ ಶುದ್ಧ, ಆರೋಗ್ಯಪೂರ್ಣ ಬೆಲ್ಲ ಕೊಟ್ಟರೆ ಜನ ಸ್ವೀಕರಿಸುತ್ತಾರೆ ಅನ್ನೋ ನಂಬಿಕೆಯಿಂದ ಮೂರು ವರ್ಷಗಳ ಹಿಂದೆ ಗೋ ನ್ಯೂಟ್ರೀಷನ್ ಕಂಪನಿ ಸ್ಥಾಪಿಸಿದರು. ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದ ಸಮೀಪ ಇರುವ ಕೆರೂರಿನಲ್ಲಿ ಆಲೆಮನೆ ಶುರು ಮಾಡಿ ರಸಾಯನಿಕ ಬಳಸದೆ ಬೆಲ್ಲ ಉತ್ಪಾದನೆ ಶುರು ಮಾಡಿದರು.

ಕೈ ಹಿಡಿದ ಕಪೆಕ್‌:

ಮೊದ ಮೊದಲಿಗೆ ಮಾರುಕಟ್ಟೆಯಲ್ಲಿ ಸಿಗೋ ಬೆಲ್ಲದ ದರ, ಬಣ್ಣದ ಜೊತೆ ಸೆಣೆಸುವುದೇ ಸವಾಲಾಗಿತ್ತು. ನಂತರ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿ, ಅವರು ತಯಾರಿಸೋ ರೀತಿ ನೋಡಿ ಖಚಿತ ಪಡಿಸಿಕೊಂಡ ಕೆಲವು ಆಹಾರ ಕಂಪನಿಗಳು ದೊಡ್ಡ ಮಟ್ಟದ ಆರ್ಡರ್ ನೀಡತೊಡಗಿದರು. ಅಚ್ಚು ಬೆಲ್ಲ, ಬಕೆಟ್ ಬೆಲ್ಲಕ್ಕಿಂತ ಪುಡಿ ಬೆಲ್ಲಕ್ಕೆ ಬೇಡಿಕೆ ಬರತೊಡಗಿದಾಗ 2023ರಲ್ಲಿ ಕರ್ನಾಟಕ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದಿಂದ ಪಿಎಂಎಫ್ಎಂಇ ಯೋಜನೆ ಮೂಲಕ ₹9.57 ಲಕ್ಷ ಸಾಲ ಪಡೆದು ಪುಡಿ ಬೆಲ್ಲ ತಯಾರಿಸುವ ಮಷೀನು, ಡ್ರೈಯರ್‌ಗಳನ್ನು ಖರೀದಿಸಿದರು. ಅದಾಗುತ್ತಿದ್ದಂತೆ ಗೋ ನ್ಯೂಟ್ರೀಷನ್ ಕಂಪನಿಯ ಪಾವನಾ ಗುಡ್ನೆಸ್ ಬೆಲ್ಲಕ್ಕೆ ಸಗಟು ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗತೊಡಗಿದೆ.

ಪ್ರತಿ ನಿತ್ಯ 20 ಟನ್ ಕಬ್ಬು ಅರೆದು ತಿಂಗಳಿಗೆ 40 ರಿಂದ 50 ಟನ್ ಬೆಲ್ಲ ಮಾರುತ್ತಿದ್ದಾರೆ. ಕಳೆದ ವರ್ಷ ₹2 ಕೋಟಿ ವಹಿವಾಟು ನಡೆಸಿರುವ ಇವರು ತಿಂಗಳಿಗೆ 23 ರಿಂದ 24 ಲಕ್ಷ ರು. ವಹಿವಾಟು ನಡೆಸುತ್ತಿದ್ದಾರೆ. ಆನ್‌ಲೈನ್‌ ವ್ಯಾಪಾರ ಇಲ್ಲದೆ ಸಗಟು ರೂಪದಲ್ಲೇ ವ್ಯವಹಾರ ಇರುವುದಿರಂದ ಇವರ ಬ್ರ್ಯಾಂಡ್ ಸಾಮಾನ್ಯರಿಗೆ ಪರಿಚಯವಾಗಿಲ್ಲ. ರಫ್ತು ಕಂಪನಿಯೊಂದರ ಮೂಲಕ ಇತ್ತೀಚೆಗೆ 5 ಕಂಟೈನರ್ ಬೆಲ್ಲವು ಓಮನ್, ದುಬೈಗೆ ರಫ್ತಾಗಿದೆ. ಗುಜರಾತ್, ಮುಂಬೈ, ಬೆಂಗಳೂರು ಹಾಗೂ ಪೂನಾದಲ್ಲಿ ಇವರ ಸಗಟು ಗ್ರಾಹಕರಿದ್ದಾರೆ. ಆದರೆ, ಪಾವನಾ ಗುಡ್ನೆಸ್ ಬ್ರ್ಯಾಂಡ್ ಪ್ರಚಾರಕ್ಕೆ ತರಲು ಸಿದ್ಧತೆ ನಡೆಸಿದ್ದಾರೆ ಶಾಂಭವಿ ಅಶ್ವತ್ಥಪುರ.

ಫ್ಲೇವರ್ಡ್ ಬೆಲ್ಲ:

ಇವರ ಪುಡಿ ಬೆಲ್ಲದ ವಿಶೇಷ ಅಂದರೆ ಇವು ಫ್ಲೇವರ್ಡ್ ಬೆಲ್ಲ. ಚಾಕೋಲೆಟ್, ಕಾಫಿ, ಶುಂಠಿಯ ಫ್ಲೇವರ್ ಇವರ ಬೆಲ್ಲದ ಪುಡಿಯಲ್ಲಿದೆ. ಇದು ಬೆಲ್ಲದ ರುಚಿ, ಘಮವನ್ನು ವಿಶೇಷವಾಗಿಸಿದೆ. ಇದು ಸಂಪೂರ್ಣ ಸಾವಯವವಾಗಿ ತಯಾರಾಗುವ ಬೆಲ್ಲವಾಗಿದ್ದು ಹಾಲು ಒಡೆಯುವುದಿಲ್ಲ. ಬೆಲ್ಲವು 18 ತಿಂಗಳವರೆಗೂ ಕೆಡದೇ ಇಡಬಹುದಾಗಿದೆ. ಇದನ್ನೆಲ್ಲ ಪರೀಕ್ಷಿಸಿಯೇ ಅನೇಕ ಆರ್ಗ್ಯಾನಿಕ್ ಆಹಾರ ಕಂಪನಿಗಳು, ದೊಡ್ಡ ದೊಡ್ಡ ಆಹಾರ ಕಂಪನಿಗಳು ನಮ್ಮ ಗ್ರಾಹಕರಾಗಿದ್ದಾರೆ ಎಂದು ತಮ್ಮ ಯಶಸ್ಸಿನ ರಹಸ್ಯವನ್ನು ‘ಕನ್ನಡಪ್ರಭ’ದೊಂದಿಗೆ ಹಂಚಿಕೊಂಡರು ಶಾಂಭವಿ ಅಶ್ವತ್ಥಪುರ.

ಬೆಲ್ಲದ ಕ್ಯೂಬ್ಸ್, ಸ್ಯಾಚೆಟ್:

ಸ್ಟಾರ್ ಹೋಟೆಲ್‌ಗಳಲ್ಲಿ ಬಳಸುವ ಸಕ್ಕರೆ ಕ್ಯೂಬ್‌ಗಳಂತೆ 5 ಗ್ರಾಮಿನ ಬೆಲ್ಲದ ಕ್ಯೂಬ್ ಹಾಗೂ 5 ಗ್ರಾಮಿನ ಬೆಲ್ಲದ ಪುಡಿ ಸ್ಯಾಚೆಟ್ ಜೊತೆಗೆ ಸದ್ಯದಲ್ಲೇ ರಿಟೇಲ್ ಮಾರುಕಟ್ಟೆ ಪ್ರವೇಶಿಸಲಿದೆ ಪಾವನಾ ಗುಡ್ನೆಸ್. ಈಗ ಜನಪ್ರಿಯತೆ ಪಡೆದುಕೊಂಡಿರುವ ಮೂರು ಫ್ಲೇವರ್‌ಗಳಲ್ಲೂ ಇವು ದೊರೆಯಲಿವೆ. ಇವಲ್ಲದರ ಸಂಶೋಧನೆ, ಅಭಿವೃದ್ಧಿ ಸ್ವತಃ ನಾನೇ ನಡೆಸಿದ್ದೇನೆ. ಮುಂದಿನ ದಿನಗಳಲ್ಲಿ ಬೆಲ್ಲ ಬಳಸಿದ ಚಾಕ್ಲೇಟ್, ಪ್ರೊಟೀನ್ ಪೌಡರ್, ಮಿಲ್ಕ್ ಶೇಕ್ಸ್ ಪರಿಚಯಿಸಲು ಪ್ರಯೋಗಗಳು ನಡೆದಿವೆ. ಸದ್ಯದಲ್ಲೇ ಈ ಎಲ್ಲ ಉತ್ಪನ್ನಗಳ ಜೊತೆ ಆನ್‌ಲೈನ್ ಮಾರ್ಕೆಟಿಂಗ್ ಕೂಡ ಶುರು ಮಾಡಲಿದ್ದೇವೆ. ಪ್ರಸ್ತುತ ಉತ್ಪಾದನಾ ಘಟಕದಲ್ಲಿ 14 ಜನ ಹಾಗೂ ಕಬ್ಬು ಕಟಾವು ತಂಡದಲ್ಲಿ 10 ಜನರಿಗೆ ಉದ್ಯೋಗ ನೀಡಿದ್ದೇವೆ. ರಫ್ತು ಮಾಡಲು ಬೇಕಾದ ಸರ್ಟಿಫಿಕೇಶನ್ ಪಡೆಯುವ ಕೆಲಸವೂ ಮುಗಿದಿದೆ. ಹೊಸತನದ ಪುಡಿ ಬೆಲ್ಲ, ಫ್ಲೇವರ್ಡ್ ಬೆಲ್ಲದಿಂದ ನಮ್ಮ ಉದ್ಯಮದ ಧಿಕ್ಕೇ ಬದಲಾಯ್ತು. ಹೊಸತನ, ರುಚಿ, ಆರೋಗ್ಯಕರವಾಗಿ ತಯಾರಿಕೆ ಹಾಗೂ ಕಪೆಕ್ ಸಹಕಾರ ಮತ್ತು ನನ್ನ ಕುಟುಂಬದ ಬೆಂಬಲದಿಂದ ಎಲ್ಲ ಸಾಧ್ಯವಾಯ್ತು ಎಂದರು ಶಾಂಭವಿ.

ಪಾವನಾ ಗುಡ್ನೆಸ್ ಬೆಲ್ಲಕ್ಕಾಗಿ ಸಂಪರ್ಕಿಸಿ – 9449562128.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!