
ನವದೆಹಲಿ (ಫೆ.24): ದೆಹಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಐಜಿಐ) ಪರಿಶೀಲನಾ ಪ್ರಕ್ರಿಯೆಯಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಭಾರತ್ ಪೇ ಸಹಸಂಸ್ಥಾಪಕ ಅಶ್ನೀರ್ ಗ್ರೋವರ್ ಟ್ವಟ್ಟರ್ ನಲ್ಲಿ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಒಂದಿಷ್ಟು ಸಲಹೆಗಳನ್ನು ನೀಡಿದ್ದಾರೆ. ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಳಗೆ ಪ್ರವೇಶಿಸಲು ಗ್ರೋವರ್ ಅರ್ಧ ಗಂಟೆ ಕಾದಿದ್ದರು. ಈ ಹಿನ್ನೆಲೆಯಲ್ಲಿ ಟ್ವಿಟ್ಟರ್ ಮೂಲಕ ಅಸಮಾಧಾನ ಹೊರಹಾಕಿದ ಗ್ರೋವರ್ ' ದೆಹಲಿ ವಿಮಾನನಿಲ್ದಾಣದ ಟಿ3 ಅನ್ನು ನವೀಕರಿಸಬೇಕಾದ ಅಗತ್ಯವಿದೆ. ಕೇವಲ ವಿಮಾನನಿಲ್ದಾಣದೊಳಗೆ ಪ್ರವಶೀಸಲು 30 ನಿಮಿಷಗಳು ಬೇಕಾಗುತ್ತವೆ ಅಂದರೆ ತಲೆಕೆಡುತ್ತದೆ' ಎಂದು ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ವಿಮಾನಿಲ್ದಾಣದಲ್ಲಿನ ದಟ್ಟಣೆ ತಪ್ಪಿಸಲು ಹಾಗೂ ತ್ವರಿತ ಸೇವೆ ಒದಗಿಸಲು ಒಂದಿಷ್ಟು ಸಲಹೆಗಳನ್ನು ಕೂಡ ನೀಡಿದ್ದಾರೆ. ಅದರಲ್ಲಿ ದೆಹಲಿ ವಿಮಾನ ನಿಲ್ದಾಣದ ಮೇಲಿನ ಹೊರೆ ತಗ್ಗಿಸಲು ಅಮೆರಿಕ, ಕೆನಡ ಹಾಗೂ ಇಂಗ್ಲೆಂಡ್ ಗೆ ಚಂಡೀಗಢ ವಿಮಾನನಿಲ್ದಾಣದಿಂದ ವಿಮಾನ ಸೇವೆಗಳನ್ನು ಪ್ರಾರಂಭಿಸುವ ಸಲಹೆ ಕೂಡ ಸೇರಿದೆ. ಶಾರ್ಕ್ ಟ್ಯಾಂಕ್ ಕಾರ್ಯಕ್ರಮದ ಮಾಜಿ ತೀರ್ಪುಗಾರರಾದ ಅಶ್ನೀರ್ ಗ್ರೋವರ್ ಅವರ ಈ ಅಮೂಲ್ಯ ಸಲಹೆಗಳಿಗೆ ದೆಹಲಿ ವಿಮಾನನಿಲ್ದಾಣ ಪ್ರಾಧಿಕಾರ ಕೃತಜ್ಞತೆ ಸಲ್ಲಿಸಿ ಟ್ವೀಟ್ ಮಾಡಿದೆ ಕೂಡ.
ಗ್ರೋವರ್ ದೆಹಲಿ ವಿಮಾನನಿಲ್ದಾಣದಲ್ಲಿ ಪ್ರಯಾಣಿಕರಿಗಾಗುತ್ತಿರುವ ವಿಳಂಬ ತಗ್ಗಿಸಲು ಇನ್ನೂ ಕೆಲವು ಸಲಹೆಗಳನ್ನು ನೀಡಿದ್ದಾರೆ. ಆ ಸಲಹೆಗಳು ಹೀಗಿವೆ:
*ಅಂತಾರಾಷ್ಟ್ರೀಯ ಅಥವಾ ಉದ್ಯಮ ಸಂಬಂಧಿ ಪ್ರಯಾಣಕ್ಕೆ ಪ್ರತ್ಯೇಕ ಗೇಟ್ ಗಳನ್ನು ತೆರೆಯುವುದು.
*ಗೇಟ್ ನಲ್ಲಿ ಟಿಕೆಟ್ ಅಥವಾ ಐಡಿ ಚೆಕ್ ಮಾಡಲು ಇಬ್ಬರು ವ್ಯಕ್ತಿಗಳಿದ್ದಾರೆ ಸಾಕು. ಬೋರ್ಡಿಂಗ್ ಗೇಟ್ ನಿಂದ ವಿಮಾನದ ತನಕ ಮೂವರು ಬೋರ್ಡಿಂಗ್ ಪಾಸ್ ಚೆಕ್ ಮಾಡುವ ಅಗತ್ಯ ಏನಿದೆ?
*ದೆಹಲಿ ವಿಮಾನ ನಿಲ್ದಾಣದ ಮೇಲಿನ ಹೊರೆ ತಗ್ಗಿಸಲು ಅಮೆರಿಕ, ಕೆನಡ ಹಾಗೂ ಇಂಗ್ಲೆಂಡ್ ಗೆ ಚಂಡೀಗಢ ವಿಮಾನನಿಲ್ದಾಣದಿಂದ ವಿಮಾನ ಸೇವೆಗಳನ್ನು ಪ್ರಾರಂಭಿಸುವ ಸಲಹೆ.
Ajay Banga: ವಿಶ್ವಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಅಜಯ್ ಬಂಗಾ ಹೆಸರು ಶಿಫಾರಸು ಮಾಡಿದ ಬಿಡೆನ್
ಗ್ರೋವರ್ ಟ್ವೀಟ್ ಗೆ ದೆಹಲಿ ವಿಮಾನ ನಿಲ್ದಾಣ ಪ್ರಾಧಿಕಾರ ಕೃತಜ್ಞತೆ ಸಲ್ಲಿಸಿದೆ. 'ಪ್ರೀತಿಯ ಅಶ್ನೀರ್, ನಾವು ನಮ್ಮ ಪ್ರಯಾಣಿಕರಿಗೆ ಇಂಥ ಅನುಭವ ನೀಡಲು ನಿಜವಾಗಲೂ ಬಯಸೋದಿಲ್ಲ. ನಿಮ್ಮ ಅಮೂಲ್ಯ ಸಲಹೆಗಳಿಗೆ ನಾವು ನಿಮಗೆ ಕೃತಜ್ಞತೆ ಸಲ್ಲಿಸುತ್ತೇವೆ. ನೀವು ಈ ಎಲ್ಲ ಅಂಶಗಳನ್ನು ಗಮನಿಸಿದ ಸಮಯವನ್ನು ಹಾಗೂ ನಿಮ್ಮ ಸಂಪರ್ಕ ಮಾಹತಿಗಳನ್ನು ಡಿಎ ಮೂಲಕ ಹಂಚಿಕೊಳ್ಳುವಂತೆ ವಿನಂತಿಸುತ್ತೇವೆ. ಇದ್ರಿಂದ ನಮ್ಮ ತಂಡ ನಿಮ್ಮೊಂದಿಗೆ ಸಂಪರ್ಕದಲ್ಲಿರಲು ಸಾಧ್ಯವಾಗುತ್ತದೆ' ಎಂದು ದೆಹಲಿ ವಿಮಾನಿಲ್ದಾಣ ತನ್ನ ಅಧಿಕೃತ ಟ್ವೀಟರ್ ಖಾತೆಯಿಂದ ಟ್ವೀಟ್ ಮಾಡಿದೆ.
ದೆಹಲಿ ವಿಮಾನ ನಿಲ್ದಾಣದಲ್ಲಿ ದೀರ್ಘ ಸರತಿ ಸಾಲುಗಳು ಮತ್ತು ಚೆಕ್-ಇನ್‌ನಲ್ಲಿ ಭಾರಿ ವಿಳಂಬದ ಬಗ್ಗೆ ದೂರುಗಳು ಕೇಳಿಬರುತ್ತಿರೋದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಅನೇಕ ಬಾರಿ ದೂರುಗಳು ಕೇಳಿಬಂದಿವೆ. ಕಳೆದ ಡಿಸೆಂಬರ್ ನಲ್ಲಿ ಈ ಬಗ್ಗೆ ವಿಮಾನ ಪ್ರಯಾಣಿಕರಿಂದ ಸಾಮಾಜಿಕ ಮಾಧ್ಯಮದಲ್ಲಿ ದೂರುಗಳ ಸುರಿಮಳೆಗೈದ ಕಾರಣ ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಎಂ ಸಿಂಧಿಯಾ ಅವರು ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಏರ್‌ಪೋರ್ಟ್‌ಗೆ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿದ್ದರು. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಸಿಂಧಿಯಾ, ಹೆಚ್ಚು ಜನಸಂದಣಿ ಇರುವ ಗೇಟ್‌ನಲ್ಲಿ ಪ್ರಯಾಣಿಕರ ಚಲನವಲನವನ್ನು ಹೊಸದಾಗಿ ನಿಯಂತ್ರಿಸಲು ಮತ್ತು ಪ್ರತಿ ಗೇಟ್‌ನಲ್ಲಿ 'ವಿಶೇಷ ಅಧಿಕಾರಿಗಳನ್ನು' ನಿಯೋಜಿಸಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ್ದರು.
ಭಾರತ ಭವಿಷ್ಯದ ಭರವಸೆ: ಮೈಕ್ರೋಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ ಪ್ರಶಂಸೆ
ಅಶ್ನೀರ್ ಗ್ರೋವರ್ ಭಾರತದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾಗಿದ್ದು, ಖ್ಯಾತ ರಿಯಾಲ್ಟಿ ಶೋ 'ಶಾರ್ಕ್ ಟ್ಯಾಂಕ್ ' ಆವೃತ್ತಿ 1ರ ತೀರ್ಪುಗಾರರಾಗಿ ಭಾಗವಹಿಸಿ ಖ್ಯಾತಿ ಗಳಿಸಿದ್ದರು. ಅಲ್ಲದೆ, ಆ ಕಾರ್ಯಕ್ರಮದಲ್ಲಿ ಹೊಸ ಸ್ಟಾರ್ಟ್ ಅಪ್ ಗಳಲ್ಲಿ ಹೂಡಿಕೆ ಕೂಡ ಮಾಡಿದ್ದರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.