'ಅರ್ಥ'ಶಾಸ್ತ್ರ ಓದಿಲ್ಲ ಗರ್ವನರ್ : 'ಹಿಸ್ಟರಿ'ಯಿಂದಾಗದಿರಲಿ ಅನರ್ಥ!

By Web DeskFirst Published Dec 12, 2018, 4:00 PM IST
Highlights

ನಿಮಗೆ ಆರ್‌ಬಿಐ ಹೊಸ ಗರ್ವನರ್ ಓದಿದ್ದೇನು ಗೊತ್ತಾ?| ಅರ್ಥಶಾಸ್ತ್ರವನ್ನೇ ಓದದ ಎರಡನೇ ಆರ್‌ಬಿಐ ಗರ್ವನರ್ ಎಂಬ ಹೆಗ್ಗಳಿಕೆ| ನೂತನ ಆರ್‌ಬಿಐ ಗರ್ವನರ್ ಶಕ್ತಿಕಾಂತ್ ದಾಸ್ ಓದಿದ್ದು ಇತಿಹಾಸ| ದೆಹಲಿ ವಿವಿಯಿಂದ ಇತಿಹಾಸ ಅಧ್ಯಯನದಲ್ಲಿ ಪದವಿ ಪಡೆದಿರುವ ಶಕ್ತಿಕಾಂತ್| ಆರ್‌ಬಿಐ ಗರ್ವನರ್ ಆಗಿ ನೇಮಕಗೊಂಡ 14ನೇ ಐಎಎಸ್ ಅಧಿಕಾರಿ

ನವದೆಹಲಿ(ಡಿ.12): ಆರ್‌ಬಿಐ ಗರ್ವನರ್ ಸ್ಥಾನಕ್ಕೆ ಕೇಂದ್ರ ಸರ್ಕಾರ ಶಕ್ತಿಕಾಂತ್ ದಾಸ್ ಅವರನ್ನು ನೇಮಕ ಮಾಡಿದೆ. ಊರ್ಜಿತ್ ಪಟೇಲ್ ಅವರ ದಿಢೀರ್ ರಾಜೀನಾಮೆಯಿಂದ ತೆರವಾದ ಗರ್ವನರ್ ಸ್ಥಾನಕ್ಕೆ ಇಷ್ಟು ಬೇಗ ಹೊಸ ನೇಮಕ ಮಾಡಿ ಕೇಂದ್ರ ಸರ್ಕಾರ ಶಹಬ್ಬಾಸ್ ಎನಿಸಿಕೊಂಡಿದೆ.

ಆದರೆ ಆರ್‌ಬಿಐ ಹೊಸ ಗರ್ವನರ್ ನೇಮಕದ ಕುರಿತಂತೆ ವಿಚಿತ್ರ ಸಂಗತಿಯೊಂದು ಇದೀಗ ಎಲ್ಲರ ಕುತೂಹಲ ಕೆರಳಿಸಿದೆ. ಹೌದು, ಆರ್‌ಬಿಐ ಇತಿಹಾಸದಲ್ಲಿ ಎರಡನೇ ಬಾರಿಗೆ ಅರ್ಥಶಾಸ್ತ್ರಜ್ಞರಲ್ಲದ ವ್ಯಕ್ತಿಯನ್ನು ಗರ್ವನರ್ ಆಗಿ ನೇಮಕ ಮಾಡಲಾಗಿದೆ.

ಶಕ್ತಿಕಾಂತ್ ದಾಸ್ ಮಾಜಿ ಐಎಎಸ್ ಅಧಿಕಾರಿಯಾಗಿದ್ದು, ಅವರು ದೆಹಲಿ ವಿವಿಯಿಂದ ಇತಿಹಾಸ ಅಧ್ಯಯನದಲ್ಲಿ ಪದವಿ ಪಡೆದಿದ್ದಾರೆ. ಮುಂದೆ ಅವರು ಬೆಂಗಳೂರಿನ ಐಐಎಂನಿಂದ ಫೈನಾನ್ಸಿಯಲ್ ಮ್ಯಾನೇಜಮೆಂಟ್ ಕೋರ್ಸ್ ಮುಗಿಸಿದ್ದಾರೆ. ಅಂದರೆ ಅರ್ಥಶಾಸ್ತ್ರವನ್ನು ಅಭ್ಯಸಿಸದ ವ್ಯಕ್ತಿಯೊಬ್ಬರು ಇದೀಗ ಆರ್‌ಬಿಐ ಗರ್ವನರ್ ಆಗಿದ್ದಾರೆ.

ಶಕ್ತಿಕಾಂತ್ ದಾಸ್ ಆರ್‌ಬಿಐ ನ 25ನೇ ಗರ್ವನರ್ ಆಗಿ ಆಯ್ಕೆಯಾಗಿದ್ದಾರೆ. ಇವರಿಗಿಂತ ಮೊದಲಿನ ಎಲ್ಲಾ ಗರ್ವನರ್ ಗಳೂ ಅರ್ಥಶಾಸ್ತ್ರದಲ್ಲಿ ಪದವಿ ಪಡೆದವರೇ ಆಗಿದ್ದಾರೆ. ಈ ಪೈಕಿ 14 ಜನ ಮಾಜಿ ಐಎಎಸ್ ಅಧಿಕಾರಿಗಳೇ ಆಗಿರುವುದು ಮತ್ತೊಂದು ವಿಶೇಷ.

ಆರ್‌ಬಿಐ ಗರ್ವನರ್ ಆಗಿದ್ದ ಡಾ. ಸುಬ್ಬರಾವ್, ವಿವೈ ರೆಡ್ಡಿ ಅವರೂ ಐಎಎಸ್ ಅಧಿಕಾರಿಯಾಗಿದ್ದವರು. ಆದರೆ ಈ ಇಬ್ಬರೂ ಅರ್ಥಶಾಸ್ತ್ರ ಪದವಿ ಪಡೆದವರು ಎಂಬುದು ವಿಶೇಷ. ಈ ಹಿಂದೆ 1990 ರಲ್ಲಿ ಆರ್‌ಬಿಐ ಗರ್ವನರ್ ಆಗಿದ್ದ ಎಸ್. ವೆಂಕಿಟರಾಮನ್ ಕೂಡ ಅರ್ಥಶಾಸ್ತ್ರದ ಹಿನ್ನೆಲೆಯಿಂದ ಬರದ ಗರ್ವನರ್ ಆಗಿದ್ದರು.

ಆದರೆ ಸದ್ಯದ ಗರ್ವನರ್ ಶಕ್ತಿಕಾಂತ್ ದಾಸ್ ಅರ್ಥಶಾಸ್ತ್ರದ ಹಿನ್ನೆಲೆಯಿಂದ ಬಂದಿಲ್ಲವಾದ್ದರಿಂದ, ದೇಶದ ಅರ್ಥ ವ್ಯವಸ್ಥೆಯ ನೊಗ ಹೊತ್ತ ಆರ್‌ಬಿಐ ಅನ್ನು ಹೇಗೆ ನಿಭಾಯಿಸಲಿದ್ದಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

click me!