ಅಂಬಾನಿ ಸಹೋದರರಿಗೆ 25 ಕೋಟಿ ರು. ದಂಡ!

By Kannadaprabha NewsFirst Published Apr 8, 2021, 12:05 PM IST
Highlights

ರಿಲಯನ್ಸ್‌ ಇಂಡಸ್ಟ್ರೀಸ್‌ನ ಮಾಲಿಕತ್ವವನ್ನು ವಿಭಜಿಸುವ ವೇಳೆ ಷೇರು ಪಾಲುದಾರಿಕೆಯ ಬಗ್ಗೆ ತಪ್ಪು ಮಾಹಿತಿ| ಅಂಬಾನಿ ಸಹೋದರರಿಗೆ 25 ಕೋಟಿ ರು. ದಂಡ!

ನವದೆಹಲಿ(ಏ.08): ರಿಲಯನ್ಸ್‌ ಇಂಡಸ್ಟ್ರೀಸ್‌ನ ಮಾಲಿಕತ್ವವನ್ನು ವಿಭಜಿಸುವ ವೇಳೆ ಷೇರು ಪಾಲುದಾರಿಕೆಯ ಬಗ್ಗೆ ತಪ್ಪು ಮಾಹಿತಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹೋದರರಾದ ಮುಕೇಶ್‌ ಅಂಬಾನಿ ಹಾಗೂ ಅನಿಲ್‌ ಅಂಬಾನಿ ಅವರಿಗೆ ಮಾರುಕಟ್ಟೆ ನಿಯಂತ್ರಣ ಪ್ರಾಧಿಕಾರ- ಸೆಬಿ ಬುಧವಾರ 25 ಕೋಟಿ ರು. ದಂಡ ವಿಧಿಸಿದೆ.

ತಂದೆ ಧೀರೂಭಾಯಿ ಅಂಬಾನಿ ಅವರ ಒಡೆತನದಲ್ಲಿದ್ದ ರಿಲಯನ್ಸ್‌ ಉದ್ದಿಮೆಯನ್ನು ವಿಭಜಿಸಿ ಮುಕೇಶ್‌ ಅಂಬಾನಿ ಹಾಗೂ ಅನಿಲ್‌ ಅಂಬಾನಿ ಕುಟುಂಬ ಹಂಚಿಕೊಂಡಿತ್ತು. ಈ ವೇಳೆ ಶೇ.5ಕ್ಕಿಂತ ಹೆಚ್ಚು ಷೇರುಗಳ ಸ್ವಾಧೀನದ ಬಗ್ಗೆ ಮಾಹಿತಿಯನ್ನು ಒದಗಿಸಲು ರಿಲಯನ್ಸ್‌ ಪ್ರವರ್ತಕರು ವಿಫಲರಾಗಿದ್ದರು. ಈ ಹಿನ್ನಲೆಯಲ್ಲಿ ಅಂಬಾನಿ ಕುಟುಂಬಕ್ಕೆ ಸೆಬಿ ದಂಡ ವಿಧಿಸಿದೆ.

ಜಾಕ್‌ ಮಾ ಹಿಂದಿಕ್ಕಿ ಮುಕೇಶ್‌ ಮತ್ತೆ ಏಷ್ಯಾ ನಂ.1 ಶ್ರೀಮಂತ

 

ಅಮೆರಿಕದ ಫೋಬ್ಸ್‌ರ್‍ ನಿಯತಕಾಲಿಕೆ ಜಾಗತಿಕ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ರಿಲಯನ್ಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ, ಚೀನಾದ ಉದ್ಯಮಿ ಜಾಕ್‌ ಮಾ ಅವರನ್ನು ಹಿಂದಿಕ್ಕಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಪಟ್ಟವನ್ನು ಮರಳಿ ಪಡೆದಿದ್ದಾರೆ.

ಅಮೆಜಾನ್‌ ಸಿಇಒ ಜೆಫ್‌ ಬೆಜೋಸ್‌ 13 ಲಕ್ಷ ಕೋಟಿ ರು. ಸಂಪತ್ತಿನೊಂದಿಗೆ ಸತತ ನಾಲ್ಕನೇ ವರ್ಷವೂ ಅಗ್ರಸ್ಥಾನ ಅಲಂಕರಿಸಿದ್ದಾರೆ. ವರ್ಷದ ಹಿಂದಷ್ಟೇ 31ನೇ ಸ್ಥಾನದಲ್ಲಿದ್ದ ಸ್ಪೇಸ್‌ ಎಕ್ಸ್‌ ಸ್ಥಾಪಕ ಎಲಾನ್‌ ಮಸ್ಕ್‌ 11.17 ಲಕ್ಷ ಕೋಟಿ ಸಂಪತ್ತಿನೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಭಾರತ ಹಾಗೂ ಏಷ್ಯಾದಲ್ಲೇ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿರುವ ಮುಕೇಶ್‌ ಅಂಬಾನಿ 6.25 ಲಕ್ಷ ಕೋಟಿ ರು. ಸಂಪತ್ತಿನೊಂದಿಗೆ ಜಾಗತಿಕ ಶ್ರಿಮಂತರ ಪಟ್ಟಿಯಲ್ಲಿ 10ನೇ ಸ್ಥಾನ ಪಡೆದಿದ್ದಾರೆ. ಕಳೆದ ವರ್ಷ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿದ್ದ ಜಾಕ್‌ ಮಾ ಈ ಬಾರಿ 26ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.

click me!