
ನವದೆಹಲಿ (ಜು.29): ಹಣದುಬ್ಬರ ನಿಯಂತ್ರಣಕ್ಕೆ ಕಠಿಣ ಕ್ರಮ ಅನಿವಾರ್ಯ ಎಂದು ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್ ಹೇಳಿಕೆ ನೀಡಿದ ಬೆನ್ನಲ್ಲೇ ಡಾಲರ್ ಎದುರು ರೂಪಾಯಿ ಮೌಲ್ಯ ಸೋಮವಾರ ಬೆಳಗ್ಗೆ ದಾಖಲೆಯ ಮಟ್ಟಕ್ಕೆ ಕುಸಿತ ಕಂಡಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಇಳಿಕೆ ಕಂಡಿದ್ದು, 80.11ಕ್ಕೆ ಕುಸಿದಿದೆ. ಶುಕ್ರವಾರ ಮಾರುಕಟ್ಟೆ ಕ್ಲೋಸ್ ವೇಳೆ ಡಾಲರ್ ಎದುರು ರೂಪಾಯಿ ಮೌಲ್ಯ 79.87ರಷ್ಟಿತ್ತು. ಶುಕ್ರವಾರ ಜೆರೋಮ್ ಪೊವೆಲ್ ಹಣದುಬ್ಬರ ನಿಯಂತ್ರಣಕ್ಕೆ ಫೆಡರಲ್ ಬ್ಯಾಂಕ್ ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಘೋಷಿಸಿರೋದು ಜಾಗತಿಕ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. 'ಹಣದುಬ್ಬರ ನಿಯಂತ್ರಣಕ್ಕೆ ಬಡ್ಡಿದರ ಹೆಚ್ಚಳ ಮಾಡೋದು ಅನಿವಾರ್ಯವಾಗಿದೆ. ಇದು ಸಾಮಾನ್ಯ ಜನರು ಹಾಗೂ ವ್ಯಾಪಾರ-ವಹಿವಾಟಿಗೆ ನೋವು ನೀಡಲಿದೆ ನಿಜ. ಇದರಿಂದ ಆರ್ಥಿಕತೆ ವೇಗ ಕಳೆದುಕೊಳ್ಳಲಿದೆ, ಉದ್ಯೋಗ ಕಡಿತದ ಪರಿಸ್ಥಿತಿಯೂ ಸೃಷ್ಟಿಯಾಗಬಹುದು. ಆದರೆ, ಕಠಿಣ ಕ್ರಮ ಕೈಗೊಳ್ಳದಿದ್ದರೆ ಮುಂದೆ ಇದಕ್ಕಿಂತ ಹೆಚ್ಚು ನೋವು ಅನಿಭವಿಸಬೇಕಾದಂತಹ ಸ್ಥಿತಿ ನಿರ್ಮಾಣವಾಗುತತದೆ' ಎಂದು ಪೊವೆಲ್ ಹೇಳಿದ್ದರು. ಪೊವೆಲ್ ಹೇಳಿಕೆ ಹೂಡಿಕೆದಾರರಿಗೆ ಆಘಾತ ನೀಡಿದೆ. ಈಗಾಗಲೇ ಅಮೆರಿಕ ಫೆಡರಲ್ ಬ್ಯಾಂಕ್ ಬಡ್ಡಿದರ ಏರಿಕೆ ಮಾಡಿದೆ. ಈಗ ಮತ್ತೊಮ್ಮೆ ಬಡ್ಡಿದರ ಹೆಚ್ಚಳಕ್ಕೆ ಫೆಡರಲ್ ಬ್ಯಾಂಕ್ ಮುಂದಾಗಲಿದೆ ಎಂಬ ಸುಳಿವನ್ನು ಪೊವೆಲ್ ನೀಡಿದ್ದಾರೆ.
ಕಳೆದ ತಿಂಗಳು ಭಾರತದ ಕರೆನ್ಸಿ ಡಾಲರ್ ಎದುರು 80.06ಕ್ಕೆ ಇಳಿಕೆ ಕಾಣುವ ಮೂಲಕ ಸಾರ್ವಕಾಲಿಕ ಕುಸಿತ ದಾಖಲಿಸಿತ್ತು. ಕಚ್ಚಾ ತೈಲ ಬೆಲೆಯಲ್ಲಿ ಏರಿಕೆ ಮತ್ತು ಭಾರತೀಯ ಮಾರುಕಟ್ಟೆಯಿಂದ ವಿದೇಶಿ ಹೂಡಿಕೆಗಳ ಹಿಂತೆಗೆತದ ಪರಿಣಾಮದಿಂದ ರುಪಾಯಿ ಮೌಲ್ಯ ಕುಸಿತ ಕಂಡಿತ್ತು. ಜುಲೈ 21ರ ಬಳಿಕ ಈಗ ರೂಪಾಯಿ ಮೌಲ್ಯ ಡಾಲರ್ ಎದುರು ಮತ್ತೊಮ್ಮೆ 80ರ ಗಡಿ ದಾಟಿದೆ. ಅಮೆರಿಕದ ಫೆಡರಲ್ ಬ್ಯಾಂಕ್ ಇನ್ನೊಮ್ಮೆ ಬಡ್ಡಿದರ ಹೆಚ್ಚಿಸೋದು ಖಚಿತವಾಗುತ್ತಿದ್ದಂತೆ ವಿದೇಶಿ ಹೂಡಿಕೆದಾರರು ಕೂಡ ಭಾರತೀಯ ಮಾರುಕಟ್ಟೆಯಿಂದ ಬಂಡವಾಳ ಹಿಂತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಚುರುಕುಗೊಳಿಸಿದ್ದಾರೆ. ಇದು ರೂಪಾಯಿ ಮೌಲ್ಯದ ಮೇಲೆ ಇನ್ನಷ್ಟು ಪರಿಣಾಮ ಬೀರುವ ಸಾಧ್ಯತೆ ಇದೆ.
ಇನ್ಫೋಸಿಸ್‌ನ 1 ಲಕ್ಷ ರೂ. ಬೆಲೆಯ ಈ ಷೇರಿನ ಮೌಲ್ಯ ಈಗ 9.58 ಕೋಟಿ.!
ಸೆನ್ಸೆಕ್ಸ್, ನಿಫ್ಟಿ ಕುಸಿತ
ಅಮೆರಿಕದ ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್ (Jerome Powell) ಹೇಳಿಕೆ ಭಾರತದ ಷೇರು ಮಾರುಕಟ್ಟೆ (Stock market) ಮೇಲೆ ಕೂಡ ಪರಿಣಾಮ ಬೀರಿದೆ. ಸೋಮವಾರ ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ (Sensex) 1,210.62 ಪಾಯಿಂಟ್ಸ್ ಅಥವಾ ಶೇ.2.06 ಕಡಿಮೆ ಮಟ್ಟದಲ್ಲಿ ಅಂದ್ರೆ 57623.25 ಅಂಕಗಳಲ್ಲಿ ದಿನದ ವಹಿವಾಟು ಪ್ರಾರಂಭಿಸಿದೆ. ಇನ್ನು ನಿಫ್ಟಿ (Nifty) 361.50 ಪಾಯಿಂಟ್ಸ್ ಅಥವಾ ಶೇ.2.06 ಕಡಿಮೆ ಅಂದ್ರೆ 17197.40 ಅಂಕಗಳಲ್ಲಿ ದಿನದ ವಹಿವಾಟು ಆರಂಭಿಸಿದೆ. ಇನ್ನು ನಿಫ್ಟಿ ಸ್ಮಾಲ್ ಕ್ಯಾಪ್ 100 ಹಾಗೂ ನಿಫ್ಟಿ ಲಾರ್ಜ್ ಕ್ಯಾಪ್ 100 ಕೂಡ ಶೇ.2ಕ್ಕಿಂತಲೂ ಹೆಚ್ಚು ಕುಸಿತ ದಾಖಲಿಸಿದೆ. ಇನ್ನು ವೈಯಕ್ತಿಕ ಸ್ಟಾಕ್ ಗಳಲ್ಲಿ ರಿಲಯನ್ಸ್ ಇಂಡ್ ಸ್ಟ್ರೀಸ್ ಷೇರುಗಳು ಸರಿಸುಮಾರು ಶೇ.1 ರಷ್ಟು ಕುಸಿತ ದಾಖಲಿಸಿದೆ. ನಿಫ್ಟಿ ಐಟಿ, ನಿಫ್ಟಿ ಪಿಎಸ್ ಯು ಬ್ಯಾಂಕ್ ಎಲ್ಲವೂ ಕೂಡ ದಿನದ ಆರಂಭದಲ್ಲಿ ಕಡಿಮೆ ಮಟ್ಟದಲ್ಲೇ ವಹಿವಾಟು ಪ್ರಾರಂಭಿಸಿವೆ. ಶುಕ್ರವಾರ ಪೊವೆಲ್ ಹೇಳಿಕೆ ಬೆನ್ನಲ್ಲೇ ಅಮೆರಿಕದ ಪ್ರಮುಖ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಡೌ ಜೋನ್ಸ್ ಶೇ. 1.7 ರಷ್ಟು, ಎಸ್&ಪಿ 500 ಸೂಚ್ಯಂಕ ಶೇ. 2.1ರಷ್ಟು ಮತ್ತು ನಾಸ್ಡಾಕ್ ಶೇ. 2.6ರಷ್ಟು ಇಳಿಕೆ ದಾಖಲಿಸಿದ್ದವು.
ಮಾಲೀಕರು ಇನ್ನಿಲ್ಲ ಎಂದು ತಿಳಿಸಲು ಹರ್ಷಿಸುತ್ತೇವೆ: ಸೆಬಿಗೆ ಕಂಪನಿ ಮಾಹಿತಿ..!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.