Loan EMIs Hike: ಸಾಲದ ಬಡ್ಡಿದರ, ಇಎಂಐ, ಎಫ್ ಡಿ ಮೇಲೆ ರೆಪೋ ದರ ಏರಿಕೆ ಹೇಗೆ ಪರಿಣಾಮ ಬೀರಲಿದೆ? ಇಲ್ಲಿದೆ ಮಾಹಿತಿ

By Suvarna News  |  First Published Jun 9, 2022, 11:41 AM IST

*ರೆಪೋ ದರ ಏರಿಕೆಯಿಂದ ಹೆಚ್ಚಲಿದೆ ಸಾಲಗಳ ಮೇಲಿನ ಬಡ್ಡಿದರ,ಇಎಂಐ
*ದುಬಾರಿಯಾಗಲಿದೆ ಗೃಹ, ವಾಹನ, ವೈಯಕ್ತಿಕ ಸಾಲ
*ಏರಿಕೆಯಾಗಲಿದೆ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರ 
 


Business Desk:ಭಾರತೀಯ ರಿಸರ್ವ್ ಬ್ಯಾಂಕ್ (RBI) ಬುಧವಾರ (ಜೂ.9) ರೆಪೋ ದರವನ್ನು (Repo rate) 50 ಬೇಸಿಸ್ ಪಾಯಿಂಟ್ಸ್ (Basis Points) ಹೆಚ್ಚಳ ಮಾಡಿದ್ದು, ಶೇ.4.40ರಿಂದ ಶೇ.4.90ಕ್ಕೆ ಏರಿಕೆಯಾಗಿದೆ. ಇದು ಎರಡು ವರ್ಷಗಳಲ್ಲೇ ಅತ್ಯಧಿಕ ಬಡ್ಡಿದರವಾಗಿದೆ (Interest rate).ಕಳೆದ ಕೆಲವು ತಿಂಗಳಿಂದ ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರಕ್ಕೆ (Inflation)ಕಡಿವಾಣ ಹಾಕಲು ಆರ್ ಬಿಐ (RBI) ಈ ಕ್ರಮ ಕೈಗೊಂಡಿದೆ. ರೆಪೋ ದರ ಏರಿಕೆ ಸ್ಥಿರ ಠೇವಣಿಗಳು (Fixed Deposits),ಸಾಲದ ಮೇಲಿನ ಬಡ್ಡಿದರ (Interest rate) ಹಾಗೂ ಇಎಂಐಗಳ (EMIs) ಮೇಲೆ ಪರಿಣಾಮ ಬೀರಲಿದೆ. ಅದು ಹೇಗೆ? ಇಲ್ಲಿದೆ ಮಾಹಿತಿ.

ಕಳೆದ ತಿಂಗಳು ಕೂಡ ಆರ್ ಬಿಐ (RBI) ರೆಪೋ ದರವನ್ನು 40 ಬೇಸಿಸ್ ಪಾಯಿಂಟ್ ಗಳಷ್ಟು ಏರಿಕೆ ಮಾಡಿತ್ತು. ಪರಿಣಾಮ ಈಗಾಗಲೇ ಬ್ಯಾಂಕುಗಳು (Banks) ಒಂದು ಬಾರಿ ಸಾಲದ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಿ ಆಗಿದೆ. ಈಗ ಮತ್ತೆ ರೆಪೋ ದರ ಏರಿಕೆಯಾಗಿರೋದ್ರಿಂದ ಇನ್ನೊಮ್ಮೆ ಸಾಲಗಳ ಮೇಲಿನ ಬಡ್ಡಿದರ ಹಾಗೂ ಇಎಂಐಯಲ್ಲಿ ಏರಿಕೆಯಾಗಲಿದೆ. ಹಾಗೆಯೇ ಸ್ಥಿರ ಠೇವಣಿಗಳ (Fixed Deposits) ಮೇಲಿನ ಬಡ್ಡಿದರವೂ ಹೆಚ್ಚಲಿದೆ. ಹೀಗಾಗಿ ರೆಪೋ ದರ ಏರಿಕೆ ಸಾಲಗಾರರಿಗೆ ಕಹಿಯಾದ್ರೆ, ಠೇವಣಿದಾರರಿಗೆ ಸಿಹಿ. 

Tap to resize

Latest Videos

ರೆಪೋ ರೇಟ್, ಸಿಆರ್‌ಆರ್‌ ಏರಿಕೆ ಮಾಡಿದ ಆರ್‌ಬಿಐ ನಿರ್ಧಾರದಿಂದ ಆಗುವ 5 ಬದಲಾವಣೆಗಳು

ಸಾಲದ ಬಡ್ಡಿದರದ ಮೇಲೆ ಹೇಗೆ ಪರಿಣಾಮ ಬೀರುತ್ತೆ?
ವಾಣಿಜ್ಯ ಬ್ಯಾಂಕುಗಳಿಗೆ (Commercial banks) ಹಣದ ಕೊರತೆ ಎದುರಾದಾಗ ಅವು ಆರ್ ಬಿಐಯಿಂದ (RBI) ಪಡೆಯೋ ಸಾಲದ (Loan) ಮೇಲೆ ವಿಧಿಸೋ ಬಡ್ಡಿದರವೇ ರೆಪೋ ದರ. ರೆಪೋ ದರ  ದೇಶದಲ್ಲಿನ ಹಣದುಬ್ಬರ (Inflation) ನಿಯಂತ್ರಣಕ್ಕೆ ಆರ್ ಬಿಐ ಬಳಸುವ ಅತೀಮುಖ್ಯ ಸಾಧನವಾಗಿದೆ. ಉದಾಹರಣೆಗೆ ಆರ್ ಬಿಐ ರೆಪೋ ದರ ಇಳಿಕೆ ಮಾಡಿದ್ರೆ ಬ್ಯಾಂಕುಗಳು ಕಡಿಮೆ ಬಡ್ಡಿದರದಲ್ಲಿ ಸಾಲಗಳನ್ನು ನೀಡುತ್ತವೆ. ಅದೇ ರೆಪೋ ದರದಲ್ಲಿ ಏರಿಕೆ ಮಾಡಿದ್ರೆ ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿದರ ಹೆಚ್ಚಿಸುತ್ತವೆ. ಇದ್ರಿಂದ ಗೃಹ, ವಾಹನ, ವೈಯಕ್ತಿಕ ಸಾಲಗಳ ಇಎಂಐಯಲ್ಲಿ ಕೂಡ ಏರಿಕೆಯಾಗುತ್ತದೆ. 

ಗೃಹಸಾಲದ ಬಡ್ಡಿದರ 
ಶೇ.90ರಷ್ಟು ಬ್ಯಾಂಕುಗಳ ಗೃಹಸಾಲಗಳು (Home Loans) ರೆಪೋ ದರದೊಂದಿಗೆ (Repo rate) ಲಿಂಕ್ (link) ಆಗಿರುವ ಕಾರಣ ಸಹಜವಾಗಿ ಬಡ್ಡಿದರದಲ್ಲಿ ಏರಿಕೆಯಾಗಿಯೇ ಆಗುತ್ತದೆ. ಇದ್ರಿಂದ ಇಎಂಐ ಕೂಡ ಹೆಚ್ಚಳವಾಗುತ್ತದೆ. ಉದಾಹರಣೆಗೆ ನೀವು 30 ವರ್ಷಗಳ ಅವಧಿಗೆ 20ಲಕ್ಷ ರೂ. ಗೃಹ ಸಾಲವನ್ನು ಪ್ರಸ್ತುತವಿರುವ ಶೇ. 7.1 ಬಡ್ಡಿದರದಲ್ಲಿ ಎಸ್ ಬಿಐನಿಂದ ಪಡೆದಿದ್ದೀರಿ ಎಂದು ಭಾವಿಸೋಣ. ಮೇ 4ರಂದು ಆರ್ ಬಿಐ ಹೆಚ್ಚಳ ಮಾಡಿದ್ದ ರೆಪೋ ದರವನ್ನು ಪರಿಗಣಿಸಿದ್ರೆ ಈ ತನಕ ಒಟ್ಟು  90 ಬೇಸಿಸ್ ಪಾಯಿಂಟ್ಸ್ ಹೆಚ್ಚಳವಾಗಿದೆ. ಹೀಗಾಗಿ ಎಸ್ ಬಿಐ ಗೃಹಸಾಲದ ಬಡ್ಡಿದರ ಶೇ.7.1ರಿಂದ ಶೇ.8ಕ್ಕೆ ಏರಿಕೆಯಾಗುತ್ತದೆ. ಇದ್ರಿಂದ ನಿಮ್ಮ ಇಎಂಐ  13,441ರೂ.ನಿಂದ 14,675ರೂ.ಗೆ ಏರಿಕೆಯಾಗುತ್ತದೆ. ಅಂದ್ರೆ ಒಟ್ಟು 1234ರೂ. ಏರಿಕೆ.

ಕಾರ್ ಲೋನ್ ಬಡ್ಡಿದರ
ಒಂದು ವೇಳೆ ನೀವು ಎಸ್ ಬಿಐಯಿಂದ 20 ವರ್ಷಗಳ ಅವಧಿಗೆ ವಾರ್ಷಿಕ  ಶೇ.7.45 ಬಡ್ಡಿದರದಲ್ಲಿ 10ಲಕ್ಷ ರೂ. ಕಾರ್ ಲೋನ್ (Car Loan) ಪಡೆದಿದ್ರೆ ಈಗ ಬಡ್ಡಿದರ (Interest rate) ಶೇ.8.35ಕ್ಕೆ ಹೆಚ್ಚಳವಾಗುತ್ತದೆ. ಇದ್ರಿಂದ ನಿಮ್ಮ ಇಎಂಐ 8,025 ರೂ.ನಿಂದ 8,584 ರೂ.ಗೆ ಏರಿಕೆಯಾಗುತ್ತದೆ. ಅಂದ್ರೆ ಇಎಂಐಯಲ್ಲಿ 559ರೂ. ಹೆಚ್ಚಳವಾಗುತ್ತದೆ. 

Repo Rate Hike:ನಿರೀಕ್ಷೆಯಂತೆ ಮತ್ತೆ ರೆಪೋ ದರ ಹೆಚ್ಚಿಸಿದ ಆರ್ ಬಿಐ; ಸಾಲಗಾರರಿಗೆ ಗಾಯದ ಮೇಲೆ ಬರೆ

ಎಸ್ ಬಿಐ ವೈಯಕ್ತಿಕ ಸಾಲ
ಎಸ್ ಬಿಐ ನಿಂದ ವಾರ್ಷಿಕ ಶೇ.7.05 ಬಡ್ಡಿದರದಲ್ಲಿ 10 ವರ್ಷಗಳ ಅವಧಿಗೆ 10ಲಕ್ಷ ರೂ. ವೈಯಕ್ತಿಕ ಸಾಲ (Personal Loan) ಪಡೆದಿದ್ರೆ, ಈಗ ಬಡ್ಡಿದರ ಶೇ.7.95 ಏರಿಕೆಯಾಗುತ್ತದೆ. ಇದ್ರಿಂದ ನಿಮ್ಮ ಇಎಂಐ 11,637ರೂ.ನಿಂದ 12,106ರೂ.ಗೆ ಹೆಚ್ಚಳವಾಗುತ್ತದೆ. ಅಂದ್ರೆ ಪ್ರತಿ ಇಎಂಐಯಲ್ಲಿ 469ರೂ. ಏರಿಕೆಯಾಗುತ್ತದೆ. 

FD ಬಡ್ಡಿದರ ಹೆಚ್ಚಳ
ರೆಪೋ ದರ ಹೆಚ್ಚಳದಿಂದ ಸ್ಥಿರ ಠೇವಣಿ ಹೊಂದಿರೋರಿಗೆ ಲಾಭ. ಬ್ಯಾಂಕುಗಳು ರೆಪೋದರ ಏರಿಕೆಯಾದಾಗ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಕೂಡ ಹೆಚ್ಚಳ ಮಾಡುತ್ತವೆ.

click me!