ಪ್ರತಿ ತಿಂಗಳ ಪ್ರಾರಂಭದಲ್ಲಿ ಒಂದಿಷ್ಟು ನಿಯಮಗಳಲ್ಲಿ ಬದಲಾವಣೆಯಾಗೋದು ಸಾಮಾನ್ಯ. ಮಾರ್ಚ್ ತಿಂಗಳು ಇನ್ನೇನು ಪ್ರಾರಂಭವಾಗಲಿದೆ. ಹಾಗಾದ್ರೆ ಈ ತಿಂಗಳಲ್ಲಿ ಯಾವೆಲ್ಲ ನಿಯಮಗಳಲ್ಲಿ ಬದಲಾವಣೆಯಾಗಲಿದೆ? ಇಲ್ಲಿದೆ ಮಾಹಿತಿ.
ನವದೆಹಲಿ (ಫೆ.27): ಫೆಬ್ರವರಿ ತಿಂಗಳು ಕೊನೆಯಾಗಲು ಒಂದು ದಿನವಷ್ಟೇ ಬಾಕಿ ಉಳಿದಿದೆ. ಈ ವರ್ಷದ ಮೂರನೇ ತಿಂಗಳಾದ ಮಾರ್ಚ್ ಗೆ ಕಾಲಿಡಲಿದ್ದೇವೆ. ಪ್ರತಿ ಹೊಸ ತಿಂಗಳು ಪ್ರಾರಂಭವಾಗುವಾಗ ಕೆಲವೊಂದು ನಿಯಮಗಳಲ್ಲಿ ಬದಲಾವಣೆಯಾಗೋದು ಸಹಜ. ಇದರಲ್ಲಿ ಕೆಲವೊಂದು ನಿಯಮಗಳು ನಮ್ಮ ನಿತ್ಯದ ಬದುಕಿನ ಮೇಲೆ ನೇರವಾಗಿ ಪರಿಣಾಮ ಬೀರುವ ಕಾರಣ ಅವುಗಳ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. ಪ್ರತಿ ತಿಂಗಳ ಮೊದಲ ದಿನ ಎಲ್ಫಿಜಿ ಸಿಲಿಂಡರ್ ದರದಲ್ಲಿ ಬದಲಾವಣೆಯಾಗುತ್ತದೆ. ಹೀಗಾಗಿ ಮಾರ್ಚ್ ನಲ್ಲಿ ಕೂಡ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಏರಿಳಿತವಾಗೋದು ಸಾಮಾನ್ಯ. ಹಾಗೆಯೇ ಬ್ಯಾಂಕಿಂಗ್ ಹಾಗೂ ಹಣಕಾಸು ವಲಯಕ್ಕೆ ಸಂಬಂಧಿಸಿದ ಕೆಲವು ನಿಯಮಗಳು ಕೂಡ ಮಾರ್ಚ್ 1ರಿಂದ ಬದಲಾಗಲಿವೆ. ಈ ಹೊಸ ಬದಲಾವಣೆಗಳು ನಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರುತ್ತವೆ. ಆರ್ ಬಿಐ ಈ ತಿಂಗಳಲ್ಲಿ ಕೂಡ ರೆಪೋ ದರ ಏರಿಕೆ ಮಾಡಿರುವ ಕಾರಣ ಕೆಲವು ಬ್ಯಾಂಕ್ ಗಳು ಈಗಾಗಲೇ ಸಾಲಗಳ ಮೇಲಿನ ಬಡ್ಡಿದರ ಹೆಚ್ಚಳ ಮಾಡಿವೆ. ಹೀಗಾಗಿ ಮಾರ್ಚ್ ನಿಂದ ಗೃಹಸಾಲ ಸೇರಿದಂತೆ ವಿವಿಧ ಸಾಲಗಳನ್ನು ಹೊಂದಿರುವವರ ಮೇಲಿನ ಇಎಂಐ ಹೊರೆ ಹೆಚ್ಚಲಿದೆ.
ಎಲ್ ಪಿಜಿ, ಸಿಎನ್ ಜಿ ದರ ಏರಿಕೆ
ಎಲ್ ಪಿಜಿ, ಸಿಎನ್ ಜಿ ಹಾಗೂ ಪಿಎನ್ ಜಿ ಅನಿಲ ಬೆಲೆಗಳಲ್ಲಿ ಪ್ರತಿ ತಿಂಗಳ ಮೊದಲ ದಿನ ಬದಲಾವಣೆಯಾಗೋದು ಸಾಮಾನ್ಯ. ಕಳೆದ ತಿಂಗಳು ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಏರಿಕೆ ಮಾಡದಿದ್ರೂ ಈ ಬಾರಿ ಹೆಚ್ಚಳ ಮಾಡುವ ಸಾಧ್ಯತೆಯಿದೆ. ಮಾರ್ಚ್ ತಿಂಗಳಲ್ಲಿ ಯುಗಾದಿ, ಹೋಳಿ ಮುಂತಾದ ಹಬ್ಬಗಳಿರುವ ಹಿನ್ನೆಲೆಯಲ್ಲಿ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಕೆಲವು ವರದಿಗಳು ಹೇಳಿವೆ.
ದುಬಾರಿ ಇಎಂಐ
ಭಾರತೀಯ ರಿಸರ್ವ್ ಬ್ಯಾಂಕ್ (RBI)ಈ ತಿಂಗಳಲ್ಲಿ ಮತ್ತೊಮ್ಮೆ ರೆಪೋ ದರ ಏರಿಕೆ ಮಾಡಿದೆ. ಈ ಮೂಲಕ ಸತತ 6ನೇ ಬಾರಿ ರೆಪೋ ಹೆಚ್ಚಳ ಮಾಡಿದ್ದು, ಪ್ರಸ್ತುತ ರೆಪೋ ದರ ಶೇ.6.50ಕ್ಕೆ ಏರಿಕೆಯಾಗಿದೆ. ರೆಪೋ ದರ ಏರಿಕೆ ಬೆನ್ನಲ್ಲೇ ಬ್ಯಾಂಕ್ ಗಳು ಗೃಹಸಾಲ ಸೇರಿದಂತೆ ವಿವಿಧ ಸಾಲಗಳ ಮೇಲಿನ ಬಡ್ಡಿದರ ಹೆಚ್ಚಳ ಮಾಡಿವೆ. ಇದ್ರಿಂದ ತಿಂಗಳ ಇಎಂಐಯಲ್ಲಿ ಹೆಚ್ಚಳವಾಗಲಿದೆ. ಇದು ಸಾಲಗಾರರ ತಿಂಗಳ ಖರ್ಚಿನ ಹೊರೆಯನ್ನು ಇನ್ನಷ್ಟು ಹೆಚ್ಚಿಸಲಿದೆ.
ಯುಪಿಐ ಪಾವತಿ ಅಪ್ಲಿಕೇಷನ್ ಬಳಸುತ್ತಿದ್ದೀರಾ? ಹಾಗಾದ್ರೆ ಮರೆಯದೆ ಈ 5 ಟಿಪ್ಸ್ ಫಾಲೋ ಮಾಡಿ
ಪ್ಯಾನ್ -ಆಧಾರ್ ಜೋಡಣೆಗೆ ಗಡುವು
2023ರ ಮಾರ್ಚ್ ಕೊನೆಯೊಳಗೆ ಆಧಾರ್ ನೊಂದಿಗೆ ಲಿಂಕ್ ಮಾಡದ ಪ್ಯಾನ್ ಕಾರ್ಡ್ ಗಳನ್ನು ನಿಷ್ಕ್ರಿಯಗೊಳಿಸಲಾಗೋದು ಎಂದು ಆದಾಯ ತೆರಿಗೆ ಇಲಾಖೆ ಡಿ.24ರಂದು ಟ್ವೀಟ್ ಮಾಡಿದೆ. ಹೀಗಾಗಿ ನೀವು ಮಾರ್ಚ್ 31ರೊಳಗೆ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಲಿಂಕ್ ಮಾಡದಿದ್ರೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ. ಈಗಾಗಲೇ ಕೇಂದ್ರ ಸರ್ಕಾರ ಪ್ಯಾನ್ -ಆಧಾರ್ ಜೋಡಣೆ ಅಂತಿಮ ಗಡುವನ್ನುಅನೇಕ ಬಾರಿ ವಿಸ್ತರಿಸಿದೆ ಕೂಡ. ಒಮ್ಮೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಂಡರೆ ನಿಮಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡಲು ಸಾಧ್ಯವಾಗೋದಿಲ್ಲ.ಅಲ್ಲದೆ, ಬ್ಯಾಂಕ್ ಖಾತೆ ತೆರೆಯಲು, ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಲು ಹಾಗೂ ಡಿಮ್ಯಾಟ್ ಖಾತೆ ತೆರೆಯಲು ಸಾಧ್ಯವಾಗೋದಿಲ್ಲ. ಬ್ಯಾಂಕಿಂಗ್ ಸೇವೆಗಳನ್ನು ಪಡೆಯಲು ಕೂಡ ತೊಂದರೆ ಎದುರಾಗಲಿದೆ.
ರೈಲ್ವೆ ವೇಳಾಪಟ್ಟಿಯಲ್ಲಿ ಬದಲಾವಣೆ
ಬೇಸಿಗೆ ರಜೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಿದೆ. ಮಾರ್ಚ್ ನಲ್ಲಿ ಹೊಸ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಲಾಗುವುದು. ಮಾಧ್ಯಮ ವರದಿಗಳ ಅನ್ವಯ ಮಾರ್ಚ್ 1ರಿಂದ 5 ಸಾವಿರ ಕಾರ್ಗೋ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗುವುದು. ಅದೇರೀತಿ ಸಾವಿರಾರು ಪ್ಯಾಸೆಂಜರ್ ರೈಲುಗಳ ವೇಳಾಪಟ್ಟಿ ಕೂಡ ಬದಲಾಗಲಿದೆ.
Bank Holidays:ಮಾರ್ಚ್ ತಿಂಗಳಲ್ಲಿ 12 ದಿನ ಬ್ಯಾಂಕ್ ರಜೆ; ಇಲ್ಲಿದೆ ನೋಡಿ ಆರ್ ಬಿಐ ರಜಾಪಟ್ಟಿ
ಸೋಷಿಯಲ್ ಮೀಡಿಯಾ ನಿಯಮಗಳಲ್ಲಿ ಬದಲಾವಣೆ
ಕೇಂದ್ರ ಸರ್ಕಾರ ಇತ್ತೀಚೆಗೆ ಐಟಿ ನಿಯಮಗಳಲ್ಲಿ ಬದಲಾವಣೆ ಮಾಡಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್, ಫೇಸ್ ಬುಕ್, ಯೂಟ್ಯೂಬ್ ಹಾಗೂ ಇನ್ ಸ್ಟ್ರಾಗ್ರಾಂ ಬಳಸುವಾಗ ಹೊಸ ಭಾರತೀಯ ನಿಯಮಾವಳಿಗಳನ್ನು ಅನುಸರಿಸಬೇಕು. ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ಭಾವನೆಗಳನ್ನು ಉದ್ರೇಕಗೊಳಿಸುವ ಪೋಸ್ಟ್ ಗಳನ್ನು ಹಾಕಿದರೆ ಅಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಇನ್ನು ಸುಳ್ಳು ಮಾಹಿತಿಗಳನ್ನು ಪೋಸ್ಟ್ ಮಾಡುವವರಿಗೆ ದಂಡ ವಿಧಿಸಲಾಗುವುದು. ಈ ಹೊಸ ನಿಯಮಾವಳಿಗಳು ಮಾರ್ಚ್ ನಲ್ಲಿ ಜಾರಿಗೆ ಬರಲಿವೆ.