ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ಉದ್ದೇಶಿಸಿ ವರ್ಚುವಲ್ ಆಗಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕ ನೆಲ ತಂತ್ರಜ್ಞಾನ ಕ್ಷೇತ್ರಕ್ಕೆ ಉತ್ತಮ ಪ್ರದೇಶ ಎಂದು ಹೇಳಿದರು. ಬ್ರ್ಯಾಂಡ್ ಬೆಂಗಳೂರಿಗೆ ಪ್ರಸ್ತುತ ಜಾಗತಿಕವಾಗಿ ಆದ್ಯತೆ ಇದೆ ಎಂದು ಇದೇ ವೇಳೆ ಹೇಳಿದರು.
ಬೆಂಗಳೂರು (ನ. 2): ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ಆರಂಭಗೊಂಡ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ವರ್ಚುವಲ್ ಆಗಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕ ಹಾಗೂ ಬೆಂಗಳೂರು ನಗರ ಹೂಡಿಕೆ ಕ್ಷೇತ್ರದಲ್ಲಿನ ವ್ಯಾಪಕ ಅವಕಾಶಗಳ ಬಗ್ಗೆ ಮಾತನಾಡಿದರು. ಬುಧವಾರ ಕನ್ನಡಿಗರು ಕನ್ನಡ ರಾಜ್ಯೋತ್ಸವ ಆಚರಿಸಿಕೊಂಡಿದ್ದಾರೆ. ಕರ್ನಾಟಕದ ನೆಲ ತಂತ್ರಜ್ಞಾನ ಉದ್ಯಮ ಕ್ಷೇತ್ರಕ್ಕೆ ಅದ್ಬುತವಾಗಿದೆ. ಇಂದು ಬ್ರ್ಯಾಂಡ್ ಬೆಂಗಳೂರು ಜಾಗತಿಕವಾಗಿ ಆದ್ಯತೆ ಪಡೆದುಕೊಂಡಿದೆ ಎಂದು ಅವರು ಹೇಳಿದರು. ಕರ್ನಾಟಕ ಶ್ರೀಮಂತ ಸಂಸ್ಕೃತಿ ಹೊಂದಿರುವ ನಾಡು. ಭಾಷೆಯನ್ನೇ ಕನ್ನಡಿಗರು ಜೀವಾಳವನ್ನಾಗಿಸಿಕೊಂಡಿದ್ದಾರೆ. ಕರ್ನಾಟಕ ಮಣ್ಣು ಎಲ್ಲಕ್ಕಿಂತ ಸುಂದರ. ರಾಜ್ಯಗಳು ಅಭಿವೃದ್ಧಿ ಹೊಂದಿದಲ್ಲಿ ಮಾತ್ರವೇ ದೇಶ ಅಭಿವೃದ್ಧಿ ಕಾಣುತ್ತದೆ ಎನ್ನುವ ತತ್ವದಲ್ಲಿ ನಮ್ಮ ಸರ್ಕಾರ ನಂಬಿಕೆ ಇರಿಸಿದೆ. ಆ ನಿಟ್ಟಿನಲ್ಲಿ ಕೋವಿಡ್‌ನ ಅನಿಶ್ಚಿತತೆಯ ಕಾಲದಲ್ಲೂ ರಾಜ್ಯಗಳ ಅಭಿವೃದ್ಧಿಯ ನಿಟ್ಟಿನಲ್ಲಿ ಗಮನ ನೀಡಿದ್ದೆವು. ಹೊಸ ಕಾನೂನಿನ ಬದಲು ಇದ್ದ ಕಾನೂನನ್ನೇ ಸರಿಪಡಿಸಿದ್ದೇವೆ ಎಂದು ಮೋದಿ ಹೇಳಿದರು. ತೆರಿಗೆ ಸಂಗ್ರಹ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ದೊಡ್ಡ ಮಟ್ಟದಲ್ಲಿ ಬದಲಾವಣೆ ಮಾಡಿದ್ದೇವೆ. ರಕ್ಷಣಾ ಕ್ಷೇತ್ರ ಹಾಗೂ ಮೂಲಸೌಕರ್ಯ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆಯ ನಿಯಮವನ್ನು ವ್ಯಾಪಕವಾಗಿ ಬದಲಾವಣೆ ಮಾಡಿದ್ದೇವೆ ಎಂದರು.
ಕರ್ನಾಟಕದ ಸಂಸ್ಕೃತಿ ಉನ್ನತ ಮಟ್ಟದ್ದು, ಕನ್ನಡಿಗರ ಸ್ವಾಭಿಮಾನ ದೊಡ್ಡದು. ಭಾರತದ ಪ್ರಗತಿಯಾಗಲು ರಾಜ್ಯಗಳು ಮೊದಲು ಪ್ರಗತಿ ಹೊಂದಬೇಕಿದೆ.. ಜಗತ್ತಿನ ದೊಡ್ಡ ದೊಡ್ಡ ಕಂಪೆನಿಗಳು ಈ ಸಮಾವೇಶದಲ್ಲಿ ಪಾಲ್ಗೊಂಡಿವೆ. ಸಮಾವೇಶದಿಂದ ಉದ್ಯೋಗ ಸೃಷ್ಟಿಯಾಗಲಿದೆ, ಸಾವಿರಾರು ಕೋಟಿ ಹೂಡಿಕೆ ಆಗಲಿದೆ. ಕೋವಿಡ್ ಪರಿಣಾಮದಿಂದ ಈಗಲೂ ಜಗತ್ತು ಹೊಯ್ದಾಡುತ್ತಿದೆ. ಎಲ್ಲೆಲ್ಲೂ ಅನಿಶ್ಚಿತತೆ ಕಾಣುತ್ತಿದೆ. ಭಾರತದಲ್ಲೂ ಕೋವಿಡ್ ಪರಿಣಾಮ ಕಾಣುತ್ತಿದೆ. ಇವತ್ತು ಜಗತ್ತು ಭಾರತದದಿಂದ ಸಾಕಷ್ಟು ನಿರೀಕ್ಷೆ ಇಟ್ಟಿದೆ ಎಂದರು.
ಭಾರತದ ಆರ್ಥಿಕತೆಯ ಅಡಿಪಾಯ ಭದ್ರವಾಗಿದೆ. ಉತ್ಪಾದನೆ, ಪೂರೈಕೆಯಲ್ಲಿ ದೇಶ ಭರವಸೆದಾಯಕವಾಗಿದೆ. ಇವತ್ತು ನಾವು ಯಾವ ಸ್ಥಾನದಲ್ಲಿದ್ದೇವೆ, ನಮ್ಮ ಪ್ರಯಾಣ ಎಲ್ಲಿಂದ ಶುರುವಾಯ್ತು ಅನ್ನೋದನ್ನು ನೆನಪಿಸಿಕೊಳ್ಳಬೇಕು. ನಮ್ಮ ಕಾನೂನುಗಳು ಉದ್ಯಮಸ್ನೇಹಿ ಮಾಡಬೇಕಾಗಿದೆ. ನವ ಭಾರತದ ನಿರ್ಮಾಣದ ಅಗತ್ಯವಿದೆ. ಬ್ಯಾಂಕಿಂಗ್ ಸೇರಿ ಹಲವು ವಲಯಗಳಲ್ಲಿ ಸುಧಾರಣೆ ಆಗುತ್ತಿದೆ. ಈ ನಿಟ್ಟಿನಲ್ಲಿ ಡಿಜಿಟಲ್ ಕರೆನ್ಸಿ ತರಲಾಗುತ್ತಿದೆ. ಹಳೆಯ ಹಲವು ಕಾನೂನುಗಳನ್ನು ರದ್ದು ಮಾಡಲಾಗಿದೆ. ಕಾರ್ಪೊರೇಟ್ ತೆರಿಗೆ ಇಳಿಸಿದ್ದೇವೆ. ಎಫ್‌ಡಿಐ ಹೂಡಿಕೆಗೆ ಹೊಸ ಅವಕಾಶಗಳನ್ನು ತೆರೆಯಲಾಗಿದೆ. ರಕ್ಷಣಾ ವಲಯದಲ್ಲೂ FDi ಅವಕಾಶ ಕೊಡಲಾಗಿದೆ ಎಂದು ಹೇಳಿದರು.
ಏರೋಸ್ಪೆಸ್ ಇಂಡಸ್ಟ್ರಿಗೆ ಪ್ರೋತ್ಸಾಹ: ಮುರುಗೇಶ್ ನಿರಾಣಿ
ಭಾರತದ ಅಭಿವೃದ್ಧಿಯ ವೇಗ ಮೊದಲಿಗಿಂತ ಹೆಚ್ಚಾಗಿದೆ, ಭಾರತದ ಯುವ ಸಮೂಹದ ಪ್ರತಿಭೆ ನೋಡಿ ಜಗತ್ತೇ ಅಚ್ಚರಿ ಪಟ್ಟಿದೆ. 8 ವರ್ಷಗಳಲ್ಲಿ 80 ಸಾವಿರಕ್ಕೂ ಹೆಚ್ಚು ಸ್ಟಾರ್ಟಪ್ ಗಳ ಸ್ಥಾಪನೆಯಾಗಿದೆ. ಸ್ಟಾರ್ಟಪ್ ಉದ್ಯಮ ವೇಗವಾಗಿ ಅಭಿವೃದ್ಧಿ ಆಗುತ್ತಿದೆ. ಕೃಷಿ ವಲಯದಲ್ಲೂ ಸಾಕಷ್ಟು ಬದಲಾವಣೆ ತರಲಾಗಿದೆ. ತಂತ್ರಜ್ಞಾನ ವಿವಿಗಳು, ಮ್ಯಾನೇಜ್ಮೆಂಟ್ ವಿವಿಗಳ ಸಂಖ್ಯೆ ಹೆಚ್ಚಿಸಲಾಗಿದೆ. ನಮ್ಮ ಉದ್ದೇಶ ಆರ್ಥಿಕತೆ, ಉತ್ಪಾದನೆ ಹೆಚ್ಚಿಸುವುದು, ಮಾನವ ಸಂಪನ್ಮೂಲದ ಸದ್ಬಳಕೆ ಮಾಡಿಕೊಳ್ಳೋದಾಗಿದೆ. ನಮ್ಮ ದೇಶ ಮೆಡಿಕಲ್ ಕಾಲೇಜುಗಳು, ಆಸ್ಪತ್ರೆಗಳ ನಿರ್ಮಾಣ, ಸೇವೆಗಳಲ್ಲಿ ಮುಂದಿದೆ. ಸ್ವಚ್ಚತಾ ಅಭಿಯಾನದಲ್ಲೂ ಮುಂದಿದ್ದೇವೆ. ಸ್ಮಾರ್ಟ್ ಶಾಲೆಗಳನ್ನೂ ತೆರೆಯಲಾಗುತ್ತಿದೆ. ನವೀಕರಿಸಬಹುದಾದ ಇಂಧನ ವಲಯದಲ್ಲಿ ಕ್ರಾಂತಿ ನಡೆಯುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ 5 ಲಕ್ಷ ಕೋಟಿ ಬಂಡವಾಳ ಹೂಡಿಕೆ ನಿರೀಕ್ಷೆ: ಸಚಿವ ಮುರುಗೇಶ್ ನಿರಾಣಿ
ಮೂರು ದಿನಗಳ ಕಾಲ ನಡೆಯುವ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಆಗಿ ಚಾಲನೆ ನೀಡಿದರು. ಕೈಗಾರಿಕಾ ವಲಯದಲ್ಲಿ ಹೊಸ ಕ್ರಾಂತಿ ಸೃಷ್ಟಿಸುವ ನಿರೀಕ್ಷೆಯೊಂದಿಗೆ ಸಮಾವೇಶ ನಡೆಸಲಾಗುತ್ತಿದೆ. 5 ಲಕ್ಷ ಕೋಟಿ ರೂ ಬಂಡವಾಳ ಹೂಡಕೆಯಾಗುವ ನಿರೀಕ್ಷೆಯಲ್ಲಿ ರಾಜ್ಯ ಸರ್ಕಾವಿದೆ. ರಾಜ್ಯದಲ್ಲಿ ಈ ಬಾರಿ 5 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ಬಿಲ್ಡ್ ಫಾರ್ ದಿ ವಲ್ರ್ಡ್ ಎಂಬ ಪರಿಕಲ್ಪನೆಯೊಂದಿಗೆ ಮೂರು ದಿನಗಳ ಸಮಾವೇಶ ನಡೆಯಲಿದೆ. ಇನ್ವೆಸ್ಟ್ ಕರ್ನಾಟಕ 2022 ಜಾಗತಿಕ ಸಮಾವೇಶಕ್ಕೆ 50 ಕ್ಕೂ ಹೆಚ್ಚು ದೇಶಗಳು ಭಾಗಿಯಾಗಿವೆ. ಫ್ರಾನ್ಸ್, ನೆದರ್ಲ್ಯಾಂಡ್, ಜರ್ಮನಿ, ಜಪಾನ್ ಸೇರಿದಂತೆ ಪಾಲುದಾರ ದೇಶಗಳು ಭಾಗಿಯಾಗಿದೆ.