
ನವದೆಹಲಿ(ನ.1): ದಿನದಿಂದ ದಿನಕ್ಕೆ ಬಲಗೊಳ್ಳುತ್ತಿರುವ ಡಾಲರ್ ವರ್ಚಸ್ಸಿಗೆ ಪ್ರತಿಯಾಗಿ ರೂಪಾಯಿ ಮೌಲ್ಯ ವೃದ್ಧಿಸಿ, ಡಾಲರ್ ವಹಿವಾಟು ತಗ್ಗಿಸಲು ಪ್ರಧಾನಿ ನರೇಂದ್ರ ಮೋದಿ ಹೊಸ ಪ್ಲ್ಯಾನ್ ಮಾಡಿದ್ದಾರೆ.
ಅಮೆರಿಕ ಹೊರತುಪಡಿಸಿ ಇತರ ರಾಷ್ಟ್ರಗಳೊಂದಿಗೆ ಸ್ನೇಹಪರ ವ್ಯಾಪಾರ ವಹಿವಾಟಿನ ಸಾಧ್ಯತೆಗಳ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಡಾಲರ್ ಮುಂದೆ ರೂಪಾಯಿ ಮೌಲ್ಯ ದುರ್ಬಲ ಆಗುತ್ತಿರುವುದರಿಂದ, ಆತ್ಮಿಯ ಸ್ನೇಹಪರ ರಾಷ್ಟ್ರಗಳೊಂದಿಗೆ ಡಾಲರ್ ರಹಿತ ವ್ಯಾಪಾರ ವಹಿವಾಟು ನಡೆಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.
ರಷ್ಯಾ ಜೊತೆಗೊಂದು ಯೋಜನೆ:
ಇತ್ತೀಚೆಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ, 'ಸರ್ಕಾರದಿಂದ ಸರ್ಕಾರದ (ಜಿ2ಜಿ)' ಮಾರಾಟದ ಮೂಲಕ ವ್ಯಾಪಾರ ನಡೆಸುವ ವಿಚಾರ ಪ್ರಸ್ತಾಪಿಸಿದ್ದರು.
ರಷ್ಯಾದಲ್ಲಿ ತೈಲ ಮತ್ತು ಕಲ್ಲುಗಳ ಉತ್ಪನ್ನಗಳು ಹೇರಳವಾಗಿದ್ದು, ಒಟ್ಟು ಆಮದು ಒಪ್ಪಂದದಲ್ಲಿ ಈ ಎರಡು ಸರಕುಗಳ ಪ್ರಮಾಣ ಶೇ.45 ರಷ್ಟು ಇದೆ. ಒಂದು ವೇಳೆ ಉದ್ದೇಶಿತ ಯೋಜನೆ ಜಾರಿಯಾದರೆ ಡಾಲರ್ ಮೇಲಿನ ಭಾರತದ ಅವಲಂಬನೆ ತಗ್ಗಿಲಿದೆ. ಸದ್ಯ ಈ ಯೋಜನೆ ಆರಂಭಿಕ ಹಂತದಲ್ಲಿದ್ದು, ಶೀಘ್ರವೇ ಅನುಷ್ಠಾನಗೊಳ್ಳಲಿದೆ ಎಂಬ ಭರವಸೆಯೂ ಇದೆ.
ರಷ್ಯಾ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ವ್ಯಾಪಾರ ವೃದ್ಧಿಸಲು ತೈಲ ಮತ್ತು ವಜ್ರ ವ್ಯಾಪಾರ ಭವಿಷ್ಯದ ಮುನ್ನುಡಿ ಆಗಲಿದೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ.
ಜಪಾನ್ ಜೊತೆಗೆ ಮತ್ತೊಂದು ಯೋಜನೆ:
ಇನ್ನು ಪ್ರಧಾನಿ ಮೋದಿ ಜಪಾನ್ ಜೊತೆಗಿನ ಐದನೇ ಶೃಂಗಸಭೆ ಯಶಸ್ವಿಯಾಗಿ ಮುಕ್ತಾಯಗೊಳಿದ್ದು, ಮಹತ್ವದ 75 ಶತಕೋಟಿ ಡಾಲರ್ ಮೌಲ್ಯದ ದ್ವಿಪಕ್ಷೀಯ ಕರೆನ್ಸಿ ವಿನಿಮಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಈ ಮೂಲಕ ರೂಪಾಯಿ ಸ್ಥಿರತೆಗೆ ಹೊಸ ಮಾರ್ಗ ಕಂಡುಕೊಳ್ಳಲಾಗಿದೆ. ಕರೆನ್ಸಿ ವಿನಿಮಯ ಒಪ್ಪಂದದಿಂದ ಭಾರತದಲ್ಲಿ ಲಭ್ಯವಿರುವ ವಿದೇಶಿ ಬಂಡವಾಳವನ್ನು ಅಗತ್ಯಕ್ಕೆ ತಕ್ಕಂತೆ ಬಳಸುವ ಅವಕಾಶ ಭಾಋತಕ್ಕೆ ದೊರೆಯಲಿದೆ ಎಂದು ತಜ್ಞರು ಈ ನಡೆಯನ್ನು ವಿಶ್ಲೇಷಿಸಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.