
ಬೆಂಗಳೂರು: ಭಾರತದ ಪ್ರಮುಖ ಸಂಪತ್ತು ನಿರ್ವಹಣೆ ಕಂಪನಿಗಳಲ್ಲಿ ಒಂದಾದ ನುವಾಮಾ ವೆಲ್ತ್ ಮ್ಯಾನೇಜ್ಮೆಂಟ್ ಲಿ. 2026-27ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಅತ್ಯುತ್ತಮ ಆರ್ಥಿಕ ಸಾಧನೆ ದಾಖಲಿಸಿದೆ. ತನ್ನ ಇತಿಹಾಸದಲ್ಲೇ ಅತಿ ಹೆಚ್ಚು ಅಂದರೆ 306 ಕೋಟಿ ರೂ.ಗಳ ತ್ರೈಮಾಸಿಕ ಲಾಭವನ್ನು ಗಳಿಸುವ ಮೂಲಕ ಕಂಪನಿ ಹೊಸ ಮೈಲಿಗಲ್ಲು ನಿರ್ಮಿಸಿದೆ.
ವಿಶೇಷವೆಂದರೆ, ನುವಾಮಾ ಕಂಪನಿ ನಿರ್ವಹಿಸುತ್ತಿರುವ ಗ್ರಾಹಕರ ಒಟ್ಟು ಆಸ್ತಿಯ ಮೌಲ್ಯ ಇದೇ ಮೊದಲ ಬಾರಿಗೆ 5 ಲಕ್ಷ ಕೋಟಿ ರೂ.ಗಳ ಗಡಿ ದಾಟಿದೆ. ಇದು ಕಂಪನಿಯ ಮೇಲಿರುವ ಗ್ರಾಹಕರ ಅಪಾರ ವಿಶ್ವಾಸವನ್ನು ತೋರಿಸುತ್ತದೆ.
ಏಪ್ರಿಲ್ - ಜೂನ್ ಅವಧಿಯಲ್ಲಿ ಕಂಪನಿಯ ಒಟ್ಟು ಆದಾಯ ಶೇ. 18ರಷ್ಟು ಏರಿಕೆ ಕಂಡು ಬರೋಬ್ಬರಿ 909 ಕೋಟಿ ರೂ.ಗೆ ತಲುಪಿದೆ. ಇದೇ ವೇಳೆ ತೆರಿಗೆ ನಂತರದ ಲಾಭ ಶೇ. 16ರಷ್ಟು ಹೆಚ್ಚಾಗಿದ್ದು 306 ಕೋಟಿ ರೂ.ಗೆ ಜಿಗಿದಿದೆ. ಕಂಪನಿಯ ವೆಚ್ಚ 501 ಕೋಟಿ ರೂ. ಇದೆ.
ನುವಾಮಾ ಗ್ರೂಪ್‌ನ ಎಲ್ಲಾ ಪ್ರಮುಖ ವಿಭಾಗಗಳು ಈ ತ್ರೈಮಾಸಿಕದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿವೆ.
ವೆಲ್ತ್ ಮ್ಯಾನೇಜ್ಮೆಂಟ್: ಈ ವಿಭಾಗದ ಆದಾಯ ಶೇ. 19ರಷ್ಟು ಏರಿಕೆ ಕಂಡು 447 ಕೋಟಿ ರೂ.ಗಳಿಗೆ ತಲುಪಿದೆ. ತೆರಿಗೆ ಪೂರ್ವ ಲಾಭ 149 ಕೋಟಿ ರೂ. ದಾಖಲಾಗಿದೆ. ನುವಾಮಾ ವೆಲ್ತ್ ಮತ್ತು ನುವಾಮಾ ಪ್ರೈವೇಟ್ ಎರಡೂ ವಿಭಾಗಗಳು ಹೊಸ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ.
ಅಸೆಟ್ ಮ್ಯಾನೇಜ್ಮೆಂಟ್: ಈ ವಿಭಾಗದ ನಿರ್ವಹಣಾ ಆಸ್ತಿ (ಎಯುಎಂ) ಶೇ. 12ರಷ್ಟು ಹೆಚ್ಚಾಗಿ 13,261 ಕೋಟಿ ರೂ.ಗೆ ಮುಟ್ಟಿದೆ. ಕಮರ್ಷಿಯಲ್ ರಿಯಲ್ ಎಸ್ಟೇಟ್ (ಸಿಆರ್‌ಇ) ಫಂಡ್ ಮೂಲಕ ಕಂಪನಿ ಬರೋಬ್ಬರಿ 4,000 ಕೋಟಿ ರೂ. ಸಂಗ್ರಹಿಸಿದೆ. ಮತ್ತೊಂದು ದೊಡ್ಡ ಸಿಹಿಸುದ್ದಿ ಎಂದರೆ, ಮ್ಯೂಚುವಲ್ ಫಂಡ್ ವ್ಯವಹಾರ ಆರಂಭಿಸಲು ಕಂಪನಿಗೆ ಸೆಬಿಯಿಂದ ಅಂತಿಮ ಅನುಮತಿ ಕೂಡ ಸಿಕ್ಕಿದೆ.
ಅಸೆಟ್ ಸರ್ವಿಸಸ್ ಮತ್ತು ಕ್ಯಾಪಿಟಲ್ ಮಾರ್ಕೆಟ್ಸ್: ಈ ವಿಭಾಗಗಳ ಲಾಭ ಶೇ. 19ರಷ್ಟು ಏರಿಕೆ ಕಂಡು 269 ಕೋಟಿ ರೂ.ಗೆ ತಲುಪಿದೆ. ಅಸೆಟ್ ಸರ್ವಿಸಸ್ ವಿಭಾಗದ ಆದಾಯ ಶೇ. 34ರಷ್ಟು ಬೃಹತ್ ಏರಿಕೆ ಕಂಡಿದೆ.
ಈ ಭರ್ಜರಿ ಸಾಧನೆಯ ಬಗ್ಗೆ ಸಂತಸ ವ್ಯಕ್ತಪಡಿಸಿರುವ ನುವಾಮಾ ಗ್ರೂಪ್‌ನ ಎಂಡಿ ಮತ್ತು ಸಿಇಒ ಆಶಿಶ್ ಕೆಹೈರ್, "ಹೊಸ ಆರ್ಥಿಕ ವರ್ಷವನ್ನು ನಾವು ಅತ್ಯಂತ ಬಲಿಷ್ಠವಾಗಿ ಆರಂಭಿಸಿದ್ದೇವೆ. ಆದಾಯ 900 ಕೋಟಿ ಹಾಗೂ ಲಾಭ 300 ಕೋಟಿ ರೂ. ದಾಟಿರುವುದು ನಮ್ಮ ವ್ಯವಸ್ಥಿತ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ. ಮಾರುಕಟ್ಟೆಯ ಏರಿಳಿತಗಳ ನಡುವೆಯೂ ಗ್ರಾಹಕರು ನಮ್ಮ ಮೇಲೆ ಇಟ್ಟಿರುವ ನಂಬಿಕೆಯೇ ನಮಗೆ ಶ್ರೀರಕ್ಷೆ" ಎಂದಿದ್ದಾರೆ.
"ಮುಂಬರುವ ದಿನಗಳಲ್ಲಿ ನಾವು ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಬಳಕೆಗೆ ಹೆಚ್ಚಿನ ಒತ್ತು ನೀಡಲಿದ್ದೇವೆ. ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುವುದರ ಜೊತೆಗೆ, ಕಂಪನಿಯನ್ನು ಮತ್ತಷ್ಟು ಬಲಿಷ್ಠವಾಗಿ ಬೆಳೆಸುವತ್ತ ನಮ್ಮ ಗುರಿ ಇದೆ" ಎಂದು ಅವರು ಭರವಸೆ ನೀಡಿದ್ದಾರೆ.
ಕಳೆದ 30 ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ವಿಶ್ವಾಸಾರ್ಹ ಸೇವೆ ನೀಡುತ್ತಿರುವ ನುವಾಮಾ, ಪ್ರಸ್ತುತ 5.36 ಲಕ್ಷ ಕೋಟಿ ರೂ.ಗಳಿಗೂ ಅಧಿಕ ಆಸ್ತಿಯನ್ನು ನಿರ್ವಹಿಸುತ್ತಿದೆ. ಒಟ್ಟು 13 ಲಕ್ಷಕ್ಕೂ ಹೆಚ್ಚು ಶ್ರೀಮಂತ ಗ್ರಾಹಕರು ಹಾಗೂ ಭಾರತದ 4,850ಕ್ಕೂ ಹೆಚ್ಚು ಅತಿ ಗಣ್ಯ ಕುಟುಂಬಗಳು (ಎಚ್‌ಎನ್‌ಐ) ನುವಾಮಾದ ಸೇವೆ ಪಡೆಯುತ್ತಿವೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.