ಚುಟುಕು ಜಾಲತಾಣದ ಆದಾಯವನ್ನು ಹೆಚ್ಚಿಸದೇ ಹೋದಲ್ಲಿ ಟ್ವಿಟ್ಟರ್ ದಿವಾಳಿಯಾಗುವ ಅಪಾಯ ಇದೆ. ಕಂಪನಿ ನಿತ್ಯ 35 ಕೋಟಿ ರೂ. ನಷ್ಟಅನುಭವಿಸುತ್ತಿದೆ. ಇದರಿಂದ ಹೊರಬರಲು ನಾವು ಆದಷ್ಟು ಶೀಘ್ರ ವೆರಿಫೈಡ್ ಖಾತೆಗೆ ಶುಲ್ಕ ವಿಧಿಸುವುದು ಸೇರಿದಂತೆ ಹಲವು ಬದಲಾವಣೆ ಜಾರಿಗೆ ತರುವುದು ಅನಿವಾರ್ಯ ಎಂದು ಎಲಾನ್ ಮಸ್ಕ್ ಹೇಳಿದರು.
ಸ್ಯಾನ್‌ಫ್ರಾನ್ಸಿಸ್ಕೋ: ಸಾಮಾಜಿಕ ಮಾಧ್ಯಮ (Social Media) ಟ್ವಿಟ್ಟರ್ (Twitter) ಅನ್ನು ಖರೀದಿಸಿದ ನಂತರ 3700 ನೌಕರರನ್ನು ತೆಗೆದುಹಾಕಿದ್ದ ಕಂಪನಿಯ ನೂತನ ಮಾಲೀಕ ಎಲಾನ್ ಮಸ್ಕ್ (Elon Musk) ಈಗ ಕಂಪನಿಯಲ್ಲಿ ಉಳಿದುಕೊಂಡಿರುವ ನೌಕರರಿಗೆ (Employees) ಕಠಿಣ ನಿಯಮಗಳ ಮೂಲಕ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ. ನೌಕರರ ವರ್ಕ್ ಫ್ರಂ ಹೋಂ (Work From Home) ಸೌಲಭ್ಯ ಹಾಗೂ ಕಂಪನಿಯಲ್ಲಿನ ಉಚಿತ ಊಟ-ತಿಂಡಿ (Free Food) ಸೌಲಭ್ಯ ರದ್ದುಗೊಳಿಸಿದ್ದಾರೆ. ಅಲ್ಲದೆ, ವಾರಕ್ಕೆ ನೌಕರರು ವಾರಕ್ಕೆ 80 ತಾಸು ಕೆಲಸ (80 Hour Work Weeks) ಮಾಡಬೇಕೆಂದು ತಾಕೀತು ಮಾಡಿದ್ದಾರೆ.
ಇದೇ ವೇಳೆ, ‘ನಷ್ಟದಲ್ಲಿರುವ ಟ್ವಿಟ್ಟರ್ ಆದಾಯವನ್ನು ಹೆಚ್ಚಿಸದೇ ಹೋದಲ್ಲಿ ಕಂಪನಿ ದಿವಾಳಿಯಾಗುವ ಅಪಾಯ ಇದೆ’ ಎಂದು ಎಚ್ಚರಿಸಿದ್ದಾರೆ. 3.5 ಲಕ್ಷ ಕೋಟಿ ರೂ. ಗೆ ಟ್ವಿಟ್ಟರ್ ಖರೀದಿಸಿದ ಬೆನ್ನಲ್ಲೇ ಮಸ್ಕ್ ಅವರ ಈ ಹೇಳಿಕೆ ಆತಂಕ ಹುಟ್ಟಿಸಿದೆ.
ಇದನ್ನು ಓದಿ: ಟ್ವಿಟ್ಟರ್ ಆಯ್ತು ಈಗ Meta ಕಂಪನಿಯಿಂದ ಸಾವಿರಾರು ಉದ್ಯೋಗಿಗಳ ವಜಾ..!
ಗುರುವಾರ ಕಂಪನಿಯ ನೌಕರರ ಸಭೆ ನಡೆಸಿದ ಅವರು, ‘ಕಂಪನಿಯ ಎಲ್ಲಾ ಸಿಬ್ಬಂದಿಗೆ ವರ್ಕ್ ಫ್ರಂ ಹೋಮ್ ಪೂರ್ಣವಾಗಿ ರದ್ದುಗೊಳಿಸಲಾಗಿದೆ. ವಾರಕ್ಕೆ 80 ಗಂಟೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಲು ನೀವು ಸಿದ್ಧರಾಗಿರಬೇಕು. ಇದರ ಜೊತೆಗೆ ಸಿಬ್ಬಂದಿಗೆ ಉಚಿತ ಆಹಾರ ಇವೆಲ್ಲವೂ ಸ್ಥಗಿತಗೊಳ್ಳಲಿವೆ. ಯಾರಿಗೆ ಇಷ್ಟವಿಲ್ಲವೋ ಅವರ ರಾಜೀನಾಮೆ ಸ್ವೀಕರಿಸಲು ನಾವು ಸಿದ್ಧರಿದ್ದೇವೆ’ ಎಂದು ಗಂಭೀರ ಎಚ್ಚರಿಕೆ ನೀಡಿದರು. 3 ದಿನದ ಹಿಂದಷ್ಟೇ ಅವರು ಟ್ವಿಟ್ಟರ್ ಖರೀದಿ ಬಳಿಕ ವಾರಕ್ಕೆ 120 ತಾಸು ಕೆಲಸ ಮಾಡುತ್ತಿರುವುದಾಗಿ ಹೇಳಿದ್ದರು.
ದಿವಾಳಿ ಆಗುತ್ತೆ ಎಚ್ಚರ:
‘ಇನ್ನು ಚುಟುಕು ಜಾಲತಾಣದ ಆದಾಯವನ್ನು ಹೆಚ್ಚಿಸದೇ ಹೋದಲ್ಲಿ ಟ್ವಿಟ್ಟರ್ ದಿವಾಳಿಯಾಗುವ ಅಪಾಯ ಇದೆ. ಕಂಪನಿ ನಿತ್ಯ 35 ಕೋಟಿ ರೂ. ನಷ್ಟಅನುಭವಿಸುತ್ತಿದೆ. ಇದರಿಂದ ಹೊರಬರಲು ನಾವು ಆದಷ್ಟು ಶೀಘ್ರ ವೆರಿಫೈಡ್ ಖಾತೆಗೆ ಶುಲ್ಕ ವಿಧಿಸುವುದು ಸೇರಿದಂತೆ ಹಲವು ಬದಲಾವಣೆ ಜಾರಿಗೆ ತರುವುದು ಅನಿವಾರ್ಯ’ ಎಂದರು.
ಇದನ್ನೂ ಓದಿ: Twitterನಿಂದ 8 ತಿಂಗಳ ಗರ್ಭಿಣಿ ವಜಾ: ಮಹಿಳೆಯ ಟ್ವೀಟ್ ವೈರಲ್
ರಾಜೀನಾಮೆ:
ಈ ನಡುವೆ ಎಲಾನ್ ಮಸ್ಕ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಮತ್ತು ಭವಿಷ್ಯದ ನಾಯಕರು ಎಂದು ಹೇಳಲಾಗುತ್ತಿದ್ದ ಟ್ವಿಟ್ಟರ್‌ನ ಹಿರಿಯ ಅಧಿಕಾರಿಗಳಾದ ಯೋಯೆಲ್ ರೋತ್, ರಾಬಿನ್ ವೀಲ್ಹರ್, ಡೇಮಿಯನ್ ಕೀರನ್ ಮತ್ತು ಮಾರಯಾನೆ ಫೊಗಾರ್ಟಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಗುರುವಾರ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದು, ಕಂಪನಿಯಲ್ಲಿ ಭರ್ಜರಿ ಬದಲಾವಣೆಗೆ ಮುಂದಾಗಿದ್ದ ಎಲಾನ್ ಮಸ್ಕ್‌ಗೆ ಭಾರಿ ಶಾಕ್ ನೀಡಿದೆ. ಈ ಪೈಕಿ ಕೆಲವರ ಮನವೊಲಿಸಲು ಎಲಾನ್ ಮಸ್ಕ್ ಯತ್ನಿಸಿದರೂ ಅದು ಫಲ ಕೊಟ್ಟಿಲ್ಲ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Twitterನ ಶೇ. 50 ರಷ್ಟು ಸಿಬ್ಬಂದಿ ಕಿತ್ತೊಗೆಯಲು ಎಲಾನ್ ಮಸ್ಕ್ ಪ್ಲ್ಯಾನ್..!