
ಬೆಂಗಳೂರು(ಸೆ.02): ‘ರಾಜ್ಯದಲ್ಲಿ ಉತ್ಪಾದನೆ ಹಾಗೂ ರಫ್ತಿಗೆ ಒತ್ತು ನೀಡಿ ಹೊಸ ಕೈಗಾರಿಕಾ ನೀತಿ ರೂಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ಈಗಾಗಲೇ ಮೂರು ಕೈಗಾರಿಕಾ ವಲಯಗಳ ಕರಡು ಸಿದ್ಧಗೊಂಡಿದ್ದು, ಸದ್ಯದಲ್ಲೇ ಕೈಗಾರಿಕಾ ನೀತಿ ಅಂತಿಮಗೊಳಿಸಿ ಮುಖ್ಯಮಂತ್ರಿಗಳ ಅನುಮೋದನೆ ಪಡೆಯುತ್ತೇವೆ. ತನ್ಮೂಲಕ ಹೊಸ ಕೈಗಾರಿಕಾ ನೀತಿ ಅನುಷ್ಠಾನಗೊಳಿಸುತ್ತೇವೆ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಗುರುವಾರ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯ ಸಾಧನೆಗಳ ಕಿರು ಹೊತ್ತಿಗೆ ಬಿಡುಗಡೆ ಮಾಡಿ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ನಿಯಮ ಮೀರಿ ಸಿಮ್ ಕಾರ್ಡ್ ಮಾರಿದ್ರೆ ಟೆಲಿಕಾಮ್ ಸಂಸ್ಥೆಗೆ 10 ಲಕ್ಷ ದಂಡ; ದೂರಸಂಪರ್ಕ ಇಲಾಖೆ ಹೊಸ ಆದೇಶ
ರಾಜ್ಯದಲ್ಲಿ ಹೊಸ ಕೈಗಾರಿಕಾ ನೀತಿ ರಚಿಸಲು ನಮ್ಮ ಸರ್ಕಾರ ಮುಂದಾಗಿದ್ದು, ವಿದ್ಯುತ್‌ಚಾಲಿತ ವಾಹನ, ವೇರ್‌ಹೌಸಿಂಗ್ ಮತ್ತು ಲಾಜಿಸ್ಟಿಕ್ಸ್ ವಲಯಗಳಿಗೆ ಈಗಾಗಲೇ ಕರಡು ರೂಪುಗೊಂಡಿವೆ. ಉತ್ಪಾದನೆ ಹಾಗೂ ರಫ್ತಿಗೆ ಉತ್ತೇಜನ ನೀಡುವಂತೆ ಕೈಗಾರಿಕಾ ನೀತಿ ರೂಪಿಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಇದರಂತೆ ನಾವು ಹೊಸ ನೀತಿ ರೂಪಿಸಲು ಕೆಲಸ ಮಾಡುತ್ತಿದ್ದೇವೆ. ಜತೆಗೆ ಕೈಗಾರಿಕಾ ಬೆಳವಣಿಗೆಗೆ ಉತ್ತೇಜಿಸಲು 9 ಆದ್ಯತಾ ವಲಯಗಳಲ್ಲಿ ವಿಷನ್ ಗ್ರೂಪ್‌ನ್ನೂ ರಚಿಸುತ್ತೇವೆ ಎಂದು ಹೇಳಿದರು.
ಏಷ್ಯಾದಲ್ಲಿ ಕರ್ನಾಟಕವನ್ನು ಉತ್ತುಂಗಕ್ಕೆ ಕೊಂಡೊಯ್ಯುವುದು ನಮ್ಮ ಸರ್ಕಾರದ ಗುರಿ. ಪೂರಕವಾಗಿ ಪರಿಷ್ಕೃತ ಕೈಗಾರಿಕಾ ನೀತಿ, ವಿಶ್ವ ದರ್ಜೆಯ ಮೂಲಸೌಕರ್ಯ, ಡಿಜಿಟಲ್ ಸೇವಾ ವಿತರಣೆ, ನವೀನ ತಂತ್ರಜ್ಞಾನಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದರು.
1 ಲಕ್ಷ ಕೋಟಿ ರು. ಹೂಡಿಕೆ ಆಕರ್ಷಣೆ ಗುರಿ:
ನೂರು ದಿನಗಳ ಆಡಳಿತದಲ್ಲಿ ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಬೃಹತ್ ಕೈಗಾರಿಕೆ ಇಲಾಖೆಯ ಅಡಿ 100 ದಿನಗಳಲ್ಲಿ 60 ಸಾವಿರ ಕೋಟಿ ರು. ಬಂಡವಾಳ ಹೂಡಿಕೆ ಒಪ್ಪಂದ ಆಗಿದ್ದು, ಇದರಿಂದ 30 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ. ವರ್ಷದೊಳಗೆ 1 ಲಕ್ಷ ಕೋಟಿ ರು. ಬಂಡವಾಳ ಆಕರ್ಷಿಸುತ್ತೇವೆ. ಇದಕ್ಕಾಗಿ ತಜ್ಞರನ್ನು ಒಳಗೊಂಡ ಕಾರ್ಯತಂತ್ರ ಹೂಡಿಕೆ ಸಮಿತಿ ರಚಿಸುತ್ತೇವೆ. ಏಕಗವಾಕ್ಷಿ ವ್ಯವಸ್ಥೆಯನ್ನು ಸುಧಾರಿಸುತ್ತೇವೆ. ಪ್ರಸ್ತುತ ಐಟಿಸಿ, ಫಾಕ್ಸ್‌ಕಾನ್, ಟಾಟಾ ಟೆಕ್ನಾಲಜಿಸ್, ತೈವಾನ್, ಕೊರಿಯಾ ಬಹುರಾಷ್ಟ್ರೀಯ ಕಂಪೆನಿಗಳು, ಎಫ್‌ಐಐ, ಜೆಎಸ್‌ಡಬ್ಲ್ಯೂ ಕಂಪೆನಿಗಳು ಸಾವಿರಾರು ಕೋಟಿ ರು. ಹೂಡಿಕೆಗೆ ಒಪ್ಪಿಗೆ ಸೂಚಿಸಿವೆ ಎಂದು ಹೇಳಿದರು. ಜತೆಗೆ ಹೂಡಿಕೆ ಉತ್ತೇಜನಕ್ಕಾಗಿ ಸಿಂಗಾಪುರ, ಸೌದಿ ಅರೇಬಿಯಾ ಜಾಗತಿಕ ಹೂಡಿಕೆ ಕೇಂದ್ರಗಳಿಗೆ ಪ್ರತಿಸ್ಪರ್ಧಿಯಾಗಿ ಕರ್ನಾಟಕದ ಹೂಡಿಕೆ ಉತ್ತೇಜನಾ ಸಂಸ್ಥೆ (ಐಪಿಎ) ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
2 ಸಾವಿರ ಎಕರೆ ನಾಲೆಡ್ಜ್ ಪಾರ್ಕ್:
ಬೆಂಗಳೂರು ಸಮೀಪ 2000 ಎಕರೆ ಪ್ರದೇಶದಲ್ಲಿ ನಾಲೆಡ್ಜ್ -ಹೆಲ್ತ್- ಇನ್ನೋವೇಶನ್ ಅಂಡ್ ರಿಸಚ್‌ರ್ ಸಿಟಿ’ ಸ್ಥಾಪಿಸುವ ಉದ್ದೇಶವಿದೆ. ಮೊದಲ ಹಂತದಲ್ಲಿ 1 ಸಾವಿರ ಎಕರೆ ಅಭಿವೃದ್ಧಿಪಡಿಸಿ ಇಲ್ಲಿ ವಿಶ್ವದರ್ಜೆಯ ವಿಶ್ವವಿದ್ಯಾಲಯ, ಆಸ್ಪತ್ರೆ, ಸಂಶೋಧನಾ ಕೇಂದ್ರ ಮಾಡಲಾಗುವುದು. ಈ ಯೋಜನೆ ಬೆಂಗಳೂರಿನ ಹಿರಿಮೆಯನ್ನು ವಿಶ್ವಮಟ್ಟದಲ್ಲಿ ಮತ್ತಷ್ಟುಬೆಳಗಲಿದೆ. ಇದರಲ್ಲಿ ಸಂಶೋಧನೆ, ಅಭಿವೃದ್ಧಿ ಹಾಗೂ ಆವಿಷ್ಕಾರಗಳಿಗೆ ವಿಶೇಷ ಒತ್ತು ನೀಡಲಾಗುವುದು ಎಂದರು.
ಅದಾನಿ ಕಂಪನಿ ವಿರುದ್ಧ ಮತ್ತೊಂದು ಆರೋಪ, ಅಮೆರಿಕದ ಸಂಸ್ಥೆಯಿಂದ ಭಾರೀ ಪ್ರಮಾಣದ ರಹಸ್ಯ ಹೂಡಿಕೆ
197 ಕೈಗಾರಿಕಾ ಪ್ರದೇಶಗಳಿಗೆ ಮೂಲಸೌಕರ್ಯ:
ರಾಜ್ಯದಲ್ಲಿ 197 ಹಳೆ ಕೈಗಾರಿಕಾ ಪ್ರದೇಶಗಳಿದ್ದು ಮೂರು ಹಂತಗಳಲ್ಲಿ ಅವುಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗುವುದು. ಇದಕ್ಕೆ ದ್ರೋಣ್ ಸರ್ವೆ ನೆರವೂ ಪಡೆಯಲಾಗುವುದು. ಒಟ್ಟಾರೆ ಇದಕ್ಕಾಗಿ 300 ಕೋಟಿ ರು. ಅಂದಾಜು ವೆಚ್ಚ ತಗುಲಲಿದ್ದು, ಕೈಗಾರಿಕಾ ಪ್ರದೇಶಗಳನ್ನು ನಿರಂತರವಾಗಿ ಸುಸ್ಥಿತಿಯಲ್ಲಿಡಲಾಗುವುದು ಎಂದು ಹೇಳಿದರು.
ಯಾರೇ ತಪ್ಪು ಮಾಡಿದ್ದರೂ ತನಿಖೆ: ಪಾಟಿಲ್
ಕೈಗಾರಿಕಾ ಇಲಾಖೆಗೆ ಸಂಬಂಧಿಸಿದಂತೆ ಮಾಜಿ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಲೋಕಾಯುಕ್ತ ಕೇಸ್ ಇರುವುದು ಗೊತ್ತಿಲ್ಲ. ಇಲಾಖೆಯಲ್ಲಿ ಅಕ್ರಮಗಳು ಆಗಿದ್ದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ. ಹಿಂದಿನ ಸಚಿವರ ತಪ್ಪು ಮಾಡಿದ್ರೂ ತನಿಖೆ ಮಾಡುತ್ತೇವೆ. ಯಾರೇ ತಪ್ಪು ಮಾಡಿದ್ರೂ ಕಾನೂನು ಪ್ರಕಾರ ಪ್ರಕರಣ ಪಟ್ಟಿಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.