ಉಂಡು ಮಲಗಿದ ಮೇಲೂ ಕಿತ್ತಾಡ್ತವ್ರಲ್ಲಪ್ಪ: ಏನಾಯ್ತು ಅಂತಾ ಹೇಳ್ರಪ್ಪ!

By Web DeskFirst Published Dec 4, 2018, 2:28 PM IST
Highlights

ಆರ್‌ಬಿಐ, ಕೇಂದ್ರದ ಮಧ್ಯೆ ಹೊಸದೊಂದು ವಿವಾದ ಸೃಷ್ಟಿ! ಆರ್ಥಿಕ ಬಂಡವಾಳ ಚೌಕಟ್ಟನ್ನು ನಿರ್ಧರಿಸುವ ಸಮಿತಿ ರಚನೆಗೆ ಸಂಬಂಧಿಸಿದಂತೆ ತಿಕ್ಕಾಟ! ಸಮಿತಿಯಲ್ಲಿ ಇರಬೇಕಾದ ಸದಸ್ಯರ ಬಗ್ಗೆ ಆರ್‌ಬಿಐ-ಕೇಂದ್ರ ಸರ್ಕಾರದ ನಡುವೆ ಜಟಾಪಟಿ! ಸಮಿತಿಯಲ್ಲಿ ಮಾಜಿ ಗರ್ವನರ್ ಬಿಮಾಲ್ ಜಲನ್ ಇರಬೇಕೆಂದು ಕೇಂದ್ರದ ಪಟ್ಟು! ಸಮಿತಿಯಲ್ಲಿ ಮಾಜಿ ಡೆಪ್ಯುಟಿ ಗರ್ವನರ್ ರಾಕೇಶ್ ಮೋಹನ್ ಬೇಕೆಂದು ಆರ್‌ಬಿಐ ಪಟ್ಟು! ಆರ್‌ಬಿಐ-ಕೇಂದ್ರದ ನಡುವಿನ ತಿಕ್ಕಾಟದಿಂದ ಆರ್ಥಿಕತೆ ಮೇಲೆ ದುಷ್ಪರಿಣಾಮ?

ಹೈದರಾಬಾದ್(ಡಿ.04): ಗಂಡ ಹೆಂಡಿರ ಜಗಳ ಉಂಡು ಮಲಗೋ ತನಕ ಅಂತಾರೆ. ಆದರೆ ಎಲ್ಲಾ ಸರಿ ಹೋಯ್ತು ಅಂತಾ ನಿಟ್ಟುಸಿರು ಬಿಡುವ ಮುನ್ನವೇ ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ನಡುವೆ ಹೊಸದೊಂದು ವಿವಾದ ಭುಗಿಲೆದ್ದಿದೆ.

ಈ ಬಾರಿ ಆರ್ಥಿಕ ಬಂಡವಾಳ ಚೌಕಟ್ಟನ್ನು ನಿರ್ಧರಿಸುವ ಸಮಿತಿ ರಚನೆಗೆ ಸಂಬಂಧಿಸಿದಂತೆ ಆರ್‌ಬಿಐ ಹಾಗೂ ಕೇಂದ್ರ ಸರ್ಕಾರದ ನಡುವೆ ತಿಕ್ಕಾಟ ಪ್ರಾರಂಭವಾಗಿದೆ. 

ಆರ್‌ಬಿಐ ತನ್ನ ಬಳಿ ಇರುವ ಹೆಚ್ಚುವರಿ ಮೊತ್ತವನ್ನು ಕೇಂದ್ರ ಸರ್ಕಾರಕ್ಕೆ ವರ್ಗಾವಣೆ ಮಾಡಬೇಕಿದ್ದು, ಎಷ್ಟು ಮೊತ್ತವನ್ನು ವರ್ಗಾವಣೆ ಮಾಡಬೇಕೆಂಬುದನ್ನು ನಿರ್ಧರಿಸುವುದಕ್ಕೆ ಸಮಿತಿ ರಚನೆ ಮಾಡಲು ನ.26 ರಂದು ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.

ಈ ಹಿಂದಿನ ಸಭೆಯ ನಿರ್ಧಾರದ ಪ್ರಕಾರ ಒಂದು ವಾರದಲ್ಲಿ ಸಮಿತಿ ರಚನೆಯಾಗಿ 90 ದಿನಗಳಲ್ಲಿ ವರದಿ ಸಲ್ಲಿಕೆಯಾಗಬೇಕಿತ್ತು. ಆದರೆ ಸಮಿತಿಯಲ್ಲಿ ಇರಬೇಕಾದ ಸದಸ್ಯರ ಬಗ್ಗೆ ಈಗ ಆರ್‌ಬಿಐ-ಕೇಂದ್ರ ಸರ್ಕಾರದ ನಡುವೆ ತಿಕ್ಕಾಟ ಉಂಟಾಗಿದೆ.

ಸರ್ಕಾರ ಮಾಜಿ ಗರ್ವನರ್ ಬಿಮಾಲ್ ಜಲನ್ ಸಮಿತಿಯಲ್ಲಿ ಇರಬೇಕೆಂದು ಪಟ್ಟು ಹಿಡಿದ್ದಿದ್ದರೆ, ಮಾಜಿ ಡೆಪ್ಯುಟಿ ಗರ್ವನರ್ ರಾಕೇಶ್ ಮೋಹನ್ ಬೇಕೆಂದು ಆರ್‌ಬಿಐ ಪಟ್ಟು ಹಿಡಿದಿದೆ. ಆದರೆ ಈ ಸಮಿತಿ ಸದಸ್ಯರ ಕುರಿತು ಇದುವರೆಗೂ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ.

ಒಟ್ಟಿನಲ್ಲಿ ಒಂದಾದ ಮೇಲೊಂದರಂತೆ ಹೊಸ ವಿವಾದಗಳು ಆರ್‌ಬಿಐ ಮತ್ತು ಕೇಂದ್ರದ ಮಧ್ಯೆ ಕಂದಕವನ್ನು ಸೃಷ್ಟಿ ಮಾಡುತ್ತಿದ್ದು, ಇದು ದೇಶದ ಅರ್ಥ ವ್ಯವಸ್ಥೆ ಮೇಲೆ ಯಾವ ರೀತಿಯಾಗಿ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಆರ್ ಬಿಐ ಬಿಗಿಪಟ್ಟಿಗೆ ಮಣಿಯಿತು ಕೇಂದ್ರ ಸರ್ಕಾರ

ಆರ್​ಬಿಐ ಹಣದ ಮೇಲೆ ಕಣ್ಣು?: ಜೇಟ್ಲಿಯಿಂದ ಹೊರ ಬಿತ್ತು ಸತ್ಯ!

1 ಟ್ರಿಲಿಯನ್ ಆರ್‌ಬಿಐ ಹಣ ಎಗರಿಸಲಿದೆಯಾ ಮೋದಿ ಸರ್ಕಾರ?

click me!