ಮುಂಬೈ(ಜು.04): ವಿಶ್ವಾಸ ಮತ ಯಾಚನೆಯಲ್ಲಿ ಗೆಲುವು ಸಾಧಿಸಿದ ಮಹಾರಾಷ್ಟ್ರ ನೂತನ ಸಿಎಂ ಏಕನಾಥ್ ಶಿಂಧೆ ನೇತೃತ್ವದ ಮೈತ್ರಿ ಸರ್ಕಾರ ಇದೀಗ ಮಹತ್ವದ ಘೋಷಣೆ ಮಾಡಿದೆ. ಮಹಾರಾಷ್ಟ್ರದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ವ್ಯಾಟ್ (VAT) ಕಡಿತ ಮಾಡುವುದಾಗಿ ಘೋಷಿಸಿದೆ. ಇದರಿಂದ ಮಹಾರಾಷ್ಟ್ರದಲ್ಲಿ ಇಂಧನ ಬೆಲೆ ಅಗ್ಗವಾಗಲಿದೆ.
ವಿಶ್ವಾಸ ಮತ ಯಾಚನೆ ಬಳಿಕ ನಡೆದ ಸಂಪುಟ ಸಭೆಯಲ್ಲಿ ಶಿಂಧೆ ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಇಂಧನ ಮೇಲೆನ ರಾಜ್ಯ ವ್ಯಾಟ್ ಕಡಿತಗೊಳಿಸವುದಾಗಿ ಏಕನಾಥ್ ಶಂಧೆ ಹೇಳಿದ್ದಾರೆ. ಸದ್ಯ ಮುಂಬೈನಲ್ಲಿ ಪೆಟ್ರೋಲ್ ಬೆಲೆ 111.35 ರೂಪಾಯಿ ಪ್ರತಿ ಲೀಟರ್ ಹಾಗೂ ಡೀಸೆಲ್ ಬೆಲೆ 97.28 ಪ್ರತಿ ಲೀಟರ್ ಆಗಿದೆ.
ಮೇ ತಿಂಗಳಲ್ಲಿ ಮಹಾರಾಷ್ಟ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ರಾಜ್ಯ ತೆರಿಗೆಯಲ್ಲಿ ಕೊಂಚ ಕಡಿತ ಮಾಡಿತ್ತು. ಪೆಟ್ರೋಲ್ ಮೇಲೆ 1.44 ರೂಪಾಯಿ ಹಾಗೂ ಡೀಸೆಲ್ ಮೇಲೆ 2.08 ರೂಪಾಯಿ ಕಡಿತಗೊಳಿಸಲಾಗಿತ್ತು. ಮೇ. 21 ರಂದು ಕೇಂದ್ರ ಸರ್ಕಾರ ಪೆಟ್ರೋಲ್ ಮೇಲೆ 8 ರೂಪಾಯಿ ಹಾಗೂ ಡೀಸೆಲ್ ಮೇಲೆ 6 ರೂಪಾಯಿ ತೆರಿಗೆ ಕಡಿತಗೊಳಿಸಿತ್ತು.
ಮಹಾರಾಷ್ಟ್ರದ ರಾಜಕೀಯ ಗುದ್ದಾಟಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಸದ್ಯ ಶಿಂಧೆ ಸರ್ಕಾರ ಆಡಳಿತದತ್ತ ಗಮನಹರಿಸಿದೆ. ಇದರ ಮೊದಲ ಭಾಗವಾಗಿ ಇಂಧನ ಮೇಲೆ ತೆರಿಗೆ ಕಡಿತ ಮಾಡಿದೆ. ಇದೇ ವೇಳೆ ಸಿಎಂ ಸ್ಥಾನದ ಅವಕಾಶ ನೀಡಿದ ಹಾಗೂ ಹೊಸ ಸರ್ಕಾರ ರಚನೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.
ಬಿಜೆಪಿ ಶಾಸಕರ ಸಂಖ್ಯೆ ಹೆಚ್ಚಿದ್ದರೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ಸಣ್ಣ ಪಕ್ಷದವನಾದ ನನಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನ ನೀಡಿದ್ದಾರೆ’ ಎಂದು ಏಕನಾಥ ಶಿಂಧೆ ಕೃತಜ್ಞತೆ ಸಲ್ಲಿಸಿದರು. ಭಾನುವಾರ ವಿಧಾನಸಭೆಯಲ್ಲಿ ಮಹಾರಾಷ್ಟ್ರದ ಸಿಎಂ ಆಗಿ ತಮ್ಮ ಮೊಟ್ಟಮೊದಲ ಭಾಷಣ ಮಾಡಿದ ಶಿಂಧೆ, ‘ದೇವೇಂದ್ರ ಫಡ್ನವೀಸ್ ಬಳಿ 115 ಶಾಸಕರು, ನನ್ನ ಬಳಿ ಕೇವಲ 50 ಶಾಸಕರ ಬೆಂಬಲವಿದೆ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ನನಗೆ ಸಿಎಂ ಪಟ್ಟನೀಡಿದ್ದು ಹಲವರ ಕಣ್ಣು ಅರಳುವಂತೆ ಮಾಡಿದೆ’ ಎಂದರು. ‘ಬಾಳಾ ಸಾಹೇಬ್ ಅವರ ಸಿದ್ಧಾಂತದ ಆಧಾರದ ಮೇಲೆ ಬಿಜೆಪಿ-ಶಿವಸೇನಾ ಸರ್ಕಾರ ರಾಜ್ಯದಲ್ಲಿ ಆಡಳಿತ ನಡೆಸಲಿದೆ’ ಎಂದೂ ಹೇಳಿದರು.
ಮಹಾರಾಷ್ಟ್ರ ವಿಧಾನಸಭೆಯ ವಿಶೇಷ ಅಧಿವೇಶನದ ಮೊದಲ ದಿನವಾದ ಭಾನುವಾರ ವಿಧಾನಸಭಾಧ್ಯಕ್ಷ ಚುನಾವಣೆಯಲ್ಲಿ ‘ಬಿಜೆಪಿ+ಶಿಂಧೆ ಬಣ’ದ ಅಭ್ಯರ್ಥಿ ರಾಹುಲ್ ನಾರ್ವೇಕರ್ ಜಯಭೇರಿ ಬಾರಿಸಿದ್ದಾರೆ.
ಸ್ಪೀಕರ್ ಹುದ್ದೆಗೆ ಶಿವಸೇನೆಯಿಂದ ಸ್ಪರ್ಧಿಸಿದ್ದ ರಾಜನ್ ಸಲ್ವಿ ಅವರನ್ನು (107 ಮತ) ಬಿಜೆಪಿ ರಾಹುಲ್ ನಾರ್ವೇಕರ್ (164 ಮತ) ಮಣಿಸಿದ್ದಾರೆ. ಜೊತೆಗೆ ರಾಹುಲ್ (45) ದೇಶದಲ್ಲೇ ಅತ್ಯಂತ ಕಿರಿಯ ವಯಸ್ಸಿನ ಸ್ಪೀಕರ್ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ.
ಮಹಾ ಅಘಾಡಿ ಸರ್ಕಾರದಲ್ಲಿ ಸ್ಪೀಕರ್ ಆಗಿದ್ದ ನಾನಾ ಪಟೋಲೆ ರಾಜೀನಾಮೆ ನೀಡಿ, ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ, ಉಂಟಾದ ಕೆಲ ಕಾನೂನು ಬಿಕ್ಕಟ್ಟುಗಳಿಂದಾಗಿ ಅಂದಿನಿಂದಲೂ ಸ್ಪೀಕರ್ ಹುದ್ದೆ ಖಾಲಿ ಉಳಿದಿತ್ತು. ಉಪ ಸ್ಪೀಕರ್ ಅವರೇ ಸ್ಪೀಕರ್ ಹುದ್ದೆ ಹೊಣೆ ನಿರ್ವಹಿಸುತ್ತಿದ್ದರು. ಆದರೆ ಇದೀಗ ಬಿಜೆಪಿ- ಶಿವಸೇನೆ ಬಂಡಾಯ ಶಾಸಕರ ನೂತನ ಸರ್ಕಾರ ರಚನೆಯಾದ ಹಿನ್ನೆಲೆಯಲ್ಲಿ ಹೊಸ ಸ್ಪೀಕರ್ ಆಯ್ಕೆ ಮಾಡಲಾಗಿದೆ. 287 ಶಾಸಕರ ಪೈಕಿ 271 ಜನರು ಭಾನುವಾರ ಮತ ಚಲಾಯಿಸಿದರು.