ಪುತ್ರ ಅನಂತ್ ನಲ್ಲಿ ತಂದೆ ಧೀರೂಭಾಯಿ ಅವರನ್ನೇ ಕಾಣುತ್ತಿದ್ದೇನೆ: ಮುಖೇಶ್ ಅಂಬಾನಿ ಭಾವುಕ ಮಾತು

By Suvarna NewsFirst Published Mar 3, 2024, 3:46 PM IST
Highlights

ಪುತ್ರ ಅನಂತ್-ರಾಧಿಕಾ ಮರ್ಚೆಂಟ್ ವಿವಾಹಪೂರ್ವ ಕಾರ್ಯಕ್ರಮದಲ್ಲಿ ಅತಿಥಿಗಳಿಗೆ ಧನ್ಯವಾದ ಸಲ್ಲಿಸುವ ಸಂದರ್ಭದಲ್ಲಿ ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಭಾವುಕರಾಗಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ತಂದೆ ಧೀರೂಭಾಯಿ ಅಂಬಾನಿ ಅವರನ್ನು ನೆನಪಿಸಿಕೊಂಡಿದ್ದಾರೆ. 

ಜಾಮ್‌ನಗರ (ಮಾ. 3): ದೇಶದ ಅತ್ಯಂತ  ಶ್ರೀಮಂತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ದ್ವಿತೀಯ ಪುತ್ರ ಅನಂತ್ ವಿವಾಹಪೂರ್ವ ಕಾರ್ಯಕ್ರಮಗಳು ಮಾರ್ಚ್‌ 1ರಿಂದ ಗುಜರಾತ್‌ನ ಜಾಮ್‌ನಗರದಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ. ಈ ಮೂರು ದಿನಗಳ ಅನಂತ್-ರಾಧಿಕಾ ರಾಯಲ್ ಪ್ರಿ ವೆಡ್ಡಿಂಗ್ ಸೆಲೆಬ್ರೇಷನ್ ನಲ್ಲಿ ದೇಶದ ಅನೇಕ ಸೆಲೆಬ್ರಿಟಿಗಳ ಜೊತೆಗೆ ಅಂತಾರಾಷ್ಟ್ರೀಯ ತಾರೆಯರು ಸಹ ಪಾಲ್ಗೊಂಡಿದ್ದಾರೆ. ಅತಿಥಿ ದೇವೋಭವ ಎನ್ನೋದು ಭಾರತೀಯ ಸಂಸ್ಕೃತಿ. ಅತಿಥಿಗಳನ್ನು ಸತ್ಕರಿಸುವ ಜೊತೆಗೆ ಅವರಲ್ಲಿ ದೇವರನ್ನು ಕಾಣಬೇಕು ಎಂಬ ಸಂಪ್ರದಾಯವನ್ನು ಅಂಬಾನಿ ಕುಟುಂಬ ಪಾಲಿಸುತ್ತ ಬಂದಿದೆ. ಅದರಂತೆ ಪುತ್ರನ ವಿವಾಹಪೂರ್ವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅತಿಥಿಗಳಿಗೆ ವಂದನೆ ಸಲ್ಲಿಸುವ ಸಂದರ್ಭದಲ್ಲಿ ಮುಖೇಶ್ ಅಂಬಾನಿ ಭಾವುಕರಾದರು. ಈ ಸಂದರ್ಭದಲ್ಲಿ ತಂದೆ ಧೀರೂಭಾಯಿ ಅಂಬಾನಿ ಅವರನ್ನು ನೆನಪಿಸಿಕೊಂಡ ಮುಖೇಶ್, ಕಿರಿಯ ಪುತ್ರ ಅನಂತ್ ನಲ್ಲಿ ನಾನು ನನ್ನ ಅಪ್ಪನನ್ನು ಕಾಣುತ್ತಿದ್ದೇನೆ ಎಂದರು. ಅನಂತ್ ಅಪ್ಪನ ಮುದ್ದಿನ ಮೊಮ್ಮಗನಾಗಿದ್ದು, ಇಂದು ಈ ಕಾರ್ಯಕ್ರಮವನ್ನು ನೋಡಿ ಅವರು ಖಂಡಿತಾ ಖುಷಿಪಡುತ್ತಿರುತ್ತಾರೆ.  ಮೇಲೆ ಸ್ವರ್ಗದಿಂದಲೇ ನಮಗೆ ಆಶೀರ್ವಾದ ಮಾಡುತ್ತಿರುತ್ತಾರೆ ಎಂದು ಅಂಬಾನಿ ಅಪ್ಪನನ್ನು ನೆನಪಿಸಿಕೊಂಡು ಕೆಲವು ಕ್ಷಣ ಭಾವುಕರಾದರು.

ಭಾರತೀಯ ಸಂಸ್ಕೃತಿಯಲ್ಲಿ ನಾವು ಅತಿಥಿಗಳನ್ನು ದೇವರು ಎಂದು ಭಾವಿಸುತ್ತೇವೆ. ನಾನು ನಿಮಗೆ ನಮಸ್ಕರಿಸಿದಾಗ ನನ್ನಲ್ಲಿರುವ ದೈವಿಕಶಕ್ತಿ ನಿಮ್ಮಲ್ಲಿರುವ ದೈವಿಕ ಶಕ್ತಿಯನ್ನು ಗೌರವಿಸಿದಂತೆ. ನೀವೆಲ್ಲರೂ ಈ ವಿವಾಹಪೂರ್ವ ಶುಭ ಕಾರ್ಯಕ್ರಮವನ್ನು ಮಂಗಳಮಯ ಮಾಡಿದ್ದೀರಿ. ನಿಮಗೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ಎಂದು ಮುಖೇಶ್ ಅಂಬಾನಿ ಕಾರ್ಯಕ್ರಮದಲ್ಲಿ ನೆರೆದಿದ್ದ ಪ್ರತಿಷ್ಟಿತ ಉದ್ಯಮಿಗಳು, ಕಲಾಕಾರರು, ಕ್ರೀಡಾಪಟುಗಳು ಹಾಗೂ ಸಿನಿಮಾ ತಾರೆಯರು ಸೇರಿದಂತೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. 

Latest Videos

ಅನಂತ್‌-ರಾಧಿಕಾ ವಿವಾಹ ಇಷ್ಟು ಗ್ರ್ಯಾಂಡ್ ಆಗಿ ನಡೀತಿರೋದ್ಯಾಕೆ, ಕಾರಣ ಬಹಿರಂಗಪಡಿಸಿದ ನೀತಾ ಅಂಬಾನಿ!

'ಜೀವನದ ಪಯಣದಲ್ಲಿ ಅನಂತ್ ಹಾಗೂ ರಾಧಿಕಾ ಪಾಲುದಾರರಾಗುತ್ತಿದ್ದಾರೆ, ಈ ಸಂದರ್ಭದಲ್ಲಿ ನಿಮ್ಮ ಆಶೀರ್ವಾದ ಅವರಿಗೆ ದೀರ್ಘಾಕಾಲಿಕ ಉತ್ತಮ ಭಾಗ್ಯದ ಫಸಲು ನೀಡುತ್ತದೆ. ಆ ಭಾಗ್ ಎಂದಿಗೂ ಮರೆಯಾಗೋದಿಲ್ಲ' ಎಂದು ಅಂಬಾನಿ ಹೇಳಿದರು. ಇನ್ನು ತಂದೆಯನ್ನು ನೆನೆದ ಮುಖೇಶ್ ' ಇಂದು ನನ್ನ ಅಪ್ಪ ಧೀರೂಭಾಯಿ  ಅಂಬಾನಿ ಕೂಡ ಮೇಲೆ ಸ್ವರ್ಗದಿಂದ ಅವರ ಅಪಾರ ಆಶೀರ್ವಾದವನ್ನು ಸುರಿಸುತ್ತಿದ್ದಾರೆ. ನನಗೆ ಖಂಡಿತಾ ಗೊತ್ತಿದೆ ಅವರು ಅವರು ಇಂದು ತುಂಬಾ ಖುಷಿಯಾಗಿದ್ದಾರೆ. ಏಕೆಂದರೆ ಇದು ಜಾಮ್ ನಗರದಲ್ಲಿ ಅವರ ಮುದ್ದಿನ ಮೊಮ್ಮಗನ ಜೀವನದ ಅತ್ಯಂತ ಸಂತಸದ ದಿನವಾಗಿದೆ' ಎಂದು  ಮುಖೇಶ್ ಅಂಬಾನಿ ಹೇಳಿದರು. 

'ನನಗೆ ಹಾಗೂ ನನ್ನ ತಂದೆಗೆ ಜಾಮ್ ನಗರ ಕರ್ಮಭೂಮಿಯಾಗಿದೆ. ಈ ಜಾಗದಲ್ಲೇ ನಾವು ನಮ್ಮ ಯೋಜನೆ, ಉತ್ಸಾಹ ಹಾಗೂ ಉದ್ದೇಶವನ್ನು ಕಂಡುಕೊಂಡಿದ್ದು. 30 ವರ್ಷಗಳ ಹಿಂದೆ ಇದು ಸಂಪೂರ್ಣ ಬರಡುಭೂಮಿಯಾಗಿತ್ತು. ಈಗ ನೀವು ಏನು ನೋಡುತ್ತಿದ್ದೀರೋ ಅದು ಧೀರೂಭಾಯಿ ಅಂಬಾನಿ ಅವರ ಕನಸಿನ ಸಾಕಾರವಾಗಿದೆ. ರಿಲಯನ್ಸ್ ಇತಿಹಾಸದಲ್ಲಿ ಜಾಮ್ ನಗರ ಟರ್ನಿಂಗ್ ಪಾಯಿಂಟ್ ಆಗಿದೆ. ನಮ್ಮ ಭವಿಷ್ಯ ಯೋಜನೆಗಳು ಹಾಗೂ ಮಾನವೀಯ ಕಾರ್ಯಗಳಿಗೆ ಇಲ್ಲಿಂದಲೇ ಪ್ರಾರಂಭವಾಗಲಿವೆ. ಜಾಮ್ ನಗರ ರೋಮಾಂಚಕ, ಸಕಾರಾತ್ಮಕ ಹಾಗೂ ಆತ್ಮವಿಶ್ವಾಸದ ಹೊಸ ಭಾರತದ ಪರಿಚಯವನ್ನು ಜಾಮ್ ನಗರ ನಿಮಗೆ ನೀಡಲಿದೆ' ಎಂದು ಮುಖೇಶ್ ಅಂಬಾನಿ ಜಾಮ್ ನಗರ ಹಾಗೂ ತಮ್ಮ ಕುಟುಂಬದ ಬಾಂಧವ್ಯದ ಬಗ್ಗೆ ತಿಳಿಸಿದರು

ಇನ್ನು ನವಜೋಡಿಗಳನ್ನು ಹೊಗಳಿದ ಅಂಬಾನಿ 'ಅನಂತ ಎಂದರೆ ಅಂತ್ಯವಿಲ್ಲದ್ದು. ನಾನು ಅನಂತನಲ್ಲಿ ಅನಂತ ಶಕ್ತಿಯನ್ನು ಕಾಣುತ್ತಿದ್ದೇನೆ. ನಾನು ನನ್ನ ತಂದೆ ಧೀರೂಭಾಯಿ ಅವರನ್ನು ಅವನಲ್ಲಿ ನೋಡಿದ್ದೇನೆ. ಮಾಡೋಣ, ಮಾಡಲು ಆಗುತ್ತೆ, ಯಾವುದೂ ಅಸಾಧ್ಯವಲ್ಲ ಎಂಬ ತಂದೆಯ ಗುಣವನ್ನು ಅನಂತ್ ನಲ್ಲೂ ಕಂಡಿದ್ದೇನೆ. ಇನ್ನು ರಾಧಿಕಾಳಲ್ಲಿ ಆತ ತನ್ನ ಮಾದರಿ ಜೀವನ ಸಂಗಾತಿಯನ್ನು ನೋಡಿದ್ದಾನೆ. ಆಕೆ ಸೃಜಾತ್ಮಕ ಶಕ್ತಿಯ ಗಣಿ, ಪ್ರೀತಿ ಹಾಗೂ ಕಾಳಜಿಯ ಕಾರಂಜಿ. ಇದು ರಬ್ ನೇ ಬನಾ ದಿ ಜೋಡಿ' ಎಂದು ಗುಣಗಾನ ಮಾಡಿದ್ದಾರೆ.

Multicolor Outfit: ಬಹುವರ್ಣದ ಔಟ್ ಫಿಟ್‌ನಲ್ಲಿ ಪುಟ್ಟ ಮಕ್ಕಳಂತೆ ಕಂಗೊಳಿಸಿದ ಅಂಬಾನಿ ಕುಟುಂಬದ ಭಾವೀ ಸೊಸೆ

ಇನ್ನು ಪತ್ನಿ ನೀತಾ ಅಂಬಾನಿ ಅವರನ್ನು ಕೂಡ ಈ ಸಂದರ್ಭದಲ್ಲಿ ಮುಖೇಶ್ ಹಾಡಿ ಹೊಗಳಿದ್ದಾರೆ. 'ಕಾರ್ಯಕ್ರಮದ ಪ್ರತಿ ವಿಚಾರದಲ್ಲೂ ನೀತಾ ಶ್ರಮವಿದೆ. ಹಲವು ತಿಂಗಳಿಂದ ಇದಕ್ಕಾಗಿ ನಿರಂತರ ಪರಿಶ್ರಮ ಪಟ್ಟಿದ್ದಾರೆ. ಆಕೆಗೆ ಇಷ್ಟು ಅಗಣಿತ ಶಕ್ತಿ ಎಲ್ಲಿಂದ ಬರುತ್ತದೆ ಎಂಬುದು ಮದುವೆಯಾಗಿ ನಾಲ್ಕು ದಶಕಗಳೇ ಕಳೆದಿದ್ದರೂ ನನಗೆ ಇನ್ನೂ ಗೊತ್ತಾಗಿಲ್ಲ' ಎಂದು ಪತ್ನಿ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. 


 

click me!