
ಮುಂಬೈ (ಫೆ. 28): ರಿಲಯನ್ಸ್ ಸಮೂಹ ಸಂಸ್ಥೆ ತನ್ನ ಉದ್ಯಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುತ್ತಿದೆ. ಎಲ್ಲ ಕ್ಷೇತ್ರಗಳಲ್ಲೂ ಹೂಡಿಕೆ ಮಾಡುವತ್ತ ಆಸಕ್ತಿ ತೋರುತ್ತಿದೆ. ಹೀಗಿರುವಾಗ ಹೊಸದಾಗಿ ಪ್ರಾರಂಭಿಸುತ್ತಿರುವ ಶತಕೋಟಿ ಮೌಲ್ಯದ ಉದ್ಯಮದಲ್ಲಿನ ಪ್ರಮುಖ ಹುದ್ದೆಗೆ ಮುಖೇಶ್ ಅಂಬಾನಿ ತಮ್ಮ ಪತ್ನಿ ನೀತಾ ಅಂಬಾನಿ ಅವರನ್ನು ನೇಮಕ ಮಾಡುತ್ತಾರೆ ಎಂಬ ಮಾಹಿತಿಯನ್ನು ಆಪ್ತ ಮೂಲಗಳು ನೀಡಿವೆ. ಭಾರತದಲ್ಲಿನ ಮಾಧ್ಯಮ ಸಂಸ್ಥೆಗಳಿಗೆ ಸಂಬಂಧಿಸಿ ವಾಲ್ಟ್ ಡಿಸ್ನಿ ಸಂಸ್ಥೆಯೊಂದಿಗೆ ರಿಲಯನ್ಸ್ ಇಂಡಸ್ಟ್ರೀಸ್ ಒಪ್ಪಂದ ಮಾಡಿಕೊಂಡಿರೋದು ತಿಳಿದಿರುವ ವಿಚಾರವೇ. ಈ ಎರಡೂ ಸಂಸ್ಥೆಗಳು ಒಟ್ಟಾಗಿ ಭಾರತದಲ್ಲಿನ ತಮ್ಮ ಮಾಧ್ಯಮ ಸಂಸ್ಥೆಗಳನ್ನು ಒಂದುಗೂಡಿಸುವ ಯೋಜನೆ ರೂಪಿಸಿವೆ. ಈ ಹೊಸ ಉದ್ಯಮ ಆಡಳಿತ ಮಂಡಳಿಗೆ ನೀತಾ ಅಂಬಾನಿ ಅವರನ್ನು ಮುಖ್ಯಸ್ಥೆಯನ್ನಾಗಿ ನೇಮಕ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಅಂಬಾನಿ ಕುಟುಂಬದ ನಿಯಂತ್ರಣದಲ್ಲಿರುವ ರಿಲಯನ್ಸ್ ಹಾಗೂ ಡಿಸ್ನಿ ಸಂಸ್ಥೆ ಭಾರತದಲ್ಲಿನ ತಮ್ಮ ಒಡೆತನದ ಮಾಧ್ಯಮ ಸಂಸ್ಥೆಗಳ ವಿಲೀನದ ಒಪ್ಪಂದಕ್ಕೆ ಸಂಬಂಧಿಸಿ ಕಳೆದ ಕೆಲವು ತಿಂಗಳಿಂದ ಕಾರ್ಯನಿರ್ವಹಿಸುತ್ತಿವೆ.
ಭಾರತದಲ್ಲಿ ರಿಲಯನ್ಸ್ ಹಾಗೂ ಡಿಸ್ನಿ ಒಡೆತನದ ಮಾಧ್ಯಮ ಸಂಸ್ಥೆಗಳ ವಿಲೀನದ ಬಳಿಕ ಅವುಗಳ ನೇತೃತ್ವವನ್ನು ನೀತಾ ಅಂಬಾನಿ ವಹಿಸಿಕೊಳ್ಳುತ್ತಾರೆ ಎಂಬ ಬಗ್ಗೆ ಈ ತನಕ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಹೀಗಾಗಿ ಕೊನೆಯ ಕ್ಷಣದಲ್ಲಿ ಈ ವಿಚಾರದಲ್ಲಿ ಬದಲಾವಣೆಯಾದರೂ ಅಚ್ಚರಿಯಿಲ್ಲ. ಆದರೆ, ನೀತಾ ಅಂಬಾನಿ ನೇಮಕದ ಬಗ್ಗೆ ರಿಲಯನ್ಸ್ ಇಂಡಸ್ಟ್ರೀಸ್ ಅಥವಾ ಡಿಸ್ನಿ ಈ ತನಕ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಹಾಗೆಯೇ ಈ ಬಗ್ಗೆ ಪ್ರತಿಕ್ರಿಯಿಸಲು ಕೂಡ ನಿರಾಕರಿಸಿವೆ. ಇಂದು ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸುವ ಸಾಧ್ಯತೆಯಿದೆ ಎಂದು ಕೂಡ ಹೇಳಲಾಗಿದೆ.
ಸಿಎನ್‌ಜಿ ಗ್ಯಾಸ್‌ಗೆ ಟಕ್ಕರ್, CBG ಇಂಧನ ಉತ್ಪಾದನೆಗೆ 5000 ಕೋಟಿ ಹೂಡಿಕೆಗೆ ಮುಂದಾದ ಅಂಬಾನಿ, ಏನಿದು ಸಿಬಿಜಿ?
ನೀತಾ ಅಂಬಾನಿಗೆ ಹೆಚ್ಚಿನ ಪ್ರಾಮುಖ್ಯತೆ
ದಾನ-ಧರ್ಮದ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ಇತ್ತೀಚೆಗಷ್ಟೇ ನೀತಾ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ ಐಎಲ್) ಆಡಳಿತ ಮಂಡಳಿಯಿಂದ ಹೊರನಡೆದಿದ್ದರು. ಇದಾಗಿ ಕೆಲವೇ ದಿನಕ್ಕೆ ರಿಲಯನ್ಸ್ ಹಾಗೂ ಡಿಸ್ನಿ ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥೆಯಾಗಿ ಅವರನ್ನು ನೇಮಕ ಮಾಡಲಾಗುತ್ತದೆ ಎಂಬ ಸುದ್ದಿ ಹೊರಬಿದ್ದಿದೆ. ಪ್ರಸ್ತುತ ನೀತಾ ಅಂಬಾನಿ ರಿಲಯನ್ಸ್ ಫೌಂಡೇಷನ್ ಸ್ಥಾಪಕಿ ಹಾಗೂ ಮುಖ್ಯಸ್ಥೆ ಹುದ್ದೆಯನ್ನು ನಿಭಾಯಿಸುತ್ತಿದ್ದಾರೆ. ಇದರೊಂದಿಗೆ ಅವರು ಮುಂಬೈನಲ್ಲಿ ಸ್ಥಾಪಿಸಲಾಗಿರುವ ನೀತಾ ಮುಖೇಶ್ ಅಂಬಾನಿ ಕಲ್ಚರ್ ಸೆಂಟರ್ ಸ್ಥಾಪಕಿ ಕೂಡ ಆಗಿದ್ದಾರೆ. ಈ ಸೆಂಟರ್ ನಲ್ಲಿ ಸಂಗೀತಾ ಹಾಗೂ ರಂಗಭೂಮಿ ಸೇರಿದಂತೆ ಭಾರತೀಯ ಕಲೆಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ.
ಹಿಡಿತ ಬಿಗಿಗೊಳಿಸಲು ರಿಲಯನ್ಸ್ ಪ್ರಯತ್ನ
ರಿಲಯನ್ಸ್ ಹಾಗೂ ಡಿಸ್ನಿ ಒಟ್ಟಾಗಿ ಸ್ಟ್ರೀಮಿಂಗ್ ಸರ್ವೀಸ್ ಹಾಗೂ 120 ಟಿವಿ ಚಾನಲ್ ಗಳ ಒಡೆತನವನ್ನು ಹೊಂದಿವೆ. ಈ ವಿಲೀನದಿಂದ ಭಾರತದ 28 ಬಿಲಿಯನ್ ಡಾಲರ್ ಮಾಧ್ಯಮ ಹಾಗೂ ಮನೋರಂಜನೆ ಮಾರುಕಟ್ಟೆಯಲ್ಲಿ ರಿಲಯನ್ಸ್ ಪ್ರಾಬಲ್ಯ ಹೆಚ್ಚಿದೆ. ಈ ವಿಲೀನಗೊಂಡ ಸಂಸ್ಥೆಯಲ್ಲಿ ರಿಲಯನ್ಸ್ ಶೇ.51-54ರಷ್ಟು ಷೇರುಗಳನ್ನು ಸ್ವಾಧಿನಪಡಿಸಿಕೊಳ್ಳುವ ಸಾಧ್ಯತೆಯಿದೆ. ಇದರಿಂದ ಡಿಸ್ನಿ ಇಂಡಿಯಾ ಮೌಲ್ಯ 3.5 ಬಿಲಿಯನ್ ಡಾಲರ್ ಗೆ ಕುಸಿಯಲಿದೆ. ಇದು 2019ರಲ್ಲಿ ಅಂದಾಜಿಸಿದ ಮೌಲ್ಯಕ್ಕಿಂತ 15-16 ಬಿಲಿಯನ್ ಡಾಲರ್ ಕಡಿಮೆ.
ಮಗಳಿಗೆ ನೆಟ್ವರ್ಕ್ ಸಮಸ್ಯೆಯಾಯ್ತೆಂದು ದೇಶಕ್ಕೇ ಜಿಯೋ ಕೊಟ್ಟ ಅಂಬಾನಿ!
ಜೇಮ್ಸ್ ಮೊರ್ಡೋಕ್ ಹಾಗೂ ಡಿಸ್ನಿಯ ಮಾಜಿ ಎಕ್ಸಿಕ್ಯುಟಿವ್ ಉದಯ್ ಶಂಕರ್ ಅವರ ಜಂಟಿ ಪಾಲುದಾರಿಕೆಯ 'ಬೋಧಿ ಟ್ರೀ' ಕೂಡ ಈ ವಿಲೀನಗೊಂಡಿರುವ ಹೊಸ ಸಂಸ್ಥೆಯಲ್ಲಿ ಸುಮಾರು ಶೇ.9ರಷ್ಟು ಪಾಲು ಹೊಂದಲಿದೆ. ಡಿಸ್ನಿ ಸುಮಾರು ಶೇ.40ರಷ್ಟು ಪಾಲು ಹೊಂದಿರಲಿದೆ. ಭಾರತದಲ್ಲಿ ಡಿಸ್ನಿ ಟಿವಿ ಹಾಗೂ ಸ್ಟ್ರೀಮಿಂಗ್ ಉದ್ಯಮ ಕಳೆದ ಕೆಲವು ವರ್ಷಗಳಿಂದ ಸಾಕಷ್ಟು ತೊಂದರೆಗೆ ಸಿಲುಕಿವೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.