ಮುಕೇಶ್ ಅಂಬಾನಿ ವಿಶ್ವದ ನಂ.9 ಶ್ರೀಮಂತ ಉದ್ಯಮಿ| ಟಾಪ್ 10ರಲ್ಲಿರುವ ಏಷ್ಯಾದ ಏಕೈಕ ವ್ಯಕ್ತಿ
ನವದೆಹಲಿ(ಜೂ.23): ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಈಗ ವಿಶ್ವದ ಅಗ್ರ 10 ಶ್ರೀಮಂತರ ಸಾಲಿಗೆ ಸೇರ್ಪಡೆಯಾಗಿದ್ದಾರೆ. 4.90 ಲಕ್ಷ ಕೋಟಿ ರು. ಆಸ್ತಿ ಹೊಂದಿರುವ ಮುಕೇಶ್ ಅವರು, ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದಲ್ಲಿರುವ ವಿಶ್ವದ ಟಾಪ್ 10 ಸಿರಿವಂತರ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದಾರೆ.
ಟಾಪ್ 10ರಲ್ಲಿ ಸ್ಥಾನ ಪಡೆದಿರುವ ಏಷ್ಯಾದ ಏಕೈಕ ವ್ಯಕ್ತಿ ಕೂಡ ಆಗಿದ್ದಾರೆ. ಕೊರೋನಾ ವೈರಸ್‌ನ ಪರಿಣಾಮವಾಗಿ ಜಗತ್ತಿನ ಇತರ ಕೋಟ್ಯಧೀಶರ ಸಂಪತ್ತಿನಲ್ಲಿ ಇಳಿಕೆ ಆಗುತ್ತಿದೆ. ಆದರೆ, ರಿಲಯನ್ಸ್‌ನ ಡಿಜಿಟಲ್ ಘಟಕ ಜಿಯೋದಲ್ಲಿ ಇತ್ತೀಚಿನ ದಿನಗಳಲ್ಲಿ ಭಾರೀ ಪ್ರಮಾಣದ ಹೂಡಿಕೆ ಆಗಿರುವುದು ಮತ್ತು ರಿಲಯನ್ಸ್ ಷೇರುಗಳ ಏರಿಕೆ ಆಗಿರುವುದರಿಂದ ಮುಕೇಶ್ ಅಂಬಾನಿ ಅವರ ಆಸ್ತಿ ಮೌಲ್ಯ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ.
150 ಬಿಲಿಯನ್ ದಾಟಿದ ಮೊದಲ ಕಂಪನಿ ರಿಲಯನ್ಸ್
ಇದೇ ವೇಳೆ ರಿಲಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆಮೌಲ್ಯ ಸೋಮವಾರ 150 ಬಿಲಿಯನ್ ಡಾಲರ್ (11.43 ಲಕ್ಷ ಕೋಟಿ ರು.) ದಾಟಿದ್ದು, ಈ ಸಾಧನೆ ಮಾಡಿದ ಭಾರತದ ಮೊದಲ ಕಂಪನಿ ಎನಿಸಿಕೊಂಡಿದೆ.
ಸೊಮವಾರದ ಬಾಂಬೆ ಷೇರು ಮಾರುಕಟ್ಟೆಯ ಆರಂಭಿಕ ವಹಿವಾಟಿನಲ್ಲಿ ರಿಯನ್ಸ್ ಶೇ. 2.34ರಷ್ಟುಏರಿಕೆ ಆಥವಾ 28,248 ರು. ಲಾಭಗಳಿಸಿ ಮಾರುಕಟ್ಟೆಮೌಲ್ಯ 11,43,667 ಕೋಟಿ ರು.ಗೆ ಏರಿಕೆ ಕಂಡಿದೆ. ಶುಕ್ರವಾರ ರಿಯಲಯನ್ಸ್ ಇಂಡಸ್ಟ್ರೀಸ್ 11 ಲಕ್ಷ ಕೋಟಿ ರು. ಗಡಿ ದಾಟಿದ ಮೊದಲ ಭಾರತೀಯ ಕಂಪನಿ ಎನಿಸಿಕೊಂಡಿತ್ತು.