
ಭಾರತದ ಅತ್ಯಂತ ಜನಪ್ರಿಯ ತೆರಿಗೆ ಉಳಿತಾಯ ಯೋಜನೆಯಲ್ಲಿ ಸಾರ್ವಜನಿಕ ಭವಿಷ್ಯ ನಿಧಿ (Public Provident Fund) ಅಂದರೆ ಪಿಪಿಎಫ್ (PPF) ಒಂದು. ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡುವ ಮೂಲಕ ತೆರಿಗೆ ಉಳಿಸ್ಬಹುದು. ಹಾಗೇ ಹೂಡಿಕೆ ಮಾಡದೆಯೂ ನೀವು ಈ ಯೋಜನೆಯಲ್ಲಿ 2.8 ಲಕ್ಷ ರೂಪಾಯಿವರೆಗೆ ಬಡ್ಡಿ ಗಳಿಸ್ಬಹುದು. ಅದು ಹೇಗೆ ಅನ್ನೋದನ್ನು ನಾವು ಹೇಳ್ತೇವೆ.
ಪಿಪಿಎಫ್ ಎಂದರೇನು? : ಪಿಪಿಎಫ್ ಸರ್ಕಾರಿ ಯೋಜನೆ. ಇದರಲ್ಲಿ ಹೂಡಿಕೆ ಮಾಡುವ ಹಣ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ. ಯೋಜನೆಯಲ್ಲಿ ಸಿಗುವ ಬಡ್ಡಿ ಕೂಡ ತೆರಿಗೆ ಮುಕ್ತವಾಗಿರುತ್ತದೆ. ಪಿಪಿಎಫ್ನಲ್ಲಿ ವರ್ಷಕ್ಕೆ ಕನಿಷ್ಠ 500 ರೂಪಾಯಿಗಳಿಂದ ಗರಿಷ್ಠ 1.5 ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಮಾಡಬಹುದು. ಪ್ರಸ್ತುತ ಪಿಪಿಎಫ್ ಬಡ್ಡಿದರ ಶೇ. 7.1 ರಷ್ಟಿದೆ. ಬಡ್ಡಿಯನ್ನು ಹಣಕಾಸು ಸಚಿವಾಲಯ ಜಾರಿಗೊಳಿಸುತ್ತದೆ.
ಪಿಪಿಎಫ್ ನಲ್ಲಿ ನಿಮಗೆ ಸಿಗುವ ಹಣ ಎಷ್ಟು? : 15 ವರ್ಷಗಳ ಕಾಲ ಪಿಪಿಎಫ್ ನಲ್ಲಿ ಪ್ರತಿ ವರ್ಷ 1.5 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ರೆ, 15 ವರ್ಷಗಳಲ್ಲಿ ನೀವು ಒಟ್ಟೂ 22.5 ಲಕ್ಷ ರೂಪಾಯಿ ಹೂಡಿಕೆ ಮಾಡಿದಂತಾಗುತ್ತದೆ. ಈ ಹಣದ ಮೇಲೆ, ನೀವು ಶೇಕಡಾ 7.1 ರ ದರದಲ್ಲಿ 18 ಲಕ್ಷ 18 ಸಾವಿರ ರೂಪಾಯಿ ಬಡ್ಡಿ ಹಣ ಪಡೆಯುತ್ತೀರಿ. ಯೋಜನೆ ಮುಕ್ತಾಯದಲ್ಲಿ ನಿಮಗೆ ಒಟ್ಟೂ 40 ಲಕ್ಷ 68 ಸಾವಿರ ರೂಪಾಯಿ ಸಿಗುತ್ತದೆ. ವರ್ಷಕ್ಕೆ 1.5 ಲಕ್ಷ ರೂಪಾಯಿಗಿಂತ ಕಡಿಮೆ ಹೂಡಿಕೆ ಮಾಡಿದ್ರೆ ಈ ಮೊತ್ತ ಕಡಿಮೆಯಾಗುತ್ತದೆ. ನೀವು ಎಷ್ಟು ಹೂಡಿಕೆ ಮಾಡ್ತೀರಿ ಎನ್ನುವುದ್ರ ಆಧಾರದ ಮೇಲೆ ಒಟ್ಟೂ ಹಣ ನಿಮಗೆ ಸಿಗುತ್ತದೆ.
ಹಣ ಹೂಡಿಕೆ ಮಾಡದೆ ಲಾಭ ಪಡೆಯೋದು ಹೇಗೆ? : 15 ವರ್ಷಗಳ ಕಾಲ ಪಿಪಿಎಫ್ ನಲ್ಲಿ ಹೂಡಿಕೆ ಮಾಡಿದ್ದರೆ ಮಾತ್ರ ಈ ಪ್ರಯೋಜನ ನಿಮಗೆ ಸಿಗುತ್ತದೆ. ಪಿಪಿಎಫ್ ವಿಸ್ತರಣೆ ಯೋಜನೆ ಅಡಿಯಲ್ಲಿ ನೀವು ಈ ಪ್ರಯೋಜನವನ್ನು ಪಡೆಯಬಹುದು. ಅಂದ್ರೆ ನಿಮ್ಮ ಪಿಪಿಎಫ್ 15 ವರ್ಷಗಳಲ್ಲಿ ಪಕ್ವವಾದಾಗ, ನೀವು ಅದನ್ನು 5 ವರ್ಷಗಳವರೆಗೆ ವಿಸ್ತರಿಸಬಹುದು. ಈ ಅವಧಿಯಲ್ಲಿ ನೀವು ಯಾವುದೇ ಹಣವನ್ನು ಹೂಡಿಕೆ ಮಾಡಬೇಕಾಗಿಲ್ಲ. ಪಿಪಿಎಫ್ ಖಾತೆಯಲ್ಲಿ ಠೇವಣಿ ಇಟ್ಟ ಹಣದ ಮೇಲೆ ನಿಗದಿತ ದರದ ಪ್ರಕಾರ ಬಡ್ಡಿ ಸಿಗುತ್ತದೆ. 15 ವರ್ಷಗಳವರೆಗೆ ಗರಿಷ್ಠ 1.5 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ, ಮುಕ್ತಾಯ ಮೊತ್ತವು 40 ಲಕ್ಷ 68 ಸಾವಿರ ರೂಪಾಯಿ ಆಗಿರುತ್ತದೆ. ಐದು ವರ್ಷಗಳ ಕಾಲ ಯಾವುದೇ ಹೂಡಿಕೆ ಇಲ್ಲದೆ ಪಿಪಿಎಫ್ ವಿಸ್ತರಣೆ ಮಾಡಿದರೆ, ಮೊದಲ ವರ್ಷ ಈ ಮೊತ್ತಕ್ಕೆ 2.8 ಲಕ್ಷ ರೂಪಾಯಿ ಬಡ್ಡಿ, ಎರಡನೇ ವರ್ಷ 2.9 ಲಕ್ಷ ರೂಪಾಯಿ ಮತ್ತು ಮೂರನೇ ವರ್ಷ 3.2 ಲಕ್ಷ ರೂಪಾಯಿ ಬಡ್ಡಿ ಸಿಗುತ್ತದೆ. ಈ ರೀತಿಯಾಗಿ, ಪ್ರತಿ ವರ್ಷವೂ ಹಿಂದಿನ ವರ್ಷಕ್ಕಿಮತ ಹೆಚ್ಚು ಬಡ್ಡಿ ನಿಮಗೆ ಸಿಗುತ್ತದೆ.
ಎಷ್ಟು ಬಾರಿ ನೀವು ಪಿಪಿಎಫ್ ವಿಸ್ತರಿಸಬಹುದು? : ಪಿಪಿಎಫ್ ವಿಸ್ತರಣೆಗೆ ಮಿತಿ ಇಲ್ಲ. ನೀವು ಎಷ್ಟು ಬಾರಿ ಬೇಕಾದ್ರೂ ಪಿಪಿಎಫ್ ವಿಸ್ತರಿಸಬಹುದು. ಪ್ರತಿ ಬಾರಿ ಪಿಪಿಎಫ್ ಪಕ್ವವಾದ ನಂತ್ರ, ನೀವು ಅದನ್ನು ಕನಿಷ್ಠ 5 ವರ್ಷಗಳವರೆಗೆ ವಿಸ್ತರಿಸಬಹುದು. ಆದ್ರೆ ಐದು ವರ್ಷ ಆಗುವವರೆಗೂ ನೀವು ಹಣ ಹಿಂಪಡೆಯಲು ಸಾಧ್ಯವಿಲ್ಲ. ಒಂದ್ವೇಳೆ ಹಣ ಹಿಂಪಡೆಯುವ ನಿರ್ಧಾರಕ್ಕೆ ಬಂದ್ರೆ ದಂಡ ತೆರಬೇಕು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.