Q3 GDP growth ಜನವರಿ 5 ರಂದು ಪ್ರಕಟವಾಗಿದ್ದ 2023-24 ಹಣಕಾಸು ವರ್ಷದ ಮೊದಲ ಜಿಡಿಪಿ ಅಂದಾಜು ವರದಿಯಲ್ಲಿ ಇಡೀ ವರ್ಷ ದೇಶದ ಆರ್ಥಿಕ ಪ್ರಗತಿ ಶೇ. 7.3ರಷ್ಟು ಇರಲಿದೆ ಎಂದು ತಿಳಿಸಲಾಗಿತ್ತು.
ನವದೆಹಲಿ (ಫೆ.29): ಡಿಸೆಂಬರ್ ತ್ರೈಮಾಸಿಕದಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನವು (ಜಿಡಿಪಿ) 8.4 ಪ್ರತಿಶತದಷ್ಟು ಬೆಳೆದಿದೆ ಎಂದು ಫೆಬ್ರವರಿ 29 ರಂದು ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಬಿಡುಗಡೆ ಮಾಡಿದ ಅಂಕಿಅಂಶಗಳು ತಿಳಿಸಿದೆ. ಇದು 2022ರ 2ನೇ ತ್ರೈಮಾಸಿಕದ ಬಳಿಕ ದೇಶದ ಜಿಡಿಪಿಯ ತ್ರೈಮಾಸಿಕ ವರದಿಯ ಅತ್ಯುತ್ತಮ ಫಲಿತಾಂಶವಾಗಿದೆ. ಒಂದು ವರ್ಷದ ಹಿಂದೇ ಇದೇ ತ್ರೈಮಾಸಿಕದಲ್ಲಿ ದೇಶದ ಆರ್ಥಿಕ ಪ್ರಗತಿ ಶೇ. 4.3ರಷ್ಟಿತ್ತು. ಆದರೆ, ಈ ತ್ರೈಮಾಸಿಕದಲ್ಲಿ ಇದರಲ್ಲಿ ಭಾರೀ ಅಭಿವೃದ್ಧಿಯಾಗಿದೆ ಎಂದು ಅಂಕಿ ಅಂಶ ತಿಳಿಸಿದೆ. ಆರ್ಥಿಕ ತಜ್ಞರು ಮೂರನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯನ್ನು ಶೇಕಡಾ 7 ಕ್ಕಿಂತ ಕಡಿಮೆ ಎಂದು ಅಂದಾಜಿಸಿದ್ದರೆ, ಸರ್ಕಾರ ಬಿಡುಗಡೆ ಮಾಡಿದ ಅಂಕಿಅಂಶಗಳು ಭಾರತೀಯ ಆರ್ಥಿಕತೆಯು ವೇಗವಾಗಿ ವಿಸ್ತರಿಸುತ್ತಿದೆ ಎಂದು ತೋರಿಸಿದೆ. ಮೂರನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯು Q2FY24 ನಲ್ಲಿನ 7.6 ಶೇಕಡಾಕ್ಕಿಂತ ಉತ್ತಮವಾಗಿದೆ. ನಿರ್ಮಾಣ ವಲಯದ ಎರಡಂಕಿಯ ಬೆಳವಣಿಗೆ ದರ (ಶೇ 10.7), ಉತ್ಪಾದನಾ ವಲಯದ ಉತ್ತಮ ಬೆಳವಣಿಗೆ ದರ (ಶೇ 8.5) 2024ರ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯನ್ನು ಹೆಚ್ಚಿಸಿದೆ ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿದೆ. ಪ್ರಸ್ತುತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಶೇ 8.4 ರಷ್ಟು ಬೆಳವಣಿಗೆಗೆ ಈ ವಲಯಗಳ ಪ್ರಗತಿಯೇ ಪ್ರಮುಖ ಕಾರಣವಾಗಿವೆ.