
Business Desk: ಉದ್ಯಮ ರಂಗದಲ್ಲಿ ತೊಡಗಿರುವ ಮಹಿಳೆಯರ ಪ್ರಮಾಣ ಪುರುಷರಿಗೆ ಹೋಲಿಸಿದರೆ ತುಂಬಾ ಕಡಿಮೆ. ದೊಡ್ಡ ಉದ್ಯಮ ಸಾಮ್ರಾಜ್ಯವನ್ನು ಕಟ್ಟಿ ನಿಲ್ಲಿಸಿದವರೆಲ್ಲರೂ ಪುರುಷರೇ. ಉದ್ಯಮ ಪುರುಷರಿಗೆ ಮಾತ್ರ ಸೀಮಿತ ಮಹಿಳೆಯರಿಗಲ್ಲ ಎಂಬ ಕಾಲ ಕೂಡ ಇತ್ತು. ಆದರೆ, ಕಾಲದ ಜೊತೆಗೆ ಜನರ ಆಲೋಚನೆಗಳು ಕೂಡ ಬದಲಾಗಿವೆ. ಪರಿಣಾಮ ಇಂದು ಭಾರತದ ಉದ್ಯಮ ರಂಗದಲ್ಲಿ ಅನೇಕ ಮಹಿಳಾ ಉದ್ಯಮಿಗಳನ್ನು ನೋಡಬಹುದಾಗಿದೆ. ಯಾವುದೇ ಉದ್ಯಮ ಕುಟುಂಬದ ಹಿನ್ನೆಲೆ ಇಲ್ಲದೆಯೂ ಸ್ವಂತ ಪರಿಶ್ರಮದಿಂದ ದೊಡ್ಡ ಕಂಪನಿಯನ್ನು ಕಟ್ಟಿ ಯಶಸ್ವಿ ಸಾಧಿಸಿದ ಮಹಿಳೆಯರು ಕೂಡ ಇದ್ದಾರೆ. ಅಂಥವರಲ್ಲಿ ನೈಕಾ ಸಂಸ್ಥಾಪಕಿ ಫಾಲ್ಗುಣಿ ನಾಯರ್ ಕೂಡ ಒಬ್ಬರು. ವೃತ್ತಿಯಲ್ಲಿ ಬ್ಯಾಂಕರ್ ಆಗಿದ್ದ ನಾಯರ್ ಭಾರತದ ಶ್ರೀಮಂತ ಮಹಿಳಾ ಉದ್ಯಮಿಯಾಗಿ ಬೆಳೆದ ಕಥೆ ನಿಜಕ್ಕೂ ಹಲವು ಮಹಿಳೆಯರಿಗೆ ಸ್ಫೂರ್ತಿದಾಯಕ. ಇನ್ನು ನೈಕಾ ಸಂಸ್ಥೆ ಸ್ಥಾಪಿಸಲು ಹಾಗೂ ಅದನ್ನು ಮುನ್ನಡೆಸಲು ಫಾಲ್ಗುಣಿ ನಾಯರ್ ಅವರಿಗೆ ಬೆಂಗಾವಾಲಾಗಿ ನಿಂತಿದ್ದು ಅವರ ಮಗಳು ಅದ್ವೈತಾ ನಾಯರ್ ಎಂಬ ವಿಷಯ ಬಹುತೇಕರಿಗೆ ತಿಳಿದಿಲ್ಲ. ಅದ್ವೈತಾ ನೈಕಾದ ಸಹಸಂಸ್ಥಾಪಕಿಯಾಗಿದ್ದು, ಉದ್ಯಮ ಮುನ್ನಡೆಸಲು ತಾಯಿಗೆ ನೆರವು ನೀಡುತ್ತಿದ್ದಾರೆ. ಈ ಅಮ್ಮ-ಮಗಳ ಜೋಡಿ ಕಡಿಮೆ ಅವಧಿಯಲ್ಲಿ ಉದ್ಯಮದಲ್ಲಿ ಯಶಸ್ಸು ಸಾಧಿಸುವ ಮೂಲಕ ಮಹಿಳೆ ಮನಸ್ಸು ಮಾಡಿದರೆ ಯಾವ ಕ್ಷೇತ್ರದಲ್ಲಿ ಬೇಕಾದರೂ ಯಶಸ್ಸು ಗಳಿಸಬಹುದು ಎಂಬುದನ್ನು ಸಾಧಿಸಿ ತೋರಿಸಿದೆ.
ಅದ್ವೈತಾ ನಾಯರ್ ಕಳೆದ 10 ವರ್ಷಗಳಿಂದ ನೈಕಾದ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನೈಕಾ ಆನ್ ಲೈನ್ ಶಾಪಿಂಗ್ ಸಂಸ್ಥೆಯನ್ನು ಸ್ಥಾಪಿಸಲು ನೆರವಾಗುವ ಜೊತೆಗೆ ಅದನ್ನು ಮುನ್ನಡೆಸುವ ಮೂಲಕ ಅದ್ವೈತಾ ಅಮ್ಮನಿಗೆ ಸಾಥ್ ನೀಡುತ್ತಿದ್ದಾರೆ. ಫಾಲ್ಗುಣಿ ನಾಯರ್ ಇನ್ವೆಸ್ಟ್ ಮೆಂಟ್ ಬ್ಯಾಂಕರ್ ಆಗಿದ್ದರು. ಉದ್ಯಮ ರಂಗದ ಜೊತೆಗೆ ಯಾವುದೇ ನಂಟು ಇಲ್ಲದಿದ್ದರೂ ಇಂದು ಬಿಲಿಯನೇರ್ ಉದ್ಯಮಿಯಾಗಿ ಬೆಳೆದಿದ್ದಾರೆ. 2023ರಲ್ಲಿ ನಾಯರ್ ಅವರನ್ನು ಭಾರತದ ಶ್ರೀಮಂತ ಸೆಲ್ಫ್ ಮೇಡ್ ವಿಮೆನ್ ಎಂದು ಗುರುತಿಸಲಾಗಿದೆ ಕೂಡ.
ಇಶಾ ಅಂಬಾನಿ ಅತ್ತಿಗೆ ಬ್ರಿಲಿಯೆಂಟ್ ಮಹಿಳಾ ಉದ್ಯಮಿ, ಆಸ್ತಿಯಲ್ಲಿ ಅಪ್ಪನನ್ನೇ ಮೀರಿಸುವಂತಿದ್ದಾಳೆ ಮಗಳು!
ಮುಂಬೈ ಧೀರೂಭಾಯಿ ಅಂಬಾನಿ ಸ್ಕೂಲ್ ನಿಂದ ಪದವಿ ಪಡೆದ ಬಳಿಕ ಅದ್ವೈತಾ ಯೇಲ್ ವಿಶ್ವವಿದ್ಯಾಲಯದಿಂದ ಅಪ್ಲೈಡ್ ಮ್ಯಾಥಮ್ಯಾಟಿಕ್ಸ್ ನಲ್ಲಿ ಬಿಎ ಪದವಿ ಗಳಿಸುತ್ತಾರೆ. ನಂತರ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆಯುತ್ತಾರೆ. ಆ ಬಳಿಕ ಅಮೆರಿಕದಲ್ಲಿ ಬೈನ್ ಹಾಗೂ ಕಂಪನಿಯಲ್ಲಿ ಕನ್ಸಲ್ಟೆಂಟ್ ಆಗಿ ಆರು ತಿಂಗಳ ಕಾಲ ಕಾರ್ಯನಿರ್ವಹಿಸುತ್ತಾರೆ. ಇದೇ ಸಮಯದಲ್ಲಿ ಕೋಟಕ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಫಾಲ್ಗುಣಿ ನಾಯರ್ ಉದ್ಯೋಗ ತೊರೆದು ಸೌಂದರ್ಯವರ್ಧಕಗಳ ಆನ್ ಲೈನ್ ರಿಟೇಲಿಂಗ್ ಕಂಪನಿ ಸ್ಥಾಪಿಸಲು ಮುಂದಾಗುತ್ತಾರೆ. 2012ರಲ್ಲಿ ಈ ಕಂಪನಿ ಪ್ರಾರಂಭವಾಗುತ್ತದೆ. ಹೀಗಾಗಿ ಅಮೆರಿಕದಲ್ಲಿನ ಉದ್ಯೋಗ ತೊರೆದು ತಾಯಿಗೆ ನೆರವಾಗಲು ಅದ್ವೈತಾ ಭಾರತಕ್ಕೆ ಹಿಂತಿರುಗುತ್ತಾರೆ. ಈ ಮೂಲಕ ನೈಕಾವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸಲು ತಾಯಿಗೆ ನೆರವಾಗುತ್ತಾರೆ. 2017ರಲ್ಲಿ ಇವರು ನೈಕಾ ಫ್ಯಾಷನ್ ಕೂಡ ಪ್ರಾರಂಭಿಸುತ್ತಾರೆ.
ಅಂಬಾನಿ ಭಾವೀ ಸೊಸೆ ರಾಧಿಕಾ ಮರ್ಚೆಂಟ್ ಸಹೋದರಿ ಕೂಡ ಉದ್ಯಮಿ, ಎಷ್ಟಿದೆ ಆಸ್ತಿ ಮೌಲ್ಯ
ನೈಕಾ ಸಂಸ್ಥೆ ಪ್ರಾರಂಭಗೊಂಡ ಕೆಲವೇ ವರ್ಷಗಳಲ್ಲಿ ಭಾರೀ ಯಶಸ್ಸು ಗಳಿಸುತ್ತದೆ. ಫಾಲ್ಗುಣಿ ನಾಯರ್ ನೈಕಾ ಸಂಸ್ಥೆಯನ್ನು ಪ್ರಾರಂಭಿಸುವ ಸಮಯದಲ್ಲಿ ಆನ್ ಲೈನ್ ಮೂಲಕ ಸೌಂದರ್ಯವರ್ಧಕಗಳನ್ನು ಖರೀದಿಸಲು ಯಾವುದೇ ಅವಕಾಶಗಳಿರಲಿಲ್ಲ. ಯಾವುದೇ ಆನ್ ಲೈನ್ ಸೌಂದರ್ಯವರ್ಧಕ ಕಂಪನಿಗಳು ಭಾರತದಲ್ಲಿ ಇರಲಿಲ್ಲ. 2023ನೇ ಹಣಕಾಸು ಸಾಲಿನಲ್ಲಿ ನೈಕಾದ ಆದಾಯ ಸುಮಾರು 5,144 ಕೋಟಿ ರೂ. ಇನ್ನು ಭಾರತದ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ಲಿಸ್ಟ್ ಆದ ಮೊದಲ ಮಹಿಳಾ ಉದ್ಯಮಿಯ ಕಂಪನಿ ಎಂಬ ಹೆಗ್ಗಳಿಕೆಗೆ ಕೂಡ ನೈಕಾ ಪಾತ್ರವಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.