ಉನ್ನತ ಹುದ್ದೆ ತೊರೆದು ಚಹಾ ಮಾರಲು ಪ್ರಾರಂಭಿಸಿದ ಐಐಟಿ ಪದವೀಧರ, ಈಗ ಈತನ ಸಂಸ್ಥೆ ಮೌಲ್ಯ 2,050 ಕೋಟಿ!

By Suvarna News  |  First Published Jan 23, 2024, 12:12 PM IST

ಉದ್ಯಮ ರಂಗದಲ್ಲಿ ವಿಭಿನ್ನ ಆಲೋಚನೆಗಳು ಯಶಸ್ಸು ಕಾಣುತ್ತವೆ ಅನ್ನೋದಕ್ಕೆ ಚಯೋಸ್ ಸಂಸ್ಥಾಪಕ ನಿತಿನ್ ಸಲುಜ ಉತ್ತಮ ನಿದರ್ಶನ. ಚಹಾ ಕೆಫೆ ಪ್ರಾರಂಭಿಸಿ ಅದನ್ನು 2050 ಕೋಟಿ ರೂ. ಮೌಲ್ಯದ ಬ್ರ್ಯಾಂಡ್ ಆಗಿ ರೂಪಿಸಿರುವ ನಿತಿನ್ ಅವರ ಸಾಧನೆ ಹಲವರಿಗೆ ಪ್ರೇರಣೆ. 


Business Desk: ಸಾಧಿಸುವ ಮನಸ್ಸಿದ್ದರೆ ಏನೋ ಬೇಕಾದರೂ ಮಾಡಬಹುದು. ಇದಕ್ಕೆ 'ಚಾಯೋಸ್' ಸ್ಥಾಪಕ ನಿತಿನ್ ಸಲುಜ ಅತ್ಯುತ್ತಮ ನಿದರ್ಶನ. ನಿತಿನ್ ಸಲುಜ ಪ್ರತಿಷ್ಠಿತ ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಹಳೆಯ ವಿದ್ಯಾರ್ಥಿ. ದೆಹಲಿಯ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ನಿತಿನ್ ಸಲುಜ ಬಾಲ್ಯದಿಂದಲೇ ಕಠಿಣ ಪರಿಶ್ರಮ ಹಾಗೂ  ಬದ್ಧತೆಯನ್ನು ಮೈಗೂಡಿಸಿಕೊಂಡವರು. ಜೀವನದಲ್ಲಿ ಹಲವು ಸವಾಲುಗಳು ಎದುರಾಗಿದ್ದರೂ ಅವೆಲ್ಲವನ್ನೂ ಎದುರಿಸಿ ಮುನ್ನಡೆಯಬಹುದು ಎಂಬುದನ್ನು ನಿತಿನ್ ಸಲುಜ ಸಾಧಿಸಿ ತೋರಿಸಿದ್ದಾರೆ. ಅಮೆರಿಕದಲ್ಲಿನ ಉನ್ನತ ಹುದ್ದೆ ತೊರೆದು ಭಾರತಕ್ಕೆ ಬಂದ ಅವರು, ಸ್ವಂತ ಉದ್ಯಮ ಪ್ರಾರಂಭಿಸಲು ಸಾಕಷ್ಟು ಶ್ರಮಪಟ್ಟರು. ಚಹಾ ಉದ್ಯಮ ಪ್ರಾರಂಭಿಸಿದ ಅವರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದರೂ ಅದರಲ್ಲಿ ಯಶಸ್ಸು ಕಂಡರು. ಇಂದು ಅವರ ಟೀ ಬ್ರ್ಯಾಂಡ್ ಚಾಯೋಸ್ ಸಂಸ್ಥೆ ಆದಾಯ 2051 ಕೋಟಿ ರೂ.

ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದವರು ಕೂಡ ದೊಡ್ಡ ಕನಸು ಕಾಣುವ ಜೊತೆಗೆ ಅದನ್ನು ಹೇಗೆ ನನಸು ಮಾಡಿಕೊಳ್ಳಬಹುದು ಎಂಬುದಕ್ಕೆ ನಿತಿನ್ ಸಲುಜ ಸಾಕ್ಷಿ. ಓದಿನಲ್ಲಿ ಸಾಕಷ್ಟು ಮುಂದಿದ್ದ ನಿತಿನ್ ಪ್ರತಷ್ಟಿತ ಮುಂಬೈ ಐಐಟಿಯಲ್ಲಿ ಸೀಟು ಗಿಟ್ಟಿಸಿಕೊಳ್ಳುವಲ್ಲಿ ಸಫಲರಾಗುತ್ತಾರೆ. ಇಂಜಿನಿಯರಿಂಗ್ ಪದವಿ ಮುಗಿದ ಬಳಿಕ ಅಮೆರಿಕದಲ್ಲಿ ಅಧಿಕ ವೇತನದ ಉದ್ಯೋಗ ಕೂಡ ಸಿಗುತ್ತದೆ. ಆದರೆ, ನಿತಿನ್ ಅವರೊಳಗೊಬ್ಬ ಉದ್ಯಮಿ ಜನ್ಮ ತಾಳಿದ್ದ. ಹೀಗಾಗಿ ಸ್ವಂತ ಉದ್ಯಮ ಸ್ಥಾಪಿಸುವ ಕನಸು ಅವರನ್ನು ಅಮೆರಿಕದ ಉನ್ನತ ಹುದ್ದೆ ತೊರೆದು ಭಾರತಕ್ಕೆ ಹಿಂತಿರುಗುವಂತೆ ಮಾಡಿತು.

Tap to resize

Latest Videos

ಪದವಿ ಇಲ್ಲ.. ಜೇಬಿನಲ್ಲಿ ಐವತ್ತೇ ರೂಪಾಯಿ ಇದ್ರೂ 10,000 ಕೋಟಿ ವ್ಯವಹಾರ ನಡೆಸಿದ ವ್ಯಕ್ತಿ

ಚಾಯೋಸ್ ಪ್ರಾರಂಭ
ನಿತಿನ್ ಸಲುಜ ತನ್ನ ಕಾಲೇಜು ಸ್ನೇಹಿತ ರಾಘವ್ ವರ್ಮಾ ಅವರ ಜೊತೆಗೆ ಸೇರಿಕೊಂಡು 2012ರಲ್ಲಿ 'ಚಾಯೋಸ್' ಪ್ರಾರಂಭಿಸಿದರು. ಇದು ಚಹಾ-ಕೇಂದ್ರೀಕೃತ ಕೆಫೆ ಆಗಿತ್ತು. ಇದು ಭಾರತೀಯರಿಗೆ ಅವರ ನಿತ್ಯದ ಚಹಾದ ಸ್ವಾದದಲ್ಲಿ ದೊಡ್ಡ ಬದಲಾವಣೆ ತರುವ ಗುರಿ ಹೊಂದಿತ್ತು. ಸಂಪ್ರದಾಯವನ್ನು ಹೊಸತನದ ಜೊತೆಗೆ ಸೇರಿಸೋದು ಚಾಯೋಸ್ ಉದ್ದೇಶ. ಆಧುನಿಕ ಪ್ಲೇಟ್ ಗೆ ಹೊಂದಿಕೆಯಾಗುವ ಚಹಾವನ್ನು ಈ ಸಂಸ್ಥೆ ಗ್ರಾಹಕರಿಗೆ ನೀಡಲು ಪ್ರಾರಂಭಿಸಿತು.

ಹೊಸ ಸ್ವಾದದ ಚಹಾ
ಅನೇಕ ಟೀ ಕೆಫೆಗಳಿದ್ದರೂ ಚಾಯೋಸ್ ಅವೆಲ್ಲದರ ಮಧ್ಯೆ ಯಶಸ್ಸು ಕಾಣಲು ಮುಖ್ಯ ಕಾರಣ ಚಹಾದ ಕಡೆಗೆ ನಿತಿನ್ ಅವರಿಗಿದ್ದ ವಿಭಿನ್ನ ದೃಷ್ಟಿಕೋನ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ನಿತಿನ್ ಗ್ರಾಹಕರಿಗೆ ಮಸಾಲೆ, ಹರ್ಬ್ಸ್ ಹಾಗೂ ವಿವಿಧ ಸ್ವಾದಗಳ ಚಹಾಗಳನ್ನು ಒದಗಿಸಲು ಒತ್ತು ನೀಡಿದರು. ಗ್ರಾಹಕರ ಅಭಿರುಚಿಗೆ ತಕ್ಕಂತೆ 'ಕಸ್ಟಮೈಸ್ಡ್' ಚಹಾಗಳನ್ನು ಚಯೋಸ್ ಗ್ರಾಹಕರಿಗೆ ನೀಡುತ್ತಿದೆ. ಈ ಗ್ರಾಹಕ ಕೇಂದ್ರೀಕೃತ ದೃಷ್ಟಿಕೋನ ದೊಡ್ಡ ಪ್ರಮಾಣದಲ್ಲಿ ಗ್ರಾಹಕರನ್ನು ಸೆಳೆಯಲು ಕಾರಣವಾಯಿತು. ಇದು ಚಾಯೋಸ್ ಅನ್ನು ದೇಶದ ಜನಪ್ರಿಯ ಚಹಾ ಬ್ರ್ಯಾಂಡ್ ಆಗಿ ಕೂಡ ರೂಪಿಸಿತು. 

ಸವಾಲುಗಳೇ ಗೆಲುವಿನ ಮೆಟ್ಟಿಲಾದವು
ಚಾಯೋಸ್ ಪ್ರಾರಂಭಿಸಿದಾಗ ನಿತಿನ್ ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ಆಗಲೇ ಚಹಾ ಮಾರುಕಟ್ಟೆಯಲ್ಲಿ ಅನೇಕ ಸಂಸ್ಥೆಗಳಿದ್ದ ಕಾರಣ ತೀವ್ರ ಪೈಪೋಟಿ ಎದುರಾಗಿತ್ತು. ಆದರೆ, ಗ್ರಾಹಕರ ಅಭಿರುಚಿಗೆ ತಕ್ಕದಾದ ಚಹಾಗಳನ್ನು ತಯಾರಿಸಿ ನೀಡುವ ನಿತಿನ್ ಅವರ ವಿನೂತನ ಯೋಚನೆ ಉದ್ಯಮವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸಿತು. ಭಾರತದ ಪ್ರಮುಖ ನಗರಗಳಲ್ಲಿ ಈ ಬ್ರ್ಯಾಂಡ್ ಕೆಲವೇ ಸಮಯದಲ್ಲಿ ವಿಸ್ತರಣೆಗೊಂಡಿತು. 

ವ್ಯವಹಾರದಲ್ಲಿ 17 ಸಾರಿ ಸೋತರೂ ಎದ್ದು ನಿಂತ ವ್ಯಕ್ತಿ, ಈಗ ಕಂಪನಿ ಮೌಲ್ಯ 40 ಸಾವಿರ ಕೋಟಿ!

2051 ಕೋಟಿ ಬ್ರ್ಯಾಂಡ್ ನಿರ್ಮಿಸಿದ್ದು ಹೇಗೆ?
ಸೂಕ್ತ ಸಹಭಾಗಿತ್ವ, ಮಾರುಕಟ್ಟೆ ಟ್ರೆಂಡ್ ಗಳನ್ನು ಅರ್ಥೈಸಿಕೊಂಡಿರೋದು ಹಾಗೂ ಗುಣಮಟ್ಟದ ವಿಷಯದಲ್ಲಿ ಯಾವುದೇ ರಾಜೀ ಮಾಡಿಕೊಳ್ಳದೆ, ನಿತಿನ್ ಸಲುಜ ಚಯೋಸ್ ಅನ್ನು  2051 ಕೋಟಿ ಮೌಲ್ಯದ ಬ್ರ್ಯಾಂಡ್ ಆಗಿ ರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಐಐಟಿ ಹಳೆಯ ವಿದ್ಯಾರ್ಥಿ ಯಶೋಗಾಥೆ ಟೀ ಉದ್ಯಮದಲ್ಲಿ ಹೊಸ ಅಲೆಯನ್ನು ಹುಟ್ಟಿ ಹಾಕಿರೋದು ಮಾತ್ರವಲ್ಲ, ಅನೇಕ ಬ್ಯುಸಿನೆಸ್ ಸ್ಕೂಲ್ ಗಳಲ್ಲಿ ಕೇಸ್ ಸ್ಟಡಿಯ ವಿಷಯ ಕೂಡ ಆಗಿದೆ. 

click me!