
Business Desk: ಸಾಮಾಜಿಕ ಜಾಲತಾಣದಲ್ಲಿ ಮುಖೇಶ್ ಬನ್ಸಾಲ್ ಸದ್ಯ ಅತ್ಯಂತ ಜನಪ್ರಿಯ ಉದ್ಯಮಿ. ಇದಕ್ಕೆ ಕಾರಣ ಅವರು ಇತರ ಉದ್ಯಮಿಗಳೊಂದಿಗೆ ನಡೆಸುತ್ತಿರುವ ಸರಣಿ ಸಂದರ್ಶನಗಳು ಅಥವಾ ಪಾಡ್ ಕಾಸ್ಟ್ ಗಳು. ಬನ್ಸಾಲ್ ಪಾಡ್ ಕಾಸ್ಟ್ ದೊಡ್ಡ ಯಶಸ್ಸು ಕಂಡಿದೆ. ಹಾಗಂದ ಮಾತ್ರಕ್ಕೆ ಈ ಯಶಸ್ಸಿನಿಂದಲೇ ಅವರು ಉದ್ಯಮ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಭಾವಿಸಿದರೆ ಖಂಡಿತಾ ತಪ್ಪು. ದೇಶದ ಅತ್ಯಂತ ಯಶಸ್ವಿ ಉದ್ಯಮಿಗಳಲ್ಲಿ ಮುಖೇಶ್ ಬನ್ಸಾಲ್ ಕೂಡ ಒಬ್ಬರು. 18000 ಕೋಟಿ ರೂ.ಗಿಂತಲೂ ಅಧಿಕ ಮೊತ್ತದ ಸ್ಟಾರ್ಟ್ ಅಪ್ ಅನ್ನು ಬನ್ಸಾಲ್ ಸ್ಥಾಪಿಸಿ ಯಶಸ್ಸು ಸಾಧಿಸಿದ್ದಾರೆ. ಐಐಟಿ ಕಾನ್ಪುರದಿಂದ ಪದವಿ ಪಡೆದಿರುವ ಬನ್ಸಾಲ್, ಪ್ರಾರಂಭದಲ್ಲಿ ಸ್ವಂತ ಉದ್ಯಮಕ್ಕೆ ಕೈಹಾಕುವ ಸಾಹಸಕ್ಕೆ ಮುಂದಾಗಿರಲಿಲ್ಲ. ಪದವಿ ಬಳಿಕ ಚಿಕಾಗೋದಲ್ಲಿ ಡೆಲೊಟ್ಟೆ ಸಂಸ್ಥೆಯಲ್ಲಿ ವೃತ್ತಿ ಪ್ರಾರಭಿಸಿದರು. ಆ ನಂತರ ಸಿಲಿಕಾನ್ ವ್ಯಾಲಿಯಲ್ಲಿ ಕೆಲವು ಕಂಪನಿಗಳಲ್ಲಿ ಕಾರ್ಯನಿರ್ವಹಿಸುವ ಮೂಲಕ ಒಂದಿಷ್ಟು ಅನುಭವ ಪಡೆದರು. ಈ ಎಲ್ಲ ಅನುಭವಗಳನ್ನು ಪಡೆದ ಬಳಿಕವೇ ಅವರು ಸ್ವಂತ ಉದ್ಯಮ ಪ್ರಾರಂಭಿಸಲು ಮುಂದಾಗಿದ್ದು.
ದೊಡ್ಡ ಯಶಸ್ಸು ಕಂಡ ಮಿಂತ್ರಾ
ಆನ್ ಲೈನ್ ಶಾಪಿಂಗ್ ಪ್ರಿಯರಿಗೆ ಮಿಂತ್ರಾ ಹೆಸರು ಗೊತ್ತೇ ಇರುತ್ತದೆ. ಇಂದು ಮಿಂತ್ರಾ ಭಾರತದ ಜನಪ್ರಿಯ ಆನ್ ಲೈನ್ ಬಟ್ಟೆ ಖರೀದಿ ತಾಣವಾಗಿದೆ. ಮುಖೇಶ್ ಬನ್ಸಾಲ್ ಮಿಂತ್ರಾದ ಸಂಸ್ಥಾಪಕರು. 2007ರಲ್ಲಿ ಅಶುತೋಷ್ ಲವನಿಯ ಹಾಗೂ ವಿನೀತ್ ಸಕ್ಸೆನ್ ಅವರ ಜೊತೆಗೆ ಸೇರಿ ಮಿಂತ್ರಾ ಸ್ಥಾಪಿಸಿದರು. ಪ್ರಾರಂಭದಲ್ಲಿ ಗಿಫ್ಟಿಂಗ್ ಪ್ಲಾಟ್ ಫಾರ್ಮ್ ಆಗಿ ಮಿಂತ್ರಾ ಆರಂಭಿಸಲಾಯಿತು. ಆದರೆ, ಕೆಲವೇ ವರ್ಷಗಳಲ್ಲಿ ಇದು ಭಾರತದ ಅತ್ಯಂತ ಜನಪ್ರಿಯ ಫ್ಯಾಷನ್ ಇ-ಕಾಮರ್ಸ್ ತಾಣವಾಗಿ ರೂಪುಗೊಂಡಿತು.
ಮಿಂತ್ರಾ ಜನಪ್ರಿಯತೆ ಗಳಿಸುತ್ತಿದ್ದಂತೆ ಇತರ ದೊಡ್ಡ ಇ-ಕಾಮರ್ಸ್ ತಾಣಗಳು ಇದರತ್ತ ನೋಡಲು ಪ್ರಾರಂಭಿಸಿದವು. ಇದರ ಪರಿಣಾಮವಾಗಿ ಫ್ಲಿಪ್ ಕಾರ್ಟ್ ಮಿಂತ್ರಾವನ್ನು 2,730 ಕೋಟಿ ರೂ. ಬೃಹತ್ ಮೊತ್ತಕ್ಕೆ ಖರೀದಿಸಿತು. ಈ ಪ್ರಕ್ರಿಯೆ ಬಳಿಕ ಮುಖೇಶ್ ಬನ್ಸಾಲ್ ಫ್ಲಿಪ್ ಕಾರ್ಟ್ ಕಾಮರ್ಸ್ ಹಾಗೂ ಜಾಹೀರಾತು ಉದ್ಯಮ ವಿಭಾಗದ ಮುಖ್ಯಸ್ಥರಾದರು. ಅಲ್ಲದೆ, ಈ ಇ-ಕಾಮರ್ಸ್ ಕಂಪನಿ 41,364 ಕೋಟಿ ರೂ.ಗಿಂತಲೂ ಅಧಿಕ ಆದಾಯ ಗಳಿಸಲು ನೆರವು ನೀಡಿದರು.
ಕ್ಯುರ್ ಫಿಟ್ ಕೂಡ ಯಶಸ್ವಿ
ಮುಖೇಶ್ ಬನ್ಸಾಲ್ ಅವರ ಉದ್ಯಮ ಪ್ರಯಾಣ ಮಿಂತ್ರಾಕ್ಕೆ ನಿಲ್ಲಲಿಲ್ಲ. ಮೊದಲ ಪ್ರಯತ್ನದಲ್ಲೇ ದೊಡ್ಡ ಯಶಸ್ಸು ಕಂಡ ಬನ್ಸಾಲ್, ಇನ್ನೊಂದು ಪ್ರಯತ್ನಕ್ಕೆ ಕೈಹಾಕಲು ಹಿಂದೆಮುಂದೆ ನೋಡಲಿಲ್ಲ. ಹೆಲ್ತ್ ಹಾಗೂ ಫಿಟ್ನೆಸ್ ಕಂಪನಿ ಕ್ಯುರ್ ಫಿಟ್ ಪ್ರಾರಂಭಿಸಿದರು. ಕ್ಯುರ್ ಫಿಟ್ ಅತಿ ಕಡಿಮೆ ಅವಧಿಯಲ್ಲಿ ತನ್ನ ಗಾತ್ರ ಹಿಗ್ಗಿಸಿಕೊಂಡಿತು. ಅಷ್ಟೇ ಅಲ್ಲ, ಈಟ್ ಫಿಟ್ ಹಾಗೂ ಕಲ್ಟ್ ಫಿಟ್ ಅಂತಹ ಬ್ರ್ಯಾಂಡ್ ಗಳನ್ನು ಕೂಡ ಸೇರಿಸಿಕೊಂಡಿತು. ಪ್ರಸ್ತುತ ಇದು ಭಾರತ ಅತ್ಯಂತ ಯಶಸ್ವಿ ಜಿಮ್ ಚೈನ್ ಗಳಲ್ಲಿ ಒಂದಾಗಿದೆ. ದೇಶಾದ್ಯಂತ ನೂರಕ್ಕೂ ಅಧಿಕ ಸ್ಥಳಗಳಲ್ಲಿ ಶಾಖೆಗಳನ್ನು ಹೊಂದಿದೆ.
ಮುಖೇಶ್ ಬನ್ಸಾಲ್ ಅವರ ಜಿಮ್ ಚೈನ್ ಯಶಸ್ಸು ಟಾಟಾ ಡಿಜಿಟಲ್ ಕಣ್ಣಿಗೂ ಬಿತ್ತು. ಪರಿಣಾಮ ಟಾಟಾ ಡಿಜಿಟಲ್ ಕ್ಯುರ್ ಫಿಟ್ ಹಾಗೂ ಕಲ್ಟ್ ಫಿಟ್ ನಲ್ಲಿ ಹೂಡಿಕೆ ಮಾಡುವ ಮೂಲಕ ಅತೀದೊಡ್ಡ ಹೂಡಿಕೆದಾರ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಇದು ಈ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡು ಹೋಗಿದೆ. ಟಾಟಾ ಡಿಜಿಟಲ್ ಕ್ಯುರ್ ಫಿಟ್ ಹಾಗೂ ಕಲ್ಟ್ ಫಿಟ್ ನಲ್ಲಿ ಒಟ್ಟು 620 ಕೋಟಿ ರೂ. ಹೂಡಿಕೆ ಮಾಡಿದೆ. ಈ ಮೂಲಕ ಕಲ್ಟ್ ಫಿಟ್ ಹಾಗೂ ಕ್ಯುರ್ ಫಿಟ್ ಒಟ್ಟು ಮೌಲ್ಯ 12,411 ಕೋಟಿ ರೂ.ಗೆ ಏರಿಕೆಯಾಗಿದೆ. ಇನ್ನು ಮುಖೇಶ್ ಬನ್ಸಾಲ್ ಅವರ ನಿವ್ವಳ ಸಂಪತ್ತು 4200 ಕೋಟಿ ರೂ. ಇದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.