
Business Desk:2022-23ನೇ ಹಣಕಾಸು ವರ್ಷ ಮಾರ್ಚ್ 31ಕ್ಕೆ ಮುಕ್ತಾಯವಾಗಲಿದೆ. ಹೀಗಿರುವಾಗ ನಿಮ್ಮ ಉದ್ಯಮ ಹಾಗೂ ಆದಾಯಕ್ಕೆ ಸಂಬಂಧಿಸಿ ಕೆಲವು ಪ್ರಮುಖ ಕೆಲಸಗಳನ್ನು ಈ ತಿಂಗಳಲ್ಲಿ ಮಾಡಿ ಮುಗಿಸಲೇಬೇಕಾದ ಅನಿವಾರ್ಯತೆಯಿದೆ. ನಿರ್ದಿಷ್ಟ ಗಡುವಿನೊಳಗೆ ಈ ಕೆಲಸಗಳನ್ನು ಮಾಡಿ ಮುಗಿಸದಿದ್ರೆ ದಂಡ ಪಾವತಿಸುವ ಜೊತೆಗೆ ಸಮಸ್ಯೆಗಳನ್ನು ಕೂಡ ಎದುರಿಸಬೇಕಾಗುತ್ತದೆ. ಹೊಸ ಹಣಕಾಸು ವರ್ಷಕ್ಕೆ ಪಾದರ್ಪಣೆ ಮಾಡುವ ಮುನ್ನ 2022-23ನೇ ಸಾಲಿನ ತೆರಿಗೆ ಉಳಿತಾಯದ ಹೂಡಿಕೆಗಳನ್ನು ಮಾಡಿ ಮುಗಿಸೋದು ಅಗತ್ಯ. ಇದರಿಂದ ತೆರಿಗೆ ಭಾರ ತಗ್ಗಿ ಹಣ ಉಳಿತಾಯವಾಗುತ್ತದೆ. ಇನ್ನು ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಲು ಮಾ.31 ಅಂತಿಮ ಗಡುವಾಗಿದೆ. ಇದು ಕೂಡ ಬಹುಮುಖ್ಯ ಕೆಲಸವಾಗಿದ್ದು, ನೀವಿನ್ನು ಮಾಡಿಲ್ಲವಾದ್ರೆ ತಕ್ಷಣ ಮಾಡಿ ಮುಗಿಸಿ. ಇನ್ನು ಅಡ್ವಾನ್ಸ್ ತೆರಿಗೆ ಪಾವತಿ ಗಡುವು ಕೂಡ ಈ ತಿಂಗಳಿನಲ್ಲೇ ಇದೆ. ಈ ಎಲ್ಲ ಕೆಲಸಗಳನ್ನು ಈ ತಿಂಗಳಲ್ಲಿ ಮಾಡಿ ಮುಗಿಸದಿದ್ರೆ ಜೇಬಿನ ಮಲಿನ ಹೊರೆ ಹೆಚ್ಚುವ ಜೊತೆಗೆ ಮುಂದಿನ ದಿನಗಳಲ್ಲಿ ವಿವಿಧ ಕೆಲಸಗಳಿಗೆ ಅಡಚಣೆ ಕೂಡ ಎದುರಾಗಲಿದೆ.
1.ಪ್ಯಾನ್- ಆಧಾರ್ ಜೋಡಣೆ: ಆದಾಯ ತೆರಿಗೆ ಇಲಾಖೆ ಆಧಾರ್ ಜೊತೆಗೆ ನಿಮ್ಮ ಕಾಯಂ ಖಾತೆ ಸಂಖ್ಯೆಯನ್ನು (ಪ್ಯಾನ್ ) ಮಾ.31ರೊಳಗೆ ಕಡ್ಡಾಯವಾಗಿ ಜೋಡಣೆ ಮಾಡುವಂತೆ ತಿಳಿಸಿದೆ. ಈಗ ನೀವು ಆಧಾರ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಮಾಡಲು 1000ರೂ. ದಂಡ ಪಾವತಿಸಬೇಕು. ಒಂದು ವೇಳೆ ಅಂತಿಮ ಗಡುವಿನೊಳಗೆ ಆಧಾರ್-ಪ್ಯಾನ್ ಲಿಂಕ್ ಮಾಡದಿದ್ರೆ ಏಪ್ರಿಲ್ 1 ರಿಂದ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳಲಿದೆ. ಒಮ್ಮೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಂಡರೆ ನಿಮಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡಲು ಸಾಧ್ಯವಾಗೋದಿಲ್ಲ.ಅಲ್ಲದೆ, ಬ್ಯಾಂಕ್ ಖಾತೆ ತೆರೆಯಲು, ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಲು ಹಾಗೂ ಡಿಮ್ಯಾಟ್ ಖಾತೆ ತೆರೆಯಲು ಸಾಧ್ಯವಾಗೋದಿಲ್ಲ. ಬ್ಯಾಂಕಿಂಗ್ ಸೇವೆಗಳನ್ನು ಪಡೆಯಲು ಕೂಡ ತೊಂದರೆ ಎದುರಾಗಲಿದೆ.
ಒಂದೇ ತಿಂಗಳಲ್ಲಿ ಬರೀ ಎರಡು ಷೇರುಗಳಿಂದ 650 ಕೋಟಿ ರೂ. ಗಳಿಸಿದ ರೇಖಾ ಜುಂಜುನ್ ವಾಲಾ!
2. ಅಡ್ವಾನ್ಸ್ ಟ್ಯಾಕ್ಸ್ ಪಾವತಿ: ಆದಾಯ ತೆರಿಗೆ ಇಲಾಖೆ ಪ್ರಕಾರ ಅಡ್ವಾನ್ಸ್ ತೆರಿಗೆ ಅಂತಿಮ ಕಂತಿನ ಪಾವತಿಗೆ ಮಾ.15 ಕೊನೆಯ ದಿನಾಂಕ. ಒಂದು ವೇಳೆ ಅಡ್ವಾನ್ಸ್ ತೆರಿಗೆ ಪಾವತಿಯ ಕೊನೆಯ ದಿನ ಬ್ಯಾಂಕಿಗೆ ರಜೆಯಿದ್ರೆ ಅದರ ಮರುದಿನ ಪಾವತಿ ಮಾಡಲು ಅವಕಾಶವಿದೆ. ಒಂದು ವೇಳೆ ಅಡ್ವಾನ್ಸ್ ತೆರಿಗೆ ಪಾವತಿಸಲು ತೆರಿಗೆದಾರರು ವಿಫಲರಾದ್ರೆ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 234B ಹಾಗೂ 243C ಅಡಿಯಲ್ಲಿ ದಂಡ ವಿಧಿಸಲಾಗುತ್ತದೆ.
3.ತೆರಿಗೆ ಉಳಿತಾಯ ಹೂಡಿಕೆಗಳು: 2022-23ನೇ ಆರ್ಥಿಕ ಸಾಲಿನಲ್ಲಿ ತೆರಿಗೆ ಉಳಿತಾಯದ ಹೂಡಿಕೆಗೆ 2023ರ ಮಾ.31 ಅಂತಿಮ ಗಡುವು ಆಗಿದೆ. ತೆರಿಗೆ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡೋದ್ರಿಂದ ತೆರಿಗೆ ಭಾರ ತಗ್ಗಿ ಹೆಚ್ಚಿನ ಹಣ ಉಳಿತಾಯವಾಗುತ್ತದೆ. ಒಂದು ವೇಳೆ ನೀವು ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80C ಅಥವಾ 80D ಅಡಿಯಲ್ಲಿ ತೆರಿಗೆ ಪ್ರಯೋಜನ ಪಡೆಯಲು ಯಾವುದೇ ಹೂಡಿಕೆ ಮಾಡದಿದ್ರೆ ಮಾ. 31ರೊಳಗೆ ಮಾಡಿ ಮುಗಿಸಿ.
ಹಿಂಡೆನ್ ಬರ್ಗ್ ವರದಿಯಿಂದ ಇಲ್ಲೇನೂ ಆಗಿಲ್ಲ;ಗೌತಮ್ ಅದಾನಿ ಮೇಲೆ ಹೆಚ್ಚಿದ ಆಸ್ಟ್ರೇಲಿಯಾದ ಒಲವು?
4.ಪ್ರಧಾನಮಂತ್ರಿ ವಯೋ ವಂದನಾ ಯೋಜನೆ (PMVVY):ಇದು ವಿಮೆ ಹಾಗೂ ಪಿಂಚಣಿ ಎರಡನ್ನೂ ಒಳಗೊಂಡಿರುವ ಯೋಜನೆಯಾಗಿದ್ದು, ಹಿರಿಯ ನಾಗರಿಕರಿಗೆ ಆರ್ಥಿಕ ಭದ್ರತೆ ಒದಗಿಸುತ್ತದೆ. ಭಾರತೀಯ ಜೀವ ವಿಮಾ ನಿಗಮ (ಎಲ್ ಐಸಿ) ಈ ಪಿಂಚಣಿ ಯೋಜನೆಯನ್ನು ಒದಗಿಸುತ್ತಿದೆ. ಹಿರಿಯ ನಾಗರಿಕರು ಇದರಲ್ಲಿ 15ಲಕ್ಷ ರೂ. ತನಕ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡಲು 2023ರ ಮಾ.31ರ ತನಕ ಅವಕಾಶವಿದೆ. 10 ವರ್ಷಗಳ ಅವಧಿಗೆ ಪಿಎಂವಿವಿವೈ ಶೇ.7.4ರಷ್ಟು ಬಡ್ಡಿದರ ನೀಡುತ್ತದೆ. ಪಿಂಚಣಿಯನ್ನು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕವಾಗಿ ಪಡೆಯಲು ಅವಕಾಶವಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.