ಕರ್ಸನ್‌ಭಾಯ್ ಪಟೇಲ್, ಒಬ್ಬ ಸಾಮಾನ್ಯ ಪ್ರಯೋಗಶಾಲಾ ತಂತ್ರಜ್ಞನಿಂದ ಭಾರತದ ಪ್ರಮುಖ ಉದ್ಯಮಿಯಾಗಿ ಬೆಳೆದ ಕಥೆ. 1969 ರಲ್ಲಿ 15 ಸಾವಿರ ರೂಪಾಯಿ ಸಾಲದಿಂದ ಆರಂಭವಾದ ನಿರ್ಮಾ, ಇಂದು 23,000 ಕೋಟಿ ರೂಪಾಯಿಗೂ ಹೆಚ್ಚು ವಹಿವಾಟು ನಡೆಸುವ ಉದ್ಯಮವಾಗಿ ಬೆಳೆದಿದೆ.
ಬೆಂಗಳೂರು (ಅ.28): ಕರ್ಸನ್ ಭಾಯ್ ಪಟೇಲ್ ಅಂದರೆ ಭಾರತದ ಉದ್ಯಮ ಕ್ಷೇತ್ರದಲ್ಲಿ ವಿಶ್ವಾಸ ಹಾಗೂ ಹೋರಾಟದ ಪ್ರತೀಕ. 1945 ರಲ್ಲಿ ಗುಜರಾತ್‌ನ ರುಪ್ಪೂರ್‌ನಲ್ಲಿ ಜನಿಸಿದ ಕರ್ಸನ್‌ಭಾಯ್ ಪಟೇಲ್ ಅವರ ಕುಟುಂಬದ ಸ್ಥಿತಿ ಉತ್ತಮವಾಗಿರಲಿಲ್ಲ. ಮೂರುಹೊತ್ತಿನ ಊಟಕ್ಕೆ ಪರದಾಡುವಂಥ ಸ್ಥಿತಿಯಲ್ಲಿದ್ದ ಕರ್ಸನ್ ಭಾಯ್ ಪಟೇಲ್ ಕಷ್ಟದಲ್ಲಿಯೇ ತಮ್ಮ ಕೆಮಿಸ್ಟ್ರಿ ಶಿಕ್ಷಣವನ್ನು ಮುಗಿಸಿದ್ದರು. ಇದಕ್ಕಾಗಿ ಸರ್ಕಾರಿ ಲ್ಯಾಬ್‌ನಲ್ಲಿ ಪ್ರಯೋಗಶಾಲೆಯ ತಂತ್ರಜ್ಞನಾಗಿ ಕೆಲಸ ಪಡೆದುಕೊಂಡರು. ಸರ್ಕಾರಿ ಕೆಲಸ, ನೆಮ್ಮದಿಯ ಜೀವನ ಅಂದುಕೊಳ್ಳುವ ಹೊತ್ತಿನಲ್ಲಿ ಕರ್ಸನ್ ಭಾಯ್ ಪಟೇಲ್ ಮನಸ್ಸು ಮಾತ್ರ ಸುಮ್ಮನಿರಲಿಲ್ಲ. ತಮ್ಮ ಬದುಕು ಇದರಲ್ಲಿಲ್ಲ ಎನ್ನುವುದನ್ನು ಬೇಗನೆ ಅರಿತುಕೊಂಡರು. ತಮ್ಮಲ್ಲಿದ್ದ ಉದ್ಯಮಿಯಾಗುವ ಕನಸು ಹಾಗೂ ಸುರಕ್ಷಿತ ಭವಿಷ್ಯವನ್ನು ನಿರ್ಮಾಣ ಮಾಡುವ ಅವರ ಮಹತ್ವಾಕಾಂಕ್ಷೆ ಮುಂದುವರಿಯಿತು.
ಬದುಕು ಬದಲಿಸಿದ ನಿರ್ಮಾ: 1969ರ ಹೊತ್ತಿಗೆ ಕರ್ಸನ್ ಭಾಯ್‌ಗೆ ಮಾರುಕಟ್ಟೆಯಲ್ಲಿ ಇರುವ ಒಂದು ಅಂತರವನ್ನು ಗಮನಿಸಿದರು. ದೇಶದಲ್ಲಿ ಅದಾಗಲೇ ಡಿಟರ್ಜಂಟ್‌ಗಳು ಇದ್ದವು. ಆದರೆ, ಸಾಮಾನ್ಯ ಗ್ರಾಹಕನಿಗೆ ಈ ಡಿಟರ್ಜಂಟ್‌ಗಳನ್ನು ಖರೀದಿಸಲು ಸಾಧ್ಯವಾಗ್ತಾ ಇರಲಿಲ್ಲ. ಕಡಿಮೆ ಬೆಲೆಗೆ ಎಲ್ಲಾ ಜನರಿಗೂ ಸಿಗುವಂಥ ಡಿಟರ್ಜಂಟ್ ಪೌಡರ್ ಉದ್ಯಮ ಆರಂಭಿಸಬೇಕು ಎಂದಾಗ ಹುಟ್ಟಿದ್ದೇ ನಿರ್ಮಾ. ಆ ಹಂತದಲ್ಲಿ 15 ಸಾವಿರ ರೂಪಾಯಿ ಸಾಲ ಪಡೆದುಕೊಂಡು, ಮನೆಯಲ್ಲಿದ್ದ ಮೂಲ ಪದಾರ್ಥಗಳನ್ನೇ ಬಳಸಿಕೊಂಡು ನಿರ್ಮಾ ತಯಾರಿಸಲು ಆರಂಭ ಮಾಡಿದ್ದರು.
ಜನರ ಬಳಿಗೆ ತಮ್ಮ ಡಿಟರ್ಜಂಟ್ ಮುಟ್ಟಬೇಕು ಎನ್ನುವ ಮಹದಾಸೆ ಮಾತ್ರವೇ ಅವರಲ್ಲಿತ್ತು. ಅದಕ್ಕಾಗಿ ನಿರ್ಮಾ ಪೌಡರ್‌ಗಳನ್ನು ತಮ್ಮದೇ ಬೈಸಿಕಲ್‌ನಲ್ಲಿ ಮನೆ ಮನೆಗೆ ಹೋಗಿ ಪರಿಚಯಿಸಲು ಆರಂಭಿಸಿದರು. ಕೈಗೆಟುಕುವ ದರ ಹಾಗೂ ಪರಿಣಾಮ ನೀಡುವ ಡಿಟರ್ಜಂಟ್ ಪೌಡರ್ ಎನ್ನುವ ಕಾರಣಕ್ಕೆ ಗ್ರಾಹಕರ ನಡುವೆ ಇದು ವ್ಯಾಪಕವಾಗಿ ಪ್ರಚಾರ ಪಡೆದುಕೊಂಡಿತು. ಕೆಲವೇ ವರ್ಷಗಳಲ್ಲಿ ಇದು ಮನೆಮನೆಯ ಹೆಸರಾಯಿತು. ಪ್ರತಿ ಕೆಜಿಗೆ 3 ರೂಪಾಯಿ ಇದ್ದ ನಿರ್ಮಾ, ಮಾರುಕಟ್ಟೆಯಲ್ಲಿ ಬಿರುಗಾಳಿ ಸೃಷ್ಟಿಸಿದ್ದು ಮಾತ್ರವಲ್ಲದೆ. ಭಾರತದಾದ್ಯಂತ ವೇಗವಾಗಿ ಜನಪ್ರಿಯತೆ ಪಡೆದುಕೊಂಡಿತು.
ಬೇಡಿಕೆ ಹೆಚ್ಚಾದಂತೆ, ಉತ್ಪಾದನೆಯನ್ನು ಹೆಚ್ಚಿಸಲು ಪಟೇಲ್ ಸಣ್ಣ ಉತ್ಪಾದನಾ ಘಟಕವನ್ನು ಬಾಡಿಗೆಗೆ ಪಡೆದರು. ನಿರ್ಮಾದ ಯಶಸ್ಸು ಸಾಬೂನುಗಳು, ಸೌಂದರ್ಯವರ್ಧಕಗಳು ಮತ್ತು ವೈಯಕ್ತಿಕ ಆರೈಕೆ ಉತ್ಪನ್ನಗಳಿಗೆ ಮತ್ತಷ್ಟು ವಿಸ್ತರಣೆ ಪಡೆದುಕೊಂಡಿತು. ಇಂದು, ನಿರ್ಮಾ ಲಿಮಿಟೆಡ್ 18,000ಕ್ಕೂ ಅಧಿಕ ಸಿಬ್ಬಂದಿಗಳೊಂದಿಗೆ ಕೆಲಸ ಮಾಡುತ್ತಿದೆ ಮತ್ತು ವಾರ್ಷಿಕ 7,000 ಕೋಟಿ ಆದಾಯವನ್ನು ಹೊಂದಿದೆ. ನಿರ್ಮಾ ಗ್ರೂಪ್‌ನ ಅಡಿಯಲ್ಲಿ, ಸಂಘಟಿತ ಸಂಸ್ಥೆಯು 23,000 ಕೋಟಿ ರೂಪಾಯಿಗಿಂತ ಹೆಚ್ಚಿನ ವಹಿವಾಟು ನಡೆಸುತ್ತದೆ.
undefined
ಭಾರತೀಯರು ಶ್ರೀಮಂತರನ್ನು ದ್ವೇಷ ಮಾಡೋದೇಕೆ? ಜೀರೋಧಾ ಸಂಸ್ಥಾಪಕ ನಿತಿನ್ ಕಾಮತ್ ಉತ್ತರ ಇದು!
ಕರ್ಸನ್‌ಭಾಯ್ ಪಟೇಲ್ ಅವರ ಸಣ್ಣ-ಪ್ರಮಾಣದ ಉದ್ಯಮಿಯಿಂದ ಮಹಾಉದ್ಯಮಿಗಳವರೆಗಿನ ಗಮನಾರ್ಹ ಪ್ರಯಾಣವು ಗಮನಕ್ಕೆ ಬರದೇ ಹೋಗಿಲ್ಲ. ಅವರು ಉದ್ಯೋಗ ರತ್ನ ಪ್ರಶಸ್ತಿ (1990), ಗುಜರಾತ್ ಉದ್ಯಮಿ ಪ್ರಶಸ್ತಿ (1998), ಮತ್ತು ಅರ್ನ್ಸ್ಟ್ ಮತ್ತು ಯಂಗ್ ಲೈಫ್ಟೈಮ್ ಅಚೀವ್ಮೆಂಟ್ ಪ್ರಶಸ್ತಿ (2006) ಮುಂತಾದ ಪ್ರತಿಷ್ಠಿತ ಪ್ರಶಸ್ತಿಗಳೊಂದಿಗೆ ಗೌರವಿಸಲ್ಪಟ್ಟಿದ್ದಾರೆ. ಇವರ ಜೀವನ ಭಾರತದಾದ್ಯಂತ ಅಸಂಖ್ಯಾತ ಮಹತ್ವಾಕಾಂಕ್ಷಿ ಉದ್ಯಮಿಗಳಿಗೆ ಸ್ಫೂರ್ತಿ ನೀಡಿದೆ.
ಝೆರೋಧಾ ಸಂಸ್ಥಾಪಕರ ನಿಜವಾದ ಸಂಬಳ ಎಷ್ಟು ನೋಡಿ: ನಿತಿನ್ ಕಾಮತ್ ಪತ್ನಿಗೂ ಸಿಗುತ್ತೆ ಕೋಟಿ ಕೋಟಿ ವೇತನ!
ನಿರ್ಮಾ ಹುಡುಗಿಯ ಕಥೆ: ತಮ್ಮ ಡಿಟರ್ಜಂಟ್ ಬ್ರ್ಯಾಂಡ್‌ಗೆ ಹಿರಿಯ ಮಗಳಾದ ನಿರುಪಮಾ ಹೆಸರನ್ನೇ ಬ್ರ್ಯಾಂಡ್‌ಗೆ ಇಟ್ಟರು. ಕಾರು ಅಪಘಾತದಲ್ಲಿ ಅಕಾಲಿಕ ಸಾವು ಕಂಡ ಮಗಳ ಚಿತ್ರವಲ್ಲೇ ಬ್ರ್ಯಾಂಡ್‌ನ ಪ್ಯಾಕೆಟ್ ಮೇಲೆ ಪ್ರಿಂಟ್ ಮಾಡಿದ್ದರು. ಶಾಲೆಯಿಂದ ಮನೆಗೆ ಬರುವ ಹಾದಿಯಲ್ಲಿ ನಿರುಪಮಾಗೆ ಕಾರು ಅಪಘಾತವಾಗಿ ಸಾವು ಕಂಡಿದ್ದರು. ಆದರೆ, 2006ರಿಂದ ನಿರ್ಮಾ ತನ್ನ ಲೋಗೋದಲ್ಲಿ ನಿರುಪಮಾ ಚಿತ್ರವನ್ನು ತೆಗೆದುಹಾಕಿದೆ. ಕರ್ಸನ್ ಭಾಯ್ ಪಟೇಲ್ ಪುತ್ರ ಹೀರನ್ ಕೆ ಪಟೇಲ್ ಕಂಪನಿಯ ಎಂಡಿಯಾಗಿ ಅಧಿಕಾರಕ್ಕೆ ಏರಿದ ಬಳಿಕ ಈ ನಿರ್ಧಾರ ಮಾಡಿದ್ದರು.