Karnataka Budget 2022-23:ಮನೆ ಬಾಗಿಲಿಗೆ ವೈದ್ಯಕೀಯ ಸೇವೆ; ಆರೋಗ್ಯ ಕ್ಷೇತ್ರಕ್ಕೆ ಭರ್ಜರಿ ಕೊಡುಗೆ

Suvarna News   | Asianet News
Published : Mar 04, 2022, 05:21 PM IST
Karnataka Budget 2022-23:ಮನೆ ಬಾಗಿಲಿಗೆ ವೈದ್ಯಕೀಯ ಸೇವೆ; ಆರೋಗ್ಯ ಕ್ಷೇತ್ರಕ್ಕೆ ಭರ್ಜರಿ ಕೊಡುಗೆ

ಸಾರಾಂಶ

*ರಾಜ್ಯದ ಪ್ರಮುಖ ನಗರಗಳಲ್ಲಿ'ನಮ್ಮ ಕ್ಲಿನಿಕ್' ಸ್ಥಾಪನೆ *ತಾಲೂಕು ಮಟ್ಟದಲ್ಲಿ ತ್ವರಿತ ತಜ್ಞ ವೈದ್ಯಕೀಯ ಸೇವೆ ಒದಗಿಸಲು ಟೆಲಿಮೆಡಿಸಿನ್ ಯೋಜನೆ *ಆಶಾ ಕಾರ್ಯಕರ್ತೆಯರ ಮಾಸಿಕ ಗೌರವ ಧನ 1000ರೂ. ಹೆಚ್ಚಳ

ಬೆಂಗಳೂರು (ಮಾ.4):  ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನಿರೀಕ್ಷೆಯಂತೆ ಈ ಬಾರಿಯ ರಾಜ್ಯ ಬಜೆಟ್ ನಲ್ಲಿ(Budget) ಆರೋಗ್ಯ (Health) ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಬಜೆಟ್ ನಲ್ಲಿ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಗೆ 13,982 ಕೋಟಿ ರೂ.ಅನುದಾನ ಮೀಸಲಿಡಲಾಗಿದೆ.  ಹಾಗಾದ್ರೆ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿ ಈ ಬಾರಿಯ ಬಜೆಟ್ ನಲ್ಲಿ ಏನೆಲ್ಲ ಘೋಷಣೆ ಮಾಡಲಾಗಿದೆ?

ಆಸ್ಪತ್ರೆಗಳ ಉನ್ನತೀಕರಣ
ಹೆಚ್ಚಿನ ಕಾರ್ಯದೊತ್ತಡವಿರುವ 1೦೦ ಪ್ರಾಥಮಿಕ  ಆರೋಗ್ಯ ಕೇಂದ್ರಗಳನ್ನು ಎರಡು ವರ್ಷಗಳಲ್ಲಿ ಒಟ್ಟು 1000 ಕೋಟಿ ರೂ. ವೆಚ್ಚದಲ್ಲಿ 25 ಹಾಸಿಗೆಯ ಮಾದರಿ ಸಮುದಾಯ ಆರೋಗ್ಯ   ಕೇಂದ್ರವನ್ನಾಗಿ ಉನ್ನತೀಕರಿಸಲಾಗುವುದು.  ತಾಲೂಕು ಮಟ್ಟದಲ್ಲಿ  ಆರೋಗ್ಯ ಸೇವೆಯನ್ನು ಬಲಪಡಿಸಲು ಮತ್ತು 102 ತಾಲೂಕುಗಳಲ್ಲಿ ಮಕ್ಕಳ ಅಪೌಷ್ಟಿಕತೆ ನಿವಾರಿಸಲು 3000 ಕೋಟಿ ರೂ. ವೆಚ್ಚದಲ್ಲಿ ಫಲಿತಾಂಶ ಕೇಂದ್ರಿತ ಪ್ರಯತ್ನಗಳನ್ನು ಮಾಡಲಾಗುವುದು.  ರಾಜ್ಯದ  ಏಳು  ತಾಲೂಕು ಆಸ್ಪತ್ರೆಗಳನ್ನು 100 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗುವುದು. 

ಕರ್ನಾಟಕ ಬಜೆಟ್ ನೇರ ಸುದ್ದಿಗಳಿಗೆ ಇಲ್ಲಿ ಕ್ಲಿಕಿಸಿ

ಮನೆ ಬಾಗಿಲಿಗೆ ಆರೋಗ್ಯ ಸೇವೆ
ಗ್ರಾಮೀಣ ಭಾಗದ ಜನರ ಮನೆ ಬಾಗಿಲಿಗೇ ವೈದ್ಯಕೀಯ ಸೇವೆ ಒದಗಿಸಲು ಸರ್ಕಾರ ನಿರ್ಧರಿಸಿದೆ.  ಈ ಹಿನ್ನೆಲೆಯಲ್ಲಿ ಬೀದರ್, ಚಾಮರಾಜನಗರ, ಹಾವೇರಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ 'ಮುಖ್ಯಮಂತ್ರಿ ಆರೋಗ್ಯ ವಾಹಿನಿ' ಎಂಬ ಹೊಸ ಯೋಜನೆಯಡಿ 11 ಕೋಟಿ ರೂ. ವೆಚ್ಚದಲ್ಲಿ ಸಂಚಾರಿ ಕ್ಲಿನಿಕ್ ಗಳನ್ನು ಸ್ಥಾಪನೆ ಮಾಡಲಾಗೋದು.

ನಮ್ಮ ಕ್ಲಿನಿಕ್ ಸ್ಥಾಪನೆ
ರಾಜ್ಯದ ಪ್ರಮುಖ ನಗರಗಳಲ್ಲಿ438 'ನಮ್ಮ ಕ್ಲಿನಿಕ್' ಗಳನ್ನು ಸ್ಥಾಪಿಸಲು ಯೋಚಿಸಲಾಗಿದೆ. ಬೆಂಗಳೂರಿನ ಎಲ್ಲಾ ವಾರ್ಡಗಳಲ್ಲಿಇವುಗಳನ್ನು ಸ್ಥಾಪಿಸಲಾಗುವುದು. ಈ ಕ್ಲಿನಿಕ್‌ಗಳಲ್ಲಿ ಅಸಾಂಕ್ರಾಮಿಕ ರೋಗಗಳ ಪತ್ತೆ ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ತಜ್ಞರ ಬಳಿ ಕಳುಹಿಸುವ ಸೇವೆ ಒದಗಿಸಲಾಗುವುದು.

ಅಂಗಾಂಗ ಮರುಪಡೆಯುವಿಕೆ ಕೇಂದ್ರ
ಪುನೀತ್    ರಾಜಕುಮಾರ್     ಮತ್ತು ಸಂಚಾರಿ   ವಿಜಯ್ ಮರಣದ ಬಳಿಕ ತಮ್ಮ ಅಂಗಾಂಗಳನ್ನು ದಾನ ಮಾಡಿ ಸಾರ್ಥಕತೆ ಮರೆದಿದ್ದಾರೆ. ಮರಣಾ ನಂತರ ಅಂಗಾಂಗಗಳನ್ನು ದಾನ ಮಾಡಲು ಸಾರ್ವಜನಿಕರನ್ನು ಪ್ರೇರೇಪಿಸಲು ಈಗಾಗಲೇ ಬೆಂಗಳೂರಿನಲ್ಲಿ Institute of Gastroenterology and Organ Transplant ಲೋಕಾರ್ಪಣೆ ಮಾಡಲಾಗಿದೆ. ಈ ಸಾಲಿನಲ್ಲಿ ನಿಮ್ಹಾನ್ಸ್   ಮೂಲಕ ಅಂಗಾಂಗ ಮರುಪಡೆಯುವಿಕೆ ಕೇಂದ್ರ ಪ್ರಾರಂಭಿಸಲಾಗೋದು.

ಪ್ರಮುಖಾಂಶಗಳು ಹೀಗಿವೆ:
*ಕೋವಿಡ್ ಮೂರನೇ ಅಲೆಯ ಸಮರ್ಪಕ ನಿರ್ವಹಣೆಗಾಗಿ  ಅಗತ್ಯ  ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ 2, 240 ಕೋಟಿ   ರೂ. ಪೂರಕ ಅನುದಾನ.
* ರಾಜ್ಯದಲ್ಲಿ 10 ಕೋಟಿಗಿಂತ ಹೆಚ್ಚು ಕೋವಿಡ್ ಲಸಿಕೆ ನೀಡಿಕೆ.
*ರಾಷ್ಟ್ರೀಯ ಆರೋಗ್ಯ  ಅಭಿಯಾನದಡಿಯಲ್ಲಿ300 ಮಹಿಳಾ ಸ್ವಾಸ್ಥ್ಯ ಕೇಂದ್ರಗಳ ಸ್ಥಾಪನೆ.
*ಉಚಿತ ಡಯಾಲಿಸಿಸ್ ಸೇವೆಗಳ ಸೈಕಲ್ ಗಳನ್ನು ತಿಂಗಳಿಗೆ 30,000ದಿಂದ 60,000 ಸೈಕಲ್ ಗಳಿಗೆ ಹೆಚ್ಚಿಸಲು 20 ಕೋಟಿ ರೂ. ಹೆಚ್ಚುವರಿ ಅನುದಾನ.
*ಗ್ರಾಮೀಣ ಜನರಿಗೆ ತಾಲೂಕು ಮಟ್ಟದಲ್ಲಿ ಹೃದಯ ಸಂಬಂಧಿ ಚಿಕಿತ್ಸೆ ಒದಗಿಸಲು 75 ತಾಲೂಕು ಆಸ್ಪತ್ರೆಗಳನ್ನು ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯೊಂದಿಗೆ ಮ್ಯಾಪಿಂಗ್ ಮಾಡಲಾಗುವುದು.
*ಜಿಲ್ಲಾ ಮಟ್ಟದಲ್ಲಿ  ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ಗಳನ್ನು ಪ್ರಾರಂಭಿಸಲು 200ಕ್ಕೂ ಹೆಚ್ಚು ಹಾಸಿಗೆಗಳಿರೋ ಸರ್ಕಾರಿ ಆಸ್ಪತ್ರೆಗಳನ್ನು ಬೋಧನಾ ಆಸ್ಪತ್ರೆಗಳ್ನಾಗಿ ಪರಿವರ್ತಿಸಲಾಗೋದು. ಈ ವರ್ಷ ತುಮಕೂರು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್ ಪ್ರಾರಂಭ.
*ಶುಚಿ ಯೋಜನೆಯಡಿಯಲ್ಲಿ 19 ಲಕ್ಷ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ನ್ಯಾಪಕಿನ್‌ಗಳನ್ನು ವಿತರಿಸಲಾಗಿದೆ. ಈ ಯೋಜನೆ ಉತ್ತಮಪಡಿಸಲು ಮಹಿಳಾ ಸ್ವಸಹಾಯ ಗುಂಪುಗಳೊಂದಿಗೆ ಕೈಜೋಡಿಸಲಾಗೋದು. ದಕ್ಷಿಣ ಕನ್ನಡ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಮುಟ್ಟಿನ ಕಪ್ ಗಳನ್ನು ವಿತರಿಸಲಾಗೋದು.
*ನಿಮ್ಹಾನ್ಸ್ ಬೆಂಬಲದೊಂದಿಗೆ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು  ನಗರ  ಜಿಲ್ಲೆಗಳಲ್ಲಿ ಮೆದುಳು  ಆರೋಗ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗೋದು.
*ಅಪಘಾತಕ್ಕೊಳಗಾದ ರೋಗಿಗಳಿಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಜೀವರಕ್ಷಕ ಆರೋಗ್ಯ ಸೇವೆ ಒದಗಿಸೋ ಯೋಜನೆ.
*ತಾಲೂಕು ಮಟ್ಟದಲ್ಲಿ ತ್ವರಿತ ತಜ್ಞ ವೈದ್ಯಕೀಯ ಸೇವೆ ಒದಗಿಸಲು ಟೆಲಿಮೆಡಿಸಿನ್ ಯೋಜನೆ.
*ಹಾವೇರಿ ಜಿಲ್ಲೆ  ಶಿಗ್ಗಾಂವಿ ತಾಲೂಕು ಸಾರ್ವಜನಿಕ ಆಸ್ಪತ್ರೆಯನ್ನು 250 ಹಾಸಿಗೆಗಳ ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿಸಲು ಕ್ರಮ.
*ಬಡತನ ರೇಖೆಗಿಂತ ಕೆಳಗಿರುವ ಹಿರಿಯ ನಾಗರಿಕರ ಕಣ್ಣಿನ ಸಂರಕ್ಷಣೆಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ತಪಾಸಣೆ, ಶಸ್ತ್ರಚಿಕಿತ್ಸೆ ಹಾಗೂ ಕನ್ನಡಕ ವಿತರಣೆ.
*ತುರ್ತು ವೈದ್ಯಕೀಯ ಸೇವೆ ಒದಗಿಸಲು ಖಾಸಗಿ ವಲಯದಲ್ಲಿ ಏರ್ ಅಂಬ್ಯುಲೆನ್ಸ್  ಸೇವೆ.
* ಶಿವಮೊಗ್ಗದಲ್ಲಿ ನೂತನವಾಗಿ ಸ್ಥಾಪಿಸಿರೋ ಆಯುಷ್ ವಿಶ್ವವಿದ್ಯಾಲಯದ ಬಲವರ್ಧನೆ.
*ಹಾವೇರಿ ಜಿಲ್ಲೆ ಸವಣೂರು ತಾಲೂಕಿನಲ್ಲಿ ಹೊಸ ಆಯುರ್ವೇದ ಕಾಲೇಜು ಸ್ಥಾಪನೆ.
*ಯಾದಗಿರಿ  ಜಿಲ್ಲಾ ಆಸ್ಪತ್ರೆಯಲ್ಲಿ ಆಯುಷ್ ವಿಭಾಗ ಪ್ರಾರಂಭಿಸಲಾಗೋದು.

Karnataka Budget 2022: ತವರು ಜಿಲ್ಲೆ ಹಾವೇರಿಗೆ ಬಂಪರ್ ಕೊಡುಗೆಗಳನ್ನ ಕೊಟ್ಟ ಬೊಮ್ಮಾಯಿ

*ಆಶಾ ಕಾರ್ಯಕರ್ತೆಯರ ಮಾಸಿಕ ಗೌರವ ಧನ 1000ರೂ. ಹೆಚ್ಚಳ.
*ರಾಮನಗರದ ಅರ್ಚಕರಹಳ್ಳಿ ಗ್ರಾಮದಲ್ಲಿ600ಕೋಟಿ ರೂ. ವೆಚ್ಚದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿವಿ ಕ್ಯಾಂಪಸ್ ನಿರ್ಮಾಣ ಮಾಡಲಾಗೋದು.
*ಹುಬ್ಬಳ್ಳಿಯಲ್ಲಿ 250 ಕೋಟಿ ರೂ. ವೆಚ್ಚದಲ್ಲಿ ಜಯದೇವ ಹೃದ್ರೋಗ ಸಂಸ್ಥೆ ಪ್ರಾದೇಶಿಕ ಕೇಂದ್ರ ಸ್ಥಾಪನೆ.
*ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ 500 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಮೂರು ಹಂತಗಳಲ್ಲಿ ನಿರ್ಮಾಣ,
*ಬೆಳಗಾವಿಯಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಕಿದ್ವಾಯಿ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ ಸ್ಥಾಪನೆ.
* ಕ್ಯಾನ್ಸರ್ ರೋಗಿಗಳಿಗೆ ಕಿಮೋಥೆರಪಿ ಸೌಕರ್ಯ ಒದಗಿಸಲು 10 ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ Infusion Center ಸ್ಥಾಪನೆ.
*ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ 2024ರಲ್ಲಿ ಶತಮಾನೋತ್ಸವ ಆಚರಿಸೋ ಹಿನ್ನೆಲೆಯಲ್ಲಿ ಮುಂದಿನ 3 ವರ್ಷಗಳಲ್ಲಿ 89 ಕೋಟಿ ರೂ. ವೆಚ್ಚದಲ್ಲಿ ಕೆ. ಆರ್. ಆಸ್ಪತ್ರೆ ಕಟ್ಟಡಗಳ ನವೀಕರಣ.
*ಚಿತ್ರದುರ್ಗ ಜಿಲ್ಲೆಯಲ್ಲಿ ಹೊಸ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ.
*ತುಮಕೂರಿನಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಹೊಸ ಟ್ರಾಮಾ ಕೇರ್ ಕೇಂದ್ರ. 

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!