
ಬೆಂಗಳೂರು (ಆ.17): ಭವಿಷ್ಯದಲ್ಲಿ ಸಂಭವಿಸಬಹುದಾದ ಮೊಬೈಲ್ ರಿಚಾರ್ಜ್ ದರ ಏರಿಕೆಯ ಬಿಸಿಯಿಂದ ತನ್ನ ಗ್ರಾಹಕರನ್ನು ರಕ್ಷಿಸಲು ರಿಲಯನ್ಸ್ ಜಿಯೋ ಸಂಸ್ಥೆಯು ಒಂದು ವಿನೂತನ ಹೆಜ್ಜೆ ಇಟ್ಟಿದೆ. ಕಂಪನಿಯು ತನ್ನ ಜನಪ್ರಿಯ 'ಜಿಯೋ ಪ್ರೈಮ್' (Jio Prime) ಸದಸ್ಯತ್ವವನ್ನು ಹೊಸ ರೂಪದಲ್ಲಿ ಮರುಆರಂಭಿಸಿದ್ದು, ಕೇವಲ 300 ರೂಪಾಯಿಗಳ ಒಮ್ಮೆಯ ಪಾವತಿಯೊಂದಿಗೆ (One-time charge) ಗ್ರಾಹಕರಿಗೆ ಒಂದು ವರ್ಷದ ಮಟ್ಟಿಗೆ ಹಳೆಯ ದರಗಳಲ್ಲೇ ರಿಚಾರ್ಜ್ ಮಾಡಿಕೊಳ್ಳುವ ಸೌಲಭ್ಯವನ್ನು ಘೋಷಿಸಿದೆ.
ಮುಂದಿನ ದಿನಗಳಲ್ಲಿ ಮೊಬೈಲ್ ಸುಂಕ (Tariff) ಹೆಚ್ಚಳವಾದರೆ ಗ್ರಾಹಕರ ಮೇಲಾಗುವ ಹೆಚ್ಚುವರಿ ಆರ್ಥಿಕ ಹೊರೆಯನ್ನು ತಪ್ಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಜಿಯೋದ ಪ್ರೀಪೇಡ್ ಹಾಗೂ ಪೋಸ್ಟ್‌ಪೇಡ್ ಸಂಪರ್ಕ ಹೊಂದಿರುವ ಯಾವುದೇ ಬಳಕೆದಾರರು 300 ರೂ. ಪಾವತಿಸಿ ಈ 1 ವರ್ಷದ ಸದಸ್ಯತ್ವ ಪಡೆದುಕೊಳ್ಳಬಹುದು.
ದರ ಏರಿಕೆಯಿಂದ ಪೂರ್ಣ ರಕ್ಷಣೆ: ಜಿಯೋ ಪ್ರೈಮ್ ಸದಸ್ಯತ್ವ ಪಡೆದ ದಿನಾಂಕದಿಂದ ಒಂದು ವರ್ಷದ ಅವಧಿಗೆ ಅಂದರೆ 2027ರ ಸೆಪ್ಟೆಂಬರ್ 5 ರವರೆಗೆ ಕಂಪನಿಯು ಯಾವುದೇ ದರ ಏರಿಕೆ ಮಾಡಿದರೂ ಅದು ಈ ಸದಸ್ಯತ್ವ ಪಡೆದ ಗ್ರಾಹಕರಿಗೆ ಅನ್ವಯಿಸುವುದಿಲ್ಲ. ಅವರು ಹಳೆಯ ನಿಗದಿತ ಬೆಲೆಯಲ್ಲೇ ರಿಚಾರ್ಜ್ ಸೌಲಭ್ಯ ಪಡೆಯಲಿದ್ದಾರೆ.
300 ರೂ. ಕ್ಯಾಶ್‌ಬ್ಯಾಕ್ ವೋಚರ್: ಹೊಸದಾಗಿ 'ಜಿಯೋ ಹೋಮ್' (JioHome) ಅಥವಾ 'ಜಿಯೋ ಪಿಸಿ' (JioPC) ಸಂಪರ್ಕ ಪಡೆದರೆ 300 ರೂಪಾಯಿ ಕ್ಯಾಶ್‌ಬ್ಯಾಕ್ ವೋಚರ್ ಸಿಗಲಿದೆ.
ಕುಟುಂಬ ಹಾಗೂ ಸ್ನೇಹಿತರಿಗೆ ಬೋನಸ್: ಕುಟುಂಬದ ಸದಸ್ಯರಿಗೆ ಅಥವಾ ಸ್ನೇಹಿತರಿಗೆ ಹೊಸ ಜಿಯೋ ಸಿಮ್ (Jio SIM) ಸಂಪರ್ಕ ಕೊಡಿಸಿದರೂ 300 ರೂಪಾಯಿ ಕ್ಯಾಶ್‌ಬ್ಯಾಕ್ ವೋಚರ್ ಲಭ್ಯವಾಗಲಿದೆ.
ಆದ್ಯತೆಯ ಗ್ರಾಹಕ ಸೇವೆ (Priority Support): ಜಿಯೋ ಪ್ರೈಮ್ ಸದಸ್ಯರಿಗೆ ಪ್ರತ್ಯೇಕ ಸೇವಾ ಚಾನೆಲ್ ಮೂಲಕ ಆದ್ಯತೆಯ ಆಧಾರದಲ್ಲಿ ಗ್ರಾಹಕ ಸೇವೆ ಲಭ್ಯವಿರಲಿದೆ.
ಆರಂಭಿಕ ಪ್ರವೇಶ (Early Access): ಜಿಯೋ ಬಿಡುಗಡೆ ಮಾಡುವ ಹೊಸ ಉತ್ಪನ್ನಗಳು, ಸೇವೆಗಳು ಹಾಗೂ ಟ್ರಯಲ್‌ಗಳಿಗೆ ಪ್ರೈಮ್ ಬಳಕೆದಾರರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
ಪ್ರಸ್ತುತ ಚಂದಾದಾರರಾಗಿರುವ ಎಲ್ಲ ಜಿಯೋ ಪ್ರೀಪೇಡ್ ಮತ್ತು ಪೋಸ್ಟ್‌ಪೇಡ್ ಗ್ರಾಹಕರು 300 ರೂ. ಸದಸ್ಯತ್ವ ಶುಲ್ಕವನ್ನು ಪಾವತಿಸಿ ಈ ಯೋಜನೆಯನ್ನು ಪಡೆಯಬಹುದು. ಮೈಜಿಯೋ ಆಪ್ (MyJio app), ಕಂಪನಿಯ ಅಧಿಕೃತ ವೆಬ್‌ಸೈಟ್ (Jio.com), ಜಿಯೋ ಸ್ಟೋರ್‌ಗಳು ಹಾಗೂ ಅಧಿಕೃತ ಪಾಲುದಾರ ಚಿಲ್ಲರೆ ಮಳಿಗೆಗಳ ಮೂಲಕ ಚಂದಾದಾರಿಕೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಈ ಯೋಜನೆಯು ಗ್ರಾಹಕರಿಗೆ ಅನಗತ್ಯ ಬೆಲೆ ಏರಿಕೆಯ ಭೀತಿಯಿಂದ ಮುಕ್ತಿ ನೀಡಿದರೆ, ಕಂಪನಿಗೆ ತನ್ನ ಗ್ರಾಹಕರನ್ನು ದೀರ್ಘಾವಧಿಗೆ ಉಳಿಸಿಕೊಳ್ಳಲು ಸಹಕಾರಿಯಾಗಲಿದ್ದು, ದೂರಸಂಪರ್ಕ ಕ್ಷೇತ್ರದಲ್ಲಿ ಇದೊಂದು 'ವಿನ್-ವಿನ್' (Win-Win) ಮಾದರಿಯಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.