
ಮುಂಬೈ (ಅ.01) ಮುಕೇಶ್ ಅಂಬಾನಿ ಮಾಲೀಕತ್ವದ ಜಿಯೋ ಹತ್ತು ಹಲವು ಕೊಡುಗೆ ಘೋಷಿಸಿದೆ. ಜೊತೆಗೆ ಜಿಯೋ ತನ್ನ ವಹಿವಾಟು ವಿಸ್ತರಿಸುತ್ತಿದೆ. ಇದೀಗ ಜಿಯೋ ಫೈನಾನ್ಸ್‌ನಿಂದ ಜಿಯೋ ಸಿಲ್ವರ್ ಬಿಡುಗಡೆ ಮಾಡಲಾಗಿದೆ. ಈ ಯೋಜನೆ ಮೂಲಕ ಗ್ರಾಹಕರು ಕೇವಲ 10 ರೂಪಾಯಿಗಳಲ್ಲಿ ಶೇಕಡಾ 99.9ರಷ್ಟು ಶುದ್ಧ ಡಿಜಿಟಲ್ ಬೆಳ್ಳಿ ಮೇಲೆ ಹೂಡಿಕೆ ಮಾಡಲು ಅವಕಾಶ ನೀಡಲಾಗಿದೆ. ಇದರಿಂದ ಜನಸಾಮಾನ್ಯರು ಇದೀಗ ಬೆಳ್ಳಿಯಲ್ಲಿ ಹೂಡಿಕೆ ಮಾಡಿ ಆರ್ಥಿಕ ಸುರಕ್ಷತೆಯತ್ತ ಹೆಜ್ಜೆ ಹಾಕಲು ಜಿಯೋ ಫೈನಾನ್ಸ್ ಅವಕಾಶ ಮಾಡಿದೆ.
ಜಿಯೋ ಫೈನಾನ್ಸ್ ಆಪ್ ಮೂಲಕ ಸಾಲ, ವಿಮೆ, ಹೂಡಿಕೆ ಹಾಗೂ ಪೇಮೆಂಟ್ ಸೇವೆಗಳನ್ನು ಒದಗಿಸುತ್ತಿರುವ 'ಜಿಯೋ ಫೈನಾನ್ಸ್ ಪ್ಲಾಟ್‌ಫಾರ್ಮ್ ಅಂಡ್ ಸರ್ವೀಸ್ ಲಿಮಿಟೆಡ್' (ಜೆಎಫ್‌ಪಿಎಸ್‌ಎಲ್ ) ಸಂಸ್ಥೆ ಈಗ ತನ್ನ ಆಪ್‌ನಲ್ಲಿ 'ಜಿಯೋ ಸಿಲ್ವರ್' ಎಂಬ ಹೊಸ ಸೇವೆಯನ್ನು ಪರಿಚಯಿಸಿದೆ. ಈ ಯೋಜನೆ ವಿಶೇಷತೆ ಎಂದರೆ ಕೇವಲ 10 ರೂಪಾಯಿಯಿಂದ 1 ಲಕ್ಷ ರೂಪಾಯಿವರೆಗೆ ಡಿಜಿಟಲ್ ಬೆಳ್ಳಿಯನ್ನು ಸುಲಭವಾಗಿ ಖರೀದಿಸಬಹುದು.
ಮಾರುಕಟ್ಟೆಯ ನೇರ ದರದಲ್ಲೇ ವಹಿವಾಟು ನಡೆಸಬಹುದು, ಮಾರಾಟ ಮಾಡಿದ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ. ವಾರದ ಅಥವಾ ತಿಂಗಳ ಆಧಾರದ ಮೇಲೆ ನಿಯಮಿತವಾಗಿ 'ಸಿಪ್' (ಎಸ್‌ಐಪಿ) ಮಾಡುವ ಆಯ್ಕೆಯೂ ಲಭ್ಯವಿದೆ. ಡಿಜಿಟಲ್ ರೂಪದಲ್ಲಿ ಸಂಗ್ರಹವಾದ ಬೆಳ್ಳಿಯನ್ನು ಪ್ರಮಾಣೀಕೃತ ಬೆಳ್ಳಿಯ ನಾಣ್ಯಗಳಾಗಿ ನೇರವಾಗಿ ಮನೆ ಬಾಗಿಲಿಗೂ ಪಡೆದುಕೊಳ್ಳಬಹುದು. ಜಿಯೋ ಸಿಲ್ವರ್' ಡ್ಯಾಶ್‌ಬೋರ್ಡ್ ಮೂಲಕ ಬೆಳ್ಳಿ ದರಗಳು, ನಿಮ್ಮ ಹೂಡಿಕೆ ಮತ್ತು ವಹಿವಾಟಿನ ವಿವರಗಳನ್ನು ಸುಲಭವಾಗಿ ವೀಕ್ಷಿಸಬಹುದು.
ಎಲ್ಲಾ ಬೆಳ್ಳಿಯ ಶುದ್ಧತೆಯನ್ನು ಎನ್‌ಎಬಿಎಎಲ್ ಸಂಸ್ಥೆಯಿಂದ ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ಕಟ್ಟುನಿಟ್ಟಾಗಿ ಪರೀಕ್ಷಿಸಲಾಗುತ್ತದೆ. ವಿಶೇಷವೆಂದರೆ, ಪ್ರತಿ ಖರೀದಿಗೂ 'ಜಿಯೋ ಪಾಯಿಂಟ್ಸ್' ಸಿಗಲಿದ್ದು, ಇವುಗಳನ್ನು ಬ್ರ್ಯಾಂಡ್ ವೋಚರ್‌ಗಳು ಮತ್ತು ಶಾಪಿಂಗ್ ಡಿಸ್ಕೌಂಟ್‌ಗಳಿಗೆ ಬಳಸಿ ಲಾಭ ಪಡೆಯಬಹುದು.
ಚಿನ್ನ ಮತ್ತು ಬೆಳ್ಳಿಯಂತಹ ಅಮೂಲ್ಯ ಲೋಹಗಳು ಹೂಡಿಕೆಗೆ ಬಲ ತುಂಬುತ್ತವೆ. ಸಾಂಪ್ರದಾಯಿಕವಾಗಿ ಬೆಳ್ಳಿಯನ್ನು ಭೌತಿಕವಾಗಿ ಮಾತ್ರ ಇಟ್ಟುಕೊಳ್ಳಲಾಗುತ್ತಿತ್ತು. ಆದರೆ ಜಿಯೋ ಸಿಲ್ವರ್ ಇದನ್ನು ಸುರಕ್ಷಿತ ಮತ್ತು ಅತ್ಯಂತ ಸುಲಭವಾದ ಡಿಜಿಟಲ್ ಆಸ್ತಿಯಾಗಿ ಪರಿವರ್ತಿಸಿದೆ ಎಂದು ಜಿಯೋ ಫೈನಾನ್ಸ್ ಪ್ಲಾಟ್‌ಫಾರ್ಮ್ ಸಿಇಒ ಸುರ್ಭಿ ಎಸ್ ಶರ್ಮಾ ಹೇಳಿದ್ದಾರೆ. ಈಗಾಗಲೇ 'ಡಿಜಿಟಲ್ ಗೋಲ್ಡ್' ಸೇವೆಯನ್ನು ಯಶಸ್ವಿಯಾಗಿ ನೀಡಿರುವ ಜಿಯೋ ಫೈನಾನ್ಸ್, ಈಗ 'ಜಿಯೋ ಸಿಲ್ವರ್' ಮೂಲಕ ತನ್ನ ಹೂಡಿಕೆದಾರರಿಗೆ ಮತ್ತೊಂದು ಅತ್ಯುತ್ತಮ ಅವಕಾಶವನ್ನು ನೀಡಿದೆ ಎಂದು ಕಂಪನಿ ಹೇಳಿಕೊಂಡಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.