ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆ ಮಾಡಿರೋರು ಅದನ್ನು ಪರಿಶೀಲನೆ ನಡೆಸೋದು ಕೂಡ ಅಗತ್ಯ. ಇಲ್ಲವಾದ್ರೆ 5 ಸಾವಿರ ರೂ. ದಂಡ ಬೀಳುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದೆ.
ನವದೆಹಲಿ (ಆ.28): ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆ ಮಾಡಿದ 30 ದಿನಗಳೊಳಗೆ ಪರಿಶೀಲನೆ ನಡೆಸುವಂತೆ ಆದಾಯ ತೆರಿಗೆ ಇಲಾಖೆ ತೆರಿಗೆದಾರರಿಗೆ ನೆನಪಿಸಿದೆ. ಒಂದು ವೇಳೆ ನಿಗದಿತ ಸಮಯ ಮಿತಿಯೊಳಗೆ ಐಟಿಆರ್ ಪರಿಶೀಲನೆ ನಡೆಸದಿದ್ದರೆ ಅದನ್ನು ತಿರಸ್ಕರಿಸೋದಾಗಿಯೂ ತಿಳಿಸಿದೆ. 2023-24ನೇ ಮೌಲ್ಯಮಾಪನ ವರ್ಷಕ್ಕೆ ಈ ತನಕ ಸುಮಾರು 6.93 ಕೋಟಿ ಐಟಿಆರ್ ಗಳು ಸಲ್ಲಿಕೆಯಾಗಿವೆ. ಇದರಲ್ಲಿ 6.69 ಕೋಟಿ ಐಟಿಆರ್ ಗಳನ್ನು ಪರಿಶೀಲಿಸಲಾಗಿದೆ. 2023 -24ನೇ ಮೌಲ್ಯಮಾಪನ ವರ್ಷಕ್ಕೆ ಐಟಿಆರ್ ಸಲ್ಲಿಕೆಗೆ 2023ರ ಜುಲೈ 31 ಅಂತಿಮ ಗಡುವು. ಒಂದು ವೇಳೆ ಐಟಿಆರ್ ಸಲ್ಲಿಕೆ ಮಾಡಿರೋರು ಪರಿಶೀಲಿಸಲು ವಿಫಲರಾದ್ರೆ ಅದನ್ನು ತಿರಸ್ಕರಿಸಲಾಗುತ್ತದೆ. ಹಾಗೆಯೇ ಅವರು ಹೊಸ ಐಟಿಆರ್ ಅನ್ನು 5 ಸಾವಿರ ರೂ. ವಿಳಂಬ ಶುಲ್ಕದ ಜೊತೆಗೆ ಸಲ್ಲಿಕೆ ಮಾಡಬೇಕು. ಈ ಬಗ್ಗೆ ಆದಾಯ ತೆರಿಗೆ ಇಲಾಖೆ ತೆರಿಗೆದಾರರಿಗೆ ಎಕ್ಸ್ ನಲ್ಲಿ (ಟ್ವಿಟ್ಟರ್ ) ನೆನಪಿಸುವ ಕೆಲಸ ಮಾಡಿದೆ. ಐಟಿಆರ್ ಪರಿಶೀಲನೆ ತಡವಾದ್ರೆ ಆದಾಯ ತೆರಿಗೆ ಕಾಯ್ದೆ 1961ರ ಅನ್ವಯ ವಿಳಂಬ ಶುಲ್ಕ ವಿಧಿಸಲಾಗುತ್ತದೆ. ಹೀಗಾಗಿ ತಡ ಮಾಡಬೇಡಿ. ನಿಮ್ಮ ಐಟಿಆರ್ ಅನ್ನು ಇಂದೇ ಪರಿಶೀಲಿಸಿ ಎಂದು ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆ ನೆನಪಿಸಿದೆ.
ಐಟಿಆರ್ ಪರಿಶೀಲನೆ ನಡೆಸೋದು ಹೇಗೆ?
1.ಆಧಾರ್ ಒಟಿಪಿ ಮೂಲಕ: ಐಟಿಆರ್ ವೆರಿಫೈ ಮಾಡಲು ಮೊದಲ ವಿಧಾನ ಆಧಾರ್ ಒಟಿಪಿ. ಈ ವಿಧಾನ ಬಳಸಲು ನೀವು ನಿಮ್ಮ ಆದಾಯ ತೆರಿಗೆ ಇ-ಫೈಲಿಂಗ್ ಖಾತೆಗೆ ಭೇಟಿ ನೀಡಿ ಹಾಗೂ ಅಲ್ಲಿಂದ ಇ-ಫೈಲ್ ಟ್ಯಾಬ್ ಗೆ ತೆರಳಿ. ಆದಾಯ ತೆರಿಗೆ ರಿಟರ್ನ್ ಆಯ್ಕೆ ಆರಿಸಿ ಹಾಗೂ ಇ-ವೆರಿಫೈ ರಿಟರ್ನ್ ಮೇಲೆ ಕ್ಲಿಕ್ ಮಾಡಿ. ಆ ಬಳಿಕ ಆಧಾರ್ ಒಟಿಪಿ ನಮೂದಿಸಿ ಹಾಗೂ ಪ್ರಕ್ರಿಯೆ ಪೂರ್ಣಗೊಳಿಸಲು 'Continue'ಮೇಲೆ ಕ್ಲಿಕ್ ಮಾಡಿ.
ವಿಳಂಬ ಐಟಿಆರ್ ಸಲ್ಲಿಕೆ ವೇಳೆ ದಂಡ ಪಾವತಿಸೋದು ಹೇಗೆ? ಎಲ್ಲಿ? ಇಲ್ಲಿದೆ ಮಾಹಿತಿ
2. ನೆಟ್ ಬ್ಯಾಂಕಿಂಗ್ ಮೂಲಕ: ನೆಟ್ ಬ್ಯಾಂಕಿಂಗ್ ಮೂಲಕ ಕೂಡ ಇ-ವೆರಿಫಿಕೇಷನ್ ಮಾಡಬಹುದು. 'through net banking' ಆಯ್ಕೆ ಮಾಡಿ ಹಾಗೂ ನಿಮ್ಮ ಬ್ಯಾಂಕ್ ಆರಿಸಿ. ಈಗ ನೀವು ನೇರವಾಗಿ ನೆಟ್ ಬ್ಯಾಂಕಿಂಗ್ ಲಾಗಿನ್ ಪೇಜ್ ಗೆ ತೆರಳುತ್ತೀರಿ. ಇಲ್ಲಿ ನೀವು ನಿಮ್ಮ ಕ್ರೆಡೆನ್ಷಿಯಲ್ ನಮೂದಿಸಬೇಕು. ಒಮ್ಮೆ ಲಾಗಿನ್ ಆದ ಬಳಿಕ ನಿಮ್ಮ ರಿಟರ್ನ್ ವೆರಿಫೈ ಮಾಡುವ ಆಯ್ಕೆ ಆರಿಸಿ. ಈಗ ನೀವು ನೇರವಾಗಿ ಇ-ಫೈಲಿಂಗ್ ಪೋರ್ಟಲ್ ಗೆ ತೆರೆದುಕೊಳ್ಳುತ್ತೀರಿ. ಈ ಪ್ರಕ್ರಿಯೆ ಪೂರ್ಣಗೊಳಿಸಲು ಸಂಬಂಧಪಟ್ಟ ಐಟಿಆರ್ ಫಾರ್ಮ್ ಮೇಲೆ ವೆರಿಫೈ ಆಯ್ಕೆ ಮೇಲೆ ಕ್ಲಿಕ್ ಮಾಡಿ.
3.ಡಿಮ್ಯಾಟ್ ಖಾತೆ ಮೂಲಕ: ನಿಮ್ಮ ಬಳಿ ಡಿಮ್ಯಾಟ್ ಖಾತೆ ಇದ್ದರೆ, ನೀವು ಇದರ ಮೂಲಕ ಕೂಡ ಇ-ವೆರಿಫೈ ಮಾಡಬಹುದು. ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ಐಡಿಗೆ ಎಲೆಕ್ಟ್ರಾನಿಕ್ ವೆರಿಫಿಕೇಷನ್ ಕೋಡ್ (ಇವಿಸಿ) ಕಳುಹಿಸಲಾಗುತ್ತದೆ. ಇನ್ನು ಇ-ವೆರಿಫೈ ಪುಟದಲ್ಲಿ ಡಿಮ್ಯಾಟ್ ಖಾತೆ ಆಯ್ಕೆ ಮಾಡಿ ಹಾಗೂ ಇವಿಸಿ ನಮೂದಿಸಿ. ಆ ಬಳಿಕ ಪ್ರಕ್ರಿಯೆ ಪೂರ್ಣಗೊಳಿಸಲು ಇ-ವೆರಿಫೈ ಬಟನ್ ಮೇಲೆ ಕ್ಲಿಕ್ ಮಾಡಿ.
4.ಎಟಿಎಂ ಮೂಲಕ: ಬ್ಯಾಂಕ್ ಎಟಿಎಂ ಮೂಲಕ ಇ-ವೆರಿಫಿಕೇಷನ್ ಮಾಡೋದು ಇನ್ನೊಂದು ವಿಧಾನ. ನಿಮ್ಮ ಎಟಿಎಂ ಕಾರ್ಡ್ ಹಾಕಿ, ಎಟಿಎಂ ಪಿನ್ ನಮೂದಿಸಿ. ಆದಾಯ ತೆರಿಗೆ ಫೈಲ್ ಮಾಡಲು ಇವಿಸಿ ಸೃಷ್ಟಿಸುವ ಆಯ್ಕೆ ಆರಿಸಿ. ನಿಮ್ಮ ನೋಂದಾಯಿತ ಇ-ಮೇಲ್ ಹಾಗೂ ಮೊಬೈಲ್ ಸಂಖ್ಯೆಗೆ ಇವಿಸಿ ಕಳುಹಿಸಲಾಗುತ್ತದೆ. ನಿಮ್ಮ ಇ-ಫೈಲಿಂಗ್ ಖಾತೆಗೆ ಲಾಗಿನ್ ಆಗಿ, ಇವಿಸಿ ಈಗಾಗಲೇ ಇರುವ ಆಯ್ಕೆ ಮಾಡಿ ಹಾಗೂ ಅದನ್ನು ಪರಿಶೀಲಿಸಿ.
ಐಟಿಆರ್ ಸಲ್ಲಿಕೆ ವೇಳೆ ನೀವು ಈ ತಪ್ಪು ಮಾಡಿದ್ರೆ ಬೀಳುತ್ತೆ ಭಾರೀ ದಂಡ!
5.ಬ್ಯಾಂಕ್ ಖಾತೆ ಮೂಲಕ: ಆದಾಯ ತೆರಿಗೆ ರೀಫಂಡ್ ಮಾಡಲು ನಿಮ್ಮ ಬಳಿ ಈ ಮೊದಲೇ ಪ್ರಿ ವ್ಯಾಲಿಡೇಟೆಡ್ ಬ್ಯಾಂಕ್ ಖಾತೆ ಇದ್ದರೆ, ನೀವು ಇ-ವೆರಿಫಿಕೇಷನ್ ಅನ್ನು ಬ್ಯಾಂಕ್ ಖಾತೆ ಮೂಲಕ ಮಾಡಬಹುದು. ಇವಿಸಿ ಸೃಷ್ಟಿಯಾಗುತ್ತದೆ ಹಾಗೂ ಅದನ್ನು ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ಐಡಿಗೆ ಕಳುಹಿಸಲಾಗುತ್ತದೆ. ವೆರಿಫೈ ಪುಟದ ಮೇಲೆ ಕ್ಲಿಕ್ ಮಾಡಿ ಹಾಗೂ ಬ್ಯಾಂಕ್ ಖಾತೆ ಆಯ್ಕೆ ಆರಿಸಿ. ಆ ಬಳಿಕ ನಿಮಗೆ ದೊರಕಿರುವ ಇವಿಸಿ ನಮೂದಿಸಿ. ಪ್ರಕ್ರಿಯೆ ಪೂರ್ಣಗೊಳಿಸಲು 'e-verify'ಬಟನ್ ಮೇಲೆ ಕ್ಲಿಕ್ ಮಾಡಿ.