
ನವದೆಹಲಿ(ಜ.30): ಇದೇ ಫೆ.1 ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ 5 ವರ್ಷದ ಅವಧಿಯ ಕೊನೆಯ ಬಜೆಟ್ ಇದಾಗಲಿದ್ದು, ಸಹಜವಾಗಿಯೇ ಜನರಲ್ಲಿ ಹಲವು ನಿರೀಕ್ಷೆಗಳು ಮನೆ ಮಾಡಿವೆ.
ಅದರಂತೆ ಬಜೆಟ್‌ನಲ್ಲಿ ಜನಸಾಮಾನ್ಯನಿಗೆ ಆದ್ಯತೆ ನೀಡುವ ಮುನ್ಸೂಚನೆ ನೀಡಿರುವ ಕೇಂದ್ರ ಸರ್ಕಾರ, ಪ್ರಮುಖವಾಗಿ ಗೃಹಸಾಲದ ಮೇಲಿನ ಸಬ್ಸಿಡಿ ಸಂಬಂಧ ಹೊಸ ಆದೇಶ ಜಾರಿಗೆ ಬರಲಿದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಗರ ಪ್ರದೇಶಗಳಲ್ಲಿ ಗೃಹ ನಿರ್ಮಾಣ ಸಾಲಗಳ ಬಡ್ಡಿ ಮೇಲಿನ ಸಬ್ಸಿಡಿ ವಿತರಣೆಗೆ ನೂತನ ವಿಧಾನ ಅಳವಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಮೊದಲ ಬಾರಿಗೆ ಮನೆ ಖರೀದಿಸುವವರು ಬ್ಯಾಂಕ್ ಶಾಖೆಗಳಲ್ಲಿ ಸಬ್ಸಿಡಿ ಸಹಿತ ಸಾಲಕ್ಕಾಗಿ ಕಾಯುವ ಬದಲು, ಆದಾಯ ತೆರಿಗೆ ಇಲಾಖೆಯಿಂದ ಮಾಹಿತಿ ಪಡೆದು ಸಂಭಾವ್ಯ ಫಲಾನುಭವಿಗಳನ್ನು ಗುರುತಿಸಲು ಸರ್ಕಾರ ಸಿದ್ಧತೆ ನಡೆಸಿದೆ.
ಫಲಾನುಭವಿಗಳನ್ನು ಗುರುತಿಸಿದ ಬಳಿಕ ಇಲಾಖೆಯಿಂದ ಪ್ರಮಾಣಪತ್ರ ದೊರೆಯಲಿದ್ದು, ಅದನ್ನು ಸಬ್ಸಿಡಿ ಸಹಿತ ಸಾಲ ಪಡೆಯಲು ಬಳಸಿಕೊಳ್ಳಬಹುದಾಗಿದೆ. ವಾರ್ಷಿಕ 18 ಲಕ್ಷ ರೂ.ಗಳ ವರೆಗೆ ಆದಾಯ ಹೊಂದಿರುವವರು ಮೊದಲ ಬಾರಿಗೆ ಮನೆ ಖರೀದಿಸುವಾಗ ಪಿಎಂ ಆವಾಸ್ ಯೋಜನೆಯಡಿ ಸಬ್ಸಿಡಿ ಸಹಿತ ಸಾಲ ಪಡೆಬಹುದು.
20 ವರ್ಷಗಳ ಅವಧಿಯ ಸಾಲಕ್ಕೆ 6 ಲಕ್ಷ ರೂ. ವರೆಗೆ ಸಬ್ಸಿಡಿ ಸೌಲಭ್ಯ ದೊರೆಯುತ್ತದೆ. ಅಲ್ಲದೇ 2.5-2.7 ಲಕ್ಷ ರೂ.ವರೆಗೆ ತಕ್ಷಣದ ರಿಯಾಯ್ತಿ ದೊರೆಯುತ್ತದೆ. ಇದೀಗ ಹೊಸ ವಿಧಾನದ ಮೂಲಕ ಸಗೃಹ ಸಾಲದ ಬಡ್ಡಿ ಸಬ್ಸಿಡಿಯನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ.
ಸಾಲ ನೀಡುವ ಬ್ಯಾಂಕ್‌ಗಳು ಮತ್ತು ಸರ್ಕಾರ ಈ ಬಗ್ಗೆ ಚರ್ಚೆ ನಡೆಸಿದ್ದು, ಹಂಗಾಮಿ ವಿತ್ತ ಸಚಿವ ಪೀಯೂಷ್ ಗೋಯಲ್ ಬ್ಯಾಂಕ್ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಕೆಲವೇ ದಿನಗಳಲ್ಲಿ ಈ ಕುರಿತ ಪ್ರಕಟಣೆ ಹೊರಬೀಳುವ ನಿರೀಕ್ಷೆಯಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.