
ಮುಂಬೈ (ಅ.14): ಇನ್ ಶಾರ್ಟ್ಸ್ ಸಿಇಒ ಅಜರ್ ಇಕ್ಬಾಲ್ ಜನಪ್ರಿಯ ರಿಯಾಲಿಟಿ ಶೋ 'ಶಾರ್ಕ್ ಟ್ಯಾಂಕ್ ಇಂಡಿಯಾ' ಸೀಸನ್-3ರ ಹೊಸ ತೀರ್ಪುಗಾರರಾಗಿ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಶುಕ್ರವಾರ ಎಕ್ಸ್ ನಲ್ಲಿ (ಈ ಹಿಂದಿನ ಟ್ವಿಟ್ಟರ್ ನಲ್ಲಿ) ಮಾಹಿತಿ ನೀಡಲಾಗಿದೆ. ಓಯೋ ರೂಮ್ಸ್ ಸಿಇಒ ರಿತೇಶ್ ಅರ್ಗವಾಲ್ ಹಾಗೂ ಝೊಮ್ಯಾಟೋ ಸಿಇಒ ದೀಪಿಂದರ್ ಗೋಯಲ್ ಈ ಸೀಸನ್ ಇತರ ಇಬ್ಬರು ತೀರ್ಪುಗಾರರಾಗಿದ್ದಾರೆ. 30 ವರ್ಷದ ಅಜರ್ ಇಕ್ಬಾಲ್ ದೆಹಲಿ ಐಐಟಿ ಹಳೆಯ ವಿದ್ಯಾರ್ಥಿಯಾಗಿದ್ದು, ಇನ್ ಶಾರ್ಟ್ಸ್ ಎಂಬ ಸುದ್ದಿಗಳನ್ನು ನೀಡುವ ಫೇಸ್ ಬುಕ್ ಪೇಜ್ ಅನ್ನು ದೀಪಿತ ಪುರ್ಕ್ಯಸ್ತ ಹಾಗೂ ಅನುನಯ್ ಅರುನ್ವ ಜೊತೆಗೆ ಸೇರಿ ಪ್ರಾರಂಭಿಸಿದರು. 2013ರಲ್ಲಿ ಇನ್ ಶಾರ್ಟ್ಸ್ ಅಪ್ಲಿಕೇಷನ್ ಪ್ರಾರಂಭಿಸಿದರು. ಇದು ಯಶಸ್ಸು ಗಳಿಸಿದ ಹಿನ್ನೆಲೆಯಲ್ಲಿ 2015ರಲ್ಲಿ ಆಪಲ್ ಐ ಫೋನ್ ಗಾಗಿ ಈ ಅಪ್ಲಿಕೇಷನ್ ಬಿಡುಗಡೆಗೊಳಿಸಿದರು. ಇನ್ ಶಾರ್ಟ್ಸ್ ಅನ್ನು ಭಾರತದ ಅತೀಹೆಚ್ಚು ರೇಟಿಂಗ್ ಹೊಂದಿರುವ ಇಂಗ್ಲಿಷ್ ನ್ಯೂಸ್ ಅಪ್ಲಿಕೇಷನ್ ಎಂದು ಗುರುತಿಸಲಾಗಿದ್ದು, 10 ಮಿಲಿಯನ್ ಗಿಂತಲೂ ಅಧಿಕ ಸಕ್ರಿಯ ಬಳಕೆದಾರರನ್ನು ಇದು ಹೊಂದಿದೆ.
ಭಾರತದ ಜನಪ್ರಿಯ ಯುವ ಸ್ಟಾರ್ಟ್ ಅಪ್ ಉದ್ಯಮಿಗಳಲ್ಲಿ ಅಜರ್ ಇಕ್ಬಾಲ್ ಕೂಡ ಒಬ್ಬರು. ತನ್ನ ಇಬ್ಬರು ಐಐಟಿ ಸಹಪಾಠಿಗಳ ಜೊತೆಗೆ ಸೇರಿ 60 ಪದಗಳಲ್ಲಿ ಸುದ್ದಿಗಳನ್ನು ನೀಡುವ ಫೇಸ್ ಬುಕ್ ಪೇಜ್ ಪ್ರಾರಂಭಿಸಿದರು. ಇದು ಯಶಸ್ಸು ಸಾಧಿಸಿದ ಹಿನ್ನೆಲೆಯಲ್ಲಿ ಇನ್ ಶಾರ್ಟ್ಸ್ ಅಪ್ಲಿಕೇಷನ್ ಬಿಡುಗಡೆಗೊಳಿಸಿದರು. ಇಕ್ಬಾಲ್ ತನ್ನ ಲಿಂಕ್ಡ್ ಇನ್ ಪ್ರೊಫೈಲ್ ನಲ್ಲಿ ವಿವರಿಸಿರುವಂತೆ ಇನ್ ಶಾರ್ಟ್ಸ್ ಪ್ರಾರಂಭಿಸಲು ಐಐಟಿಯನ್ನು ಅರ್ಧದಲ್ಲೇ ತೊರೆದಿರೋದಾಗಿ ಹೇಳಿಕೊಂಡಿದ್ದಾರೆ. 2009 ಹಾಗೂ 2012ರ ನಡುವಿನಲ್ಲಿ ಇಕ್ಬಾಲ್ ಐಐಟಿ ದೆಹಲಿಯಲ್ಲಿ ಓದಿದ್ದರು.
ಸಿಮ್ ಮಾರಿ ಜೀವನ ನಡೆಸ್ತಿದ್ದ ವ್ಯಕ್ತಿಯೀಗ ಟಿವಿ ಸ್ಟಾರ್, ಬರೋಬ್ಬರಿ 80,000 ಕೋಟಿ ಕಂಪೆನಿಯ ಮಾಲೀಕ!
ಅಜರ್ ಇಕ್ಬಾಲ್ ಬಿಹಾರ ಮೂಲದವರಾಗಿದ್ದಾರೆ. ಇನ್ ಶಾರ್ಟ್ಸ್ ಯಶಸ್ಸು ಕಂಡ ಬೆನ್ನಲ್ಲೇ ಅಜರ್ 2019ರಲ್ಲಿ 'ಪಬ್ಲಿಕ್' ಎನ್ನುವ ಕಂಪನಿ ಸ್ಥಾಪಿಸಿದರು. ಇದು ಸ್ಥಳಾಧರಿತ ಸೋಷಿಯಲ್ ನೆಟ್ ವರ್ಕ್ ಆಗಿದೆ. ಇದು ಪ್ರಸ್ತುತ ಭಾರತದ ಅತೀದೊಡ್ಡ ಸ್ಥಳಾಧರಿತ ಸೋಷಿಯಲ್ ನೆಟ್ ವರ್ಕ್ ಆಗಿದೆ. 50 ಮಿಲಯನ್ ಗಿಂತಲೂ ಅಧಿಕ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಇದರಲ್ಲಿ ಪ್ರತಿ ತಿಂಗಳು 1 ಮಿಲಿಯನ್ ಗಿಂತಲೂ ಅಧಿಕ ವಿಡಿಯೋಗಳನ್ನು ಸೃಷ್ಟಿಸಲಾಗುತ್ತದೆ.
ಅಜರ್ ಇಕ್ಬಾಲ್ ಅವರ ಇನ್ ಶಾರ್ಟ್ಸ್ 3700 ಕೋಟಿ ರೂ. ಮೌಲ್ಯದ ಕಂಪನಿಯಾಗಿ ಬೆಳೆದಿದೆ. ಇನ್ನು ಇಕ್ಬಾಲ್ ಅವರಿಗೆ ಬ್ಯುಸಿನೆಸ್ ವರ್ಲ್ಡ್ ಯಂಗ್ ಎಂಟರ್ ಪ್ರೈನರ್ ಪ್ರಶಸ್ತಿ ಸೇರಿದಂತೆ ಕೆಲವು ಪ್ರತಿಷ್ಟಿತ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.
ಇನ್ ಸ್ಟಾಗ್ರಾಮ್ ನಲ್ಲಿ ಶಾರ್ಕ್ ಟ್ಯಾಂಕ್ ಇಂಡಿಯಾ ಅಜರ್ ಅವರನ್ನು ಪರಿಚಯಿಸುವ ವಿಡಿಯೋ ಶೇರ್ ಮಾಡಿದೆ. ಇನ್ನು ಈ ಸೀಸನ್ ಶಾರ್ಕ್ ಟ್ಯಾಂಕ್ ಇಂಡಿಯಾದ ತೀರ್ಪುಗಾರರಲ್ಲಿ ಟೆಕ್ ಹಿನ್ನೆಲೆಯಲ್ಲಿ ಹೊಂದಿರೋರು ಅಜರ್ ಇಕ್ಬಾಲ್ ಮಾತ್ರ. ಅಜರ್ ಕೂಡ ತನ್ನ ಇನ್ ಸ್ಟಾ ಗ್ರಾಮ್ ಖಾತೆಯಲ್ಲಿ ಸೋಷಿಯಲ್ ಮೀಡಿಯಾದಿಂದ ಹಿಡಿದು ಟೆಕ್ ವರ್ಲ್ಡ್ ನ ಜನಪ್ರಿಯ ಉದ್ಯಮಿಯಾಗಿ ಬೆಳೆದ ತನಕದ ತಮ್ಮ ಯಶಸ್ಸಿನ ಹಾದಿಯ ವಿಡಿಯೋ ಹಂಚಿಕೊಂಡಿದ್ದಾರೆ.
ಕೋಕಿಲಾಬೆನ್ ಅಂಬಾನಿ ಬಳಿಯಿದೆ ಶಾರ್ಕ್ ಟ್ಯಾಂಕ್ ಇಂಡಿಯಾದ ಎಲ್ಲ ತೀರ್ಪುಗಾರರನ್ನು ಖರೀದಿಸುವಷ್ಟು ಸಂಪತ್ತು!
ಶಾರ್ಕ್ ಟ್ಯಾಂಕ್ ಇಂಡಿಯಾದ ತೀರ್ಪುಗಾರರಾಗಿ ಅಜರ್ ಇಕ್ಬಾಲ್ ಅವರನ್ನು ಘೋಷಿಸುವ ಮುನ್ನ ಸೆಪ್ಟೆಂಬರ್ 30ರಂದು ಓಯೋ ರೂಮ್ಸ್ ಸಿಇಒ ರಿತೇಶ್ ಅರ್ಗವಾಲ್ ಅವರನ್ನು ತೀರ್ಪುಗಾರರನ್ನಾಗಿ ಆಯ್ಕೆ ಮಾಡಿರುವ ಬಗ್ಗೆ ಶೋ ಮಾಹಿತಿ ನೀಡಿತ್ತು. ಇನ್ನು ಝೊಮ್ಯಾಟೋ ಸಿಇಒ ದೀಪಿಂದರ್ ಗೋಯಲ್ ಅವರನ್ನು ತೀರ್ಪುಗಾರರನ್ನಾಗಿ ಆಯ್ಕೆ ಮಾಡಿರುವ ಬಗ್ಗೆ ಈ ಹಿಂದಿನ ಶನಿವಾರ ಪ್ರಕಟಿಸಿತ್ತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.