ಇನ್ಫಿ ಈಗ 100 ಶತಕೋಟಿ ಡಾಲರ್‌ ಮೌಲ್ಯದ ಕಂಪನಿ!

By Kannadaprabha NewsFirst Published Aug 25, 2021, 8:23 AM IST
Highlights

* ದೇಶದ ಎರಡನೇ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಕಂಪನಿಯಾದ ಬೆಂಗಳೂರು ಮೂಲದ ಇಸ್ಫೋಸಿಸ್‌

* ಇನ್ಫಿ ಈಗ 100 ಶತಕೋಟಿ ಡಾಲರ್‌ ಮೌಲ್ಯದ ಕಂಪನಿ

* ಈ ಸಾಧನೆ ಮಾಡಿದ 4ನೇ ಭಾರತೀಯ ಸಂಸ್ಥೆ

ಮುಂಬೈ(ಆ.25): ದೇಶದ ಎರಡನೇ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಕಂಪನಿಯಾದ ಬೆಂಗಳೂರು ಮೂಲದ ಇಸ್ಫೋಸಿಸ್‌, ಮಂಗಳವಾರ ಹೊಸ ಮೈಲುಗಲ್ಲೊಂದನ್ನು ಸ್ಥಾಪಿಸಿದೆ. ಮಂಗಳವಾರ ಕಂಪನಿಯ ಷೇರು ಮೌಲ್ಯ ಭರ್ಜರಿ ಏರಿಕೆ ಕಂಡಿದ್ದು, ಇದರೊಂದಿಗೆ ಕಂಪನಿಯ ಮಾರುಕಟ್ಟೆಬಂಡವಾಳದ ಪ್ರಮಾಣ 100 ಶತಕೋಟಿ ಡಾಲರ್‌ (7,50,000 ಕೋಟಿ ರು.) ದಾಟಿದೆ.

ಈ ಮೂಲಕ ರಿಲಯನ್ಸ್‌ (10,50,000 ಕೋಟಿ ರು.), ಟಿಸಿಎಸ್‌ (8.65 ಲಕ್ಷ ಕೋಟಿ ರು.), ಎಚ್‌ಡಿಎಫ್‌ಸಿ (7.57 ಲಕ್ಷ ಕೋಟಿ ರು.) ನಂತರ ಇಂಥ ಸಾಧನೆ ಮಾಡಿದ ಭಾರತದ 4ನೇ ಕಂಪನಿ ಎಂಬ ಹಿರಿಮೆಗೆ ಪಾತ್ರವಾಗಿದೆ.

ಕಂಪನಿ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ತನ್ನ ಲಾಭದಲ್ಲಿ ಶೇ.22.7ರಷ್ಟುಭರ್ಜರಿ ಏರಿಕೆ ದಾಖಲಿಸಿದೆ. ಅಲ್ಲದೆ ಜೂನ್‌ 2021ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 5195 ಕೋಟಿ ರು. ಲಾಭಗಳಿಸಿದೆ. ಅಲ್ಲದೆ ಒಟ್ಟಾರೆ ಹಣಕಾಸು ವರ್ಷದಲ್ಲೂ ಉತ್ತಮ ಪ್ರಗತಿ ಭರವಸೆ ವ್ಯಕ್ತಪಡಿಸಿದೆ. ಈ ಎಲ್ಲಾ ಅಂಶಗಳು ಕಂಪನಿಯ ಷೇರು ಮೌಲ್ಯವನ್ನು ಮೇಲಕ್ಕೆ ಎತ್ತಿವೆ. ಪರಿಣಾಮ ಮಧ್ಯಂತರ ಅವಧಿಯಲ್ಲಿ ಇಸ್ಫೋಸಿಸ್‌ ಷೇರು ಮೌಲ್ಯ 1755 ರು.ವರೆಗೆ ತಲುಪಿತ್ತು. ಆದರೆ ಬಳಿಕ ಅಲ್ಪ ಇಳಿಕೆ ಕಂಡು 1721 ರು.ನಲ್ಲಿ ಅಂತ್ಯವಾಯಿತು.

click me!