ಇರಾನ್ ಜೊತೆ ಇನ್ಮುಂದೆ ರೂಪಾಯಿಯಲ್ಲೇ ವ್ಯವಹರಿಸಲಿದೆ ಭಾರತ! ಇರಾನ್ ಮೇಲಿನ ಅಮೆರಿಕದ ನಿರ್ಬಂಧನಕ್ಕೆ ಕ್ಷಣಗಣನೆ! ರೂಪಾಯಿಯಲ್ಲೇ ತೈಲ ಆಮದು ಮಾಡಿಕೊಳ್ಳಲಿದೆ ಭಾರತ! ಯೂಕೋ ಬ್ಯಾಂಕ್ ಮೂಲಕ ತೈಲ ಆಮದಿನ ದರ ಪಾವತಿ
ನವದೆಹಲಿ(ನ.4): ಇರಾನ್‌ನಿಂದ ಆಮದು ಮಾಡಿಕೊಳ್ಳುವ ತೈಲಕ್ಕೆ ಇನ್ನು ಮುಂದೆ ಭಾರತ ಡಾಲರ್, ಯೂರೋ ಬದಲಾಗಿ ರೂಪಾಯಿಯಲ್ಲೇ ಪಾವತಿ ಮಾಡಲಿದೆ.
ಇರಾನ್ ಮೇಲಿನ ಅಮೆರಿಕದ ನಿರ್ಬಂಧ ಜಾರಿಯದ ಬೆನ್ನಲ್ಲೇ, ಉಭಯ ರಾಷ್ಟ್ರಗಳು ಪ್ರತ್ಯೇಕವಾಗಿ ರೂಪಾಯಿ ಮೂಲಕವೇ ಪಾವತಿ ಮಾಡುವ ವ್ಯವಸ್ಥೆ ಜಾರಿಗೆ ಕ್ರಮ ಕೈಗೊಂಡಿವೆ. ಇನ್ನು ಮುಂದೆ ಯುಕೋ ಬ್ಯಾಂಕ್ ಮೂಲಕವೇ ಭಾರತ ಇರಾನ್‌ಗೆ ತೈಲ ಆಮದಿನ ದರವನ್ನು ಪಾವತಿಸಲಿದೆ.
ಅಮೆರಿಕದ ನಿರ್ಬಂಧ ಸೋಮವಾರದಿಂದ ಜಾರಿಗೆ ಬರುತ್ತಿದ್ದು, ಭಾರತ ಇರಾನ್‌ಗೆ ಆಮದು ಮಾಡಿಕೊಂಡ ತೈಲಕ್ಕೆ ಪೂರ್ತಿ ಮೊತ್ತವನ್ನು ರೂಪಾಯಿ ಮೂಲಕವೇ ಪಾವತಿಸುತ್ತದೆ. ಈ ಮೊದಲು ಶೇ. 45 ರೂಪಾಯಿ ಮತ್ತು ಶೇ. 55 ಯೂರೋ ಮೂಲಕ ಪಾವತಿಸಲಾಗುತ್ತಿತ್ತು.
ಭಾರತವು ಇರಾನ್‌ಗೆ ಪಾವತಿಸುವ ಮೊತ್ತವನ್ನು ಇರಾನ್ ಭಾರತದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಪಾವತಿಗೆ ಬಳಸಿಕೊಳ್ಳಲಿದೆ. ಜೊತೆಗೆ ಇರಾನ್‌ನ ಬ್ಯಾಂಕ್‌ಗಳಿಗೆ ಭಾರತದಿಂದ ಪಾವತಿಸುವ ಹಣಕಾಸು ವ್ಯವಸ್ಥೆ ಮೇಲೆ ನಿರ್ಬಂಧ ವಿಧಿಸಿದರೂ, ಯಾವುದೇ ಸಮಸ್ಯೆಯಾಗದಂತೆ ಮತ್ತು ಭಾರತವು ರೂಪಾಯಿಯಲ್ಲೇ ಪಾವತಿಸುವಂತೆ ವ್ಯವಸ್ಥೆ ರೂಪಿಸಿಕೊಳ್ಳಲಿದೆ.