2030ರ ವೇಳೆಗೆ ಜಪಾನ್ ದೇಶವನ್ನು ಹಿಂದಿಕ್ಕಿ ಏಷ್ಯಾದ 2ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ. ಅಮೆರಿಕವನ್ನು ಹಿಂದಿಕ್ಕಿ ಚೀನಾ ನಂ. 1 ಸ್ಥಾನದಲ್ಲಿರಲಿದೆ ಎಂದು ಜಾಗತಿಕ ರೇಟಿಂಗ್ ಏಜೆನ್ಸಿಯಾದ ಎಸ್ ಆ್ಯಂಡ್ ಪಿ ಹೇಳಿದೆ.
ನವದೆಹಲಿ (ಅಕ್ಟೋಬರ್ 25, 2023): ‘ಹಾಲಿ ವಿಶ್ವದಲ್ಲೇ 5ನೇ ಅತಿದೊಡ್ಡ ಆರ್ಥಿಕತೆ ಎಂಬ ಹಿರಿಮೆ ಹೊಂದಿರುವ ಭಾರತ, 2030ರ ವೇಳೆಗೆ ಜಪಾನ್ ದೇಶವನ್ನು ಹಿಂದಿಕ್ಕಿ ಏಷ್ಯಾದ 2ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ. ಮೊದಲ ಸ್ಥಾನದಲ್ಲಿ ಚೀನಾ ಇರಲಿದೆ’ ಜಾಗತಿಕ ರೇಟಿಂಗ್ ಏಜೆನ್ಸಿಯಾದ ‘ಎಸ್ ಆ್ಯಂಡ್ ಪಿ ಗ್ಲೋಬಲ್’ ತನ್ನ ಹೊಸ ವರದಿಯಲ್ಲಿ ತಿಳಿಸಿದೆ. ಹಾಗೂ, ಅಮೆರಿಕವನ್ನು ಹಿಂದಿಕ್ಕಿ ಚೀನಾ ನಂ. 1 ಸ್ಥಾನದಲ್ಲಿರಲಿದೆ ಎಂದೂ ಹೇಳಿದೆ.
2021 ಮತ್ತು 22ರಲ್ಲಿ ಉತ್ತಮ ಆರ್ಥಿಕ ಪ್ರಗತಿ ದಾಖಲಿಸಿದ ಭಾರತ 2023ನೇ ಹಣಕಾಸು ವರ್ಷದಲ್ಲೂ ಸುಸ್ಥಿರವಾದ ಬೆಳವಣಿಗೆಯನ್ನು ಮುಂದುವರೆಸಲಿದೆ. 2024ರ ಮಾರ್ಚ್‌ಗೆ ಕೊನೆಗೊಳ್ಳಲಿರುವ ಹಣಕಾಸು ವರ್ಷದಲ್ಲಿ ಭಾರತ ಶೇ. 6.2 - ಶೇ. 6.3ರಷ್ಟು ಜಿಡಿಪಿ ಬೆಳವಣಿಗೆ ಸಾಧಿಸುವ ನಿರೀಕ್ಷೆ ಇದೆ. ಈ ಮೂಲಕ ಅತಿವೇಗದ ಬೆಳವಣಿಗೆ ಸಾಧಿಸಿದ ಆರ್ಥಿಕತೆ ಎಂಬ ಹಿರಿಮೆಯನ್ನು ತನ್ನಲ್ಲೇ ಉಳಿಸಿಕೊಳ್ಳಲಿದೆ. 2022ರಲ್ಲಿ 287 ಲಕ್ಷ ಕೋಟಿ ರೂ. (3.5 ಲಕ್ಷ ಕೋಟಿ ಡಾಲರ್) ಜಿಡಿಪಿ ಹೊಂದಿದ್ದ ಭಾರತ 2030ರ ವೇಳೆಗೆ 600 ಲಕ್ಷ ಕೋಟಿ ರೂ. (7.3 ಶತಕೋಟಿ ಡಾಲರ್) ತಲುಪಲಿದೆ. ಈ ಮೂಲಕ ಜಪಾನ್ ಹಿಂದಿಕ್ಕಿ ಏಷ್ಯಾದ 2ನೇ ಅತಿದೊಡ್ಡ ಆರ್ಥಿಕತೆಯಾಗಿ ಭಾರತ ಹೊರಹೊಮ್ಮಲಿದೆ ಎಂದು ವರದಿ ಹೇಳಿದೆ.
ಇದನ್ನು ಓದಿ: ಕೇವಲ 11,599 ರೂ. ಗೆ ಸಿಗ್ತಿದೆ ದುಬಾರಿ ಆ್ಯಪಲ್ ಐಫೋನ್ 13: ಇಲ್ಲಿದೆ ಸೂಪರ್ ಆಫರ್!
ಈ ವರ್ಷ ನಂ.4:
2022ರಲ್ಲಿ ಭಾರತ ಬ್ರಿಟನ್ ಮತ್ತು ಫ್ರಾನ್ಸ್ ಹಿಂದಿಕ್ಕಿ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿತ್ತು. ಇನ್ನು 2023ರ ವೇಳೆಗೆ ಜರ್ಮನಿ ದೇಶವನ್ನೂ ಭಾರತ ಹಿಂದಿಕ್ಕಲಿದೆ. ಈ ಮೂಲಕ 4ನೇ ಸ್ಥಾನಕ್ಕೆ ಏರಿಲಿದೆ ಎಂದು ಎಸ್ ಆ್ಯಂಡ್ ಪಿ ವಿಶ್ಲೇಷಿಸಿದೆ.
ಹಾಲಿ ಅಮೆರಿಕ (25.5 ಲಕ್ಷ ಕೋಟಿ ಡಾಲರ್), ಚೀನಾ (18 ಲಕ್ಷ ಕೋಟಿ ಡಾಲರ್), ಜಪಾನ್ (4.2 ಲಕ್ಷ ಕೋಟಿ ಡಾಲರ್), ಜರ್ಮನಿ (4 ಲಕ್ಷ ಕೋಟಿ ಡಾಲರ್) ಮತ್ತು ಭಾರತ (3.5 ಲಕ್ಷ ಕೋಟಿ ಡಾಲರ್) ಆರ್ಥಿಕತೆ ಹೊಂದಿವೆ.
ಇದನ್ನೂ ಓದಿ: ಮನರಂಜನಾ ಉದ್ಯಮದಲ್ಲೂ ಅಂಬಾನಿಯದ್ದೇ ಸಾಮ್ರಾಜ್ಯ: ಡಿಸ್ನಿ ಹಾಟ್‌ಸ್ಟಾರ್ ಕೂಡ ರಿಲಯನ್ಸ್ ಪಾಲು!
ಏರಿಕೆಗೆ ಕಾರಣವೇನು?:
ಬಹುದೊಡ್ಡ ಮತ್ತು ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಭಾರತದ ಮಧ್ಯಮ ವರ್ಗ, ದೇಶೀಯ ಮಾರುಕಟ್ಟೆಯ ವೇಗದ ಬೆಳವಣಿಗೆ, ದೇಶದ ಕೈಗಾರಿಕಾ ವಲಯಗಳಲ್ಲಿ ಹೆಚ್ಚುತ್ತಿರುವ ವಿದೇಶಿ ಬಂಡವಾಳ, ಕ್ರಾಂತಿಕಾರಕ ಡಿಜಿಟಲ್ ಪರಿವರ್ತನೆ, ಅಂತರ್ಜಾಲ ಬಳಕೆದಾರರ ಪ್ರಮಾಣದಲ್ಲಿನ ಗಮನಾರ್ಹ ಏರಿಕೆಯು ಭಾರತದ ಆರ್ಥಿಕ ಪ್ರಗತಿಗೆ ಪ್ರಮುಖವಾಗಿ ಕಾರಣವಾಗಲಿದೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.
ಇದನ್ನೂ ಓದಿ: ಎಫ್‌ಡಿಯಲ್ಲಿ ಹಣ ಹೂಡಿಕೆ ಮಾಡಬೇಕಾ? ಈ 2 ಬ್ಯಾಂಕ್‌ನಲ್ಲಿದೆ ಹೆಚ್ಚು ಬಡ್ಡಿ ಪಡೆಯೋ ಅತ್ಯುತ್ತಮ ಅವಕಾಶ