ಹಸಿರು ಮನೆ ಅನಿಲಗಳ ಹೊರಸೂಸುವಿಕೆ ಪ್ರಮಾಣ ತಗ್ಗಿಸುವಲ್ಲಿ ಭಾರತ ಯಶಸ್ವಿ; 14 ವರ್ಷಗಳಲ್ಲಿ ಶೇ.33ರಷ್ಟು ಇಳಿಕೆ

By Suvarna News  |  First Published Aug 16, 2023, 6:17 PM IST

ಹಸಿರು ಮನೆ ಅನಿಲಗಳ ಹೊರಸೂಸುವಿಕೆ ತಗ್ಗಿಸುವಲ್ಲಿ ಭಾರತ ಯಶಸ್ಸು ಕಂಡಿದೆ ಎಂದು ವಿಶ್ವಸಂಸ್ಥೆಗೆ ಸಲ್ಲಿಕೆ ಮಾಡಿರುವ ವರದಿಯಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ. 
 


ನವದೆಹಲಿ (ಆ.16): ಭಾರತದಲ್ಲಿ ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಹೆಚ್ಚಳ ಹಾಗೂ ಅರಣ್ಯ ಪ್ರದೇಶದಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ಹಸಿರು ಮನೆ ಅನಿಲಗಳ ಹೊರಸೂಸುವಿಕೆ ದರ 14 ವರ್ಷಗಳಲ್ಲಿ ನಿರೀಕ್ಷೆಗಿಂತ ವೇಗವಾಗಿ ತಗ್ಗಿದೆ ಎಂದು ಇಬ್ಬರು ಅಧಿಕಾರಿಗಳು ವಿಶ್ವಸಂಸ್ಥೆಗೆ ಸಲ್ಲಿಕೆ ಮಾಡಿರುವ ಗೌಪ್ಯ ವರದಿ ತಿಳಿಸಿದೆ. ಈ ಇಬ್ಬರು ಅಧಿಕಾರಿಗಳು ಭಾರತದಲ್ಲಿ ಹಸಿರುಮನೆ ಅನಿಲಗಳ ಹೊರಸೂಸುವಿಕೆ ಬಗ್ಗೆ ರಹಸ್ಯವಾಗಿ ಮೌಲ್ಯಮಾಪನ ಮಾಡಿ, ವರದಿ ಸಲ್ಲಿಕೆ ಮಾಡಿದ್ದರು. ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆ ಒಡಂಬಡಿಕೆಗೆ (ಯುಎನ್ ಎಫ್ ಸಿಸಿಸಿ) ಭಾರತ ತನ್ನ ಬದ್ಧತೆಯನ್ನು ಪ್ರದರ್ಶಿಸುತ್ತಿದೆ ಎಂಬುದನ್ನು ವರದಿಯಲ್ಲಿರುವ ಅಂಶಗಳು ಸ್ಪಷ್ಟಪಡಿಸಿವೆ. 2030ರ ವೇಳೆಗೆ 2005ರಲ್ಲಿದ್ದ ಹೊಗೆ ಹೊರಸೂಸುವಿಕೆ ಪ್ರಮಾಣದ ತೀವ್ರತೆಯನ್ನು ಶೇ.45ರಷ್ಟು ತಗ್ಗಿಸುವ ಪ್ರತಿಜ್ಞೆಯನ್ನು ಭಾರತ ಮಾಡಿತ್ತು. 
ದೇಶದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ)ಗೆ ಹೋಲಿಸಿದರೆ ಭಾರತದ ಅನಿಲ ಹೊರಸೂಸುವಿಕೆ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. ಇದರಲ್ಲಿ 2005ರಿಂದ 2019ರ ತನಕ ಶೇ.33ರಷ್ಟುಇಳಿಕೆಯಾಗಿದೆ ಎಂದು ಮೂರನೇ ರಾಷ್ಟ್ರೀಯ ಸಂವಹನ (ಟಿಎನ್ ಸಿ) ಸಿದ್ಧತೆಗೆ ಅಧಿಕಾರಿಗಳು ನಡೆಸಿದ ಅಧ್ಯಯನ ತಿಳಿಸಿದೆ. 

ಹಸಿರು ಮನೆ ಅನಿಲಗಳ ಹೊರಸೂಸುವಿಕೆ ತಗ್ಗಿಸುವ ನಿಟ್ಟಿನಲ್ಲಿ ತಾವು ಕೈಗೊಂಡ ಕ್ರಮಗಳ ಬಗ್ಗೆ ಯುಎನ್ ಎಫ್ ಸಿಸಿಸಿಗೆ ಮಾಹಿತಿ ನೀಡಲು  ಅನೇಕ ರಾಷ್ಟ್ರಗಳು ತಮ್ಮ ಟಿಎನ್ ಸಿ ವರದಿಗಳನ್ನು ಸಿದ್ಧಪಡಿಸುತ್ತಿವೆ. 2016-2019 ಅವಧಿಯಲ್ಲಿ ಭಾರತದ ಅನಿಲ ಹೊರಸೂಸುವಿಕೆ ಪ್ರಮಾಣದಲ್ಲಿ ಇಳಿಕೆಯಾಗಿರುವ ಸರಾಸರಿ ದರ ವಾರ್ಷಿಕ ಶೇ.3ಕ್ಕೆ ಹೆಚ್ಚಳವಾಗಿತ್ತು.  ಇದು 2014-2016ರ ಅವಧಿಯಲ್ಲಿ ಕೇವಲ ಶೇ.1.5ರಷ್ಟಿತ್ತು. ಹೀಗಾಗಿ ಇದು ಇಲ್ಲಿಯ ತನಕದ ಅತ್ಯಂತ ವೇಗದ ಇಳಿಕೆಯಾಗಿದೆ. ಇನ್ನು ಭಾರತದ ಇಂಧನ ಮಿಶ್ರಣದಲ್ಲಿ ಸಾಂಪ್ರದಾಯಿಕ ಇಂಧನಗಳು ನಿರ್ಣಾಯಕ ಸ್ಥಾನ ಗಳಿಸಿದ್ದರೂ ನವೀಕರಿಸಬಹುದಾದ ಇಂಧನಗಳ ಬಳಕೆಗೆ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಪ್ರೋತ್ಸಾಹ ನೀಡುತ್ತಿರುವ ಕಾರಣ ಹಸಿರು ಅನಿಲಗಳ ಹೊರಸೂಸುವಿಕೆಯಲ್ಲಿ ತ್ವರಿತ ಇಳಿಕೆಯಾಗಿದೆ.

Tap to resize

Latest Videos

2027ಕ್ಕೆ ದೇಶದಲ್ಲಿ ಡೀಸೆಲ್‌ ಕಾರು, ಜೀಪು ಬ್ಯಾನ್‌? ಎಲೆಕ್ಟ್ರಿಕ್‌, ಅನಿಲ ಆಧರಿತ ವಾಹನ ಬಳಕೆಗೆ ಶಿಫಾರಸು

ಹಸಿರು ಅನಿಲಗಳ ಹೊರಸೂಸುವಿಕೆ ಪ್ರಮಾಣದಲ್ಲಿ ಇಳಿಕೆಯಾಗಿರೋದು ಭಾರತಕ್ಕೆ ಕಲ್ಲಿದ್ದಲು ಬಳಕೆಯನ್ನು ನಿಲ್ಲಿಸುವಂತೆ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳು ಹೇರುತ್ತಿರುವ ಒತ್ತಡವನ್ನು ತಗ್ಗಿಸಲು ನೆರವು ನೀಡಬೇಕು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅರಣ್ಯ ಪ್ರದೇಶದಲ್ಲಿ ಗಮನಾರ್ಹ ಏರಿಕೆ, ಪಳಿಯುಳಿಕೆ ರಹಿತ ಅಥವಾ ಸಾಂಪ್ರದಾಯಿಕವಲ್ಲದ ಇಂಧನಗಳ ಉತ್ಪಾದನೆಗೆ ಉತ್ತೇಜನ ನೀಡುವ ಯೋಜನೆಗಳು ಹಾಗೂ ಕೈಗಾರಿಕೆಗಳು, ವಾಹನಗಳು ಹಾಗೂ ಇಂಧನ ವಲಯಗಳಲ್ಲಿ ಅನಿಲ ಹೊರಸೂಸುವಿಕೆಗೆ ಗುರಿ ನಿಗದಿಪಡಿಸಿರೋದು ಭಾರತದ ಅನಿಲ ಹೊರಸೂಸುವಿಕೆ ಪ್ರಮಾಣದಲ್ಲಿ ತೀವ್ರ ಇಳಿಕೆಗೆ ಕಾರಣವಾಗಿದೆ. 

2019ರ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಅರಣ್ಯಗಳು ಹಾಗೂ ಮರಗಳು ಒಟ್ಟು ಶೇ.24.56 ಅಥವಾ 80.73 ಮಿಲಿಯನ್ ಹೆಕ್ಟೇರ್ ಭೂಪ್ರದೇಶವನ್ನು ಆವರಿಸಿವೆ. ಇತ್ತೀಚೆಗೆ ಭಾರತ ಹಸಿರು ಜಲಜನಕವನ್ನು ಉತ್ತೇಜಿಸಲು ಕೂಡ ಪ್ರಯತ್ನಿಸುತ್ತಿದೆ. ನವೀಕರಿಸಬಹುದಾದ ಇಂಧನ ಬಳಸಿಕೊಂಡು ನೀರಿನ ಅಣುಗಳನ್ನು ಒಡೆದು ಹೈಡ್ರೋಜನ್ ಉತ್ಪಾದನೆಗೆ ಉತ್ತೇಜನ ನೀಡಲು ಪ್ರಯತ್ನಿಸುತ್ತಿದೆ. 

ಗ್ಯಾಸ್ ಸ್ಟೌವ್ ಹೊರಸೂಸುವ ಅನಿಲಗಳಿಂದ ಶ್ವಾಸಕೋಶಕ್ಕೆ ವಿಪರೀತ ಹಾನಿ: ಅಧ್ಯಯನ!

ಕೇಂದ್ರ ಸರ್ಕಾರದ ವಿದ್ಯುತ್ ಪ್ರಾಧಿಕಾರದ ಅಂಕಿಅಂಶಗಳ ಅನ್ವಯ ಈ ವರ್ಷದ ಮಾರ್ಚ್ ಗೆ ಅಂತ್ಯವಾದ ಹಣಕಾಸು ವರ್ಷದಲ್ಲಿ ಜಲ, ನ್ಯೂಕ್ಲಿಯರ್ ಹಾಗೂ ನವೀಕರಿಸಬಹುದಾದ ಇಂಧನಗಳು ಭಾರತದ ಒಟ್ಟು ವಿದ್ಯುತ್ ಉತ್ಪಾದನೆಯ ಶೇ.25.3ರಷ್ಟಿದೆ. ಇವುಗಳ ಪ್ರಮಾಣ ಮೂರು ವರ್ಷಗಳ ಹಿಂದೆ ಶೇ.24.6ರಷ್ಟಿತ್ತು.ಇನ್ನು ಉಷ್ಣ ವಿದ್ಯುತ್ ಕೇಂದ್ರಗಳು ವಿದ್ಯುತ್ ಬಳಕೆಯ ಶೇ.73ರಷ್ಟನ್ನು ಒದಗಿಸುತ್ತಿವೆ. ಇದರ ಪ್ರಮಾಣ  2019ರಲ್ಲಿ ಶೇ.75ರಷ್ಟಿತ್ತು. 

ಜಿ20 ಪ್ರಮುಖ ಆರ್ಥಿಕತೆಗಳು ಕಳೆದ ತಿಂಗಳಲ್ಲಿ ಪಳೆಯುಳಿಕೆ ಇಂಧನಗಳ ಬಳಕೆ ತಗ್ಗಿಸುವ ಹಾಗೂ ಹಸಿರುಮನೆ ಅನಿಲಗಳ ಹೊರಸೂಸುವಿಕೆ ತಗ್ಗಿಸುವ ನಿಟ್ಟಿನಲ್ಲಿ ಗುರಿ ನಿಗದಿಪಡಿಸುವಲ್ಲಿ ಎರಡು ಬಾರಿ ವಿಫಲವಾಗಿದ್ದವು. 

click me!