Ban On Wheat Export:ಹಣದುಬ್ಬರ ಏರಿಕೆಗೆ ಕಡಿವಾಣ ಹಾಕಲು ಗೋಧಿ ರಫ್ತಿನ ಮೇಲೆ ನಿಷೇಧ ಹೇರಿದ ಕೇಂದ್ರ ಸರ್ಕಾರ

By Suvarna News  |  First Published May 14, 2022, 1:47 PM IST

*ಜಾಗತಿಕ ಮಟ್ಟದಲ್ಲಿ ಗೋಧಿ ಬೆಲೆಯಲ್ಲಿ ದಿಢೀರ್ ಏರಿಕೆ 
*ಗೋಧಿ ರಫ್ತಿನ ಮೇಲೆ ನಿಷೇಧ ತಕ್ಷಣದಿಂದಲೇ ಜಾರಿಗೆ ಬರುವಂತೆ ಶುಕ್ರವಾರ ತಡರಾತ್ರಿ ಅಧಿಸೂಚನೆ 
*ದೇಶದ ಆಹಾರ ಭದ್ರತೆ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡ ಸರ್ಕಾರ
 


ನವದೆಹಲಿ (ಮೇ 14): ಹಣದುಬ್ಬರ (Inflation) ಏರಿಕೆಗೆ ಕಡಿವಾಣ ಹಾಕಲು ತಕ್ಷಣದಿಂದಲೇ ಜಾರಿಗೆ ಬರುವಂತೆ ಗೋಧಿ (Wheat) ರಫ್ತಿನ (Export) ಮೇಲೆ ಭಾರತ ಸರ್ಕಾರ ನಿಷೇಧ ಹೇರಿದೆ. ಈ ಬಗ್ಗೆ ವಾಣಿಜ್ಯ ಸಚಿವಾಲಯ ( ministry of commerce) ಶುಕ್ರವಾರ (ಮೇ 13) ತಡರಾತ್ರಿ ಅಧಿಸೂಚನೆ (Notification) ಹೊರಡಿಸಿದೆ. ಮೇ 13ರಂದು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ  (DGDT) ಹೊರಡಿಸಿರುವ ಪ್ರಕಟಣೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಆಹಾರ ಧಾನ್ಯಗಳ ಬೆಲೆಯಲ್ಲಿ ದಿಢೀರ್ ಏರಿಕೆಯಾಗಿರುವ ಕಾರಣ ಗೋಧಿ ರಫ್ತಿನ ಮೇಲೆ ನಿಷೇಧ ಹೇರಲಾಗಿದೆ ಎಂದು ತಿಳಿಸಲಾಗಿದೆ. ಅಲ್ಲದೆ, ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ತಡೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೂಡ ಸ್ಪಷ್ಟಪಡಿಸಿದೆ. ಕೇಂದ್ರ ಸರ್ಕಾರ ಕೂಡ ದೇಶದ ಸಮಗ್ರ ಆಹಾರ ಭದ್ರತೆಯ ಹಿತದೃಷ್ಟಿಯಿಂದ ಗೋಧಿ ರಫ್ತಿನ ಮೇಲೆ ನಿಷೇಧ ಹೇರಲಾಗಿದೆ ಎಂದು ತಿಳಿಸಿದೆ.

ಈ ನಡುವೆ ಪ್ರಕಟಣೆ ಹೊರಡಿಸುವ ಮುನ್ನ ಅಥವಾ ನಂತರ ಗೋಧಿ ರಫ್ತಿಗೆ ಪಾವತಿಯಾಗಿರುವ ವಗೋಧಿ ಹಿವಾಟಿಗೆ ಅನುಮತಿ ನೀಡುವುದಾಗಿ ಡಿಜಿಎಫ್ ಟಿ ಪ್ರಕಟಣೆ ತಿಳಿಸಿದೆ. ಅಲ್ಲದೆ, ಇತರ ರಾಷ್ಟ್ರಗಳ ಆಹಾರ ಭದ್ರತೆ ಅಗತ್ಯಗಳನ್ನು ಪೂರೈಸುವ ಉದ್ದೇಶದಿಂದ ಹಾಗೂ ಆ ರಾಷ್ಟ್ರಗಳ ಸರ್ಕಾರಗಳ ಮನವಿಯ ಮೇರೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದರೆ ಆಗ ರಫ್ತಿಗೆ ಅವಕಾಶ ನೀಡಲಾಗುವುದು ಎಂದು ಕೂಡ ಈ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Tap to resize

Latest Videos

Price Hike: ಬ್ರೆಡ್,ಬಿಸ್ಕೆಟ್,ಚಪಾತಿಯನ್ನೂ ಬಿಡದ ಬೆಲೆಯೇರಿಕೆ ಭೂತ; ಗೋಧಿ ಹಿಟ್ಟಿನ ಬೆಲೆ ಗಗನಕ್ಕೆ!

ಜಾಗತಿಕ ಮಟ್ಟದಲ್ಲಿ ಗೋಧಿ ಬೆಲೆಯಲ್ಲಿ ದಿಢೀರ್ ಏರಿಕೆಯಾಗುವುದಕ್ಕೆ ಅನೇಕ ಕಾರಣಗಳಿವೆ. ಇದರಿಂದ ಭಾರತ ಹಾಗೂ ನೆರೆಯ ರಾಷ್ಟ್ರಗಳಿಗೆ ಅಪಾಯವಿದೆ. ಭಾರತ ಸರ್ಕಾರ ಭಾರತ, ನೆರೆಯ ರಾಷ್ಟ್ರಗಳು ಹಾಗೂ ಇತರ ದುರ್ಬಲ ರಾಷ್ಟ್ರಗಳ ಆಹಾರ ಭದ್ರತೆ ಅಗತ್ಯಗಳನ್ನು ಪೂರೈಸಲು ಬದ್ಧವಾಗಿದೆ. ಗೋಧಿಯ ಜಾಗತಿಕ ಮಾರುಕಟ್ಟೆಯಲ್ಲಾದ ದಿಢೀರ್ ಬದಲಾವಣೆಯಿಂದ ಈ ರಾಷ್ಟ್ರಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಈ ರಾಷ್ಟ್ರಗಳಿಗೆ ಅಗತ್ಯ ಮಟ್ಟದಲ್ಲಿ ಗೋಧಿ ಪೂರೈಕೆಗೆ ಅಡ್ಡಿ ಎದುರಾಗಿದೆ ಎಂದು ಡಿಜಿಎಫ್ ಟಿ ತಿಳಿಸಿದೆ. 

ಡಿಜಿಎಫ್ ಟಿ ಕೇಂದ್ರ ವಾಣಿಜ್ಯ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯಾಗಿದ್ದು, ಭಾರತ ಹಾಗೂ ನೆರೆಯ ರಾಷ್ಟ್ರಗಳ ಆಹಾರ ಭದ್ರತೆಗೆ ಧಕ್ಕೆಯಾಗದಂತೆ ಎಚ್ಚರ ವಹಿಸುವ ಸಲುವಾಗಿ ಗೋಧಿ ರಫ್ತಿನ ಮೇಲೆ ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಷೇಧ ಹೇರಲಾಗಿದೆ ಎಂದು ತಿಳಿಸಿದೆ.ಭಾರತದಲ್ಲಿ ಗೋಧಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದ್ದು, ವರ್ತಕರು ಹೆಚ್ಚಿನ ಪ್ರಮಾಣದಲ್ಲಿ ಗೋಧಿ ದಾಸ್ತಾನು ಮಾಡುತ್ತಿದ್ದಾರೆ. ಇದ್ರಿಂದ ಭಾರತದ ಗೋಧಿ ರಫ್ತಿನಲ್ಲಿ ಇಳಿಕೆ ಕಂಡುಬರುವ ಸಾಧ್ಯತೆಯಿದೆ ಎಂದು ಶುಕ್ರವಾರ ಮಾಧ್ಯಮಗಳಲ್ಲಿ ವರದಿ ಬಿತ್ತರವಾದ ಬೆನ್ನಲ್ಲೇ ಕೇಂದ್ರ ಸರ್ಕಾರ ಗೋಧಿ ರಫ್ತಿನ ಮೇಲೆ ನಿಷೇಧ ಹೇರುವ ನಿರ್ಧಾರ ಕೈಗೊಂಡಿದೆ. 

ಏಪ್ರಿಲ್ ನಲ್ಲಿ ಭಾರತದಲ್ಲಿ ಗೋಧಿ ಹಿಟ್ಟಿನ  ಮಾಸಿಕ ಸರಾಸರಿ ದರ ಕೆಜಿಗೆ 32.38 ರೂ. ತಲುಪಿದ್ದು, 2010ರ ಜನವರಿ ಬಳಿಕ ದಾಖಲಾದ ಅತ್ಯಧಿಕ ಬೆಲೆಯಾಗಿದೆ. ಇದರಿಂದ ಗೋಧಿ ಹಿಟ್ಟು ಬಳಸಿ ಸಿದ್ಧಪಡಿಸುವ ಖಾದ್ಯಗಳಾದ ಬ್ರೆಡ್ (Bread), ಬಿಸ್ಕೆಟ್ಸ್ (Biscuits) ದರ ಕೂಡ ಸರ್ವಕಾಲಿಕ ಏರಿಕೆ ಕಂಡಿವೆ. ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣ ಸಚಿವಾಲಯಕ್ಕೆ ರಾಜ್ಯಗಳ ನಾಗರಿಕ ಪೂರೈಕೆ ಇಲಾಖೆಗಳು ಸಲ್ಲಿಕೆ ಮಾಡಿದ ಅಂಕಿಅಂಶಗಳ ಪ್ರಕಾರ ಕಳೆದ ವಾರ ಗೋಧಿ ಹಿಟ್ಟಿನ ಅಖಿಲ ಭಾರತ ಸರಾಸರಿ ರಿಟೇಲ್ ದರ ಕೆ.ಜಿ.ಗೆ 32.78ರೂ. ಇದೆ. 

ಹಣದುಬ್ಬರ: ಉಪ್ಪಿನಿಂದ ಸೋಪಿನವರೆಗೆ.., ಬೆಲೆ ಹೆಚ್ಚಳವಿಲ್ಲ, ಆದ್ರೆ ಪ್ರಮಾಣ ಕಡಿಮೆ!

ಬೆಲೆಯೇರಿಕೆಗೆ ಕಾರಣಗಳೇನು?
ದೇಶದಲ್ಲಿ ಗೋಧಿ ಉತ್ಪಾದನೆ ಹಾಗೂ ದಾಸ್ತಾನಿನಲ್ಲಿ ಇಳಿಕೆಯಾಗಿರುವುದೇ ಬೆಲೆಯೇರಿಕೆಗೆ ಕಾರಣ ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಗೋಧಿ ಉತ್ಪಾದನೆ ಕಡಿಮೆಯಾಗಿದ್ದರೂ ವಿದೇಶಗಳಿಂದ ಬೇಡಿಕೆ ಹೆಚ್ಚಿದೆ. ಇನ್ನು ಡೀಸೆಲ್ ಬೆಲೆಯೇರಿಕೆ ಕೂಡ ಸಾಗಣೆ ವೆಚ್ಚವನ್ನು ಹೆಚ್ಚಿಸಿದೆ.  ರಷ್ಯಾ (Russia) -ಉಕ್ರೇನ್ (Ukraine)ಯುದ್ಧ ಜಾಗತಿಕ ಮಟ್ಟದಲ್ಲಿ ಗೋಧಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. 

click me!