2022-23ನೇ ಹಣಕಾಸು ಸಾಲಿನ ಐಟಿಆರ್ ಸಲ್ಲಿಕೆಗೆ ಜುಲೈ 31 ಅಂತಿಮ ಗಡುವಾಗಿತ್ತು. ಈ ಅವಧಿಯೊಳಗೆ ಐಟಿಆರ್ ಸಲ್ಲಿಕೆ ಮಾಡಲು ಸಾಧ್ಯವಾಗದವರ ಮುಂದೆ ಸದ್ಯಕ್ಕಿರುವ ಆಯ್ಕೆಗಳೇನು?
Business Desk: 2022-23ನೇ ಹಣಕಾಸು ಸಾಲಿನ ಐಟಿಆರ್ ಸಲ್ಲಿಕೆಗೆ ಜುಲೈ 31 ಕೊನೆಯ ದಿನವಾಗಿದ್ದು, ನಿನ್ನೆ ಸಂಜೆ ತನಕ ಒಟ್ಟು 6.50 ಕೋಟಿಗೂ ಅಧಿಕ ಆದಾಯ ತೆರಿಗೆ ರಿಟರ್ನ್ ಗಳು (ಐಟಿಆರ್ ಗಳು) ಸಲ್ಲಿಕೆಯಾಗಿವೆ. ಲೋಕಲ್ ಸರ್ಕಲ್ಸ್ ಇತ್ತೀಚಿಗಿನ ಸಮೀಕ್ಷೆ ಪ್ರಕಾರ ಒಟ್ಟು ತೆರಿಗೆದಾರರಲ್ಲಿ ಸುಮಾರು ಶೇ.14ರಷ್ಟು ಮಂದಿ ಕೊನೆಯ ದಿನಾಂಕದ ತನಕ ತಮ್ಮ ಐಟಿಆರ್ ಸಲ್ಲಿಕೆ ಮಾಡಿಲ್ಲ. ಹಾಗಾದ್ರೆ ನಿನ್ನೆ ಕೂಡ ಐಟಿಆರ್ ಸಲ್ಲಿಕೆ ಮಾಡಲು ಸಾಧ್ಯವಾಗದಿದ್ದವರು ಏನ್ ಮಾಡ್ಬೇಕು? ಅವರಿಗೆ ಐಟಿಆರ್ ಸಲ್ಲಿಕೆ ಮಾಡಲು ಅವಕಾಶವಿದೆಯಾ? ಆದಾಯ ತೆರಿಗೆ ನಿಯಮಗಳ ಪ್ರಕಾರ, ಅಂತಿಮ ದಿನಾಂಕದೊಳಗೆ ಐಟಿಆರ್ ಸಲ್ಲಿಕೆ ಮಾಡಲು ಸಾಧ್ಯವಾಗದ ತೆರಿಗೆದಾರರು ವಿಳಂಬ ಐಟಿಆರ್ ಸಲ್ಲಿಕೆ ಮಾಡಬಹುದು. ವಿಳಂಬ ಐಟಿಆರ್ ಸಲ್ಲಿಕೆಗೆ ಡಿಸೆಂಬರ್ 31ರ ತನಕ ಅವಕಾಶವಿದೆ. ಆದರೆ, ಇದಕ್ಕೆ ವಿಳಂಬ ಶುಲ್ಕ ಹಾಗೂ ಬಡ್ಡಿಯನ್ನು ಕೂಡ ದಂಡವಾಗಿ ಪಾವತಿಸಬೇಕಾಗುತ್ತದೆ. ಆದರೆ, ವಿಳಂಬ ಐಟಿಆರ್ ಸಲ್ಲಿಕೆಯಿಂದ ನೀವು ಕೆಲವೊಂದು ನಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಅದೇನೆಂದ್ರೆ ನಿಮಗೆ ತೆರಿಗೆ ರೀಫಂಡ್ ಸಿಗುವುದಿಲ್ಲ. ಇನ್ನು ಜುಲೈ 31ರೊಳಗೆ ನೀವು ಐಟಿಆರ್ ಸಲ್ಲಿಕೆ ಮಾಡದಿದ್ರೆ ಈ ವರ್ಷ ನೀವು ಅನುಭವಿಸಿದ ನಷ್ಟವನ್ನು ಮುಂದಿನ ಆರ್ಥಿಕ ಸಾಲಿನಲ್ಲಿ ನೀವು ಗಳಿಸೋ ಲಾಭಕ್ಕೆ ಸರಿಹೊಂದಿಸಲು ಕೂಡ ಸಾಧ್ಯವಾಗೋದಿಲ್ಲ.
ವಿಳಂಬ ಐಟಿಆರ್ (belated ITR) ಸಲ್ಲಿಕೆ
ಜುಲೈ 31ರೊಳಗೆ ಐಟಿಆರ್ ಸಲ್ಲಿಕೆ ಮಾಡಲು ಸಾಧ್ಯವಾಗದ ತೆರಿಗೆದಾರರು ವಿಳಂಬ ಐಟಿಆರ್ ಸಲ್ಲಿಕೆ ಮಾಡಬಹುದು. 2023-24ನೇ ಮೌಲ್ಯಮಾಪನ ವರ್ಷದ ವಿಳಂಬ ಐಟಿಆರ್ ಸಲ್ಲಿಕೆಗೆ ಡಿಸೆಂಬರ್ 31 ಕೊನೆಯ ದಿನಾಂಕವಾಗಿದೆ. ಆದರೆ, ವಿಳಂಬ ಐಟಿಆರ್ ಸಲ್ಲಿಕೆಗೆ ದಂಡ ಪಾವತಿಸಬೇಕಾಗುತ್ತದೆ. ಜೊತೆಗೆ ಬಡ್ಡಿ ಕೂಡ ವಿಧಿಸಲಾಗುತ್ತದೆ. ಆದಾಯ ತೆರಿಗೆ ಇಲಾಖೆ ಕಾಯ್ದೆ ಸೆಕ್ಷನ್ 34 ಎಫ್ ಅನ್ವಯ ಒಂದು ವೇಳೆ ನೀವು ನಿಮ್ಮ ಐಟಿಆರ್ ಅನ್ನು ಜುಲೈ 31ರ ಬಳಿಕ ಹಾಗೂ ಡಿಸೆಂಬರ್ 31ರೊಳಗೆ ಸಲ್ಲಿಕೆ ಮಾಡಿದರೆ ಆಗ ಗರಿಷ್ಠ 5,000ರೂ. ದಂಡ ವಿಧಿಸಲಾಗುತ್ತದೆ. ಒಟ್ಟು 5ಲಕ್ಷ ರೂ. ಹಾಗೂ ಅದಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವ ತೆರಿಗೆದಾರರು ಜು.31ರ ಬಳಿಕ ವಿಳಂಬ ಐಟಿಆರ್ ಸಲ್ಲಿಕೆ ಮಾಡಿದ್ರೆ 5,000ರೂ. ದಂಡ ಪಾವತಿಸಬೇಕು.ಇನ್ನು ಯಾರು ವಾರ್ಷಿಕ ಒಟ್ಟು 5ಲಕ್ಷ ರೂ. ತನಕ ಆದಾಯ ಹೊಂದಿದ್ದಾರೋ ಅವರು 1,000ರೂ. ದಂಡ ಪಾವತಿಸಬೇಕು. ಒಂದು ವೇಳೆ ಐಟಿಆರ್ ಅನ್ನು 2023ರ ಡಿಸೆಂಬರ್ 31ರ ಬಳಿಕ ಸಲ್ಲಿಕೆ ಮಾಡಿದರೆ 10,000ರೂ. ದಂಡ ಪಾವತಿಸಬೇಕಾಗುತ್ತದೆ. ಇನ್ನು ವಿಳಂಬ ತೆರಿಗೆ ಪಾವತಿಗೆ ತಿಂಗಳಿಗೆ ಶೇ.1ರಷ್ಟು ಬಡ್ಡಿ ವಿಧಿಸಲಾಗುತ್ತದೆ.
ಈ ವರ್ಷ ದಾಖಲೆಯ 6.5 ಕೋಟಿ ಐಟಿ ರಿಟರ್ನ್ಸ್ ಸಲ್ಲಿಕೆ: 14302 ಕೋಟಿ ಮೌಲ್ಯದ ಜಿಎಸ್ಟಿ ವಂಚನೆ ಪತ್ತೆ
ಪರಿಷ್ಕೃತ ಐಟಿಆರ್ ಸಲ್ಲಿಕೆಗೆ ಡಿ. 31 ಗಡುವು
ಒಂದು ವೇಳೆ ನೀವು ಜು.31ರೊಳಗೆ ಐಟಿಆರ್ ಸಲ್ಲಿಕೆ ಮಾಡಿದ್ದು, ಕೆಲವೊಂದು ತಿದ್ದುಪಡಿಗಳೊಂದಿಗೆ ಮತ್ತೆ ಸಲ್ಲಿಕೆ ಮಾಡಲು ಬಯಸಿದ್ರೆ ಡಿಸೆಂಬರ್ 31ರೊಳಗೆ ಸಲ್ಲಿಕೆ ಮಾಡಲು ಅವಕಾಶವಿದೆ. ಪರಿಷ್ಕೃತ ಐಟಿಆರ್ (revised return)ಸಲ್ಲಿಕೆಗೆ ಯಾವುದೇ ದಂಡ ಕಟ್ಟಬೇಕಾಗಿಲ್ಲ. ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 139(5) ಅಡಿಯಲ್ಲಿ ಐಟಿಆರ್ ನಲ್ಲಿನ ತಪ್ಪುಗಳನ್ನು ಸರಿಪಡಿಸಲು ಪರಿಷ್ಕೃತ ಐಟಿಆರ್ ಸಲ್ಲಿಕೆಗೆ ತೆರಿಗೆದಾರರಿಗೆ ಅವಕಾಶ ಕಲ್ಪಿಸಲಾಗಿದೆ. ಪರಿಷ್ಕೃತ ಐಟಿಆರ್ ಸಲ್ಲಿಕೆಗೆ ನಿರ್ದಿಷ್ಟ ಮಿತಿಯಿಲ್ಲ. ನೀವು ಎಷ್ಟು ಬಾರಿಯಾದ್ರೂ ಸಲ್ಲಿಕೆ ಮಾಡಬಹುದು. ಆದ್ರೆ ಪ್ರತಿ ಬಾರಿಯೂ ಪರಿಷ್ಕೃತ ಐಟಿಆರ್ ಸಲ್ಲಿಕೆ ಮಾಡೋವಾಗ ನಿಮ್ಮ ಮೂಲ ಐಟಿಆರ್ ಸಲ್ಲಿಕೆಯ ಮಾಹಿತಿಗಳನ್ನು ತಪ್ಪದೇ ಒದಗಿಸಬೇಕು. ಇನ್ನು ಪರಿಷ್ಕೃತ ಐಟಿಆರ್ ಸಲ್ಲಿಕೆ ಮಾಡಿದ ಬಳಿಕ ಅದನ್ನು ದೃಢೀಕರಿಸೋದು ಅಗತ್ಯ. ದೃಢೀಕರಿಸದಿದ್ರೆ ಆದಾಯ ತೆರಿಗೆ ಇಲಾಖೆ ನಿಮ್ಮ ಪರಿಷ್ಕೃತ ಐಟಿಆರ್ ಅನ್ನು ಸ್ವೀಕರಿಸೋದಿಲ್ಲ.
ವಿಳಂಬವಾದ್ರೆ ಏನೆಲ್ಲ ಸಮಸ್ಯೆಯಾಗುತ್ತೆ?
ನಿಗದಿತ ದಿನಾಂಕದೊಳಗೆ ಐಟಿಆರ್ ಸಲ್ಲಿಕೆ ಮಾಡದಿದ್ರೂ ವಿಳಂಬ ಐಟಿಆರ್ ಸಲ್ಲಿಕೆಗೆ ಅವಕಾಶವಿದ್ದರೂ ತೆರಿಗೆದಾರರು ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ವರ್ಷ ತೆರಿಗೆದಾರರು ಅನುಭವಿಸಿದ ನಷ್ಟವನ್ನು ಮುಂದಿನ ಆರ್ಥಿಕ ಸಾಲಿನಲ್ಲಿ ಅವರು ಗಳಿಸೋ ಲಾಭಕ್ಕೆ ಸರಿಹೊಂದಿಸೋ (Setoff)ಅವಕಾಶವನ್ನು ಕಳೆದುಕೊಳ್ಳುತ್ತಾರೆ. ಇನ್ನು ತೆರಿಗೆದಾರರ ಆದಾಯದಿಂದ ಈಗಾಗಲೇ ಹೆಚ್ಚುವರಿಯಾಗಿ ಕಡಿತಗೊಂಡ ತೆರಿಗೆಗೆ ಸೂಕ್ತ ದಾಖಲೆಗಳನ್ನು ಒದಗಿಸಿದ್ರೆ ಅದನ್ನು ಆದಾಯ ತೆರಿಗೆ ಇಲಾಖೆ ಮರುಪಾವತಿ (Refund) ಮಾಡುತ್ತದೆ. ಆದ್ರೆ ಜು.31ರೊಳಗೆ ಐಟಿಆರ್ ಫೈಲ್ ಮಾಡದ ತೆರಿಗೆದಾರರಿಗೆ ಮರುಪಾವತಿ (Refund)ಮಾಡೋದಿಲ್ಲ. ಅಷ್ಟೇ ಅಲ್ಲ, ಒಂದು ವೇಳೆ ತೆರಿಗೆದಾರ ಈ ತನಕ ಪಾವತಿ ಮಾಡಿದ ತೆರಿಗೆ ಆದಾಯ ತೆರಿಗೆ ಇಲಾಖೆ ಲೆಕ್ಕ ಹಾಕಿದ ತೆರಿಗೆಗಿಂತ ಕಡಿಮೆ ಇದ್ರೆ ಬಾಕಿ ತೆರಿಗೆ ಪಾವತಿಸೋ ಜೊತೆಗೆ ಅದಕ್ಕೆ ಬಡ್ಡಿ (Interest) ಕೂಡ ಕಟ್ಟಬೇಕಾಗುತ್ತದೆ. ಐಟಿ ರಿಟರ್ನ್ಸ್ ಅನ್ನು ನಿಗದಿತ ದಿನಾಂಕದೊಳಗೆ ಪಾವತಿಸದಿದ್ರೆನಿಮಗೆ 6 ತಿಂಗಳಿಂದ 7 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸುವ ಅಧಿಕಾರವನ್ನು ಕೂಡ ಕೇಂದ್ರ ಸರ್ಕಾರ ಹೊಂದಿದೆ.