2023-24ನೇ ಹಣಕಾಸು ಸಾಲಿನ ಅಡ್ವಾನ್ಸ್ ಟ್ಯಾಕ್ಸ್ ಪಾವತಿಗೆ ಮಾ.15 ಅಂತಿಮ ಗಡುವು. ಮಹತ್ವದ ಹಣಕಾಸಿನ ವಹಿವಾಟಿನಲ್ಲಿ ತೊಡಗಿರುವ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಗೆ ಬಾಕಿಯಿರುವ ಮುಂಗಡ ತೆರಿಗೆ ಪಾವತಿಗೆ ಸಂಬಂಧಿಸಿ ಆದಾಯ ತೆರಿಗೆ ಇಲಾಖೆ ಇ-ಮೇಲ್ ಅಥವಾ ಎಸ್ ಎಂಎಸ್ ಕಳುಹಿಸಲಿದೆ.
Business Desk: 2023-24ನೇ ಹಣಕಾಸು ಸಾಲಿನ ಮುಂಗಡ ತೆರಿಗೆ (ಅಡ್ವಾನ್ಸ್ ತೆರಿಗೆ) ಪಾವತಿಗೆ ಸಂಬಂಧಿಸಿ ಆದಾಯ ತೆರಿಗೆ ಇಲಾಖೆ ಇ-ಆಂದೋಲನ ಪ್ರಾರಂಭಿಸಿದೆ. ಮಹತ್ವದ ಹಣಕಾಸಿನ ವಹಿವಾಟಿನಲ್ಲಿ ತೊಡಗಿರುವ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಗೆ ಪಾವತಿಗೆ ಬಾಕಿಯಿರುವ ಮುಂಗಡ ತೆರಿಗೆಯನ್ನು ಸಮರ್ಪಕವಾಗಿ ಲೆಕ್ಕ ಹಾಕಿ, 2024ರ ಮಾರ್ಚ್ 15ರೊಳಗೆ ಪಾವತಿಸುವಂತೆ ಇ-ಮೇಲ್ ಅಥವಾ ಎಸ್ ಎಂಎಸ್ ಮೂಲಕ ಆದಾಯ ತೆರಿಗೆ ಇಲಾಖೆ ಸೂಚನೆ ನೀಡಲಿದೆ. ಆದಾಯ ತೆರಿಗೆ ಇಲಾಖೆ ಬಿಡುಗಡೆಗೊಳಿಸಿರುವ ಮಾಹಿತಿ ಅನ್ವಯ ವ್ಯಕ್ತಿಗಳು ಅಥವಾ ಸಂಸ್ಥೆಗಳು 2023-24ನೇ ಹಣಕಾಸು ಸಾಲಿನಲ್ಲಿ ನಡೆಸಿದ ನಿರ್ದಿಷ್ಟ ಹಣಕಾಸಿನ ವಹಿವಾಟನ್ನು ಪರಿಶೀಲನೆಗೊಳಪಡಿಸಲಾಗುವುದು. 2023-24 ನೇ ಹಣಕಾಸು ಸಾಲಿನಲ್ಲಿ ವ್ಯಕ್ತಿಗಳು ಅಥವಾ ಸಂಸ್ಥೆಗಳ ತೆರಿಗೆ ಪಾವತಿ ಈ ಅವಧಿಯಲ್ಲಿ ನಡೆದ ಅವರ ಹಣಕಾಸಿನ ವಹಿವಾಟುಗಳ ಜೊತೆಗೆ ಹೊಂದಾಣಿಕೆಯಾಗದಿದ್ರೆ ಅಂಥ ತೆರಿಗೆ ಪಾವತಿಗಳನ್ನು ಪರಿಶೀಲನೆಗೊಳಪಡಿಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಮಾಹಿತಿ ನೀಡಿದೆ.
ವಿವಿಧ ಮೂಲಗಳಿಂದ ನಿರ್ದಿಷ್ಟ ಹಣಕಾಸಿನ ವಹಿವಾಟುಗಳಿಗೆ ಸಂಬಂಧಿಸಿ ಆದಾಯ ತೆರಿಗೆ ಇಲಾಖೆ ಮಾಹಿತಿ ಕಲೆ ಹಾಕಲಿದೆ. ಈ ಮಾಹಿತಿಯನ್ನು ಆ ಬಳಿಕ ವಾರ್ಷಿಕ ಮಾಹಿತಿ ಸ್ಟೇಟ್ಮಂಟ್ (ಎಐಎಸ್) ಮಾದರಿಗೆ ಹೊಂದಿಸಲಾಗುವುದು. ಈ ಮೂಲಕ ಪಾರದರ್ಶಕತೆಯನ್ನು ಉತ್ತೇಜಿಸುವ ಜೊತೆಗೆ ಸ್ವಯಂ ತೆರಿಗೆ ಪಾವತಿಯನ್ನು ಉತ್ತೇಜಿಸಲಾಗುತ್ತದೆ. ಎಐಎಸ್ ಮಾದರಿ ವ್ಯಕ್ತಿಗಳು ಅಥವಾ ಸಂಸ್ಥೆಗಳ 'ಪ್ರಮುಖ ವಹಿವಾಟುಗಳ' ಮಾಹಿತಿಗಳನ್ನು ಪರಿಶೀಲಿಸಲಿದೆ. ಇದನ್ನು ಪ್ರಸಕ್ತ ವಿಶ್ಲೇಷಣೆಗೆ ಒಳಪಡಿಸಲಾಗುವುದು.
Advance Tax:ಯಾರು ಪಾವತಿಸಬೇಕು? ಅಂತಿಮ ಗಡುವು ಯಾವಾಗ? ಇಲ್ಲಿದೆ ಮಾಹಿತಿ
ಪ್ರಮುಖ ವಹಿವಾಟುಗಳ ಮಾಹಿತಿಗಳನ್ನು ಪಡೆಯಲು ವ್ಯಕ್ತಿಗಳು ಅಥವಾ ಸಂಸ್ಥೆಗಳು ತಮ್ಮ ಇ-ಫೈಲ್ಲಿಂಗ್ ಖಾತೆಗಳಿಗೆ ಲಾಗಿನ್ ಆಗಬಹುದು. ಒಂದು ವೇಳೆ ಇನ್ನೂ ಖಾತೆ ಮಾಡಿರದಿದ್ರೆ ಆದಾಯ ತೆರಿಗೆ ಇಲಾಖೆ ಇ-ಫೈಲ್ಲಿಂಗ್ ಪೋರ್ಟಲ್ ಗೆ ಭೇಟಿ ನೀಡಿ ಖಾತೆ ಕ್ರಿಯೇಟ್ ಮಾಡಿ. ಈ ಪೋರ್ಟಲ್ ನಲ್ಲಿ ಇ-ಕ್ಯಾಂಪೇನ್ ಟ್ಯಾಬ್ ಪ್ರಮುಖ ವಹಿವಾಟುಗಳ ಮಾಹಿತಿಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸುತ್ತದೆ.
ಆದಾಯ ತೆರಿಗೆ ಇಲಾಖೆ ಇ-ಫೈಲ್ಲಿಂಗ್ ಪೋರ್ಟಲ್ ನಲ್ಲಿ ಇನ್ನೂ ನೋಂದಣಿ ಮಾಡಿಸದವರು ಮೊದಲ ಆ ಕೆಲಸ ಮಾಡುವಂತೆ ಆದಾಯ ತೆರಿಗೆ ಇಲಾಖೆ ಸೂಚಿಸಿದೆ. ಇ-ಫೈಲ್ಲಿಂಗ್ ಪೋರ್ಟಲ್ ನಲ್ಲಿರುವ
'Register'ಬಟನ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಅಗತ್ಯ ಮಾಹಿತಿಗಳನ್ನು ನೀಡಬೇಕು. ಯಶಸ್ವಿಯಾಗಿ ನೋಂದಣಿ ಮಾಡಿದ ಬಳಿಕ ಇ-ಫೈಲ್ಲಿಂಗ್ ಖಾತೆಗೆ ಲಾಗಿನ್ ಆಗಬಹುದು.
ಆದಾಯ ತೆರಿಗೆ ಇಲಾಖೆ ಪ್ರಕಾರ ಅಡ್ವಾನ್ಸ್ ತೆರಿಗೆ ಅಂತಿಮ ಕಂತಿನ ಪಾವತಿಗೆ ಮಾ.15 ಕೊನೆಯ ದಿನಾಂಕ. ಒಂದು ವೇಳೆ ಅಡ್ವಾನ್ಸ್ ತೆರಿಗೆ ಪಾವತಿಸಲು ತೆರಿಗೆದಾರರು ವಿಫಲರಾದ್ರೆ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 234B ಹಾಗೂ 243C ಅಡಿಯಲ್ಲಿ ದಂಡ ವಿಧಿಸಲಾಗುತ್ತದೆ.
ಅಡ್ವಾನ್ಸ್ ಟ್ಯಾಕ್ಸ್ ಅಂದ್ರೇನು?
ನೀವು ವೇತನದ ಹೊರತಾದ ಆದಾಯ ಅಂದರೆ ಬಾಡಿಗೆ ಅಥವಾ ಷೇರುಗಳಿಂದ ಆದಾಯ ಗಳಿಸುತ್ತಿದ್ದರೆ ಆಗ ಅಡ್ವಾನ್ಸ್ ಟ್ಯಾಕ್ಸ್ ಪಾವತಿಸಬೇಕಾಗುತ್ತದೆ. ಇದು ಲಾಟರಿ ಬಹುಮಾನ ಸೇರಿದಂತೆ ಇತರ ಆದಾಯದ ಮೂಲಗಳಿಗೂ ಅನ್ವಯಿಸುತ್ತದೆ. ತೆರಿಗೆದಾರರು ಆನ್ ಲೈನ್ ಅಥವಾ ನಿರ್ದಿಷ್ಟ ಬ್ಯಾಂಕುಗಳ ಮೂಲಕ ಅಡ್ವಾನ್ಸ್ ಟ್ಯಾಕ್ಸ್ ಪಾವತಿಸಬಹುದು.
ಅಡ್ವಾನ್ಸ್ ಟ್ಯಾಕ್ಸ್ ಪಾವತಿಸಲು ವೇಳಾಪಟ್ಟಿ
ಜೂನ್ 15: ನಿಮ್ಮ ಒಟ್ಟು ಅಂದಾಜು ತೆರಿಗೆಯ ಕನಿಷ್ಠ ಶೇ.15ರಷ್ಟನ್ನು ಪಾವತಿಸಬೇಕು.
ಸೆಪ್ಟೆಂಬರ್ 15: ಅಂದಾಜಿಸಿರುವ ತೆರಿಗೆಯ ಶೇ.45ರಷ್ಟನ್ನು ಪಾವತಿಸಬೇಕು.
ಡಿಸೆಂಬರ್ 15: ಅಂದಾಜಿಸಿರುವ ತೆರಿಗೆಯಶೇ.75ರಷ್ಟನ್ನು ಪಾವತಿಸಬೇಕು.
ಮಾರ್ಚ್ 15: ನೀವು ಉಳಿದಿರುವ ಬ್ಯಾಲೆನ್ಸ್ ನಲ್ಲಿ ಶೇ.100ರಷ್ಟನ್ನು ಪಾವತಿಸಬೇಕು.
ಒಂದು ವೇಳೆ ನಿಮ್ಮ ಆದಾಯ ನಿರೀಕ್ಷೆ ಈ ವರ್ಷ ಬದಲಾಗಿದ್ದರೆ, ನೀವು ಪಾವತಿಸುವ ಮೊತ್ತವನ್ನು ಹೊಂದಾಣಿಕೆ ಮಾಡಿ. ಇದನ್ನು ಆದಾಯ ತೆರಿಗೆ ಇಲಾಖೆಯ ಆನ್ ಲೈನ್ ತೆರಿಗೆ ಪಾವತಿ ವೆಬ್ ಸೈಟ್ ನಲ್ಲಿ ಮಾಡಬಹುದು.
ಪ್ರಮುಖ 9 ಹಣಕಾಸು ಕೆಲಸಗಳಿಗೆ ಈ ತಿಂಗಳಲ್ಲಿ ಅಂತಿಮ ಗಡುವು;ಬೇಗ ಮಾಡಿ ಮುಗಿಸಿ,ಇಲ್ಲಂದ್ರೆ ಜೇಬಿಗೆ ಬರೆ ಗ್ಯಾರಂಟಿ
ಯಾರು ಅಡ್ವಾನ್ಸ್ ಟ್ಯಾಕ್ಸ್ ಪಾವತಿಸಬೇಕು?
ಭಾರತದಲ್ಲಿ ವೇತನ ಪಡೆಯುವ ಉದ್ಯೋಗಿಗಳು, ಫ್ರೀಲ್ಯಾನ್ಸರ್ ಅಥವಾ ಉದ್ಯಮಿಗಳ ವಾರ್ಷಿಕ ತೆರಿಗೆ ಮೊತ್ತ 10 ಸಾವಿರ ರೂ. ಅಥವಾ ಅದಕ್ಕಿಂತಹೆಚ್ಚಿದ್ದರೆ ಅವರು ತೆರಿಗೆಯನ್ನು ಮುಂಚಿತವಾಗಿ (ಅಡ್ವಾನ್ಸ್) ಪಾವತಿಸಲು ಅರ್ಹತೆ ಹೊಂದಿದ್ದಾರೆ. ಇನ್ನು 60 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ಉದ್ಯಮ ಹೊಂದಿರದ ಹಿರಿಯ ನಾಗರಿಕರು ಅಡ್ವಾನ್ಸ್ ತೆರಿಗೆಯಿಂದ ವಿನಾಯ್ತಿ ಪಡೆದಿದ್ದಾರೆ.