
ಮುಂಬೈ: ಇಂದು ಚಿನ್ನದ ಮೇಲಿನ ದರ ಏರಿಕೆ ಕಾಣುತ್ತಿರುವ ಸಂದರ್ಭದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಹತ್ವದ ಘೋಷಣೆಯೊಂದನ್ನು ಪ್ರಕಟಿಸಿದೆ. ಆರ್‌ಬಿಐ ಚಿನ್ನ ಸಾಲದ ನಿಯಮಗಳಲ್ಲಿ ಬಹುದೊಡ್ಡ ಬದಲಾವಣೆಗಳನ್ನು ತಂದಿದೆ. ಇನ್ಮುಂದೆ 10 ಗ್ರಾಂ ಚಿನ್ನದ ಮೇಲೆ ಸಿಗಲಿರುವ ಸಾಲದ ಮೊತ್ತ ಏರಿಕೆ ಮಾಡಿದೆ. ಎಷ್ಟು ಸಾಲ ಸಿಗಲಿದೆ ಎಂದು ನೋಡೋಣ ಬನ್ನಿ.
ಎಸ್ & ಪಿ ಗ್ಲೋಬಲ್ ರೇಟಿಂಗ್ಸ್ ವರದಿಯ ಪ್ರಕಾರ, 2.5 ಲಕ್ಷದಿಂದ 5 ಲಕ್ಷ ರೂಪಾಯಿಗಳವರೆಗೆ ಪಡೆಯುವ ಸಾಲಕ್ಕೆ ಚಿನ್ನದ ಬೆಲೆಯ ಶೇ.80ರವರೆಗೆ ಹಣ ಸಿಗಲಿದೆ. 5 ಲಕ್ಷ ರೂ.ಗಳಿಗಿಂತ ಪಡೆಯುವ ಹೆಚ್ಚಿನ ಸಾಲದ ಮಿತಿಯನ್ನು ಶೇ.75ಕ್ಕೆ ಇಳಿಕೆ ಮಾಡಲಾಗಿದೆ. ಈ ಎಲ್ಲಾ ಹೊಸ ಬದಲಾವಣೆಗಳು 1ನೇ ಏಪ್ರಿಲ್ 2026ರೊಳಗೆ ಜಾರಿಗೆ ತರಲು ಸೂಚಿಸಲಾಗಿದೆ. ಸಾಲದಾತರು ತಮ್ಮ ವ್ಯವಹಾರ ಮಾದರಿಯನ್ನು ಸುಧಾರಿಸಲು ಮತ್ತು ಸಾಲಗಾರರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸಲು ಅವಕಾಶವನ್ನು ನೀಡುವುದು ಈ ಬದಲಾವಣೆಯ ಉದ್ದೇಶವಾಗಿದೆ.
10 ಗ್ರಾಂ ಚಿನ್ನಕ್ಕೆ ಎಷ್ಟು ಸಿಗುತ್ತೆ ಸಾಲ?
ಚಿನ್ನದ ಸಾಲದ ಮೊತ್ತ ಎಷ್ಟು ಎಂಬುವುದು ಚಿನ್ನದ ಶುದ್ಧತೆ ಮತ್ತು ಮಾರುಕಟ್ಟೆ ಬೆಲೆಯ ಆಧಾರದ ಮೇಲೆ ನಿರ್ಧರಿತವಾಗುತ್ತದೆ. 22 ಕ್ಯಾರೆಟ್ ಚಿನ್ನ ಒತ್ತೆಯಿರಿಸಲಾಗಿದೆ ಎಂದು ಭಾವಿಸೋಣ. 22 ಕ್ಯಾರೆಟ್ ಚಿನ್ನದ 1 ಗ್ರಾಂಗೆ 9,000 ರೂಪಾಯಿ ಸಿಗುತ್ತದೆ. ಅಂದ್ರೆ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 90,000 ರೂಪಾಯಿ ಸಾಲ ಸಿಗುತ್ತದೆ. 75% ನಷ್ಟು ಮೌಲ್ಯದ ಸಾಲದೊಂದಿಗೆ (LTV), ನೀವು ರೂ.67,500 ವರೆಗೆ ಚಿನ್ನದ ಸಾಲವನ್ನು ಪಡೆಯಬಹುದು.
ಚಿನ್ನದ ಸಾಲ ಎಲ್ಲಿ ಸಿಗುತ್ತೆ?
ಚಿನ್ನದ ಸಾಲವನ್ನು ಬ್ಯಾಂಕ್ ಅಥವಾ ಬ್ಯಾಂಕೇತರ ಹಣಕಾಸು ಕಂಪನಿಯಿಂದ (NBFC) ಪಡೆದುಕೊಳ್ಳಬಹುದು. ಬ್ಯಾಂಕುಗಳು ಸಾಮಾನ್ಯವಾಗಿ ಕಡಿಮೆ ಬಡ್ಡಿದರದಲ್ಲಿ ಚಿನ್ನದ ಸಾಲಗಳನ್ನು ನೀಡುತ್ತವೆ. ಆದ್ರೆ ಚಿನ್ನದ ಸಾಲ ಪಡೆಯುವ ಪ್ರಕ್ರಿಯೆ ದೀರ್ಘವಾಗಿರುತ್ತದೆ. ಆದ್ರೆ NBFC ಯಿಂದ ಚಿನ್ನದ ಸಾಲವು ತ್ವರಿತವಾಗಿ ಅನುಮೋದನೆ ಸಿಗುತ್ತದೆ. ಬ್ಯಾಂಕ್‌ಗಳಿಗಿಂದ NBFCಗಳು ಹೆಚ್ಚಿನ ಬಡ್ಡಿದರ ವಿಧಿಸುತ್ತವೆ. ಹಾಗಾಗಿ ಗ್ರಾಹಕರು ನಿಮ್ಮ ಅಗತ್ಯತೆಗಳು ಮತ್ತು ಅನುಕೂಲಕ್ಕೆ ಅನುಗುಣವಾಗಿ ಸರಿಯಾದ ಆಯ್ಕೆಯನ್ನು ಆರಿಸುವುದು ಮುಖ್ಯವಾಗಿರುತ್ತದೆ.
ಚಿನ್ನದ ಸಾಲ ಒಳ್ಳೆಯ ಆಯ್ಕೆಯೇ?
ಚಿನ್ನದ ಸಾಲ ಒಳ್ಳೆಯ ಆಯ್ಕೆ ಎಂಬುವುದು ಹಲವರ ಅಭಿಪ್ರಾಯವಾಗಿರುತ್ತದೆ. ಆಸ್ತಿ ಸಾಲ ಅಥವಾ ಪರ್ಸನಲ್ ಲೋನ್ ಅತ್ಯಧಿಕ ಬಡ್ಡಿಯನ್ನು ಹೊಂದಿರುತ್ತದೆ. ಆದ್ರೆ ಚಿನ್ನದ ಸಾಲದ ಮೇಲಿನ ಬಡ್ಡಿದರ ಕಡಿಮೆಯಾಗಿರುತ್ತದೆ. ಚಿನ್ನದ ಸಾಲದ ಬಡ್ಡಿದರ ಕಡಿಮೆ ತ್ವರಿತವಾಗಿ ಪಡೆಯಬಹುದು. ಆದರೆ ಸಾಲ ತೆಗೆದುಕೊಳ್ಳುವುದು ತೊಂದರೆಯಾಗದಂತೆ ಸಾಲದ ಬಡ್ಡಿದರ ಮತ್ತು ನಿಯಮಗಳನ್ನು ಎಚ್ಚರಿಕೆಯಿಂದ ಅರ್ಥಮಾಡಿಕೊಳ್ಳುವುದು ಮುಖ್ಯ. ಚಿನ್ನವನ್ನು ಆಪತ್ಕಾಲದ ನೆಂಟ ಎಂದು ಕರೆಸಿಕೊಳ್ಳುತ್ತದೆ. ತುರ್ತು ಸಮಯದಲ್ಲಿ ಮನೆಯಲ್ಲಿರುವ ಚಿನ್ನವೇ ನಿಮ್ಮ ಸಹಾಯಕ್ಕೆ ಬರಲಿದೆ.
ಗಮನಿಸಿ: ಸಾಲವನ್ನು ತೆಗೆದುಕೊಳ್ಳುವ ಸಮಯದಲ್ಲಿ ಚಿನ್ನದ ಮಾರುಕಟ್ಟೆ ಮೌಲ್ಯ ಮತ್ತು ಶುದ್ಧತೆಗೆ ಅನುಗುಣವಾಗಿ ಈ ಮೊತ್ತವು ಸ್ವಲ್ಪ ಹೆಚ್ಚಾಗಬಹುದು ಅಥವಾ ಕಡಿಮೆಯಾಗಬಹುದು.
ರೆಪೋ ದರ ಕಡಿತ
ಆರ್‌ಬಿಐ ತನ್ನ ಹಣಕಾಸು ನೀತಿಯನ್ನು ಘೋಷಣೆ ಮಾಡಿದ್ದು, ರೆಪೋ ದರದಲ್ಲಿ 50 ಬೇಸಿಸ್ ಪಾಯಿಂಟ್ಗಳಷ್ಟು ಅಂದರೆ ಶೇಕಡಾ 0.50 ರಷ್ಟು ಕಡಿತ ಮಾಡಿದೆ. ವರ್ಷ ಸತತ ಮೂರನೇ ಬಾರಿ ಆರ್ ಬಿಐ ರೆಪೊ ದರವನ್ನು ಕಡಿಮೆ ಮಾಡಿದೆ. ಈಗ ರೆಪೊ ದರ 5.50 ಕ್ಕೆ ಇಳಿದಿದೆ. ಇದಕ್ಕೂ ಮೊದಲು, ಫೆಬ್ರವರಿ ಮತ್ತು ಏಪ್ರಿಲ್ನಲ್ಲಿ 25-25 ಬೇಸಿಸ್ ಪಾಯಿಂಟ್ಗಳನ್ನು ಕಡಿತಗೊಳಿಸಲಾಗಿತ್ತು. ಒಟ್ಟಾರೆಯಾಗಿ 2025 ರ ಮೊದಲಾರ್ಧದಲ್ಲಿ 100 ಬೇಸಿಸ್ ಪಾಯಿಂಟ್ ಕಡಿತಗೊಂಡಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.