
ಚೆನ್ನೈ[ಸೆ.16]: ಐಸಿಐಸಿಐ ಬ್ಯಾಂಕಿನಲ್ಲಿ ಶೂನ್ಯ ಮೊತ್ತದ (ಜೀರೋ ಬ್ಯಾಲೆನ್ಸ್) ಉಳಿತಾಯ ಖಾತೆ ಹೊಂದಿರುವ ಗ್ರಾಹಕರು ಶಾಖೆಗೆ ಹೋಗಿ ಹಣ ಹಿಂಪಡೆದರೆ 100ರಿಂದ 125 ರು.ವರೆಗೂ ಶುಲ್ಕ ಪಾವತಿಸಬೇಕಾಗುತ್ತದೆ. ನಗದು ಸ್ವೀಕಾರ, ವಿತರಣೆ ಯಂತ್ರದಲ್ಲಿ ಗ್ರಾಹಕರು ನಡೆಸುವ ವ್ಯವಹಾರಕ್ಕೂ ಈ ಶುಲ್ಕ ಅನ್ವಯವಾಗುತ್ತದೆ. ಅ.16ರಿಂದ ಇದು ಜಾರಿಗೆ ಬರಲಿದೆ.
ಈ ಸಂಬಂಧ ಖಾತೆದಾರರಿಗೆ ಐಸಿಐಸಿಐ ಬ್ಯಾಂಕ್ ಸೂಚನೆಯನ್ನು ರವಾನಿಸಿದೆ. ಡಿಜಿಟಲ್ ವಿಧಾನದ ಮೂಲಕ ಬ್ಯಾಂಕಿಂಗ್ ವ್ಯವಹಾರ ನಡೆಸಲು ಗ್ರಾಹಕರಿಗೆ ಪ್ರೋತ್ಸಾಹ ನೀಡುತ್ತೇವೆ. ತನ್ಮೂಲಕ ಡಿಜಿಟಲ್ ಇಂಡಿಯಾ ಉದ್ದೇಶಕ್ಕೆ ಕೊಡುಗೆ ನೀಡಿದಂತಾಗುತ್ತದೆ ಎಂದು ಬ್ಯಾಂಕ್ ತಿಳಿಸಿದೆ.
ವಿಲೀನ ಖಂಡಿಸಿ ಸೆ.26ರಿಂದ 2 ದಿನ ಬ್ಯಾಂಕ್ ಸಂಘಟನೆಗಳ ಮುಷ್ಕರ!
ಇದೇ ವೇಳೆ, ಮೊಬೈಲ್ ಬ್ಯಾಂಕಿಂಗ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಎನ್‌ಇಎಫ್‌ಟಿ, ಆರ್‌ಟಿಜಿಎಸ್ ಹಾಗೂ ಯುಪಿಐ ವ್ಯವಹಾರ ನಡೆಸಿದರೆ ಶುಲ್ಕ ವಿನಾಯಿತಿ ನೀಡಲಾಗುತ್ತದೆ. ಶಾಖೆಗೆ ಬಂದು ಆರ್‌ಟಿಜಿಎಸ್ ವ್ಯವಹಾರ ನಡೆಸಿದರೆ 2ರಿಂದ 10 ಲಕ್ಷ ರು.ವರೆಗಿನ ಮೊತ್ತಕ್ಕೆ 20ರಿಂದ 45 ರು. ಹಾಗೂ ಜಿಎಸ್‌ಟಿ ವಿಧಿಸಲಾಗುತ್ತದೆ ಎಂದು ತಿಳಿಸಿದೆ. ಗ್ರಾಹಕರಿಗೆ ಇದರಿಂದ ಅನನುಕೂಲವಾದರೆ ಬೇಸಿಕ್ ಉಳಿತಾಯ ಖಾತೆಗೆ ಬದಲಾಯಿಸಿಕೊಳ್ಳಬಹುದು ಅಥವಾ ಖಾತೆಯನ್ನು ಬಂದ್ ಮಾಡಬಹುದು ಎಂಬ ಸಲಹೆಯನ್ನೂ ನೀಡಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.