*ರೆಪೋ ದರ ಏರಿಕೆ ಬೆನ್ನಲ್ಲೇ ಸಾಲದ ಮೇಲಿನ ಬಡ್ಡಿ ಹೆಚ್ಚಿಸಿದ ಬ್ಯಾಂಕುಗಳು
*ಐಸಿಐಸಿಐ ಬ್ಯಾಂಕ್ EBLR ಶೇ.8.10ಕ್ಕೆ ಏರಿಕೆ
*ಬ್ಯಾಂಕ್ ಆಫ್ ಬರೋಡಾ ಕೂಡ ರೆಪೋ ದರವನ್ನು ಶೇ.6.90 ಕ್ಕೆ ಹೆಚ್ಚಿಸಿದೆ
ನವದೆಹಲಿ (ಮೇ 6): ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೋ ದರ (Repo rate) ಏರಿಕೆ ಮಾಡಿದ ಬೆನ್ನಲ್ಲೇ ಐಸಿಐಸಿಐ ಬ್ಯಾಂಕ್ (ICICI) ಹಾಗೂ ಬ್ಯಾಂಕ್ ಆಫ್ ಬರೋಡಾ (Bank of Baroda) ರೆಪೋ ಆಧಾರಿತ ಗೃಹ ಹಾಗೂ ವಾಹನ ಸಾಲಗಳ ಮೇಲಿನ ಬಡ್ಡಿದರ (Interest rate) ಹೆಚ್ಚಳ ಮಾಡಿವೆ.
ಐಸಿಐಸಿಐ ಬ್ಯಾಂಕ್ ಮೇ 4ರಿಂದಲೇ ಜಾರಿಗೆ ಬರುವಂತೆ ಎಕ್ಸ್ ಟರ್ನಲ್ ಬೆಂಚ್ ಮಾರ್ಕ್ ಲೆಂಡಿಂಗ್ ರೇಟ್ (EBLR) ಅನ್ನು ಶೇ.8.10ಕ್ಕೆ ಏರಿಕೆ ಮಾಡಿದೆ. ಹಾಗೆಯೇ ಬ್ಯಾಂಕ್ ಆಫ್ ಬರೋಡಾ ಕೂಡ ರೆಪೋ ಆಧಾರಿತ ಸಾಲದ ದರವನ್ನು 40 ಬಿಪಿಎಸ್ ಗಳಷ್ಟು ಏರಿಕೆ ಮಾಡುವ ಮೂಲಕ ಶೇ.6.90 ಕ್ಕೆ ಹೆಚ್ಚಿಸಿದ್ದು, ಮೇ 5ರಿಂದಲೇ ಅನ್ವಯಿಸಲಿದೆ. ಬ್ಯಾಂಕ್ ಆಫ್ ಬರೋಡಾ ಏಪ್ರಿಲ್ ನಲ್ಲಿ ಕೂಡ ಬಡ್ಡಿದರವನ್ನು ಶೇ.0.1ರಷ್ಟು ಹೆಚ್ಚಿಸಿತ್ತು.
ಹಣದುಬ್ಬರ ಏರಿಕೆ ಹಿನ್ನಲೆಯಲ್ಲಿ ಆರ್ ಬಿಐ ಮೇ 4ರಂದು ರೆಪೋ ದರ ಹಾಗೂ ನಗದು ಮೀಸಲು ಅನುಪಾತವನ್ನು (CRR) ಏರಿಕೆ ಮಾಡಿತ್ತು. ರೆಪೋ ದರವನ್ನು 40 ಮೂಲ ಅಂಕಗಳಷ್ಟು ಏರಿಕೆ ಮಾಡುವ ಮೂಲಕ ಈ ಹಿಂದಿನ ಶೇ.4ರಿಂದ ಶೇ.4.40ಕ್ಕೆ ಹೆಚ್ಚಿಸಿತ್ತು. ಇದ್ರಿಂದ ಈಗ ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿದರ ಏರಿಕೆಗೆ ಮುಂದಾಗಿವೆ. ವಾಣಿಜ್ಯ ಬ್ಯಾಂಕುಗಳಿಗೆ (Commercial banks) ಹಣದ ಕೊರತೆ ಎದುರಾದಾಗ ಅವು ಆರ್ ಬಿಐಯಿಂದ ಸಾಲ (Loan) ಪಡೆಯುತ್ತವೆ. ಆರ್ ಬಿಐ ಬ್ಯಾಂಕುಗಳಿಗೆ ನೀಡಿದ ಸಾಲದ ಮೇಲೆ ವಿಧಿಸೋ ನಿರ್ದಿಷ್ಟ ದರವೇ ರೆಪೋ ದರ. ಆರ್ ಬಿಐ ರೆಪೋ ದರ ಹೆಚ್ಚಳ ಮಾಡಿದಾಗ ಬ್ಯಾಂಕುಗಳು ಕೂಡ ತಾವು ನೀಡುವ ಸಾಲಗಳ ಮೇಲಿನ ಬಡ್ಡಿದರವನ್ನು ಏರಿಕೆ ಮಾಡುತ್ತವೆ.
Repo Rate:ರೆಪೋ ದರ ಹೆಚ್ಚಳದಿಂದ ಸಾಲಗಾರರಿಗೆ ಕಹಿ, ಠೇವಣಿದಾರರಿಗೆ ಸಿಹಿ; ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ
EBLR ಅಂದ್ರೇನು?
ಎಕ್ಸ್ ಟರ್ನಲ್ ಬೆಂಚ್ ಮಾರ್ಕ್ ಲೆಂಡಿಂಗ್ ರೇಟ್ (EBLR) ಅಂದ್ರೆ ರೆಪೋ ದರ ಆಧರಿಸಿ ಬ್ಯಾಂಕುಗಳು ಸಾಲದ ಮೇಲೆ ನಿಗದಿಪಡಿಸುವ ಬಡ್ಡಿದರ. ಇದು ಬ್ಯಾಂಕುಗಳ ಸಾಲ ನೀಡಿಕೆಯ ಕನಿಷ್ಠ ಬಡ್ಡಿದರವಾಗಿದೆ. 2019ರ ಅಕ್ಟೋಬರ್ ನಲ್ಲಿ ಆರ್ ಬಿಐ ಇಬಿಎಲ್ಆರ್ ವ್ಯವಸ್ಥೆಯನ್ನು ಪರಿಚಯಿಸಿತು. ಈ ಮೊದಲು ಬೇಸ್ ಲೆಂಡಿಂಗ್ ರೇಟ್ (BLR) ಹಾಗೂ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಂಗ್ ರೇಟ್ (MCLR) ವ್ಯವಸ್ಥೆಗಳು ಜಾರಿಯಲ್ಲಿದ್ದವು.
ಇಎಂಐ ಹೆಚ್ಚಳ
ಐಸಿಐಸಿಐ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡ ಸಾಲಗಳ ಮೇಲಿನ ಬಡ್ಡಿ ಹೆಚ್ಚಳ ಮಾಡಿರುವುದರಿಂದ ಗೃಹ, ವಾಹನ ಹಾಗೂ ಇತರ ಸಾಲಗಳ ಇಎಂಐಯಲ್ಲಿ ಹೆಚ್ಚಳವಾಗಲಿದೆ. ಇತರ ಬ್ಯಾಂಕುಗಳು ಕೂಡ ಸದ್ಯದಲ್ಲೇ ಸಾಲಗಳ ಮೇಲಿನ ಬಡ್ಡಿದರ ಹೆಚ್ಚಳ ಮಾಡುವ ಸಾಧ್ಯತೆಯಿದೆ. ರೆಪೋ ದರ ಏರಿಕೆ ಹಿನ್ನೆಲೆಯಲ್ಲಿ ಬಡ್ಡಿದರ ಹೆಚ್ಚಳ ಮಾಡುವುದು ಬ್ಯಾಂಕುಗಳಿಗೆ ಅನಿವಾರ್ಯವಾಗಿದೆ. ಹೀಗಾಗಿ EBLR ಆಧಾರಿತ ಗೃಹ ಹಾಗೂ ವಾಹನ ಸಾಲ ಪಡೆದವರಿಗೆ ಇಎಂಐ ಹೆಚ್ಚಳದ ಬಿಸಿ ತಟ್ಟಲಿದೆ. ವಿವಿಧ ಬ್ಯಾಂಕುಗಳು ಬಡ್ಡಿದರ ಶೇ.0.50ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.
ಎಚ್ ಡಿಎಫ್ ಸಿ (HDFC) ಬ್ಯಾಂಕ್ ಮೇ 1ರಿಂದ ಜಾರಿಗೆ ಬರುವಂತೆ ಗೃಹ ಸಾಲಗಳ ಮೇಲಿನ ರಿಟೇಲ್ ಪ್ರೈಮ್ ಲೆಂಡಿಂಗ್ ರೇಟ್ (RPLR) 5 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಳ ಮಾಡಿದೆ. ಇನ್ನು ಎಸ್‌ಬಿಐ (SBI) ಹಾಗೂ ಇತರ ಬ್ಯಾಂಕ್‌ಗಳಾದ ಬ್ಯಾಂಕ್ ಆಫ್ ಬರೋಡಾ (BOD), ಆ್ಯಕ್ಸಿಸ್ (Axis), ಕೋಟಕ್ ಮಹೀಂದ್ರಾ (Kotak Mahindra) ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿ ದರಗಳನ್ನು ಏ. 15ರಿಂದ ಜಾರಿಗೆ ಬರುವಂತೆ ಶೇ.0.1ರಷ್ಟುಹೆಚ್ಚಿಸಿವೆ.