
ನವದೆಹಲಿ(ಫೆ.24): ಕಳೆದ ಮೇ ತಿಂಗಳ ಬಳಿಕ ಎಲ್‌ಪಿಜಿ ಗ್ರಾಹಕರಿಗೆ ಸಬ್ಸಿಡಿ ಸಲ್ಲಿಸಿದ್ದ ಕೇಂದ್ರ ಸರ್ಕಾರ, ಸಬ್ಸಿಡಿ ರದ್ದು ಮಾಡಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದೆ. ಎಎನ್‌ಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದ ವೇಳೆ ಪೆಟ್ರೋಲಿಯಂ ಖಾತೆ ಸಚಿವ ಧಮೇಂದ್ರ ಪ್ರಧಾನ್ ಈ ಸುಳಿವು ನೀಡಿದ್ದಾರೆ.
‘ನಾವು ಎಲ್‌ಪಿಜಿ ಸಬ್ಸಿಡಿ ನಿಲ್ಲಿಸಿದ್ದೇವೆ ಎಂಬುದು ತಪ್ಪು. ‘ಕೊರೋನಾ ಲಾಕ್ಡೌನ್ ಅವಧಿಯಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ 8 ಕೋಟಿ ಬಡವರಿಗೆ 14 ಕೋಟಿ ಎಲ್‌ಪಿಜಿ ಸಿಲಿಂಡರ್ಗಳನ್ನು ಉಚಿತವಾಗಿ ಪೂರೈಸಿದ್ದೇವೆ. ತನ್ಮೂಲಕ ಸರ್ಕಾರವು ಬಡವರ ಪರ ನಿಂತಿದೆ’ ಎನ್ನುವ ಮೂಲಕ ಕೇವಲ ಬಡವರಿಗೆ ಮಾತ್ರ ಸಬ್ಸಿಡಿ ನೀಡುತ್ತಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
2 ದಿನದ ಬಳಿಕ ಮತ್ತೆ ಪೆಟ್ರೋಲ್, ಡೀಸೆಲ್ ದರ 35 ಪೈಸೆ ಏರಿಕೆ
2 ದಿನಗಳ ಬಳಿಕ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ತಲಾ 35 ಪೈಸೆಯಷ್ಟುಏರಿಕೆ ಮಾಡಿವೆ. ಇದರಿಂದಾಗಿ ಮುಂಬೈನಲ್ಲಿ ಪೆಟ್ರೋಲ್ ದರವು ಅತಿಹೆಚ್ಚು ಅಂದರೆ 97.34 ರು.ನೊಂದಿಗೆ ಶತಕದತ್ತ ಮುನ್ನುಗ್ಗುತ್ತಿದೆ. ಇನ್ನು ಡೀಸೆಲ್ ಬೆಲೆಯು 88.44 ರು. ಆಗಿದೆ.
ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರವು ತಲಾ 37 ಪೈಸೆಯಷ್ಟುಏರಿಕೆಯಾಗಿದ್ದು, ಲೀ. ಪೆಟ್ರೋಲ್ ದರ 93.98 ರು. ಮತ್ತು ಡೀಸೆಲ್ಗೆ 86.21 ರು.ಗೆ ಮುಟ್ಟಿದೆ.
ಇನ್ನು ದಿಲ್ಲಿಯಲ್ಲಿ ಲೀಟರ್ ಪೆಟ್ರೋಲ್‌ಗೆ 90.93 ರು.ಗೆ ಏರಿಕೆಯಾಗಿದ್ದು, ಡೀಸೆಲ್ ದರ 81.32 ರು.ಗೆ ತಲುಪಿದೆ. ಇದರೊಂದಿಗೆ 2021ರ ಆರಂಭದಿಂದ ಈವರೆಗೆ ಪೆಟ್ರೋಲ್ ದರವು 7.22 ರು.ನಷ್ಟು ಏರಿದ್ದರೆ, ಡೀಸೆಲ್ ಬೆಲೆ 7.45 ರು.ನಷ್ಟುಏರಿಕೆಯಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.